Asianet Suvarna News Asianet Suvarna News

ದೇಶದಲ್ಲಿ ಮೋದಿ ಹವಾ ಇದೆ: ಜೆಡಿಎಸ್ ರಾಜ್ಯಾಧ್ಯಕ್ಷ

ಸಿದ್ದು ಸಿದ್ದುವೇ, ವಿಶ್ವನಾಥ್‌ ವಿಶ್ವನಾಥೇ| ದೇಶದಲ್ಲಿ ಪ್ರಧಾನಿ ಮೋದಿ ಹವಾ ಇಲ್ಲ ಅಂತ ಹೇಳುವುದಿಲ್ಲ| ಆದರೆ ಕರ್ನಾಟಕಕ್ಕೆ ಪ್ರಧಾನಿ ಮೋದಿ ಕೊಡುಗೆ ಏನು?| ಎಚ್‌.ವಿಶ್ವನಾಥ್‌ ಸಂದರ್ಶನ

Loksabha Elections 2019 JDS state President H Vishwanath Special Interview
Author
Bangalore, First Published Apr 4, 2019, 11:49 AM IST

ಪ್ರಭುಸ್ವಾಮಿ ನಟೇಕರ್‌, ಕನ್ನಡಪ್ರಭ

ಬೆಂಗಳೂರು[ಏ.04]: ಬಿರುಬಿಸಿಲನ್ನೂ ಲೆಕ್ಕಿಸದೆ ಲೋಕಸಭಾ ಚುನಾವಣೆ ಅಖಾಡದಲ್ಲಿ ಮೈತ್ರಿ ಅಭ್ಯರ್ಥಿಗಳ ಗೆಲುವಿಗೆ ಕಾಂಗ್ರೆಸ್‌-ಜೆಡಿಎಸ್‌ ಪಕ್ಷದ ಮುಖಂಡರು ಮೇಲ್ಮಟ್ಟಕ್ಕಾದರೂ ಒಟ್ಟಾಗಿ ಶ್ರಮಿಸುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅಲೆಯ ನಡುವೆಯೂ ಬಿಜೆಪಿಯನ್ನು ಮಣಿಸಲು ಇನ್ನಿಲ್ಲದ ಕಸರತ್ತು ನಡೆಯುತ್ತಿದೆ. ಮಂಡ್ಯ, ಹಾಸನದಲ್ಲಿ ಕುಟುಂಬ ರಾಜಕಾರಣದ ಅಪಸ್ವರದ ಮಾತುಗಳ ಮಧ್ಯೆಯೂ ಜೆಡಿಎಸ್‌ ಅಭ್ಯರ್ಥಿಗಳ ಗೆಲುವಿನ ವಿಶ್ವಾಸದಲ್ಲಿ ಪಕ್ಷದ ನಾಯಕರಿದ್ದಾರೆ.

ಅನಾರೋಗ್ಯವನ್ನು ಲೆಕ್ಕಿಸದೆ ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ವಿಶ್ವನಾಥ್‌ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ರಾಜ್ಯಾದ್ಯಂತ ಪ್ರವಾಸ ಕೈಗೊಳ್ಳುವಲ್ಲಿ ನಿರತರಾಗಿದ್ದಾರೆ. ಸ್ಥಳೀಯ ಮಟ್ಟದಲ್ಲಿ ಸಾಂಪ್ರದಾಯಿಕ ವಿರೋಧವಿದ್ದರೂ ಮಿತ್ರ ಪಕ್ಷಗಳ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವ ಪ್ರಯತ್ನದಲ್ಲಿ ತೊಡಗಿದ್ದಾರೆ. ಮಿತ್ರ ಪಕ್ಷಗಳ ಪ್ರಚಾರ, ಮಂಡ್ಯ ಕ್ಷೇತ್ರದಲ್ಲಿನ ಮಾತಿನ ಸಮರ, ತೃತೀಯ ರಂಗ ಶಕ್ತಿಗಳ ತಾಕತ್ತು ಸೇರಿದಂತೆ ಲೋಕಸಭಾ ಚುನಾವಣೆ ಸಮರದ ಹಲವು ವಿಚಾರಗಳನ್ನು ‘ಕನ್ನಡಪ್ರಭ’ದೊಂದಿಗೆ ಹಂಚಿಕೊಂಡಿದ್ದಾರೆ.

