ರುದ್ರಪ್ಪ ಆಸಂಗಿ, ಕನ್ನಡಪ್ರಭ

ವಿಜಯಪುರ[ಏ.20]: ಅನುಭವಿ ರಾಜಕಾರಣಿ ಹಾಗೂ ಕೇಂದ್ರ ಸಚಿವ ರಮೇಶ್‌ ಜಿಗಜಿಣಗಿ ಅವರಿಗೆ ರಾಜಕಾರಣದಲ್ಲಿ ಈಗಷ್ಟೇ ಎಂಟ್ರಿ ಕೊಡುತ್ತಿರುವ ಡಾ. ಸುನೀತಾ ಚವ್ಹಾಣ್‌ ಎಷ್ಟರ ಮಟ್ಟಿಗೆ ಪೈಪೋಟಿ ನೀಡುತ್ತಾರೆ ಎಂಬುದೇ ವಿಜಯಪುರ ಲೋಕಸಭಾ ಕ್ಷೇತ್ರದ ಈ ಬಾರಿಯ ಕುತೂಹಲ.

ಹಿಂದೆ ಚಿಕ್ಕೋಡಿ ಮೀಸಲು ಲೋಕಸಭಾ ಕ್ಷೇತ್ರದಿಂದ ಹ್ಯಾಟ್ರಿಕ್‌ ಗೆಲುವು ಬಾರಿಸಿದ್ದ ಜಿಗಜಿಣಗಿ ಅವರು ಕ್ಷೇತ್ರ ಪುನರ್‌ವಿಂಗಡಣೆ ನಂತರ ವಿಜಯಪುರ ಲೋಕಸಭಾ ಕ್ಷೇತ್ರಕ್ಕೆ ಸ್ಥಳಾಂತರಗೊಂಡು ಎರಡು ಬಾರಿ ಜಯ ಗಳಿಸಿದ್ದಾರೆ. ಜತೆಗೆ ಹಾಲಿ ಕೇಂದ್ರ ಸಚಿವರೂ ಹೌದು. ಅವರನ್ನು ಮಣಿಸಲು ಕಾಂಗ್ರೆಸ್‌ ಮತ್ತು ಜೆಡಿಎಸ್‌ ಮೈತ್ರಿಕೂಟದ ಅಭ್ಯರ್ಥಿಯಾಗಿ ಹಾಲಿ ನಾಗಠಾಣ ಕ್ಷೇತ್ರದ ಜೆಡಿಎಸ್‌ ಶಾಸಕ ದೇವಾನಂದ ಚವ್ಹಾಣ್‌ ಅವರ ಪತ್ನಿ ಸುನೀತಾ ಅವರನ್ನು ಕಣಕ್ಕಿಳಿಸಲಾಗಿದೆ.

ಒಂದು ವೇಳೆ ಈ ಕ್ಷೇತ್ರ ಕಾಂಗ್ರೆಸ್‌ ಪಾಲಾಗಿದ್ದರೆ ಹೋರಾಟದ ಸ್ವರೂಪವೇ ಬೇರೆ ಆಗಿರುತ್ತಿತ್ತು. ಆದರೆ, ಜೆಡಿಎಸ್‌ಗೆ ಬಿಟ್ಟು ಕೊಟ್ಟಿರುವುದರಿಂದ ಕಾಂಗ್ರೆಸ್‌ ಪಾಳೆಯದಲ್ಲಿ ಚುನಾವಣೆ ಬಗ್ಗೆ ಹೇಳಿಕೊಳ್ಳುವಂಥ ಉತ್ಸಾಹ ಕಂಡು ಬರುತ್ತಿಲ್ಲ.

ಎಂಟು ವಿಧಾನಸಭಾ ಮತಕ್ಷೇತ್ರಗಳನ್ನು ಒಳಗೊಂಡ ವಿಜಯಪುರ ಲೋಕಸಭಾ ಮತಕ್ಷೇತ್ರದಲ್ಲಿ ಕಾಂಗ್ರೆಸ್ಸಿನ ಮೂರು, ಬಿಜೆಪಿಯ ಮೂರು ಹಾಗೂ ಜೆಡಿಎಸ್‌ನ ಇಬ್ಬರು ಶಾಸಕರು ಇದ್ದಾರೆ. ಕಾಂಗ್ರೆಸ್ಸಿನ ಇಬ್ಬರು ಮತ್ತು ಜೆಡಿಎಸ್‌ನ ಒಬ್ಬ ಶಾಸಕರು ಸಚಿವರಾಗಿದ್ದಾರೆ.

