Asianet Suvarna News Asianet Suvarna News

ಪ್ರಮುಖ ಪಕ್ಷಕ್ಕೆ 20 ಕೋಟಿ ಹವಾಲಾ ಹಣ: ತೆರಿಗೆ ಮಂಡಳಿ ಸ್ಫೋಟಕ ಮಾಹಿತಿ!

ಮುಖ ಪಕ್ಷಕ್ಕೆ 20 ಕೋಟಿ ರು. ಹವಾಲಾ ಹಣ!| 281 ಕೋಟಿ ಅಕ್ರಮ ಹಣ ಹರಿವು| 14.6 ಕೋಟಿ ರು. ನಗದು ಜಪ್ತಿ| ತೆರಿಗೆ ಮಂಡಳಿ ಸ್ಫೋಟಕ ಮಾಹಿತಿ

Loksabha Elections 2019 major political party receives 20 crore illegal money
Author
Bangalore, First Published Apr 9, 2019, 7:33 AM IST

ಭೋಪಾಲ್‌[ಏ.09]: ಲೋಕಸಭಾ ಚುನಾವಣೆಯ ಹೊಸ್ತಿಲಲ್ಲಿ ಮಧ್ಯಪ್ರದೇಶದಲ್ಲಿ ಮುಖ್ಯಮಂತ್ರಿ ಕಮಲ್‌ನಾಥ್‌ ಅವರ ಆಪ್ತರು ಹಾಗೂ ಇತರ ಕೆಲವರ ಮೇಲೆ ನಡೆದ ಆದಾಯ ತೆರಿಗೆ ದಾಳಿ ಸತತ 2ನೇ ದಿನವೂ ಮುಂದುವರಿದಿದ್ದು, ಹಲವು ಸ್ಫೋಟಕ ವಿಷಯಗಳು ಬಹಿರಂಗವಾಗಿವೆ. ‘ದಾಳಿಯ ವೇಳೆ ಒಟ್ಟು ಸುಮಾರು 281 ಕೋಟಿ ರುಪಾಯಿಯಷ್ಟುಭಾರೀ ಪ್ರಮಾಣದ ಅಕ್ರಮ ನಗದು ಸಂಗ್ರಹ ಜಾಲವನ್ನು ಪತ್ತೆ ಮಾಡಲಾಗಿದೆ’ ಎಂದು ಆದಾಯ ತೆರಿಗೆ ಇಲಾಖೆಯ ಉಸ್ತುವಾರಿ ನೋಡಿಕೊಳ್ಳುವ ಕೇಂದ್ರೀಯ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ಸೋಮವಾರ ರಾತ್ರಿ ಹೇಳಿದೆ.

‘ಒಟ್ಟು 281 ಕೋಟಿ ರು. ಹಣದ ವ್ಯವಹಾರ ಮಧ್ಯಪ್ರದೇಶ ಹಾಗೂ ದಿಲ್ಲಿ ಮಧ್ಯೆ ನಡೆದಿದೆ. ಇದರಲ್ಲಿ 20 ಕೋಟಿ ರು. ಹಣವು ದಿಲ್ಲಿಯ ಪ್ರಮುಖ ರಾಜಕೀಯ ಪಕ್ಷದ ಕಚೇರಿಯೊಂದಕ್ಕೆ ಸಂದಾಯವಾಗಿದೆ’ ಎಂಬ ಸ್ಫೋಟಕ ಮಾಹಿತಿಯನ್ನು ಕೂಡ ಸಿಬಿಡಿಟಿ ಬಹಿರಂಗಪಡಿಸಿದೆ. 2ನೇ ದಿವಸದ ದಾಳಿಯಲ್ಲಿ ಒಟ್ಟು 14.6 ಕೋಟಿ ರು. ಅಕ್ರಮ ನಗದನ್ನು ಜಪ್ತಿ ಮಾಡಲಾಗಿದೆ.

