ಬೆಂಗಳೂರು :  ಮಂಡ್ಯ ಲೋಕಸಭಾ ಕ್ಷೇತ್ರದ ನಾಗಮಂಗಲದಲ್ಲಿ ನಡೆದ ಕಾಂಗ್ರೆಸ್‌-ಜೆಡಿಎಸ್‌ ಜಂಟಿ ಸಮಾವೇಶ ಹಾಗೂ ಕೆ.ಆರ್‌. ನಗರದಲ್ಲಿ ನಡೆದ ರಾಹುಲ್‌ ಗಾಂಧಿ ಸಮಾವೇಶಕ್ಕೆ ಗೈರು ಹಾಜರಾಗಿರುವ ಕಾಂಗ್ರೆಸ್‌ ಮುಖಂಡ ಎನ್‌.ಚೆಲುವರಾಯಸ್ವಾಮಿ ಹಾಗೂ ತಂಡದ ನಡೆಯನ್ನು ಪಕ್ಷ ಗಂಭೀರವಾಗಿ ಪರಿಗಣಿಸಿದೆ. ಸದ್ಯದಲ್ಲೇ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಹೇಳಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಾಗಮಂಗಲ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದ ಹಿರಿಯ ಮುಖಂಡ ಎನ್‌.ಚೆಲುವರಾಯಸ್ವಾಮಿ ಅವರು ಪಕ್ಷದ ಸೂಚನೆ ಹೊರತಾಗಿಯೂ ಏ.12ರಂದು ಅವರದ್ದೇ ನಾಗಮಂಗಲ ಕ್ಷೇತ್ರದಲ್ಲಿ ಎಚ್‌.ಡಿ. ದೇವೇಗೌಡ ಹಾಗೂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಜಂಟಿ ಸಮಾವೇಶದಲ್ಲಿ ಭಾಗಿಯಾಗಿಲ್ಲ. ಏ.13ರಂದು ಕೆ.ಆರ್‌. ನಗರದಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ನೇತೃತ್ವದಲ್ಲಿ ನಡೆದ ಸಭೆಗೂ ಗೈರು ಹಾಜರಾಗಿದ್ದಾರೆ.

ಮಂಡ್ಯ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ನಿಖಿಲ್‌ ಕುಮಾರಸ್ವಾಮಿ ಪರ ಪ್ರಚಾರ ಮಾಡದಿರುವುದು, ಪಕ್ಷದ ಸೂಚನೆಯ ಹೊರತಾಗಿಯೂ ಸಮಾವೇಶಗಳಲ್ಲಿ ಭಾಗಿಯಾಗದಿರುವುದನ್ನು ಪಕ್ಷ ಗಂಭೀರವಾಗಿ ಪರಿಗಣಿಸಿದೆ. ಈ ಬಗ್ಗೆ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರೊಂದಿಗೂ ಚರ್ಚೆ ಮಾಡುತ್ತೇವೆ. ಚೆಲುವರಾಯಸ್ವಾಮಿ ವಿರುದ್ಧ ಯಾವಾಗ ಹಾಗೂ ಹೇಗೆ ಕ್ರಮ ಕೈಗೊಳ್ಳಬೇಕು ಎಂಬುದನ್ನು ಸದ್ಯದಲ್ಲೇ ತೀರ್ಮಾನ ಮಾಡುತ್ತೇವೆ ಎಂದು ಹೇಳಿದರು.