ಲಿಂಗಾಯತರೇ ನಿರ್ಣಾಯಕರು

ವಿಜಯಪುರ ಲೋಕಸಭೆ ಎಸ್‌ಸಿ ಮೀಸಲು ಕ್ಷೇತ್ರದಲ್ಲಿ ಸುಮಾರು 6 ಲಕ್ಷ ಲಿಂಗಾಯತ ಮತದಾರರು ಇದ್ದಾರೆ. ಆ ಸಮುದಾಯದ ಮತದಾರರೇ ಅತಿ ಹೆಚ್ಚಾಗಿದ್ದಾರೆ. ಪರಿಶಿಷ್ಟಜಾತಿ ಹಾಗೂ ಜನಾಂಗ ಮತ್ತು ಲಂಬಾಣಿ ಜನಾಂಗ ಸೇರಿ 4 ಲಕ್ಷದಷ್ಟಿರುವ ಮತದಾರರೇ ಮೀಸಲು ಕ್ಷೇತ್ರದ ಈ ಚುನಾವಣೆಯಲ್ಲಿ ನಿರ್ಣಾಯಕರಾಗಿದ್ದಾರೆ.

ದಲಿತ ಸಮುದಾಯದ ಎಡಗೈ, ಬಲಗೈ ಮತದಾರರು ಸುಮಾರು 2 ಲಕ್ಷದವರೆಗೆ ಇದ್ದಾರೆ. ಮುಸ್ಲಿಂ-2 ಲಕ್ಷ, ಕುರುಬರು- 2.5 ಲಕ್ಷ, ಕಬ್ಬಲಿಗರು- 1.2 ಲಕ್ಷ, ಬ್ರಾಹ್ಮಣರು-90 ಸಾವಿರ ಮತದಾರರು ಇದ್ದಾರೆ. ಇತರ ಮತದಾರರು ಒಂದು ಲಕ್ಷಕ್ಕೂ ಹೆಚ್ಚಿದ್ದಾರೆ. ಲಿಂಗಾಯತ ಮತದಾರರನ್ನು ಯಾರು ಒಲಿಸಿಕೊಳ್ಳುವಲ್ಲಿ ಯಶಸ್ವಿಯಾಗುತ್ತಾರೆಯೋ ಅವರಿಗೆ ಲೋಕಸಭೆ ಚುನಾವಣೆ ಸರಳ ಎನ್ನುವ ಮಾತೂ ಕೇಳಿಬರುತ್ತಿದೆ.

ಈ ಭಾಗದ ಬಿಜೆಪಿಯ ಲಿಂಗಾಯತ ಸಮುದಾಯದ ಮುಖಂಡರಾಗಿರುವ ಹಾಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮತ್ತು ಜಿಗಜಿಣಗಿ ಅವರೊಂದಿಗಿನ ಆಂತರಿಕ ತಿಕ್ಕಾಟ ತುಸು ಗೊಂದಲ ಮೂಡಿಸಿದ್ದರೂ ನಂತರದ ದಿನಗಳಲ್ಲಿ ಸರಿಪಡಿಸಿಕೊಂಡಿರುವುದರಿಂದ ಬಿಜೆಪಿ ನಾಯಕರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಇನ್ನು ಕಾಂಗ್ರೆಸ್‌ನ ಪ್ರಭಾವಿ ಲಿಂಗಾಯತ ಮುಖಂಡ ಹಾಗೂ ಗೃಹ ಸಚಿವ ಎಂ.ಬಿ. ಪಾಟೀಲ್‌ ಅವರು ಚುನಾವಣೆಯನ್ನು ಗಂಭೀರವಾಗಿ ಸ್ವೀಕರಿಸಿದ್ದೇ ಆದಲ್ಲಿ ಸಮುದಾಯದ ಒಂದಷ್ಟುಮತಗಳನ್ನು ಜೆಡಿಎಸ್‌ಗೆ ಕೊಡಿಸುವಲ್ಲಿ ಯಶಸ್ವಿಯಾಗಬಹುದು.

