ನವದೆಹಲಿ[ಮಾ.16]: ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾ ಶುಕ್ರವಾರದಂದು ಬಿಜೆಪಿಯೊಂದಿಗಿನ ಮೈತ್ರಿ ಮುರಿದುಕೊಂಡಿದೆ ಹಾಗೂ ಸಿಕ್ಕಿಂನ ಎಲ್ಲಾ ವಿಧಾನಸಭಾ ಕ್ಷೇತ್ರಗಳು ಹಾಗೂ ಲೋಕಸಭೆಯ ಏಕೈಕ ಕ್ಷೇತ್ರದಲ್ಲಿ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಲು ನಿರ್ಧರಿಸಿದೆ.

ಪಕ್ಷದ ವಕ್ತಾರ ಸೋನಂ ಭೂಟಿಯಾ ಈ ವಿಚಾರವಾಗಿ ಪ್ರತಿಕ್ರಿಯಿಸಿದ್ದು, 'ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾ ರಾಜ್ಯದ ಎಲ್ಲಾ 32 ವಿಧಾನಸಭಾ ಕ್ಷೇತ್ರಗಳು ಮತ್ತು ಲೋಕಸಭೆಯ ಏಕೈಕ ಕ್ಷೇತ್ರಜಕ್ಕೆ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಲಿದೆ. ದಕ್ಷಿಣ ಸಿಕ್ಕಿಂನ ಜೋರೆಥಾಂಗ್ ನಲ್ಲಿ ನಡೆದ ಪಕ್ಷದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ' ಎಂದಿದ್ದಾರೆ. SMK ಪಕ್ಷದ ಅಧ್ಯಕ್ಷ ಪ್ರೇಮ್ ಸಿಂಗ್ ನೇತೃತ್ವದಲ್ಲಿ ಈ ಸಮಿತಿ ಸಭೆ ನಡೆದಿತ್ತು.

ಸಿಕ್ಕಿಂ ಕ್ಷೇತ್ರವಾರು ದೇಶದ ಎರಡನೇ ಅತಿ ಚಿಕ್ಕ ರಾಜ್ಯವಾಗಿದೆ. ಇದು ಕೇವಲ ಒಂದು ಲೋಕಸಭಾ ಕ್ಷೇತ್ರವನ್ನು ಹೊಂದಿದೆ. ಇಡೀ ರಾಜ್ಯವನ್ನು ಪ್ರತಿನಿಧಿಸುವ ಕಾರಣದಿಂದ ಈ ಸೀಟು ಅತ್ಯಂತ ಮಹತ್ವ ವಹಿಸಿದೆ. ಇಲ್ಲಿ ರಾಜ್ಯಸಭೆಗೂ ಒಂದು ಸ್ಥಾನವಿದೆ ಹಾಗೂ 32 ವಿಧಾನಸಭಾ ಕ್ಷೇತ್ರಗಳಿವೆ.

ಇಲ್ಲಿ ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾ, ಸಿಕ್ಕಿಂ ಡೆಮಾಕ್ರಟಿಕ್ ಫ್ರಂಟ್ ಸೇರಿದಂತೆ ಕೆಲ ಚಿಕ್ಕ ಸ್ಥಳೀಯ ರಾಜಕೀಯ ಪಕ್ಷಗಳು ಸೇರಿದಂತೆ ಕಾಂಗ್ರೆಸ್, ಬಿಜೆಪಿ, ತೃಣಮೂಲದಂತೆ ರಾಷ್ಟ್ರೀಯ ಪಕ್ಷಗಳು ಸಕ್ರಿಯವಾಗಿವೆ. ಇಲ್ಲಿ ಒಟ್ಟು 3,70,731 ಮತದಾರರಿದ್ದಾರೆ. ಇವರಲ್ಲಿ 1,79,650 ಮಂದಿ ಮಹಿಳೆಯರು.