* ಮೈತ್ರಿಯೊಂದಿಗೆ ಚುನಾವಣೆ ಎದುರಿಸಲು 12 ಕ್ಷೇತ್ರಗಳ ಪಟ್ಟು ಹಿಡಿದಿದ್ದ ಜೆಡಿಎಸ್‌ಗೆ ಕೊನೆಗೆ ಸಿಕ್ಕಿದ್ದು 8. ಅದರಲ್ಲಿಯೂ ಒಂದು ಕ್ಷೇತ್ರವನ್ನು ಕಾಂಗ್ರೆಸ್‌ಗೆ ಬಿಟ್ಟುಕೊಟ್ಟಿತಲ್ಲ?

ಕೊಟ್ಟು ತೆಗೆದುಕೊಳ್ಳುವ ನೀತಿ ಪಾಲನೆಯಾಗಿದೆ. ಅವರಿಗೆ ಜಾಸ್ತಿ, ನಮಗೆ ಕಡಿಮೆ ಅಂತ ಅಲ್ಲ. ಮೈತ್ರಿಯೊಂದಿಗೆ ಚುನಾವಣಾ ಅಖಾಡಕ್ಕೆ ಇಳಿದಿದ್ದು, ಎಲ್ಲ 28 ಕ್ಷೇತ್ರಗಳೂ ನಮ್ಮದೇ ಎಂಬ ಭಾವನೆಯಿಂದ ಕೆಲಸ ಮಾಡುತ್ತಿದ್ದೇವೆ.

* ಜೆಡಿಎಸ್‌ ಕಣಕ್ಕಿಳಿದಿರುವ ಏಳು ಕ್ಷೇತ್ರಗಳ ಪೈಕಿ ಎಷ್ಟುಸ್ಥಾನದಲ್ಲಿ ಗೆಲುವ ವಿಶ್ವಾಸ ಇದೆ?

ಏಳಕ್ಕೆ ಏಳರಲ್ಲಿಯೂ ಜಯಗಳಿಸುವ ನಿಟ್ಟಿನಲ್ಲಿ ಪಕ್ಷದ ಕಾರ್ಯಕರ್ತರು, ನಾಯಕರು ಶ್ರಮಿಸುತ್ತಿದ್ದಾರೆ. 7 ಕ್ಷೇತ್ರದ ಪೈಕಿ 5ಕ್ಕಿಂತ ಹೆಚ್ಚು ಸ್ಥಾನದಲ್ಲಿ ಜೆಡಿಎಸ್‌ ಅಭ್ಯರ್ಥಿಗಳು ಜಯಗಳಿಸುವ ವಿಶ್ವಾಸ ಇದೆ.

* ಮೈತ್ರಿ ಧರ್ಮ ಪಾಲನೆ ಏನಿದ್ದರೂ ರಾಜ್ಯ ಮಟ್ಟದ ನಾಯಕರಲ್ಲಿ ಕಾಣಬಹುದು. ಆದರೆ ತಳಮಟ್ಟದಲ್ಲಿ ಸಾಂಪ್ರದಾಯಿಕ ಜಿದ್ದಾಜಿದ್ದಿ ಮುಂದುವರೆದಂತಿದೆ?

ಎಲ್ಲೋ ಒಂದು ಕಡೆ ಮೈನಸ್‌ ಇರಬಹುದು. ಇಲ್ಲ ಅಂತ ಹೇಳುತ್ತಿಲ್ಲ. ಆದರೆ, ಪ್ಲಸ್‌ ಪಾಯಿಂಟ್‌ ಸಹ ಇದೆ. ಉಭಯ ಪಕ್ಷಗಳ ಮುಖಂಡರ ಮಾತಿಗೆ ಬೆಲೆ ನೀಡಿ ಕಾರ್ಯಕರ್ತರು ಕೆಲಸ ಮಾಡುತ್ತಿದ್ದಾರೆ. ಮೈತ್ರಿ ಅಭ್ಯರ್ಥಿಗಳ ಗೆಲುವಿಗೆ ಭಿನ್ನಮತ ಮರೆತು ತೊಡಗಿಸಿಕೊಂಡಿದ್ದಾರೆ. ಒಟ್ಟಾರೆ ನಮ್ಮ ಉದ್ದೇಶ ಮೈತ್ರಿ ಅಭ್ಯರ್ಥಿಗಳನ್ನು ಗೆಲ್ಲಿಸುವುದು.

* ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಜತೆ ತಾತ್ವಿಕ ವಿರೋಧ ಹೊಂದಿರುವ ವಿಶ್ವನಾಥ್‌ ಪ್ರಚಾರದ ವೇದಿಕೆ ಹಂಚಿಕೊಳ್ಳುತ್ತೀರಾ?

ಅದರಲ್ಲೇನಿದೆ. ಪ್ರಚಾರದಲ್ಲಿ ಯಾವುದೇ ಭಿನ್ನಮತ ಇಲ್ಲ. ಸಿದ್ದರಾಮಯ್ಯ ಸಿದ್ದರಾಮಯ್ಯನೇ. ವಿಶ್ವನಾಥ್‌ ವಿಶ್ವನಾಥೇ. ನಿಲುವು ಏನೇ ಇದ್ದರೂ ಮೈತ್ರಿ ಮುಖಂಡರು ಮೈತ್ರಿ ಅಭ್ಯರ್ಥಿಗಾಗಿ ಮತ ಕೇಳುತ್ತೇವೆ. ವೈಯಕ್ತಿಕ ಅಥವಾ ಬೇರೆ ವಿಚಾರಗಳು ಪ್ರಚಾರದಲ್ಲಿ ಬರುವುದಿಲ್ಲ. ಎಲ್ಲವನ್ನೂ ಬದಿಗೊತ್ತಿ ಪ್ರಚಾರದಲ್ಲಿ ತೊಡಗಿಸಿಕೊಳ್ಳುತ್ತೇವೆ.

* ಬೆಂಗಳೂರು ಉತ್ತರ ಕ್ಷೇತ್ರ ಜೆಡಿಎಸ್‌ಗೆ ದಕ್ಕಿದ್ದರೂ ಕಾಂಗ್ರೆಸ್‌ಗೆ ಬಿಟ್ಟುಕೊಟ್ಟಿರಲ್ಲ? ನಿಮಲ್ಲಿ ಸಮರ್ಥ ಅಭ್ಯರ್ಥಿಗಳು ಇರಲಿಲ್ಲವೇ?

ಪರಿಸ್ಥಿತಿಗೆ ತಕ್ಕಂತೆ ನಿರ್ಧಾರ ಕೈಗೊಳ್ಳಬೇಕಾಯಿತು. ಆರಂಭದಲ್ಲಿ ಬೆಂಗಳೂರು ಉತ್ತರ ಕ್ಷೇತ್ರದಿಂದ ಜೆಡಿಎಸ್‌ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಉದ್ದೇಶ ಇತ್ತು. ಪಕ್ಷದ ವರಿಷ್ಠ ಎಚ್‌.ಡಿ.ದೇವೇಗೌಡರು ಸ್ಪರ್ಧಿಸುವ ಇಂಗಿತ ಹೊಂದಿದ್ದರು. ತುಮಕೂರು ಕ್ಷೇತ್ರದಿಂದ ತೀವ್ರ ಒತ್ತಡ ಬಂದಿದ್ದಕ್ಕೆ ಆ ಕಡೆ ಹೋಗಬೇಕಾಯಿತು. ಪಕ್ಷದಲ್ಲಿ ಆಕಾಂಕ್ಷಿಗಳು ಸಹ ಇದ್ದರು. ಆದರೆ, ಎರಡು ಪಕ್ಷಗಳ ನಡುವಿನ ಹೊಂದಾಣಿಕೆಯ ಕಾರಣ ಕಾಂಗ್ರೆಸ್‌ಗೆ ಬಿಟ್ಟುಕೊಡಬೇಕಾಯಿತೇ ಹೊರತು ಬೇರಾವ ಕಾರಣವೂ ಇಲ್ಲ.