ದಲಿತ ಮತದಾರರಲ್ಲಿ ಗೊಂದಲ

ದಲಿತರಲ್ಲಿ ಬಲಗೈ, ಎಡಗೈ ಗುಂಪುಗಳಿವೆ. ಛಲವಾದಿ ಸಮುದಾಯ ಬಲಗೈ ಗುಂಪಿಗೆ ಸೇರಿದರೆ, ಮಾದಿಗರು ಎಡಗೈ ಗುಂಪಿಗೆ ಸೇರಿದವರಾಗಿದ್ದಾರೆ. ಬಿಜೆಪಿಯ ರಮೇಶ ಜಿಗಜಿಣಗಿ ಅವರು ಎಡಗೈ ಗುಂಪಿಗೆ ಸೇರಿದವರು. ಈ ಎರಡು ಸಮುದಾಯದವರು ಸುಮಾರು ಎರಡು ಲಕ್ಷ ಮತದಾರರು ಇದ್ದಾರೆ. ಈ ಎರಡು ಗುಂಪಿನ ಮತಗಳು ಬಂಜಾರ ಸಮುದಾಯದ ಡಾ.ಸುನಿತಾ ದೇವಾನಂದ ಚವ್ಹಾಣ ಅವರಿಗೆ ಹೋಗುವುದಿಲ್ಲ ಎನ್ನಲಾಗುತ್ತಿದೆ.

ಇದಕ್ಕೆ ಕಾರಣವೂ ಇದೆ. ಬಂಜಾರ ಜನಾಂಗ ಎಸ್‌ಸಿ ಗುಂಪಿಗೆ ಸೇರಿ ಮೂಲ ಅಸ್ಪೃಶ್ಯರ ಹಕ್ಕುಗಳನ್ನು ಕಸಿದುಕೊಂಡಿದೆ ಎಂಬ ಸಿಟ್ಟು ಇದೆ. ಹಿಂದಿನ ಮೂರು ಲೋಕಸಭೆ ಚುನಾವಣೆಯಲ್ಲಿ ಬಂಜಾರಾ ಸಮುದಾಯದ ಪ್ರಕಾಶ ರಾಠೋಡ ಅವರು ಸೋಲು ಅನುಭವಿಸಬೇಕಾಯಿತು. ಇದಕ್ಕೆ ದಲಿತರ ಮತಗಳನ್ನು ಸೆಳೆಯುವಲ್ಲಿ ವಿಫಲವಾಗಿರುವುದೇ ಪ್ರಮುಖ ಕಾರಣ ಎಂದು ಹೇಳಲಾಗುತ್ತದೆ. ಆದರೆ ಕಳೆದ ಎರಡು ಚುನಾವಣೆಗಳಲ್ಲಿ ದಲಿತರು ಬಿಜೆಪಿಯ ರಮೇಶ ಜಿಗಜಿಣಗಿ ಅವರನ್ನು ಬೆಂಬಲಿಸುತ್ತಾ ಬಂದಿದ್ದಾರೆ.

ಆದರೆ, ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಸಂವಿಧಾನ ಬದಲಿಸುವ ಮಾತುಗಳನ್ನು ಆಡಿರುವುದು ದಲಿತ ಸಮುದಾಯಕ್ಕೆ ಹೆಚ್ಚು ನೋವು ಉಂಟು ಮಾಡಿದೆ. ಹೀಗಾಗಿ ಈ ಸಲ ಬಿಜೆಪಿಯ ರಮೇಶ ಜಿಗಜಿಣಗಿ ಅವರಿಗೆ ಮತ ಹಾಕಬೇಕೋ, ಬೇಡವೋ ಅಥವಾ ಇದಕ್ಕೆ ಪರ್ಯಾಯವಾಗಿ ಬಹುಜನ ಸಮಾಜ ಪಾರ್ಟಿ ಅಭ್ಯರ್ಥಿಗೆ ಮತ ಚಲಾಯಿಸಬೇಕೋ ಎಂಬ ಗೊಂದಲದಲ್ಲಿ ದಲಿತರು ಇದ್ದಾರೆ.

