ಮಂಡ್ಯ: ಮಂಡ್ಯ ಲೋಕಸಭಾ ಕ್ಷೇತ್ರದಿಂದ ‘ದೋಸ್ತಿ’ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ ಕಣಕ್ಕಿಳಿದಿದ್ದರೂ ಸ್ಥಳೀಯ ಕಾಂಗ್ರೆಸ್ ನಾಯಕರು ಮಾತ್ರ ಹೊಂದಾಣಿಕೆಯ ಸ್ಪರ್ಧೆ ವಿರುದ್ಧ ಮತ್ತೆ ಬಹಿರಂಗವಾಗಿಯೇ ಕಿಡಿಕಾರಿದ್ದಾರೆ. ಜೆಡಿಎಸ್ ನಾಯಕರು ಕಾಂಗ್ರೆಸ್ಸಿಗರ ವಿರುದ್ಧ ಹಗುರವಾಗಿ ಮಾತನಾಡಿದರೂ ಅವರ ಜತೆಗೆ ಮೈತ್ರಿ ಯಾಕೆ ಬೇಕು ಎಂದು ಪ್ರಶ್ನಿಸಿದ್ದಾರೆ. 

ಸುಮಲತಾ ಜತೆ ಗುರುತಿಸಿಕೊಂಡಿರುವ ಕಾರಣಕ್ಕೆ ಕಾಂಗ್ರೆಸ್‌ನ ಜಿಲ್ಲಾ ವಕ್ತಾರ ಹುದ್ದೆಯಿಂದ ವಜಾ ಶಿಕ್ಷೆಗೆ ಗುರಿಯಾಗಿರುವ ಯುವ ಮುಖಂಡ ಹನಕೆರೆ ಶಶಿಕುಮಾರ್ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ ಜೆಡಿಎಸ್ ಮುಖಂಡರ ವಿರುದ್ಧ ಮತ್ತು ದೋಸ್ತಿ ಬೆಂಬಲಿಸುತ್ತಿರುವ ಸ್ಥಳೀಯ ಕಾಂಗ್ರೆಸ್ ಮುಖಂಡರ ವಿರುದ್ಧ ನೇರ ವಾಗ್ದಾಳಿ ನಡೆಸಿದರು. 

ಒಂದು ವೇಳೆ ಜಿಲ್ಲೆಯಲ್ಲಿ ಕಾಂಗ್ರೆಸ್ ಉಳಿಸಲು ಕಠಿಣ ನಿಲುವು ತೆಗೆದುಕೊಳ್ಳದೇ ಹೋದರೆ ಅನೇಕ ಯುವ ನಾಯಕರು ಪಕ್ಷಕ್ಕೆ ಸಾಮೂಹಿಕ ರಾಜೀನಾಮೆ ನೀಡಲು ಸಿದ್ಧರಿದ್ದೇವೆ ಎಂದರು.