ನಾರಾಯಣ ಹೆಗಡೆ, ಕನ್ನಡಪ್ರಭ

ಹಾವೇರಿ[ಏ.21]: ಉತ್ತರ ಕರ್ನಾಟಕದ ಹೆಬ್ಬಾಗಿಲು ಹಾವೇರಿ ಲೋಕಸಭಾ ಕ್ಷೇತ್ರದಲ್ಲಿ ಹ್ಯಾಟ್ರಿಕ್‌ ಗೆಲುವಿನ ಹುಮ್ಮಸ್ಸಿನಲ್ಲಿರುವ ಬಿಜೆಪಿಯ ಶಿವಕುಮಾರ ಉದಾಸಿ ಅವರಿಗೆ ಈ ಬಾರಿ ಕಾಂಗ್ರೆಸ್‌ ಅಭ್ಯರ್ಥಿ ಡಿ.ಆರ್‌.ಪಾಟೀಲ ಪ್ರಬಲ ಪೈಪೋಟಿ ನೀಡಲು ಸಜ್ಜಾಗಿದ್ದಾರೆ.

ಡಿ.ಆರ್‌.ಪಾಟೀಲರ ಪ್ರವೇಶದಿಂದಾಗಿ ಕ್ಷೇತ್ರದಲ್ಲಿ ಈ ಬಾರಿ ಸಮಬಲದ ಹೋರಾಟದ ಸ್ಥಿತಿ ನಿರ್ಮಾಣವಾಗಿದೆ. ಅಲ್ಪಸಂಖ್ಯಾತ ಅಭ್ಯರ್ಥಿಗಳ ಸತತ ಸೋಲಿನಿಂದ ಪಾಠ ಕಲಿತ ಕಾಂಗ್ರೆಸ್‌ ಈ ಬಾರಿ ಇಲ್ಲಿ ಲಿಂಗಾಯತ ವ್ಯಕ್ತಿಯನ್ನು ಅಭ್ಯರ್ಥಿಯಾಗಿಸಿ ಹೊಸ ಪ್ರಯೋಗಕ್ಕಿಳಿದಿರುವುದು ಪಕ್ಷದ ಕಾರ್ಯಕರ್ತರ ಹುಮ್ಮಸ್ಸು ಹೆಚ್ಚಿಸಿದೆ.

ಹಿಂದಿನ ಎರಡು ಚುನಾವಣೆಗಳಲ್ಲಿ ಕಾಂಗ್ರೆಸ್‌ನ ಸಲೀಂ ಅಹ್ಮದ್‌ ವಿರುದ್ಧ ಶಿವಕುಮಾರ ಉದಾಸಿ ಗೆದ್ದಿದ್ದರು. ಈ ಬಾರಿ ‘ಹುಲಕೋಟಿ ಹುಲಿ’ ಕುಟುಂಬದ ಡಿ.ಆರ್‌.ಪಾಟೀಲ ಎದುರಾಳಿ. ಕಣದಲ್ಲಿ ಒಟ್ಟು 10 ಅಭ್ಯರ್ಥಿಗಳಿದ್ದರೂ ನೇರ ಸ್ಪರ್ಧೆಯಿರುವುದು ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆ. ಈ ಚುನಾವಣೆ ಎರಡು ಪಕ್ಷಗಳ ನಡುವೆ ಅಷ್ಟೇ ಅಲ್ಲ, ಎರಡು ಜಿಲ್ಲೆಗಳ ಪ್ರತಿಷ್ಠಿತ ಕುಟುಂಬಗಳ ನಡುವಿನ ಕದನವೂ ಆಗಿದೆ.