* ಮುಖ್ಯಮಂತ್ರಿ, ಪ್ರಧಾನಿಮಂತ್ರಿಯಾಗಿ ರಾಜಕೀಯದಲ್ಲಿ ಅನುಭವ ಇರುವ ದೇವೇಗೌಡ ಅವರು ಹಾಸನ ಕ್ಷೇತ್ರವನ್ನು ಮೊಮ್ಮಗನಿಗೆ ಬಿಟ್ಟುಕೊಟ್ಟಬಳಿಕ ಕ್ಷೇತ್ರ ಆಯ್ಕೆಯಲ್ಲಿ ಕೊನೆ ಕ್ಷಣದವರೆಗೆ ಗೊಂದಲದಲ್ಲಿದ್ದುದು ಏಕೆ?

ಯಾವ ಗೊಂದಲವೂ ಇರಲಿಲ್ಲ. ಬೆಂಗಳೂರು ಮತ್ತು ತುಮಕೂರು ಕ್ಷೇತ್ರದ ಕಾರ್ಯಕರ್ತರು ತಮ್ಮ ತಮ್ಮ ಕ್ಷೇತ್ರದಲ್ಲಿ ಸ್ಪರ್ಧಿಸುವಂತೆ ಒತ್ತಡ ಹೇರಿದ್ದರು. ವಿಶ್ವಾಸ, ಸ್ನೇಹಿತರ ಒತ್ತಡದಿಂದಾಗಿ ತಡವಾಯಿತು. ಗೊಂದಲ ಎನ್ನುವುದು ತಪ್ಪು.

* ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ನಟಿ ಸುಮಲತಾ ಸ್ಪರ್ಧಿಸಿರುವುದು ಜೆಡಿಎಸ್‌ಗೆ ನುಂಗಲಾರದ ತುತ್ತಾಗಿದೆ. ಸೋಲಿನ ಭೀತಿಯಿಂದಾಗಿ ಮಗನನ್ನು ಗೆಲ್ಲಿಸಿಕೊಳ್ಳಲು ಸಿಎಂ ಕ್ಷೇತ್ರದಲ್ಲಿ ಮೊಕ್ಕಾಂ ಹೂಡಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ?

ಮಂಡ್ಯದಲ್ಲಿ ಜೆಡಿಎಸ್‌ ಅಭ್ಯರ್ಥಿ ಗೆಲುವಿಗೆ ಯಾವುದೇ ಆತಂಕ ಇಲ್ಲ. ಕ್ಷೇತ್ರದಲ್ಲಿ 8 ಎಂಎಲ್‌ಎ, ಮೂವರು ಎಂಎಲ್‌ಸಿಗಳಿದ್ದಾರೆ. ಜೊತೆಗೆ ನಗರಸಭೆ, ಜಿಲ್ಲಾ ಪಂಚಾಯತ್‌ ಸದಸ್ಯರು ಇದ್ದಾರೆ. ಇವರೆಲ್ಲಾ ಕೆಲಸ ಮಾಡುತ್ತಿದ್ದಾರೆ. ಅಲ್ಲದೇ, ಕಾಂಗ್ರೆಸ್‌ ಸಹ ಕೈ ಜೋಡಿಸಿದೆ. ಸೋಲಿನ ಯಾವುದೇ ಭಯವಾಗಲಿ, ಆತಂಕವಾಗಲಿ ಇಲ್ಲ. ಮುಖ್ಯಮಂತ್ರಿಗಳು ಎಲ್ಲ ಕ್ಷೇತ್ರದ ಕಡೆ ಗಮನ ಹರಿಸುತ್ತಿದ್ದಾರೆ. ಪ್ರಚಾರದಲ್ಲಿ ಇತರೆ ಕ್ಷೇತ್ರದಲ್ಲಿಯೂ ಭಾಗಿಯಾಗುತ್ತಿದ್ದಾರೆ.

* ಒಬ್ಬ ಮಹಿಳೆಯ ವಿರುದ್ಧ ಇಡೀ ಸರ್ಕಾರವೇ ನಿಲ್ಲಬೇಕಾದ ಅನಿವಾರ್ಯತೆ ಇದೆಯೇ?

