ಹಲಗೂರು :  ಮೈತ್ರಿ ಅಭ್ಯರ್ಥಿ ನಿಖಿಲ್‌ ಕುಮಾರಸ್ವಾಮಿ ಪರವಾಗಿ ಪ್ರಚಾರ ಮಾಡಲು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಜೆಡಿಎಸ್‌ ನಾಯಕರು ಬ್ಲ್ಯಾಕ್‌ಮೇಲ್‌ ಮಾಡಿ ಕರೆದುಕೊಂಡು ಬಂದಿದ್ದಾರೆ ಎಂದು ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್‌ ಟೀಕಿಸಿದರು.

ಹಲಗೂರಿನಲ್ಲಿ ಶನಿವಾರ ಪ್ರಚಾರದ ವೇಳೆ ಮಾತನಾಡಿದ ಸುಮಲತಾ, ಸಿದ್ದರಾಮಯ್ಯ ಸಂಪೂರ್ಣವಾಗಿ ಒಪ್ಪಿ ಪ್ರಚಾರಕ್ಕೆ ಬಂದಿಲ್ಲ. ಜೆಡಿಎಸ್‌ನವರು ಅವರನ್ನು ಕಟ್ಟಿಹಾಕಿ ಕರೆದುಕೊಂಡು ಬಂದಿದ್ದಾರೆ. ಜೆಡಿಎಸ್‌ನವರ ಬ್ಲ್ಯಾಕ್‌ಮೇಲ… ತಂತ್ರಕ್ಕೆ ಹೆದರಿದ ಸಿದ್ದರಾಮಯ್ಯ ಇಲ್ಲಿಗೆ ಬಂದಿದ್ದಾರೆ ಎಂದರು. ನನ್ನ ವಿರುದ್ಧ ಮತ ಚಲಾಯಿಸಿ ಎಂದು ಸಿದ್ದರಾಮಯ್ಯ ಹೇಳಿದ್ದೂ ಕೂಡ ಅವರ ಆತ್ಮಸಾಕ್ಷಿಯಿಂದ ಅಲ್ಲ, ಹೆದರಿಕೆಗೆ ಬಗ್ಗಿ ಈ ಮಾತುಗಳನ್ನು ಆಡಿದ್ದಾರೆ ಎಂದು ಪುನರುಚ್ಚರಿಸಿದರು.

ಅಂಬಿ ಹೆಸರಲ್ಲಿ ಹೇಸಿಗೆ ರಾಜಕಾರಣ:

ಮಾಜಿ ಪ್ರಧಾನಿ ದೇವೇಗೌಡರನ್ನು ನಾವು ತಂದೆಯ ಸ್ಥಾನದಲ್ಲಿ ನೋಡ್ತಿದ್ದೀವಿ. ಅವರೂ ಹಾಗೆ ನಮ್ಮನ್ನು ಮಕ್ಕಳ ಸ್ಥಾನದಲ್ಲಿಟ್ಟು ನೋಡಲಿ. ಜೆಡಿಎಸ್‌ನವರು ಅಂಬರೀಷ್‌ ಸಾವಿನ ವಿಚಾರದಲ್ಲಿ ಹೇಸಿಗೆ ರಾಜಕಾರಣ ಮಾಡ್ತಿದ್ದಾರೆ. ಕೆ.ಆರ್‌.ನಗರಕ್ಕೆ ರಾಹುಲ್‌ ಗಾಂಧಿ ಬಂದರೂ ಏನೂ ಆಗಲ್ಲ. ಆ ಬಗ್ಗೆ ನಾನು ಮಾತನಾಡಲ್ಲ ಎಂದು ತಿಳಿಸಿದರು.

ಮಗನನ್ನು ಸೇನೆಗೆ ಸೇರಿಸಲಿ:

ನಿಮಗೆ ದೇಶದ ಬಗ್ಗೆ ಅಷ್ಟೊಂದು ಪ್ರೇಮವಿದ್ದರೆ ಮಗನನ್ನು ಎಂಪಿ ಮಾಡುವ ಬದರು ದೇಶದಲ್ಲಿ ಗಡಿ ಕಾಯುವ ಸೈನಿಕನಾಗಿ ಮಾಡಿ, ಇತರರಿಗೂ ಮಾದರಿಯಾಗಿ ಎಂದು ಸಿಎಂ ಹೇಳಿಕೆಗೆ ಟಾಂಗ್‌ ನೀಡಿದರು. ದೇಶದ ಗಡಿ ಕಾಯುತ್ತಿರುವ ಸೈನಿಕರಿಂದಾಗಿಯೇ ನಾವುಗಳು ಸುಖವಾಗಿ ಊಟ, ನಿದ್ರೆ ಮಾಡಿಕೊಂಡು ನೆಮ್ಮದಿಯ ಜೀವನ ಮಾಡುತ್ತಿದ್ದೇವೆ. ಆದರೆ ನಮ್ಮ ಮುಖ್ಯಮಂತ್ರಿಗಳು ಎರಡು ಹೊತ್ತಿಗೆ ಊಟಕ್ಕೆ ತೊಂದರೆ ಇರುವವರು ಸೈನ್ಯಕ್ಕೆ ಸೇರುತ್ತಾರೆ ಎಂಬ ಚುಚ್ಚಿ ಮಾತನಾಡುವುದು ಎಷ್ಟುಸರಿ ಎಂದು ಪ್ರಶ್ನೆ ಮಾಡಿದರು.