ಮದ್ದೂರು :  ಮಂಡ್ಯ ಲೋಕಸಭಾ ಕ್ಷೇತ್ರ ಬಿಟ್ಟು ತುಮಕೂರು ಕ್ಷೇತ್ರಕ್ಕೆ ಹೋಗುತ್ತೇನೆ ಎಂಬುದು ಕೇವಲ ಊಹಾಪೋಹ ಎಂದು  ನಿಖಿಲ್ ಕುಮಾರಸ್ವಾಮಿ ತಾಲೂಕಿನ ಆತಗೂರು ಗೊಲ್ಲರದೊಡ್ಡಿ ಗ್ರಾಮದ ಜುಂಜಪ್ಪ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಿ ಚುನಾವಣಾ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಿ ಈ ವಿಚಾರ ತಿಳಿಸಿದರು. 

 ಸ್ಯಾಂಡಲ್‌ ವುಡ್‌ ಯಾವ ಚಿತ್ರ ನಟರೂ ನನ್ನ ಪರವಾಗಿ ಪ್ರಚಾರಕ್ಕೆ ಬರುವುದಿಲ್ಲ. ನಾನು ಯಾರನ್ನೂ ದುರುಪಯೋಗಪಡಿಸಿಕೊಳ್ಳುವುದಿಲ್ಲ. ನಮ್ಮ ಜೆಡಿಎಸ್‌ ಕಾರ್ಯಕರ್ತರೇ ನಮ್ಮ ಸೈನಿಕರು. ಅಭಿಷೇಕ್‌ ನಾನು ಉತ್ತಮ ಸ್ನೇಹಿತರು, ರಾಜಕೀಯ ಸಂಬಂಧ ಹಾಳು ಮಾಡಬಾರದು ಎಂದರು.

ದೇವಾಲಯಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸುತ್ತಿರುವುದರಲ್ಲಿ ಏನೂ ವಿಶೇಷವಿಲ್ಲ. ನಮ್ಮ ತಾತ ದೇವೇಗೌಡರು ಹಾಗೂ ತಂದೆ ಕುಮಾರಸ್ವಾಮಿ ದೈವಭಕ್ತರು. ಇದು ಜನತೆಗೆ ತಿಳಿದಿರುವ ವಿಚಾರ. ದೈವಬಲವಿಲ್ಲದೆ ನಾವು ಏನನ್ನೂ ಮಾಡುವುದಿಲ್ಲ. 

ಕೇವಲ ಚುನಾವಣೆ ಸಂದರ್ಭದಲ್ಲಿ ಮಾತ್ರವಲ್ಲದೆ, ಎಲ್ಲಾ ಸಂದರ್ಭಗಳಲ್ಲೂ ಸಾಮಾನ್ಯವಾಗಿ ದೇವಸ್ಥಾನಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸುತ್ತಿರುತ್ತೇವೆ ಎಂದು ಹೇಳಿದರು. ಮದ್ದೂರಿನ ಛತ್ರಲಿಂಗನದೊಡ್ಡಿ, ಹೊನ್ನನಾಯಕನಹಳ್ಳಿ, ಚಿಕ್ಕಂಕನಹಳ್ಳಿ ಗ್ರಾಮಗಳಲ್ಲಿ ಮತಯಾಚಿಸಿದರು.