ನವದೆಹಲಿ :   ಇತ್ತೀಚೆಗಷ್ಟೇ ಟಿಕೆಟ್‌ ವಂಚಿತರಾಗಿ ಚುನಾವಣಾ ನಿವೃತ್ತಿ ಹೊಂದಿದ್ದ ಬಿಜೆಪಿಯ ಅತಿ ಹಿರಿಯ ನಾಯಕ ಎಲ್‌.ಕೆ. ಅಡ್ವಾಣಿ ಅವರು ಈ ಕುರಿತಂತೆ ಇದೇ ಮೊದಲ ಬಾರಿಗೆ ಮೌನ ಮುರಿದಿದ್ದಾರೆ. ತಮ್ಮನ್ನು ಈವರೆಗೆ ಆಯ್ಕೆ ಮಾಡಿದ ಗುಜರಾತ್‌ನ ಗಾಂಧಿನಗರ ಲೋಕಸಭಾ ಕ್ಷೇತ್ರದ ಮತದಾರರಿಗೆ ಕೃತಜ್ಞತೆ ಸಲ್ಲಿಸಿರುವ ಅವರು, ‘ದೇಶ ಮೊದಲು, ಪಕ್ಷ ನಂತರ, ತಾನು ಎಂಬುದು ಕೊನೆ’ ಎಂದು ಮಾರ್ಮಿಕವಾಗಿ ನುಡಿದಿದ್ದಾರೆ.

5 ವರ್ಷಗಳ ಬಳಿಕ ತಮ್ಮ ಬ್ಲಾಗ್‌ನಲ್ಲಿ ಮೊದಲ ಬಾರಿ ಲೇಖನ ಬರೆದಿರುವ ಅಡ್ವಾಣಿ, ‘ದೇಶದ್ರೋಹ’ ಕುರಿತಾಗಿಯೂ ಮಹತ್ವದ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ‘ರಾಜಕೀಯವಾಗಿ ನಮ್ಮನ್ನು ಒಪ್ಪದವರನ್ನು ನಾವೆಂದೂ ‘ದೇಶವಿರೋಧಿ’ ಎಂದಾಗಲಿ, ‘ವೈರಿ’ ಎಂದಾಗಲಿ ಪರಿಗಣಿಸಿಲ್ಲ. ಅವರನ್ನು ‘ವಿರೋಧಿಗಳು’ ಎಂದು ಮಾತ್ರ ಪರಿಗಣಿಸಿದ್ದೇವೆ’ ಎಂದಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಅವರು ‘ರಾಷ್ಟ್ರವಾದ’ವನ್ನು ಪ್ರಮುಖ ಚುನಾವಣಾ ಅಸ್ತ್ರವನ್ನಾಗಿ ಮಾಡಿಕೊಂಡಿದ್ದಾರೆ. ‘ದೇಶಪ್ರೇಮಿ-ದೇಶವಿರೋಧಿ’ ಎಂಬ ಚರ್ಚೆಗಳೂ ಜೋರಾಗಿ ರಾಜಕೀಯ ವಲಯದಲ್ಲಿ ನಡೆಯುತ್ತಿವೆ. ಇಂತಹ ಸಂದರ್ಭದಲ್ಲಿ ಅಡ್ವಾಣಿ ಅವರ ನುಡಿಗಳು ಭಾರೀ ಮಹತ್ವ ಪಡೆದಿವೆ.

ಈ ನಡುವೆ ಪ್ರಧಾನಿ ಮೋದಿ ಹಾಗೂ ಅನೇಕ ಬಿಜೆಪಿ ವಿರೋಧಿ ಪಕ್ಷಗಳ ನಾಯಕರು ಅಡ್ವಾಣಿ ಹೇಳಿಕೆಯನ್ನು ಸ್ವಾಗತಿಸಿದ್ದಾರೆ.

ಬ್ಲಾಗ್‌ನಲ್ಲೇನಿದೆ?:

‘ಏಪ್ರಿಲ್‌ 6ರಂದು ಬಿಜೆಪಿ ತನ್ನ ಸಂಸ್ಥಾಪನಾ ದಿನ ಆಚರಿಸಿಕೊಳ್ಳುತ್ತಿದೆ. ಬಿಜೆಪಿಗರಿಗೆ ಇದು ತುಂಬಾ ಮಹತ್ವದ ದಿನ. ಇದೇ ವೇಳೆ ಹಿಂದಿನದನ್ನು ತಿರುಗಿ ನೋಡಿ ಆತ್ಮಾವಲೋಕನ ಮಾಡಿಕೊಳ್ಳುವ ದಿನವೂ ಹೌದು’.

‘ಲಕ್ಷಾಂತರ ಕಾರ್ಯಕರ್ತರು ನನಗೆ ಪ್ರೀತಿ ತೋರಿಸಿದ್ದಾರೆ. ನನ್ನನ್ನು ಈವರೆಗೆ 6 ಬಾರಿ ಆಯ್ಕೆ ಮಾಡಿ ಕಳಿಸಿದ್ದ ಗಾಂಧಿನಗರ ಲೋಕಸಭಾ ಕ್ಷೇತ್ರದ ಮತದಾರರಿಗೆ ಧನ್ಯವಾದಗಳು’.