ಇಲ್ಲ. ಇದು ಮಹಿಳೆ ಅಥವಾ ಪುರುಷ ಪ್ರಶ್ನೆಯಲ್ಲ. ಅದು ಅಭ್ಯರ್ಥಿ ಮಾತ್ರ. ನಟ ಅಂಬರೀಶ್‌ ನಿಧನದ ಬಳಿಕ ಎರಡು ಕುಟುಂಬದ ನಡುವೆ ವಿರಸ ಯಾವ ಕಾರಣಕ್ಕಾಗಿ ಬಂತು ಗೊತ್ತಿಲ್ಲ. ಅಂಬರೀಶ್‌ ವ್ಯಕ್ತಿತ್ವವನ್ನು ವೈಭವೀಕರಣಗೊಳಿಸಿ ಡಾ.ರಾಜ್‌ಕುಮಾರ್‌ ಪಕ್ಕದಲ್ಲಿಯೇ ಅವರಿಗೆ ಜಾಗ ಕೊಡಲಾಯಿತು. ಆದರೂ ಕುಮಾರಸ್ವಾಮಿ ಬಗ್ಗೆ ಮಾತನಾಡಲಾಗುತ್ತಿದೆ. ಏಕೆ ಗೊತ್ತಿಲ್ಲ.

* ಜೆಡಿಎಸ್‌ ಅಭ್ಯರ್ಥಿ ನಿಖಿಲ್‌ ಕುಮಾರಸ್ವಾಮಿ ನಾಮಪತ್ರ ಕ್ರಮಬದ್ಧವಾಗಿಲ್ಲ ಎಂಬ ಆರೋಪಗಳು ನಿಜನಾ?

ಚುನಾವಣೆ ವೇಳೆ ಆರೋಪ ಸಹಜ. ಆರೋಪಗಳನ್ನು ಪ್ರಶ್ನಿಸಲು ನ್ಯಾಯಾಲಯ, ಚುನಾವಣಾ ಆಯೋಗ ಇದೆ. ಅಲ್ಲಿ ದೂರು ನೀಡಿದರೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುತ್ತದೆ. ಅದನ್ನು ಪ್ರಚಾರದಲ್ಲಿ ಬಳಸಿಕೊಳ್ಳುವುದು ಸರಿಯಲ್ಲ.

* ನಿಖಿಲ್‌ರನ್ನು ಕಣಕ್ಕಿಳಿಸುವ ಬದಲು ಸುಮಲತಾಗೆ ಬೆಂಬಲ ನೀಡಬಹುದಿತ್ತು ಎಂಬ ಅಭಿಪ್ರಾಯ ಇದೆ?

ಅದು ಬೇರೆ ವಿಚಾರ. ಇದು ರಾಜಕಾರಣ. ಒಂದಕ್ಕೊಂದು ಸಂಬಂಧ ಇಲ್ಲ. ನಮಗೆ ಕೊಡಿ ಎಂದು ಅವರು ಬಂದು ಕೇಳಬಹುದಿತ್ತು. ಎಲ್ಲವೂ ಚಿತಾವಣೆಯಾಯಿತು.

* ನಿಖಿಲ್‌ ಕುಮಾರಸ್ವಾಮಿಗೆ ಕೊಟ್ಟಂತಹ ಪ್ರಾಮುಖ್ಯತೆ ಹಾಸನ ಕ್ಷೇತ್ರದ ಅಭ್ಯರ್ಥಿ ಪ್ರಜ್ವಲ್‌ ರೇವಣ್ಣಗೆ ನೀಡುತ್ತಿಲ್ಲ ಎಂದು ಹೇಳಲಾಗುತ್ತಿದೆ.