ಜೆಡಿಎಸ್‌ಗೆ ಕಾಂಗ್ರೆಸ್ಸಿನ ಒಳೇಟು ಭೀತಿ

ಮೈತ್ರಿಯಿಂದಾಗಿ ಜೆಡಿಎಸ್‌ ಬಾವುಟಗಳನ್ನು ಹಿಡಿದು ಕಾಂಗ್ರೆಸ್‌ ನಾಯಕರು ಹಾಗೂ ಕಾರ್ಯಕರ್ತರು ಕ್ಷೇತ್ರದಲ್ಲಿ ಬಹಿರಂಗವಾಗಿ ಓಡಾಡುತ್ತಿಲ್ಲ. ಕಾಂಗ್ರೆಸ್‌- ಜೆಡಿಎಸ್‌ ನಾಯಕರು, ಕಾರ್ಯಕರ್ತರು ಜಂಟಿಯಾಗಿ ಪ್ರಚಾರಕ್ಕಿಳಿಯುವಲ್ಲಿ ಹಿಂದೇಟು ಹಾಕುತ್ತಿದ್ದಾರೆ. ಕಾಂಗ್ರೆಸ್‌ ಹಾಗೂ ಜೆಡಿಎಸ್‌ ನಾಯಕರು ಹಮ್‌ ಸಬ್‌ ಭಾಯಿ ಭಾಯಿ ಎಂದು ನಾಟಕೀಯವಾಗಿ ತೋರಿಸಿಕೊಳ್ಳುತ್ತಿದ್ದಾರೆ. ಮನಸಾರೆ ಚುನಾವಣೆ ಪ್ರಚಾರಕ್ಕೆ ಮುಂದಾಗುತ್ತಿಲ್ಲ.

ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಕಾಂಗ್ರೆಸ್‌- ಜೆಡಿಎಸ್‌ ಜಂಟಿಯಾಗಿ ಪ್ರಚಾರ ನಡೆಸಲು ಬೀದಿಗಿಳಿದಿರುವುದು ತೀರಾ ಅಪರೂಪ. ಕಾಂಗ್ರೆಸ್‌, ಜೆಡಿಎಸ್‌ ಕಾರ್ಯಕರ್ತರಲ್ಲಿ ಹೊಂದಾಣಿಕೆ ಎಂಬುವುದು ಇನ್ನೂ ಕನ್ನಡಿಯೊಳಗಿನ ಗಂಟಾಗಿದೆ. ಜೆಡಿಎಸ್‌ಗೆ ಕಾಂಗ್ರೆಸ್ಸಿನ ಒಳ ಏಟು ಘಾಸಿ ಮಾಡುವ ಸಾಧ್ಯತೆಯೂ ಇದೆ. ಮೇಲ್ಮಟ್ಟದ ನಾಯಕರು ಒಪ್ಪಂದ ಮಾಡಿಕೊಂಡರೂ ಕೆಳಮಟ್ಟದಲ್ಲಿರುವ ಕಾಂಗ್ರೆಸ್‌ ಕಾರ್ಯಕರ್ತರು ಮೈತ್ರಿ ಧರ್ಮಕ್ಕೆ ಸುತಾರಾಂ ಒಪ್ಪುತ್ತಿಲ್ಲ. ಇದು ಜೆಡಿಎಸ್‌ ಅಭ್ಯರ್ಥಿಗೆ ಹೊಡೆತ ಬೀಳುವುದರಲ್ಲಿ ಅನುಮಾನವೇ ಇಲ್ಲ.

