Asianet Suvarna News Asianet Suvarna News

ರಾಜ್ಯ ಸಮರ: ಮೋದಿ ಅಲೆ VS ನವೀನ್ ಜನಪ್ರಿಯತೆ!

ಪೂರ್ವ ಕರಾವಳಿಯ ರಾಜ್ಯಕ್ಕೆ ಲಗ್ಗೆ ಹಾಕಲು ಬಿಜೆಪಿ ಯತ್ನ | ಗತವೈಭವ ಮತ್ತೆ ಕಾಣಲು ಕಾಂಗ್ರೆಸ್ ಹರಸಾಹಸ|ಮಹಿಳೆಯರಿಗೆ ಲೋಕಸಭೆ ಕ್ಷೇತ್ರಗಳಲ್ಲಿ ಮೀಸಲು, ರೈತರಿಗೆ ನಗದು, ಪ್ರಾಮಾಣಿಕತೆಯೇ ಒಡಿಶಾ ಸಿಎಂ ಅಸ್ತ್ರ

loksabha Elections 2019 Narendra Modi Wave VS Naveen Popularity in Odisha
Author
Bangalore, First Published Mar 17, 2019, 3:42 PM IST

ಮಹಾಭಾರತ ಸಂಗ್ರಾಮ: ಒಡಿಶಾ ರಾಜ್ಯ

ಭುವನೇಶ್ವರ[ಮಾ.17]: ಐದು ವರ್ಷಗಳ ಹಿಂದೆ ದೇಶಾದ್ಯಂತ ಸೃಷ್ಟಿಯಾದ ನರೇಂದ್ರ ಮೋದಿ ಅಲೆಯಲ್ಲಿ ಹಲವು ರಾಜಕೀಯ ಪಕ್ಷಗಳು ತರಗೆಲೆಗಳಂತೆ ಧೂಳೀಪಟವಾಗುತ್ತಿದ್ದಾಗ ಆ ಅಲೆಯನ್ನು ಮೆಟ್ಟಿನಿಂತ ಕೆಲವೇ ಕೆಲವು ನಾಯಕರಲ್ಲಿ ಬಿಜೆಡಿ ಪರಮೋಚ್ಚ ನಾಯಕ ನವೀನ್ ಪಟ್ನಾಯಕ್ ಕೂಡ ಒಬ್ಬರು. ಸತತ 19 ವರ್ಷಗಳಿಂದ ಒಡಿಶಾ ಮುಖ್ಯಮಂತ್ರಿಯಾಗಿರುವ ಅವರಿಗೆ ಈ ಬಾರಿ ಮೂವರು ಎದುರಾಳಿಗಳು ಇದ್ದಾರೆ. ಮೊದಲನೆಯದಾಗಿ, ಸುದೀರ್ಘ ಅವಧಿಗೆ ಆಡಳಿತ ನಡೆಸಿದ ಕಾರಣಕ್ಕೆ ಜನರಲ್ಲಿ ಸುಪ್ತವಾಗಿರಬಹುದಾದ ಆಡಳಿತ ವಿರೋಧಿ. ಎರಡನೆಯದು- ನರೇಂದ್ರ ಮೋದಿ- ಅಮಿತ್ ಶಾ ನೇತೃತ್ವದಲ್ಲಿ ಸಮರಕ್ಕೆ ಇಳಿದಿರುವ ಬಿಜೆಪಿ. ಮೂರನೆಯದು- ಸಾಂಪ್ರದಾಯಿಕ ಎದುರಾಳಿ ಕಾಂಗ್ರೆಸ್. ಈ ಪೈಕಿ ನವೀನ್‌ಗೆ ಹೆಚ್ಚು ಚಿಂತೆ ಏನಾದರೂ ಇದ್ದರೆ ಅದು ಮೊದಲನೆಯ ಎದುರಾಳಿಯ ಮೇಲೆ!

ಲೋಕಸಭೆಯ ಸಾರ್ವತ್ರಿಕ ಚುನಾವಣೆಯ ಜತೆಗೇ ವಿಧಾನಸಭೆ ಚುನಾವಣೆಯನ್ನೂ ಎದುರಿಸುವ ದೇಶದ ನಾಲ್ಕು ರಾಜ್ಯಗಳಲ್ಲಿ ಒಡಿಶಾ ಕೂಡ ಒಂದು. ಈ ರಾಜ್ಯದಲ್ಲಿ ಈ ಹಿಂದೆ ಯಾವತ್ತೂ ನಾಲ್ಕು ಹಂತದ ಚುನಾವಣೆ ನಡೆದಿಲ್ಲ. ಒಡಿಶಾದಲ್ಲಿ 21 ಲೋಕಸಭಾ ಸ್ಥಾನಗಳು ಇವೆ. ತಮಿಳುನಾಡು (39), ಗುಜರಾತ್ (26) ಹಾಗೂ ಆಂಧ್ರಪ್ರದೇಶ (25)ಕ್ಕೆ ಹೋಲಿಸಿದರೆ ಸೀಟುಗಳ ಸಂಖ್ಯೆ ಕಡಿಮೆ. ಆದಾಗ್ಯೂ 4 ಹಂತದ ಚುನಾವಣೆ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಬಿಜೆಪಿಯನ್ನು ಬಿಜೆಡಿ ಅನುಮಾನದಿಂದಲೇ ಕಾಣುತ್ತಿದೆ.