ಹಾಗೇನೂ ಇಲ್ಲ. ನಮಗೆ ನಿಖಿಲ್‌, ಪ್ರಜ್ವಲ್‌, ವಿಜಯ ಶಂಕರ್‌, ಮಧು ಬಂಗಾರಪ್ಪ ಎಲ್ಲರೂ ಒಂದೇನೆ. ಎಲ್ಲ ಕ್ಷೇತ್ರಗಳೂ ಒಂದೇ. ಎಲ್ಲರಿಗೂ ಒಂದೇ ರೀತಿ ಪ್ರಾಮುಖ್ಯತೆ ನೀಡಲಾಗುತ್ತಿದೆ. ಎಲ್ಲರನ್ನೂ ಗೆಲ್ಲಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ.

* ಒಂದು ವೇಳೆ ತೃತೀಯ ರಂಗ ಬಹುಮತ ಪಡೆದರೆ ಜೆಡಿಎಸ್‌ ನಿರೀಕ್ಷೆ ಏನು?

ಪರಿಸ್ಥಿತಿ ಹೇಗೆ ಬರುತ್ತದೆ ಎಂಬುದು ಗೊತ್ತಿಲ್ಲ. ಒಂದು ವೇಳೆ ತೃತೀಯ ರಂಗ ತೀರ್ಮಾನ ತೆಗೆದುಕೊಳ್ಳುವ ಸಮಯ ಬಂದರೆ ಜೆಡಿಎಸ್‌ ಎಚ್‌.ಡಿ.ದೇವೇಗೌಡ ಅವರಿಗೆ ಅವಕಾಶ ಬರಬಹುದು. ದಕ್ಷಿಣ ಭಾರತದಲ್ಲಿ ಜೀವಂತವಾಗಿರುವ ಮಾಜಿ ಪ್ರಧಾನಿಯೆಂದರೆ ಅವರೊಬ್ಬರೆ.

* ರಾಜಕಾರಣದಲ್ಲಿ ಮೊದಲಿನಿಂದಲೂ ನೀವು ನೇರ ನುಡಿ, ನಿಷ್ಠುರ ವ್ಯಕ್ತಿತ್ವವುಳ್ಳವರು. ಜೆಡಿಎಸ್‌ ರಾಜ್ಯಾಧ್ಯಕ್ಷರಾದ ಮೇಲೆ ರಾಜಿ ಸ್ವಭಾವ ರೂಢಿಸಿಕೊಂಡಂತೆ ಕಾಣುತ್ತಿದೆ?

ಸ್ವಂತ ನಿರ್ಧಾರ ಕೈಗೊಳ್ಳೋದು ಏನಿದೆ? ಚುನಾವಣಾ ಅಭ್ಯರ್ಥಿಗಳ ಆಯ್ಕೆಯಲ್ಲಿ ಸ್ವಂತ ನಿರ್ಧಾರ ಕೈಗೊಳ್ಳಲು ಸಾಧ್ಯನಾ? ರಾಜ್ಯಾಧ್ಯಕ್ಷನಾಗಿ ಜಿಲ್ಲಾಧ್ಯಕ್ಷ, ಬ್ಲಾಕ್‌ ಅಧ್ಯಕ್ಷ, ಪದಾಧಿಕಾರಿಗಳನ್ನು ನೇಮಕ ಮಾಡಬಹುದು. ಅದನ್ನು ಹೊರತುಪಡಿಸಿ ಚುನಾವಣಾ ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಸಂಸದೀಯ ವ್ಯವಹಾರಗಳ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗುತ್ತದೆ. ಈ ಹಿಂದೆ ರಾಜೀನಾಮೆ ನೀಡಿದ್ದು ಆರೋಗ್ಯದ ದೃಷ್ಟಿಯಿಂದಲೇ ಹೊರತು ಬೇರಾವ ಕಾರಣದಿಂದಲ್ಲ. ಅದಕ್ಕೆ ಬೇರೆ ಅರ್ಥ ಕಲ್ಪಿಸುವುದು ಸರಿಯಲ್ಲ.

* ಲೋಕಸಭಾ ಚುನಾವಣೆ ಬಳಿಕ ಸಮ್ಮಿಶ್ರ ಸರ್ಕಾರ ಪತನವಾಗಲಿದೆ ಎಂದು ಪದೇ ಪದೇ ಪ್ರತಿಪಕ್ಷ ಬಿಜೆಪಿ ಆರೋಪ ಮಾಡುತ್ತಲೇ ಇದೆ?