ಜಿಗಜಿಣಗಿಗೆ ಮೋದಿ ಹವಾ ಬಲ

ಕೇಂದ್ರದ ನರೇಂದ್ರ ಮೋದಿ ಸಚಿವ ಸಂಪುಟದಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಖಾತೆ ರಾಜ್ಯ ಸಚಿವರಾಗಿಯೂ ಜಿಗಜಿಣಗಿ ಸೇವೆ ಸಲ್ಲಿಸಿದ್ದಾರೆ. ಇಂಥ ಹಿರಿಯ ಅನುಭವಿ ರಾಜಕಾರಣಿಯಾದ ರಮೇಶ ಜಿಗಜಿಣಗಿ ಅವರಿಗೆ ಕಾಂಗ್ರೆಸ್‌- ಜೆಡಿಎಸ್‌ ಮೈತ್ರಿಕೂಟದ ಅಭ್ಯರ್ಥಿ ಯಾವ ರೀತಿ ಪೈಪೋಟಿ ನೀಡಬಲ್ಲರು ಎಂಬುವುದು ಕುತೂಹಲ ಕೆರಳಿಸಿದೆ. ಮೇಲಾಗಿ ಪ್ರಧಾನಿ ನರೇಂದ್ರ ಮೋದಿ ಹವಾ ಕೂಡಾ ಜಿಲ್ಲೆಯಲ್ಲಿ ಜೋರಾಗಿದೆ. ಸಚಿವ ರಮೇಶ ಜಿಗಜಿಣಗಿ ಅವರ ಅಭಿವೃದ್ಧಿ ಕಾರ್ಯಗಳ ಜೊತೆಗೆ ಬಿಜೆಪಿಗೆ ಹೆಚ್ಚಿನ ಮತ ತಂದುಕೊಡಬಹುದಾಗಿದೆ ಎಂಬ ರಾಜಕೀಯ ವಿಶ್ಲೇಷಣೆ.

ಕಣಕ್ಕಿಳಿದ ನಾಲ್ಕನೇ ವನಿತೆ ಸುನೀತಾ

1984ರಲ್ಲಿ ಲಕ್ಷ್ಮಿಬಾಯಿ ಅಣ್ಣಯ್ಯ ದೀಕ್ಷಿತ, 1999ರಲ್ಲಿ ಲಕ್ಷ್ಮಿಬಾಯಿ ಗುಡದಿನ್ನಿ, 2009ರಲ್ಲಿ ನಿರ್ಮಲಾ ಅರಕೇರಿ ಅವರು ಲೋಕಸಭೆ ಚುನಾವಣೆಗೆ ಕಣಕ್ಕಿಳಿದಿದ್ದರು. ಗೆಲವು ಸಾಧಿಸಲಿಲ್ಲ. ಈಗ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿಕೂಟದ ಅಭ್ಯರ್ಥಿ ಡಾ.ಸುನೀತಾ ಚವ್ಹಾಣ ಅವರು 17ನೇ ಲೋಕಸಭೆ ಚುನಾವಣೆ ಕದ ತಟ್ಟಿದ್ದಾರೆ. ಸುನೀತಾ ಅವರು ಈ ಚುನಾವಣೆಯಲ್ಲಿ ಯಶಸ್ವಿಯಾಗಬೇಕು ಎಂಬ ಹಿನ್ನೆಲೆಯಲ್ಲಿ ಇದನ್ನು ಸವಾಲಾಗಿ ಸ್ವೀಕರಿಸಿ ಛÜಲದಿಂದ ಮುನ್ನುಗ್ಗಿದ್ದಾರೆ. ಮಹಿಳೆಯರಿಗೆ ಈ ಬಾರಿ ಮತದಾರರು ಮಣೆ ಹಾಕುವರೇ ಎಂಬುವುದೇ ನಿಗೂಢವಾಗಿದೆ.

ಡಾ.ಸುನಿತಾ ಚವ್ಹಾಣ ಅವರು ನಾಗಠಾಣ ಮೀಸಲು ವಿಧಾನಸಭೆ ಮತಕ್ಷೇತ್ರದ ಶಾಸಕ ದೇವಾನಂದ ಚವ್ಹಾಣ ಅವರ ಪತ್ನಿ. ಹೀಗಾಗಿ ಸುನಿತಾ ಚವ್ಹಾಣ ಅವರಿಗಿಂತ ಅವರ ಪತಿ, ಶಾಸಕ ದೇವಾನಂದ ಚವ್ಹಾಣ ಅವರು ಈ ಚುನಾವಣೆಯನ್ನು ಪ್ರತಿಷ್ಠೆಯನ್ನಾಗಿ ತೆಗೆದುಕೊಂಡಿದ್ದು ಹಗಲು- ಇರುಳು ಪತ್ನಿ ಗೆಲುವಿಗಾಗಿ ಶ್ರಮಿಸುತ್ತಿದ್ದಾರೆ. ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ, ಎಚ್‌.ಡಿ.ದೇವೇಗೌಡ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಜಿ. ಪರಮೇಶ್ವರ ಮುಂತಾದ ನಾಯಕರು ಕ್ಷೇತ್ರಕ್ಕೆ ಬಂದರೆ ಕಾಂಗ್ರೆಸ್‌- ಜೆಡಿಎಸ್‌ ಮೈತ್ರಿಕೂಟದ ಅಭ್ಯರ್ಥಿ ಡಾ. ಸುನೀತಾ ಚವ್ಹಾಣ ಅವರಿಗೆ ಒಂದಿಷ್ಟುಮತಗಳನ್ನು ತಂದುಕೊಡಬಹುದಾಗಿದೆ ಎನ್ನಲಾಗುತ್ತದೆ.

