ಹಾಸನ[ಏ.12]: ಕಾಂಗ್ರೆಸ್‌ ತೊರೆದು ಬಿಜೆಪಿಯಿಂದ ಹಾಸನ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಮಾಜಿ ಸಚಿವ ಎ.ಮಂಜು ವಿರುದ್ಧ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರವಾಗಿ ಕಿಡಿಕಾರಿದ್ದಾರೆ. ‘ಆತ ಮಹಾನ್‌ ಪಕ್ಷದ್ರೋಹಿ. ಮಹಾನ್‌ ಸುಳ್ಳುಗಾರ. ಕಳ್ಳೆತ್ತು. ಆತನಿಗೆ ಒಂದೇ ಒಂದು ವೋಟು ಹಾಕಬಾರದು. ಬಿಜೆಪಿಗೆ ನಾನೇ ಕಳುಹಿಸಿದ್ದು ಎಂದು ಸುಳ್ಳು ಹೇಳಲೂ ಆತ ಹೇಸಲ್ಲ. ಆತನ ಮಾತುಗಳನ್ನು ನಂಬಬೇಡಿ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಾಸನ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಚಿಕ್ಕಮಗಳೂರು ಜಿಲ್ಲೆಯ ಕಡೂರು, ಹಾಸನ ಜಿಲ್ಲೆ ಅರಸೀಕೆರೆ ತಾಲೂಕು ಗಂಡಸಿ ಮತ್ತು ಬಾಣವಾರದಲ್ಲಿ ಗುರುವಾರ ಪ್ರಚಾರ ಸಭೆಯಲ್ಲಿ ಮಾತನಾಡಿ, ಎ.ಮಂಜು ಅವರನ್ನು ಕಾಂಗ್ರೆಸ್‌ ಮಂತ್ರಿ ಮಾಡಿತ್ತು. ಆತನಿಗೆ ರಾಜಕೀಯವಾಗಿ ಎಲ್ಲವನ್ನೂ ನೀಡಲಾಗಿತ್ತು. ಆದರೆ ಬಿಜೆಪಿಗೆ ಹೋಗುವ ಮೂಲಕ ಅವಕಾಶವಾದಿ ರಾಜಕಾರಣ ಮಾಡಿದ್ದಾನೆ. ನಾನು ಫೋನ್‌ ಮಾಡಿ ‘ಏನಯ್ಯ ಶ್ರೀನಿವಾಸ್‌ ಪ್ರಸಾದ್‌ ಭೇಟಿ ಮಾಡಿದ್ದೀಯಾ, ಬಿಜೆಪಿಗೇನಾದರೂ ಹೋಗುತ್ತಿದ್ದೀಯಾ’ ಅಂತ ಕೇಳಿದೆ. ಅದಕ್ಕೆ ಆತ ‘ಛೇ.. ಎಲ್ಲಾದರೂ ಉಂಟೆ. ಕಾಂಗ್ರೆಸ್‌ ನನಗೆ ಎಲ್ಲವನ್ನೂ ಕೊಟ್ಟಿದೆ’ ಎಂದನಲ್ಲದೆ, ‘ನಾನು ನಿಮ್ಮನ್ನು ಬಿಟ್ಟು ಎಲ್ಲಿಗಾದರೂ ಹೋಗುವುದುಂಟೇ’ ಎಂದಿದ್ದ. ಎರಡು ದಿನಗಳ ನಂತರ ಫೋನ್‌ ಮಾಡಿದರೆ ಸ್ವಿಚ್‌್ಡ ಆಫ್‌. ಆತ ಬಿಜೆಪಿ ಸೇರಿದ್ದಾನೆ. ಪಕ್ಷದ್ರೋಹ ಮಾಡಿರುವುದಲ್ಲದೆ ಮಹಾನ್‌ ಸುಳ್ಳು ಹೇಳಿದ್ದಾನೆ. ಆತನ ಬಗ್ಗೆ ಬಗ್ಗೆ ಎಚ್ಚರವಿರಲಿ. ಯಾವುದೇ ಕಾರಣಕ್ಕೂ ಆತನಿಗೆ ಒಂದೇ ಒಂದು ವೋಟು ಹಾಕಬಾರದು. ಮೈತ್ರಿ ಅಭ್ಯರ್ಥಿ ಪ್ರಜ್ವಲ್‌ ರೇವಣ್ಣನಿಗೆ ಮತ ಹಾಕುವ ಮೂಲಕ ಜಾತ್ಯತೀತ ಶಕ್ತಿಗಳನ್ನು ಬಲಗೊಳಿಸಿ ಎಂದರು.

ನಂತರ ಬಾಣಾವರದಲ್ಲಿ ಮಾತನಾಡಿ, ‘ಮಿಸ್ಟರ್‌ ಮಂಜು... ನಿನ್ನನ್ನು ಮಂತ್ರಿ ಮಾಡಿದ್ದು ಸಿದ್ದರಾಮಯ್ಯ. ಈಗ ಮೋದಿಯನ್ನು ಪ್ರಧಾನಿ ಮಾಡೋಕೆ ಹೋಗಿದ್ದೀನಿ ಅಂತಾ ಹೇಳ್ತಿಯಲ್ಲಾ, ನಿನಗೆ ನನ್ನ ಧಿಕ್ಕಾರ’ ಎಂದು ಹರಿಹಾಯ್ದರು.

ದೇಶದಲ್ಲಿ ಏ.11 ರಿಂದ ಮೇ 19ರವರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ, ಕರ್ನಾಟಕದಲ್ಲಿ 28.