2 ಪ್ರಭಾವಿ ಕುಟುಂಬಗಳ ನಡುವಣ ಸಮರ

ಉದಾಸಿ ಅವರಿಗೆ ಬಿಜೆಪಿ ಹಿರಿಯ ನಾಯಕ, ಹಾನಗಲ್ಲ ಹಾಲಿ ಶಾಸಕರೂ ಆಗಿರುವ ತಂದೆ ಸಿ.ಎಂ. ಉದಾಸಿ ಬೆಂಬಲವಿದ್ದರೆ, ಗದುಗಿನ ‘ಹುಲಕೋಟಿ ಹುಲಿ’ ಎಂದೇ ಖ್ಯಾತರಾಗಿರುವ ದಿ. ಕೆ.ಎಚ್‌. ಪಾಟೀಲ ಕುಟುಂಬದ ಡಿ.ಆರ್‌.ಪಾಟೀಲ ಕಾಂಗ್ರೆಸ್‌ ಅಭ್ಯರ್ಥಿ. ಇವರು ಕಾಂಗ್ರೆಸ್‌ ಹಿರಿಯ ನಾಯಕ, ಪ್ರಚಾರ ಸಮಿತಿ ಅಧ್ಯಕ್ಷರೂ ಆಗಿರುವ ಎಚ್‌.ಕೆ. ಪಾಟೀಲರ ಸಹೋದರ ಸಂಬಂಧಿ ಎನ್ನುವುದು ವಿಶೇಷ. ಆದ್ದರಿಂದ ಒಂದೇ ಸಮುದಾಯದ ಎರಡು ಪಕ್ಷಗಳ ಪ್ರಭಾವಿ ಕುಟುಂಬಗಳ ನಡುವಿನ ಕದನವೂ ಇದಾಗಿದೆ.

ಹಾವೇರಿ ಮತ್ತು ಗದಗ ಜಿಲ್ಲೆಯ ಒಟ್ಟು ಎಂಟು ವಿಧಾನಸಭಾ ಕ್ಷೇತ್ರಗಳನ್ನು ಹಾವೇರಿ ಲೋಕಸಭಾ ಕ್ಷೇತ್ರ ಒಳಗೊಂಡಿದೆ. ಹಾವೇರಿ ಜಿಲ್ಲೆಯ ಹಾನಗಲ್‌, ಹಾವೇರಿ, ಬ್ಯಾಡಗಿ, ರಾಣಿಬೆನ್ನೂರು, ಹಿರೇಕೆರೂರು ಹಾಗೂ ಗದಗ ಜಿಲ್ಲೆಯ ಗದಗ, ರೋಣ ಮತ್ತು ಶಿರಹಟ್ಟಿಕ್ಷೇತ್ರದ ವ್ಯಾಪ್ತಿ ಈ ಲೋಕಸಭಾ ಕ್ಷೇತ್ರಕ್ಕಿದೆ. ಈ ಪೈಕಿ 5 ಕಡೆ ಬಿಜೆಪಿ ಶಾಸಕರಿದ್ದು, 2 ಕಡೆ ಕಾಂಗ್ರೆಸ್ಸಿಗರಿದ್ದಾರೆ. ಒಂದು ಕಡೆ ಪಕ್ಷೇತರ ಶಾಸಕ ಗೆದ್ದಿದ್ದಾರೆ.

ಲಿಂಗಾಯತರೇ ನಿರ್ಣಾಯಕರು

ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳ ಜತೆಗೆ ಜಾತಿ ಲೆಕ್ಕಾಚಾರವೂ ಅಭ್ಯರ್ಥಿಗಳ ಗೆಲುವಿನಲ್ಲಿ ಕೆಲಸ ಮಾಡುತ್ತದೆ. ಬಿಜೆಪಿಯು ಲಿಂಗಾಯತ ಸಮುದಾಯದ ಮೇಲೆ ಕಣ್ಣಿಟ್ಟಿದ್ದು, ಈ ಬಾರಿ ಕಾಂಗ್ರೆಸ್‌ ಕೂಡ ಅದೇ ಸಮುದಾಯದ (ರಡ್ಡಿ ಲಿಂಗಾಯತ) ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ. ವಿವಿಧ ಒಳಪಂಗಡಗಳು ಸೇರಿ ಒಟ್ಟು 6 ಲಕ್ಷಕ್ಕೂ ಹೆಚ್ಚು ಲಿಂಗಾಯತ ಮತಗಳು ಇಲ್ಲಿವೆ.

