ಬೆಂಗಳೂರು[ಮಾ.12]: ಲೋಕಸಭೆ ಚುನಾವಣೆ ಘೋಷಣೆಯಾಗಿದ್ದು, ಏ.18 ಮತ್ತು ಏ.23 ರಂದು ಕರ್ನಾಟಕದಲ್ಲಿ ಚುನಾವಣೆ ನಡೆಯಲಿದೆ. ಆದರೆ, ರಾಜ್ಯದ ವಿವಿಧೆಡೆ ಮೂಲಭೂತ ಸೌಲಭ್ಯಕ್ಕೆ ಆಗ್ರಹಿಸಿ ಚುನಾವಣೆಯನ್ನು ಬಹಿಷ್ಕರಿಸುವ ಎಚ್ಚರಿಕೆಯನ್ನು ಸಾರ್ವಜನಿಕರು ನೀಡಿದ್ದಾರೆ.

ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನ ಮರಿತೊಟ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಂದಗಾರು ಮೊದಲುಮನೆ ಗ್ರಾಮಸ್ಥರು ಚುನಾವಣಾ ಬಹಿಷ್ಕಾರದ ಬ್ಯಾನರ್‌ ಕಟ್ಟಿಎಚ್ಚರಿಕೆ ನೀಡಿದ್ದಾರೆ. ಊರಿನಲ್ಲಿ ವಿದ್ಯುತ್‌, ರಸ್ತೆ ಸಮಸ್ಯೆ ಇದೆ. ಹೀಗಾಗಿ ಚುನಾವಣೆಯನ್ನು ಬಹಿಷ್ಕರಿಸುತ್ತೇವೆ ಎಂದು ಎಚ್ಚರಿಸಿದ್ದಾರೆ. ಚಿತ್ರದುರ್ಗದಲ್ಲಿ ಮತದಾನ ಬಹಿಷ್ಕರಿಸಲು ಕ್ಷೇತ್ರದ ಮಾದಿಗ ಸಮುದಾಯ ನಿರ್ಧರಿಸಿದೆ.

ಹೊಳಲ್ಕೆರೆ ಪಟ್ಟಣಲ್ಲಿ ನಡೆದ ತಾಲೂಕು ದಲಿತ ಸಂಘರ್ಷ ಸಮಿತಿ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ. ಜನಪ್ರತಿನಿಧಿಗಳು ಜನಾಂಗದವರಿಗೆ ಯೋಜನೆಗಳನ್ನು ತಲುಪಿಸುತ್ತಿಲ್ಲ. ಅಭಿವೃದ್ಧಿಗೆ ಸಹಕಾರ ನೀಡುತ್ತಿಲ್ಲ ಎಂಬುದು ಇವರ ಆರೋಪವಾಗಿದೆ. ಕಾರವಾರ ನಗರಸಭೆಯ ಸಕ್ರವಾಡದಲ್ಲಿ ರಸ್ತೆ ಸಮಸ್ಯೆಯಿದ್ದು, ಕೂಡಲೇ ಸರಿಪಡಿಸದಿದ್ದರೆ ಚುನಾವಣೆ ಬಹಿಷ್ಕರಿಸುವುದಾಗಿ ಸ್ಥಳೀಯರು ಎಚ್ಚರಿಕೆ ನೀಡಿದ್ದಾರೆ. ಅದೇ ರೀತಿ ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ತಾಲೂಕಿನ ಕಲಕೇರಿ ಗ್ರಾಮಸ್ಥರು ಶಾಶ್ವತ ಕುಡಿಯುವ ನೀರಿನ ಯೋಜನೆಯ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸದಿದ್ದರೇ ಚುನಾವಣೆ ಬಹಿಷ್ಕರಿಸುವುದಾಗಿ ಎಚ್ಚರಿಸಿದ್ದಾರೆ.