‘14ನೇ ವಯಸ್ಸಲ್ಲಿ ಸಂಘ ಸೇರಿದಾಗಿನಿಂದ ದೇಶಸೇವೆ ಮಾಡಬೇಕು ಎಂಬುದು ನನ್ನ ಉತ್ಕಟ ಇಚ್ಛೆಯಾಗಿತ್ತು. ನಂತರ ಜನಸಂಘ ಹಾಗೂ ಬಿಜೆಪಿಯ ಸಂಸ್ಥಾಪಕರ್ಲಿ ಒಬ್ಬನಾದೆ. 7 ದಶಕ ಕಾಲ ಈ ಪಕ್ಷಗಳ ಜತೆ ಒಡನಾಡಿದೆ. ಪಂ. ದೀನದಯಾಳ ಉಪಾಧ್ಯಾಯ, ಅಟಲ್‌ಬಿಹಾರಿ ವಾಜಪೇಯಿ ಅವರಂಥ ಮಹಾಮಹಿಮರ ಜತೆ ಕೆಲಸ ಮಾಡಿದೆ’.

‘ದೇಶ ಮೊದಲು, ಪಕ್ಷ ನಂತರ, ವೈಯಕ್ತಿಕ ವಿಚಾರ ಕೊನೆಯದು ಎಂಬುದು ನನ್ನ ಜೀವನದ ಮಾರ್ಗದರ್ಶಕ ಸೂತ್ರ. ಈ ಸೂತ್ರಕ್ಕೆ ಕೊನೆಯವರೆಗೂ ಬದ್ಧ.’

‘ವಾಕ್‌ ಸ್ವಾತಂತ್ರ್ಯ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯವು ಭಾರತೀಯ ಪ್ರಜಾಸತ್ತೆಯ ತಿರುಳು. ಆರಂಭದಿಂದಲೂ ರಾಜಕೀಯವಾಗಿ ನಮ್ಮನ್ನು ಒಪ್ಪದವರನ್ನು ಬಿಜೆಪಿಯು ಎಂದೂ ವೈರಿಗಳು ಎಂದು ಪರಿಗಣಿಸಿಲ್ಲ. ಕೇವಲ ವಿರೋಧಿಗಳು ಎಂದು ಪರಿಗಣಿಸಿದ್ದೇವಷ್ಟೇ. ಅಂತೆಯೇ ಭಾರತೀಯ ರಾಷ್ಟ್ರೀಯವಾದದ ಪರಿಕಲ್ಪನೆಯ ಪ್ರಕಾರ ನಮ್ಮನ್ನು ರಾಜಕೀಯವಾಗಿ ಒಪ್ಪದವರನ್ನು ಎಂದೂ ‘ದೇಶವಿರೋಧಿಗಳು’ ಎಂದು ಪರಿಗಣಿಸಿಲ್ಲ. ಪಕ್ಷವು ಪ್ರತಿ ನಾಗರಿಕರ ರಾಜಕೀಯ ಹಾಗೂ ವೈಯಕ್ತಿಕ ವಾಕ್‌ ಸ್ವಾತಂತ್ರ್ಯಕ್ಕೆ ಬದ್ಧವಾಗಿರುತ್ತದೆ’.

‘ಸತ್ಯ, ರಾಷ್ಟ್ರನಿಷ್ಠೆ ಹಾಗೂ ಲೋಕತಂತ್ರ (ಆಂತರಿಕ ಪ್ರಜಾಸತ್ತೆ) ಎಂಬ 3 ಅಂಶಗಳು ಪಕ್ಷಕ್ಕೆ ನನ್ನ ಮಾರ್ಗದರ್ಶನ ಮಾಡಿದವು. ಈ ಎಲ್ಲ ಮೌಲ್ಯಗಳು ಸಾಂಸ್ಕೃತಿಕ ರಾಷ್ಟ್ರವಾದ ಹಾಗೂ ಸು-ರಾಜ್ಯಕ್ಕೆ (ಉತ್ತಮ ಆಡಳಿತ) ಕಾರಣೀಭೂತವಾಗುತ್ತವೆ. ತುರ್ತುಸ್ಥಿತಿಯ ವಿರುದ್ಧದ ಹೋರಾಟವು ಈ ಮೌಲ್ಯಗಳನ್ನು ಎತ್ತಿ ಹಿಡಿಯುತ್ತದೆ’ ಎಂದು ಅಡ್ವಾಣಿ ಹೇಳಿದ್ದಾರೆ.

 

‘ದೇಶ ಮೊದಲು, ಪಕ್ಷ ನಂತರ, ತಾನು ಎಂಬುದು ಕೊನೆ’ ಎಂಬ ಮಾರ್ಗದರ್ಶಕ ಮಂತ್ರದ ಮೂಲಕ ಅಡ್ವಾಣಿ ಅವರು ಬಿಜೆಪಿಯ ನೈಜ ಮೂಲತತ್ವಗಳನ್ನು ಎತ್ತಿ ಹಿಡಿದಿದ್ದಾರೆ. ಬಿಜೆಪಿ ಕಾರ್ಯಕರ್ತ ಎನ್ನಿಸಿಕೊಳ್ಳಲು ಹಾಗೂ ಅಡ್ವಾಣಿಜೀಯಂಥ ಮಹಾಮಹಿಮರು ಪಕ್ಷವನ್ನು ಬಲಗೊಳಿಸಿದ್ದಕ್ಕೆ ಹೆಮ್ಮೆ ಎನ್ನಿಸುತ್ತದೆ.’.

- ನರೇಂದ್ರ ಮೋದಿ, ಪ್ರಧಾನಿ