ಮೈಸೂರು[ಏ.16]: ರಾಜ್ಯ ಸರ್ಕಾರ ಶೇ.20 ಪರ್ಸೆಂಟೇಜ್ ಸರ್ಕಾರ ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೆಂಡಾಮಂಡಲವಾಗಿದ್ದು, ಕೇಂದ್ರದ್ದೇ ಶೇ.100ರಷ್ಟು ಭ್ರಷ್ಟ ಸರ್ಕಾರ ಎಂದು ತಿರುಗೇಟು ನೀಡಿದ್ದಾರೆ.

ಮೈಸೂರಿನಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಬ್ಬ ಪ್ರಧಾನಿಯಾಗಿ ಸಂತೆಯಲ್ಲಿ ಹೋಗುವವರ ರೀತಿ ಮಾತನಾಡಬಾರದು. ಇದು ಆಧಾರ ರಹಿತ ಆರೋಪ. ಮೋದಿ ಸರ್ಕಾರವೇ ಶೇ.100ರಷ್ಟು ಭ್ರಷ್ಟ ಸರ್ಕಾರ ಎಂಬುದು ನನ್ನ ಆರೋಪ. ಇದನ್ನು ನೀವು ಹಾಕ್ತಿರಾ ಎಂದರು. ಒಬ್ಬ ಪ್ರಧಾನಿ ಈ ಮಟ್ಟಕ್ಕೆ ಇಳಿದು ಮಾತನಾಡಬಾರದು. ಅವರ ಬಳಿ ಇಂಟಲಿಜೆನ್ಸ್ ಸೇರಿದಂತೆ ಎಲ್ಲಾ ಇಲಾಖೆಗಳು ಇವೆ. ಇಂತಹ ಆರೋಪ ಮಾಡುವ ಮುನ್ನ ಯೋಚನೆ ಮಾಡಬೇಕು ಎಂದು ಅವರು ಸಲಹೆ ಮಾಡಿದರು

ಮೋದಿ ಹೇಳಿಕೆ ಅಪರಾಧ: 

ಎಐಸಿಸಿ ಅಧ್ಯಕ್ಷ ರಾಹುಲ್‌ಗಾಂಧಿ ಬಹುಸಂಖ್ಯಾತ ಹಿಂದುಳಿಗೆ ಹೆದರಿ ಅಲ್ಪಸಂಖ್ಯಾತರೇ ಹೆಚ್ಚಿರುವ ವಯನಾಡಿನಲ್ಲಿ ಸ್ಪರ್ಧಿಸುತ್ತಿದ್ದಾರೆ ಎಂಬ ಮೋದಿ ಹೇಳಿಕೆಯೇ ಅಪರಾಧ. ಇದು ಕೋಮು ದೌರ್ಜನ್ಯ ಆಗಲ್ವಾ? ಇಂತಹ ಹೇಳಿಕೆಯನ್ನು ಪ್ರಧಾನಿ ಕೊಡಬಹುದಾ? ಲೋಕಸಭಾ ಚುನಾವಣೆಯ ನಂತರ ಮೋದಿ ಮನೆಗೆ ಹೋಗ್ತಾರೆ. ಅಮಿತ್ ಶಾ ಜಾಮೀನು ರದ್ದಾಗಬಹುದು ಎಂದು ಹೇಳಿದರು.

ಚಾಮುಂಡೇಶ್ವರಿಯಲ್ಲಿ ಮಾತ್ರ ನಿವೃತ್ತಿ:

ನಾನು ಚಾಮುಂಡೇಶ್ವರಿ ಕ್ಷೇತ್ರದಲ್ಲಿನ ಮಾತ್ರ ಚುನಾವಣೆಯಲ್ಲಿ ಸ್ಪರ್ಧಿಸಲ್ಲ ಎಂದು ಹೇಳಿದ್ದೀನಿ. ಬೇರೆ ಕಡೆ ನಿಲ್ಲೋದಿಲ್ಲ ಅಂತಾ ಹೇಳಿದ್ದೀನಾ? ಎನ್ನುವ ಮೂಲಕ ಸಿದ್ದರಾಮಯ್ಯ ಅವರು ಮತ್ತೆ ಚುನಾವಣೆಗೆ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದರು. ಇನ್ನೂ ನಾಲ್ಕು ವರ್ಷ ಇದೆ. ಮುಂದೆ ನೋಡೋಣ ಬಿಡಿ. ನನಗೆ ಚಾಮುಂಡೇಶ್ವರಿ ಕ್ಷೇತ್ರದ ಋಣ ಮುಗಿದಿದೆ ಎಂದರು.

ಮೂಡ್ ಬಗ್ಗೆ ಸ್ವಾರಸ್ಯದ ವ್ಯಾಖ್ಯಾನ:

ರಾಜ್ಯದಲ್ಲಿ ಚುನಾವಣಾ ಮೂಡ್ ಹೇಗಿದೆ? ಎಂದು ಸುದ್ದಿಗಾರರು ಕೇಳಿದಾಗ, ಮೂಡ್ ಅಂದ್ರೆ ಬೇರೆ ಕಣಪ್ಪ. ಮೂಡ್ ಬರೋದು ಬೇರೆ ಬೇರೆ ಕೆಲಸಗಳಿಗೆ. ಈಗ ಇರೋದು ಜನಾಭಿಪ್ರಾಯ ಅಷ್ಟೇ. ಜನರು ಕಾಂಗ್ರೆಸ್ ಪರವಾಗಿ, ಮೈತ್ರಿ ಅಭ್ಯರ್ಥಿಗಳ ಪರವಾಗಿ ಕೆಲಸ ಮಾಡಿದ್ದಾರೆ. ಆದರೆ ಅದು ಮೂಡ್ ಅಲ್ಲ. ಜನಾಭಿಪ್ರಾಯ. ನೀವು ಯಾವ್ ಮೂಡ್‌ನಲ್ಲಿ ಕೇಳ್ತಿದ್ದೀರೋ ಗೊತ್ತಿಲ್ಲ. ಮೂಡ್ ಬೇರೆ, ಜನಾಭಿಪ್ರಾಯ ಬೇರೆ ಎಂದು ಹಾಸ್ಯ ಚಟಾಕಿ ಹಾರಿಸಿದರು.

ಐಟಿಗೆ 15 ದಿನ ಕಾಲಾವಕಾಶ ಕೇಳಿದ್ದೇನೆ:

ಬೆಂಗಳೂರಿನ ಐಟಿ ಕಚೇರಿ ಎದುರು ಪ್ರತಿಭಟಿಸಿದ ವಿಚಾರದಲ್ಲಿ ನನಗೂ ನೋಟಿಸ್ ಬಂದಿದೆ. ಚುನಾವಣಾ ಪ್ರಚಾರದಲ್ಲಿ ನಿರತನಾಗಿದ್ದು, ಉತ್ತರ ಕೊಡಲು 15 ದಿನಗಳ ಕಾಲಾವಾಕಾಶ ಬೇಕು ಎಂದು ಕೇಳಿದ್ದೇನೆ ಎಂದರು.

ದೇಶದಲ್ಲಿ ಏ.11ರಿಂದ ಮೇ.19ರವರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ. ಕರ್ನಾಟಕದಲ್ಲಿ 28.