ಇದಲ್ಲದೆ 3 ಲಕ್ಷ ಮುಸ್ಲಿಂ, 2 ಲಕ್ಷ ಕುರುಬ, ಎಸ್ಸಿ,ಎಸ್ಟಿಸೇರಿ ಸುಮಾರು 4 ಲಕ್ಷ, ಇತರೆ 2 ಲಕ್ಷ ಸೇರಿ 17 ಲಕ್ಷ ಮತದಾರರಿದ್ದಾರೆ. ಬಿಎಸ್ಪಿಯಿಂದ ಅಯೂಬ್‌ಖಾನ್‌ ಪಠಾಣ ಕಣಕ್ಕಿಳಿದಿದ್ದು, ಅವರು ದಲಿತ ಮತಗಳ ಜೊತೆ ಅಲ್ಪಸಂಖ್ಯಾತರ ಮತವನ್ನೂ ಪಡೆಯುವ ಸಾಧ್ಯತೆ ಇದೆ. ಒಂದು ವೇಳೆ ಅಯೂಬ್‌ಖಾನ್‌ ಹೆಚ್ಚಿನ ಮತಗಳನ್ನು ಸೆಳೆದರೆ ಕಾಂಗ್ರೆಸ್‌ಗೆ ಹಿನ್ನಡೆಯಾಗುವುದಂತೂ ಸತ್ಯ.

ಕಾಂಗ್ರೆಸ್‌ ತಂತ್ರಗಾರಿಕೆ ಬದಲು

ಬಿಜೆಪಿಯ ಐದು ಶಾಸಕರೂ ತಮ್ಮ ಕ್ಷೇತ್ರದಲ್ಲಿ ಪಕ್ಷಕ್ಕೆ ಲೀಡ್‌ ಕೊಡುವ ಭರವಸೆ ನೀಡಿದ್ದಾರೆ. ಚುನಾವಣೆಗೂ ಮುನ್ನ ಮುಖಂಡರಲ್ಲಿದ್ದ ಸಣ್ಣಪುಟ್ಟಭಿನ್ನಾಭಿಪ್ರಾಯಗಳನ್ನೆಲ್ಲ ಸಿ.ಎಂ. ಉದಾಸಿ ಚಾಣಾಕ್ಷತನದಿಂದ ಬಗೆಹರಿಸಿದ್ದಾರೆ. ಇದರಿಂದ ಕ್ಷೇತ್ರದಲ್ಲಿ ಬಿಜೆಪಿ ಒಗ್ಗಟ್ಟು ಪ್ರದರ್ಶಿಸುತ್ತಿದೆ. ಜತೆಗೆ, ಮೋದಿ ಅಲೆಯೂ ಕೆಲಸ ಮಾಡುತ್ತಿದೆ. ಯುವಕರು ಮೋದಿ ಬೆಂಬಲಕ್ಕೆ ನಿಂತಿದ್ದಾರೆ. ಶಿವಕುಮಾರ ಉದಾಸಿ 10 ವರ್ಷಗಳಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ಮುಂದಿಟ್ಟುಕೊಂಡು ಪ್ರಚಾರ ನಡೆಸಿದ್ದಾರೆ. ಆದರೆ ಕಾಂಗ್ರೆಸ್‌, ಉದಾಸಿ ಹ್ಯಾಟ್ರಿಕ್‌ ಗೆಲುವಿಗೆ ತಡೆಯೊಡ್ಡಲು ಎಲ್ಲಾ ರೀತಿಯ ತಂತ್ರಗಾರಿಕೆ ರೂಪಿಸಿದೆ.

ಈ ಬಾರಿ ಕಾಂಗ್ರೆಸ್‌ ಅಲ್ಪಸಂಖ್ಯಾತರೇತರ ಅಭ್ಯರ್ಥಿ ಕಣಕ್ಕಿಳಿಸಿದ್ದು ಉದಾಸಿ ಪಾಲಿಗೆ ನಿಜವಾದ ಅಗ್ನಿಪರೀಕ್ಷೆ. ಉದಾಸಿ ಲಿಂಗಾಯತರಾಗಿರುವ ಕಾರಣ ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಲಿಂಗಾಯತ ಸಮುದಾಯದವರು ಸಹಜವಾಗಿಯೇ ಅವರನ್ನು ಬೆಂಬಲಿಸುತ್ತಿದ್ದರು. ಆದರೆ, ಈ ಬಾರಿ ಕಾಂಗ್ರೆಸ್‌ ಕೂಡ ಲಿಂಗಾಯತ ಅಭ್ಯರ್ಥಿಯನ್ನೇ ಕಣಕ್ಕಿಳಿಸಿರುವ ಹಿನ್ನೆಲೆಯಲ್ಲಿ ಸಮುದಾಯದ ಮತವಿಭಜನೆಯಾಗುವ ನಿರೀಕ್ಷೆ ಇದೆ. ಇದರೊಂದಿಗೆ ಹಿಂದುಳಿದ, ಅಲ್ಪಸಂಖ್ಯಾತ, ಎಸ್ಸಿ -ಎಸ್ಟಿಮತಗಳು ಕೈಹಿಡಿದರೆ ಗೆಲುವು ಸುಲಭ ಎನ್ನುವ ಲೆಕ್ಕಾಚಾರ ಕಾಂಗ್ರೆಸ್‌ನದು. ಡಿ.ಆರ್‌. ಪಾಟೀಲ ಅಜಾತಶತ್ರು ಆಗಿದ್ದು, ಕಾಂಗ್ರೆಸ್‌ನ ಸಾಂಪ್ರದಾಯಿಕ ಮತಗಳಲ್ಲದೆ ಇತರೆ ಮತಗಳನ್ನು ಪಡೆಯುವ ಸಾಧ್ಯತೆಗಳೂ ಇಲ್ಲದಿಲ್ಲ.