ಅಂತಿಮ ಕಣದಲ್ಲಿ 12 ಅಭ್ಯರ್ಥಿಗಳು:

ರಮೇಶ ಜಿಗಜಿಣಗಿ (ಬಿಜೆಪಿ), ಶ್ರೀನಾಥ ಪೂಜಾರಿ (ಬಿಎಸ್‌ಪಿ), ಡಾ.ಸುನೀತಾ ದೇವಾನಂದ ಚವ್ಹಾಣ (ಜೆಡಿಎಸ್‌), ಗುರುಬಸವ ಪರಮೇಶ್ವರ ರಬಕವಿ (ಉತ್ತಮ ಪ್ರಜಾಕೀಯ ಪಕ್ಷ), ದೀಪಕ ಗಂಗಾರಾಮ ಕಟಕದೊಂಡ ಉಫ್‌ರ್‍ ವೆಂಕಟೇಶ್ವರ ಮಹಾಸ್ವಾಮೀಜಿ (ಹಿಂದೂಸ್ಥಾನ ಜನತಾ ಪಾರ್ಟಿ), ಯಮನಪ್ಪ ವಿಠಲ ಗುಣದಾಳ (ರಿಪಬ್ಲಿಕನ್‌ ಪಾರ್ಟಿ ಆಫ್‌ ಇಂಡಿಯಾ), ರುದ್ರಪ್ಪ ದಯಪ್ಪ ಛಲವಾದಿ (ಭಾರಿಪ ಬಹುಜನ ಮಹಾಸಂಘ), ದಾದಾಸಾಹೇಬ ಸಿದ್ದಪ್ಪ ಬಾಗಾಯತ (ಪಕ್ಷೇತರ), ದೋಂಡಿಬಾ ರಾಮು ರಾಠೋಡ (ಪಕ್ಷೇತರ), ಧರೆಪ್ಪ ಮಹಾದೇವ ಅರ್ಧವರ (ಪಕ್ಷೇತರ), ಬಾಲಾಜಿ ದ್ಯಾಮಣ್ಣ ವಡ್ಡರ (ಪಕ್ಷೇತರ), ರಾಮಪ್ಪ ಹರಿಜನ ಉಫ್‌ರ್‍ ಹೊಲೇರ (ಪಕ್ಷೇತರ)

2014ರ ಫಲಿತಾಂಶ:

ರಮೇಶ ಜಿಗಜಿಣಗಿ(ಬಿಜೆಪಿ)-4,71,757 ಮತ

ಪ್ರಕಾಶ ರಾಠೋಡ(ಕಾಂಗ್ರೆಸ್‌)-4,01,938 ಮತ

ಕೆ. ಶಿವರಾಮ (ಜೆಡಿಎಸ್‌)-57,551 ಮತ

ಗೆಲವಿನ ಅಂತರ- 69819 ಮತ

ಮತದಾರರ ವಿವರ: ಒಟ್ಟು ಮತದಾರರು-17,75,839| ಪುರುಷರು-9,11,667| ಮಹಿಳೆಯರು-8,63,930| ಇತರರು-242

ದೇಶದಲ್ಲಿ ಏ.11ರಿಂದ ಮೇ.19ರವೆರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂಧು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ. ಕರ್ನಾಟಕದಲ್ಲಿ 28