5ನೇ ಬಾರಿಗೆ ಪುನರಾಯ್ಕೆ ನಿರೀಕ್ಷಿಸುತ್ತಿರುವ ‘ಬ್ರಹ್ಮಚಾರಿ’ ನವೀನ್ ಪಟ್ನಾಯಕ್ ಅವರ ದೊಡ್ಡ ಆಸ್ತಿ ಎಂದರೆ, ಅವರ ವಿರುದ್ಧ ಈವರೆಗೂ ಒಂದೇ ಒಂದು ಭ್ರಷ್ಟಾಚಾರ ಆರೋಪ ಇಲ್ಲ. ಶುಭ್ರ, ಶ್ವೇತವರ್ಣದ ಜುಬ್ಬಾ, ಪೈಜಾಮಾ ಧರಿಸುವ ಅವರು, ಅದರ ಬಣ್ಣದಷ್ಟೇ ಪರಿಶುದ್ಧರು ಎಂಬ ಭಾವನೆ ಜನಮಾನಸದಲ್ಲಿದೆ. ರೈತರ ಓಲೈಕೆಗಾಗಿ ಕೇಂದ್ರ ಸರ್ಕಾರ 8 ಸಾವಿರ ರು. ನಗದು ವರ್ಗಾವಣೆ ಮಾಡುವ ‘ಪ್ರಧಾನಿ ಕಿಸಾನ್’ ಯೋಜನೆ ಜಾರಿಗೆ ತರುವ ಮುನ್ನವೇ 10 ಸಾವಿರ ರು. ವರ್ಗಾವಣೆ ಮಾಡುವ ‘ಕಾಲಿಯಾ’ ಯೋಜನೆಯನ್ನು ಅನುಷ್ಠಾನಗೊಳಿಸಿಬಿಟ್ಟಿದ್ದಾರೆ. ಅದರಲ್ಲಿ ಮೊದಲ ಕಂತಿನಲ್ಲಿ 5 ಸಾವಿರ ರು. ರೈತರ ಖಾತೆ ಸೇರಿದೆ. ದೇಶದಲ್ಲೇ ಮೊದಲ ಬಾರಿಗೆ ಲೋಕಸಭೆ ಚುನಾವಣೆಯಲ್ಲಿ ಮಹಿಳೆಯರಿಗೆ ಶೇ.33 ಮೀಸಲು ಘೋಷಿಸಿದ್ದಾರೆ. ಕೇಂದ್ರದಿಂದ ಒಡಿಶಾಕ್ಕೆ ಅನ್ಯಾಯವಾಗಿದೆ ಎಂದು ಬಿಂಬಿಸುತ್ತಿದ್ದಾರೆ

೫ ವರ್ಷಗಳ ಹಿಂದೆ ಮೋದಿ ಅಲೆ ಇದ್ದರೂ ಕೇವಲ 1 ಲೋಕಸಭಾ ಕ್ಷೇತ್ರ, 10 ವಿಧಾನಸಭೆ ಸೀಟು ಗೆದ್ದಿದ್ದ ಬಿಜೆಪಿ, 2019ರಲ್ಲಿ ಒಡಿಶಾವನ್ನು ಕೈವಶ ಮಾಡಿಕೊಳ್ಳಲೇಬೇಕು ಎಂದು 2014ರಲ್ಲೇ ಶಪಥ ಮಾಡಿತ್ತು. ಇದಕ್ಕೆ ಪೂರಕವಾಗಿ ಒಡಿಶಾ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲೂ ಉತ್ತಮ ಸಾಧನೆ ತೋರಿತ್ತು. ಆದರೆ ಆನಂತರ ಬಿಜೆಪಿಯ ವೇಗ ಶಂಕಾಸ್ಪದ ರೀತಿ ನಿಧಾನವಾಯಿತು. ಕಾಂಗ್ರೆಸ್ ಅಥವಾ ಬಿಜೆಪಿ ಅಥವಾ ತೃತೀಯರಂಗ ಯಾವುದರಲ್ಲೂ ಗುರುತಿಸಿಕೊಳ್ಳದ ನವೀನ್ ಪಟ್ನಾಯಕ್ ಅವರು ಲೋಕಸಭೆ ಚುನಾವಣೆ ನಂತರ ನಿರ್ಣಾಯಕ ಪಾತ್ರ ವಹಿಸಬಹುದು ಎಂಬ ಕಾರಣಕ್ಕೆ ಬಿಜೆಪಿ ಹಿಂಜರಿಯುತ್ತಿರಬಹುದು ಎಂದು ಹೇಳಲಾಗಿತ್ತು. ಆದರೆ ಈಗ ಬಿಜೆಡಿಯ ಸಂಸದರಿಗೆ ಬಿಜೆಪಿ ಗಾಳ ಹಾಕಿದೆ. ಒಂದಿಬ್ಬರನ್ನು ಈಗಾಗಲೇ ಪಕ್ಷಕ್ಕೂ ಸೇರಿಸಿಕೊಂಡಿದೆ.