ಈವರೆಗೂ ಎರಡೂ ಪ್ರಮುಖ ಪಕ್ಷದ ಅಭ್ಯರ್ಥಿಗಳು ಹಾವೇರಿ ಜಿಲ್ಲೆಯವರೇ ಆಗಿರುತ್ತಿದ್ದರು. ಆದರೆ, ಈಗ ಗದಗ ಜಿಲ್ಲೆಯ ಪಾಟೀಲರು ಸ್ಪರ್ಧೆ ಮಾಡಿದ್ದು ಜಿಲ್ಲೆಯಲ್ಲಿ ಎಷ್ಟುಮತ ಪಡೆಯಲಿದ್ದಾರೆ ಎಂಬುದೂ ಮಹತ್ವವಾಗಲಿದೆ. ಅದೇ ರೀತಿ ಜೆಡಿಎಸ್‌ ಬೆಂಬಲ ಕಾಂಗ್ರೆಸ್‌ ಅಭ್ಯರ್ಥಿ ಪಾಲಿಗೆ ಪ್ಲಸ್‌ ಪಾಯಿಂಟ್‌.

ಇನ್ನು ಗದಗದ ಪ್ರಭಾವಿ ಪಂಚಮಸಾಲಿ ಲಿಂಗಾಯತ ಮುಖಂಡ ಮಾಜಿ ಶಾಸಕ (ಎರಡು ಬಾರಿ) ಶ್ರೀಶೈಲಪ್ಪ ಬಿದರೂರ ಅವರು ಚುನಾವಣೆ ಹೊಸ್ತಿಲಲ್ಲಿ ಕಾಂಗ್ರೆಸ್‌ ಸೇರಿದ್ದು ಬಿಜೆಪಿಗೆ ದೊಡ್ಡ ಹಿನ್ನಡೆ.

ಕಾಂಗ್ರೆಸ್ಸಿಗೆ ಒಳ ಹೊಡೆತದ ಬಿಸಿ

ಡಿ.ಆರ್‌.ಪಾಟೀಲರು ವೈಯಕ್ತಿಕ ಟೀಕೆಗಿಳಿಯದೆ ಸಿದ್ಧಾಂತ, ವೈಚಾರಿಕತೆ ಇಟ್ಟುಕೊಂಡು ಪ್ರಚಾರ ನಡೆಸುತ್ತಿದ್ದಾರೆ. ಗಾಂಧಿವಾದಿ, ಸಂತ ರಾಜಕಾರಣಿ ಎಂದೇ ಅವರನ್ನು ಕರೆಯುತ್ತಾರಾದರೂ ಅದೆಲ್ಲ ಎಷ್ಟರಮಟ್ಟಿಗೆ ಮತಗಳಾಗಿ ಪರಿವರ್ತನೆ ಆಗುತ್ತದೆ ಎಂದು ಕಾದು ನೋಡಬೇಕಿದೆ. ಕಾಂಗ್ರೆಸ್‌ಗೆ ಸ್ವಪಕ್ಷೀಯರ ಒಳ ಏಟಿನ ಆತಂಕವೂ ಇದೆ.

