ಬೆಂಗಳೂರು :  ಮೈತ್ರಿ ಪಕ್ಷಗಳ ಅಪಸ್ವರ ಹಾಗೂ ಪ್ರತಿಪಕ್ಷಗಳ ಅಬ್ಬರದ ವಿರೋಧದ ನಡುವೆಯೂ ಲೋಕಸಭಾ ಚುನಾವಣಾ ಕಣದಲ್ಲಿ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಮತ್ತವರ ಇಬ್ಬರು ಮೊಮ್ಮಕ್ಕಳ ಗೆಲುವು ಖಚಿತ ಎಂದು ಜ್ಯೋತಿಷಿ ದ್ವಾರಕಾನಾಥ್ ಭವಿಷ್ಯ ನುಡಿದಿದ್ದಾರೆ.

ಆರ್.ಟಿ.ನಗರದಲ್ಲಿನ ತಮ್ಮ ನಿವಾಸದಲ್ಲಿ ಮುಖ್ಯಮಂತ್ರಿ ಎಚ್ .ಡಿ.ಕುಮಾರಸ್ವಾಮಿ ಅವರೊಂದಿಗೆ ಶುಕ್ರವಾರ ಅವರು ಸುಮಾರು ಒಂದೂವರೆ ತಾಸಿಗಿಂತ ಹೆಚ್ಚು ಕಾಲ ರಾಜಕೀಯ ಬೆಳವಣಿಗೆ ಕುರಿತು ಸಮಾಲೋಚನೆ ನಡೆಸಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಾಸನ, ಮಂಡ್ಯ ಮತ್ತು ತುಮಕೂರಿ (ಎಚ್‌ಎಂಟಿ)ನಲ್ಲಿ ಜೆಡಿಎಸ್ ಗೆಲುವು ಸಾಧಿಸಲಿದೆ. ಶಿವಮೊಗ್ಗ ಕ್ಷೇತ್ರದಲ್ಲಿ ಜೆಡಿಎಸ್ ಮತ್ತು ಬಿಜೆಪಿ ಅಭ್ಯರ್ಥಿ ನಡುವೆ ತೀವ್ರ ಪೈಪೋಟಿ ಇದೆ. ಸಮಬಲದ ಹೋರಾಟ ಇರುವ ಕಾರಣ ದೈವ ಇಚ್ಛೆ ಏನೆಂಬುದು ನೋಡಬೇಕು. ಆದರೆ, ಶೇ.1ರಷ್ಟು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ಪುತ್ರ ರಾಘವೇಂದ್ರ ಅವರಿಗೆ ಹೆಚ್ಚಿನ ಅವಕಾಶ ಇದೆ ಎಂದರು. 

ಮತ್ತೊಮ್ಮೆ ಪ್ರಧಾನಿಯಾಗಿ ನರೇಂದ್ರ ಮೋದಿ ಬರುವುದನ್ನು ತಡೆಯುವುದಕ್ಕೆ ಆಗುವುದಿಲ್ಲ. ಆದರೆ, ಬಿಜೆಪಿ ಬಹುಮತ ಮಾತ್ರ ಬರುವುದಿಲ್ಲ ಎಂದು ಇದೇ ವೇಳೆ ದ್ವಾರಕನಾಥ್ ಪುನರುಚ್ಚರಿಸಿದರು. ಮೇ 23 ರ ಬಳಿಕ ಸಮ್ಮಿಶ್ರ ಸರ್ಕಾರಕ್ಕೆ ಕಂಟಕ ಇದೆ ಎಂಬ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ಮುಖ್ಯಮಂತ್ರಿ ಕುರ್ಚಿ ಖಾಲಿ ಇಲ್ಲ. ಮುಖ್ಯಮಂತ್ರಿ ಯಾರೇ ಆದರೂ ನಂಬರ್ ಬೇಕು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಲಿ, ಸಚಿವ ಡಿ. ಕೆ.ಶಿವಕುಮಾರ್ ಆಗಲಿ ನಂಬರ್ ಬೇಕಾಗುತ್ತದೆ. ನಂಬರ್ ಇಲ್ಲದಿದ್ದರೆ ಮುಖ್ಯಮಂತ್ರಿಯಾಗಲು ಸಾಧ್ಯವಿಲ್ಲ. ಯಾರೇ ಆದರೂ ಎಲ್ಲರೂ ನಮ್ಮವರೇ ಎಂದರು.