ಆದಾಗ್ಯೂ ಮಹಿಳಾ ಮೀಸಲು, ರೈತರ ನೇರ ನಗದು ವರ್ಗ ಯೋಜನೆ, ಪ್ರಾಮಾಣಿಕತೆಯ ಕಾರಣಕ್ಕೆ ಬಿಜೆಡಿ ಜನಪ್ರಿಯತೆ ಮುಕ್ಕಾಗಿಲ್ಲ. 4 ಹಂತದ ಚುನಾವಣೆ ಇರುವ ಹಿನ್ನೆಲೆಯಲ್ಲಿ ಒಮ್ಮೆಲೆ ಅಭ್ಯರ್ಥಿ ಘೋಷಣೆ ಮಾಡಿದರೆ ಅತೃಪ್ತರನ್ನು ಬಿಜೆಪಿ ಸೆಳೆಯಬಹುದು ಎಂಬ ಕಾರಣಕ್ಕೆ ಆಯಾ ಹಂತಕ್ಕೆ ಅನುಗುಣವಾಗಿ ಅಭ್ಯರ್ಥಿ ಪ್ರಕಟಿಸಿ, ಬಂಡಾಯ ಹತ್ತಿಕ್ಕಲು ನವೀನ್ ಮುಂದಾಗಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷರ ಬಂಧುವನ್ನೇ ಪಕ್ಷಕ್ಕೆ ಸೆಳೆದು ತಿರುಗೇಟು ಕೊಟ್ಟಿದ್ದಾರೆ.

ನವೀನ್ ಪಟ್ನಾಯಕ್ ಅವರು ಜನರ ಜತೆ ಬೆರೆಯುವ ರೀತಿಯೇ ಅವರನ್ನು ಜನಸಾಮಾನ್ಯರ ನಾಯಕರನ್ನಾಗಿಸಿದೆ ಎಂದು ವಿಶ್ಲೇಷಕರು ಅಭಿಪ್ರಾಯ ಪಡುತ್ತಾರೆ. ಯಾವುದೇ ಜಿಲ್ಲೆಗೆ ಕಾರ್ಯಕ್ರಮಕ್ಕೆಂದು ಹೋದರೆ, ಸಚಿವರು- ಗಣ್ಯರನ್ನು ವೇದಿಕೆ ಮುಂಭಾಗ ಕೂರಿಸುವ ನವೀನ್, ಸ್ಥಳೀಯ ಜನಸಾಮಾನ್ಯರನ್ನು ವೇದಿಕೆಗೆ ಕರೆಸಿ ಕಾರ್ಯಕ್ರಮಕ್ಕೆ ಚಾಲನೆ ಕೊಡಿಸುತ್ತಾರೆ. ಹೆಚ್ಚು ಮಾತನಾಡುವುದಿಲ್ಲ. ‘ನೀವು ಖುಷಿಯಾಗಿದ್ದೀರಾ? ಹೌದಾದರೆ, ನಾನೂ ಖುಷಿ’ ಎಂದು ಹೇಳಿ ಚುಟುಕಾಗಿ ಭಾಷಣ ಮುಗಿಸಿಬಿಡುತ್ತಾರೆ. ಸಿಎಂ ಜತೆ ವೇದಿಕೆ ಹಂಚಿಕೊಂಡು, ಸೆಲ್ಫಿ ತೆಗೆಸಿಕೊಂಡು ಪುಳಕಗೊಳ್ಳುವ ಜನ ನವೀನ್‌ರನ್ನು ಕೊಂಡಾಡುತ್ತಾರೆ