ಸಲೀಂ ಅಹ್ಮದ್‌ಗೆ ಟಿಕೆಟ್‌ ಕೈತಪ್ಪಿದ್ದಕ್ಕೆ ಕಾಂಗ್ರೆಸ್‌ನ ಅಲ್ಪಸಂಖ್ಯಾತ ಮುಖಂಡರು ಅಸಮಾಧಾನಗೊಂಡಿದ್ದಾರೆ. ಮತ್ತೊಬ್ಬ ಟಿಕೆಟ್‌ ಆಕಾಂಕ್ಷಿಯಾಗಿದ್ದ ಬಸವರಾಜ ಶಿವಣ್ಣನವರ್‌ಗೆ ಟಿಕೆಟ್‌ ಕೈತಪ್ಪಿದ ಹಿನ್ನೆಲೆಯಲ್ಲಿ ಕುರುಬ ಸಮುದಾಯದವರೂ ತಟಸ್ಥರಾಗಿದ್ದಾರೆ. ಇವೆಲ್ಲವನ್ನೂ ಕಾಂಗ್ರೆಸ್‌ ಹೇಗೆ ಸರಿಪಡಿಸುತ್ತದೆ ಎಂಬುದರ ಮೇಲೆ ಫಲಿತಾಂಶ ನಿರ್ಧಾರವಾಗಲಿದೆ. ಜೆಡಿಎಸ್‌-ಕಾಂಗ್ರೆಸ್‌ ಮೈತ್ರಿಯಿಂದ ಕ್ಷೇತ್ರದಲ್ಲಿ ಕೈ ಅಭ್ಯರ್ಥಿಗೆ ಹೆಚ್ಚಿನ ಲಾಭವೇನೂ ಕಾಣುತ್ತಿಲ್ಲ. ಜೆಡಿಎಸ್‌ ಕಾರ್ಯಕರ್ತರೂ ಪ್ರಚಾರದಲ್ಲಿ ಕಾಣಿಸಿಕೊಳ್ಳುತ್ತಿಲ್ಲ.

ಅಖಾಡದಲ್ಲಿ 10 ಮಂದಿ ಹುರಿಯಾಳುಗಳು

ಡಿ.ಆರ್‌.ಪಾಟೀಲ (ಕಾಂಗ್ರೆಸ್‌), ಶಿವಕುಮಾರ ಉದಾಸಿ (ಬಿಜೆಪಿ), ಅಯೂಬಖಾನ್‌ ಪಠಾಣ (ಬಿಎಸ್ಪಿ), ಈಶ್ವರ ಪಾಟೀಲ (ಉತ್ತಮ ಪ್ರಜಾಕೀಯ ಪಾರ್ಟಿ), ಶೈಲೇಶ ನಾಜರೇ ಅಶೋಕ (ಇಂಡಿಯನ್‌ ಲೇಬರ್‌ ಪಾರ್ಟಿ), ಬಸವರಾಜ ದೇಸಾಯಿ (ಪಕ್ಷೇತರ), ವೀರಭದ್ರಪ್ಪ ಕಬ್ಬಿಣದ (ಪಕ್ಷೇತರ), ಹನುಮಂತಪ್ಪ ಕಬ್ಬಾರ (ಪಕ್ಷೇತರ), ರಾಮಪ್ಪ ಸಿದ್ದಪ್ಪ ಬೊಮ್ಮೋಜಿ (ಪಕ್ಷೇತರ), ಶಿವಪ್ಪ ಕಲ್ಲಪ್ಪ ಪೂಜಾರ (ಪಕ್ಷೇತರ).

2014ರ ಫಲಿತಾಂಶ:

ಶಿವಕುಮಾರ ಉದಾಸಿ(ಬಿಜೆಪಿ)​- 5,66,790

ಸಲೀಂ ಅಹ್ಮದ್‌(ಕಾಂಗ್ರೆಸ್‌)- 4,79,219

ರವಿ ಮೆಣಸಿನಕಾಯಿ(ಜೆಡಿಎಸ್‌)- 9814

ಅಂತರ-87,571

ಒಟ್ಟು ಮತದಾರರು- 17,02,618| ಪುರುಷ -869230| ಮಹಿಳೆ -833317| ಇತರೆ 71

ದೇಶದಲ್ಲಿ ಏ.11ರಿಂದ ಮೇ.19ರವೆರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂಧು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ. ಕರ್ನಾಟಕದಲ್ಲಿ 28