‘ಭಾನುವಾರದಿಂದ ಮಧ್ಯಪ್ರದೇಶ, ಗೋವಾ ಹಾಗೂ ದಿಲ್ಲಿಯಲ್ಲಿ ಈ ದಾಳಿ ನಡೆಯುತ್ತಿದೆ. 2ನೇ ದಿನ ದಿಲ್ಲಿಯ ಪಕ್ಷದ ಮುಖಂಡನೊಬ್ಬನ ದಿಲ್ಲಿ ನಿವಾಸ ಹಾಗೂ ಆತನ ಬಂಧುವಿಗೆ ಸೇರಿದ ದಿಲ್ಲಿಯ ವಾಣಿಜ್ಯ ಕಚೇರಿಯ ಮೇಲೆ ದಾಳಿ ಮಾಡಲಾಗಿದೆ. ಈ ವೇಳೆ 20 ಕೋಟಿ ರು. ಹಣವು ತುಘಲಕ್‌ ಮಾರ್ಗದಲ್ಲಿ ನೆಲೆಸಿರುವ ಈ ಹಿರಿಯ ಮುಖಂಡನ ಮೂಲಕ ಪಕ್ಷವೊಂದರ ಕೇಂದ್ರ ಕಚೇರಿಗೆ ಸಂದಾಯವಾಗಿದೆ. ಹವಾಲಾ ಮಾರ್ಗದ ಮೂಲಕ ಹಣ ಇತ್ತೀಚೆಗೆ ರವಾನೆಯಾಗಿದೆ ಎಂದು ಕಂಡುಬಂದಿದೆ’ ಎಂಬ ಸ್ಫೋಟಕ ಅಂಶವನ್ನು ಸಿಬಿಟಿಡಿ ಹೇಳಿದೆ. ಆದರೆ, ಪಕ್ಷದ ಹೆಸರು ಹಾಗೂ ಮುಖಂಡನ ಹೆಸರನ್ನು ಅದು ಹೇಳಿಲ್ಲ.

‘ದಾಳಿಯ ವೇಳೆ ಕೆಲವು ಕೈಬರಹದ ಡೈರಿಗಳು, ಕಂಪ್ಯೂಟರ್‌ ಫೈಲ್‌ಗಳು, ಎಕ್ಸೆಲ್‌ ಶೀಟುಗಳು, ಕ್ಯಾಷ್‌ ಬುಕ್‌ ಸಿಕ್ಕಿವೆ. ಇವುಗಳಲ್ಲಿ 230 ಕೋಟಿ ರು. ಅಕ್ರಮ ಹಣದ ವ್ಯವಹಾರ ನಡೆದಿದ್ದು ಕಂಡುಬಂದಿದೆ. ಇನ್ನು ಬೋಗಸ್‌ ಬಿಲ್‌ ಮೂಲಕ 242 ಕೋಟಿ ರು. ವಹಿವಾಟು ಪತ್ತೆಯಾಗಿದೆ. ತೆರಿಗೆ ವಂಚಕರ ಸ್ವರ್ಗ ಎನಿಸಿಕೊಂಡಿರುವ ಸ್ಥಳಗಳಲ್ಲಿನ 80 ಕಂಪನಿಗಳ ಬಗ್ಗೆ ಕೂಡ ಸಾಕ್ಷ್ಯ ಲಭಿಸಿದೆ. ಸೋಮವಾರ 14.6 ಕೋಟಿ ರು. ಅಕ್ರಮ ಹಣದ ಜತೆಗೆ 252 ಮದ್ಯದ ಬಾಟಲು, ಕೆಲವು ಶಸ್ತ್ರಾಸ್ತ್ರ, ಹುಲಿ ಚರ್ಮ ಜಪ್ತಿ ಮಾಡಲಾಗಿದೆ’ ಎಂದು ಸಿಬಿಡಿಟಿ ಹೇಳಿದೆ.

Follow Us:
Download App:
  • android
  • ios