ಒಂದು ಕಾಲದಲ್ಲಿ ಕಾಂಗ್ರೆಸ್ಸಿನ ಭದ್ರಕೋಟೆಯಾಗಿದ್ದ ಒಡಿಶಾದಲ್ಲಿ ಈಗ ಆ ಪಕ್ಷ ಗತವೈಭವ ಮರಳಿ ಪಡೆಯಲು ಕಸರತ್ತು ನಡೆಸುತ್ತಿದೆ. ಹಲವು ನಾಯಕರು ಬಿಜೆಪಿಯತ್ತ ಮುಖ ಮಾಡಿದ್ದಾರೆ. ಸಮೀಕ್ಷೆಗಳ ಪ್ರಕಾರ ಈ ಬಾರಿಯೂ ಕಾಂಗ್ರೆಸ್ಸಿಗೆ ಶೂನ್ಯ ಸಂಪಾದನೆಯಾಗಲಿದೆ. ಕಳೆದ ಬಾರಿ 1 ಸ್ಥಾನ ಗೆದ್ದಿದ್ದ ಬಿಜೆಪಿ ಹೆಚ್ಚೆಂದರೆ, 4ರಲ್ಲಿ ಗೆಲುವು ಸಾಧಿಸಬಹುದು. ಉಳಿದ 17 ಸ್ಥಾನಗಳಲ್ಲಿ ಬಿಜೆಡಿಯೇ ಗೆಲ್ಲುತ್ತದೆ ಎಂದು ಹೇಳಲಾಗುತ್ತಿದೆ. ಆದರೆ ಮೋದಿ- ಶಾ ಅವರನ್ನು ಲಘುವಾಗಿ ಪರಿಗಣಿಸಲಾಗದು.

ಪ್ರಮುಖ ವಿಷಯ

ಒಡಿಶಾದಲ್ಲಿ ಕೃಷಿಯೇ ಮೂಲ ಕಸುಬು. ಹೀಗಾಗಿ ಕೃಷಿಕರನ್ನು ಓಲೈಸಲು ಮೂರೂ ಪಕ್ಷಗಳು ಯತ್ನಿಸುತ್ತಿವೆ. ಕಾಂಗ್ರೆಸ್ ಯಥಾ ಪ್ರಕಾರ ಸಾಲ ಮನ್ನಾ, ಭತ್ತಕ್ಕೆ ಅಧಿಕ ಬೆಂಬಲ ಬೆಲೆಯ ಮಾತುಗಳನ್ನು ಆಡುತ್ತಿದೆ. ನವೀನ್ ಪಟ್ನಾಯಕ್ ಅವರ ಸಂಪುಟದಲ್ಲಿ ಭ್ರಷ್ಟರು ಇದ್ದಾರೆ, ಒಡಿಶಾಕ್ಕೆ ಹೊಸ ನಾಯಕತ್ವ ಬೇಕಿದೆ ಎಂದು ಬಿಜೆಪಿ ಹೇಳುತ್ತಿದೆ. ಪ್ರಾಮಾಣಿ ಕತೆಯನ್ನೇ ಬಂಡವಾಳ ಮಾಡಿಕೊಂಡಿರುವ ನವೀನ್ ಪಟ್ನಾಯಕ್, ಲೋಕಸಭೆ ಸೀಟುಗಳಲ್ಲಿ ಶೇ.33ರಷ್ಟನ್ನು (21ರಲ್ಲಿ 7 ಸೀಟು) ಮಹಿಳೆಯರಿಗೆ ಮೀಸಲಿಟ್ಟು ಟಾಂಗ್ ಕೊಟ್ಟಿದ್ದಾರೆ. ಜತೆಗೆ ರೈತರಿಗೆ ತರಾತುರಿಯಲ್ಲಿ 10 ಸಾವಿರ ರು. ನಗದು ವರ್ಗಾಯಿಸುವ ಯೋಜನೆ ತಂದಿದ್ದಾ

ಸಂಭಾವ್ಯ ಅಭ್ಯರ್ಥಿಗಳು

1998ರಲ್ಲಿ ವಾಜಪೇಯಿ ಸರ್ಕಾರವನ್ನು 1 ಮತದಿಂದ ಬೀಳಿಸಿದ್ದ ಒಡಿಶಾದ ಮಾಜಿ ಮುಖ್ಯಮಂತ್ರಿ ಗಿರಿಧರ್ ಗಮಾಂಗ್ (ಕೋರಾಪುಟ್)

ಕೇಂದ್ರದ ಮಾಜಿ ಸಚಿವ ಭಕ್ತಚರಣದಾಸ (ಕಲಹಂದಿ)

ಬಿಜೆಡಿ ತೊರೆದು ಬಿಜೆಪಿ ಸೇರಿರುವ ಜೈಪಾಂಡಾ (ಕೇಂದ್ರಪಡ)

Follow Us:
Download App:
  • android
  • ios