ಬಿಜೆಪಿಯ ಬೀಜ ಮಂತ್ರ ಇದು. ಸರ್ಕಾರ ಬಿದ್ದೇ ಬಿಟ್ಟಿತು, ಬೀಳುತ್ತದೆ ಎನ್ನುವುದು ಬಿಜೆಪಿಯ ಬೀಜ ಮಂತ್ರ. ಆದರೆ, ಅದು ಏನೂ ಆಗಲ್ಲ. ಅವರು ಹೇಳುತ್ತಾ ಹೋಗುತ್ತಾರೆ, ಸಮ್ಮಿಶ್ರ ಸರ್ಕಾರ ನಡೆದುಕೊಂಡು ಹೋಗುತ್ತದೆ.

* ಜೆಡಿಎಸ್‌ನಲ್ಲಿ ಕುಟುಂಬ ರಾಜಕಾರಣ ಇದೆ ಎಂಬ ಮಾತುಗಳು ರಾಜ್ಯದಲ್ಲಿ ಬಲವಾಗಿ ಕೇಳಿಬರುತ್ತಿರುವುದರಿಂದ ಪಕ್ಷಕ್ಕೆ ಹಿನ್ನಡೆಯಾಗುವ ಸಾಧ್ಯತೆ ಇದೆ ಎಂದು ಅನಿಸುವುದಿಲ್ಲವೇ?

-ಕುಟುಂಬ ರಾಜಕಾರಣ ಎಲ್ಲಿ ಇಲ್ಲ. ಇಡೀ ಜಗತ್ತಿನಲ್ಲಿ ಅದನ್ನು ಕಾಣಬಹುದು. ಆಲ್ಬೇನಿಯಾ ರಾಷ್ಟ್ರದಿಂದ ಹಿಡಿದು ಅರ್ಜೆಂಟೀನಾದವರೆಗೆ ಕುಟುಂಬ ರಾಜಕಾರಣ ಕಾಣಬಹುದು. ಭಾರತದಲ್ಲಾದರೂ ಪರವಾಗಿಲ್ಲ. ಆಲ್ಬೇನಿಯಾ ರಾಷ್ಟ್ರದಲ್ಲಿ 55 ವರ್ಷಗಳಿಂದ ಕುಟುಂಬ ರಾಜಕಾರಣ ನೋಡಬಹುದು. ಯೂರೋಪಿಯನ್‌ ದೇಶದಲ್ಲಿ ಎಷ್ಟಿಲ್ಲ ಹೇಳಿ. ಎಲ್ಲಾ ಕಡೆಯೂ ವಂಶಾವಳಿ ಇದೆ. ಹೀಗಾಗಿ ಇದರಲ್ಲಿ ಹೊಸದೇನೂ ಇಲ್ಲ. ನಾವು ಪಶ್ಚಿಮಕ್ಕೆ ನೋಡುತ್ತೇವೆ. ನಮ್ಮ ಸಂವಿಧಾನವು ಅದರ ಅಂಶವನ್ನೇ ಒಳಗೊಂಡಿದೆ. ಬ್ರಿಟಿಷರು ನಮ್ಮನ್ನು ಆಳಿದ ಮೇಲೆ ಅದರ ಪ್ರಭಾವ ನಮ್ಮಲ್ಲೂ ಇದೆ. ಲಾಲೂ ಪ್ರಸಾದ್‌ ಯಾದವ್‌ ಕುಟುಂಬದಲ್ಲಿ ಏಳು ಮಂದಿ ರಾಜಕಾರಣದಲ್ಲಿ ಇದ್ದಾರೆ. ಎನ್‌ಟಿಆರ್‌ ಸೇರಿದಂತೆ ದೇಶದಲ್ಲಿ ಹಲವಾರು ವಂಶದವರನ್ನು ರಾಜಕಾರಣದಲ್ಲಿ ಕಾಣಬಹುದು. ಈ ಹಿನ್ನೆಲೆಯಲ್ಲಿ ವಂಶಾವಳಿ ಎನ್ನುವುದೇ ಅರ್ಥಹೀನ.

* ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಹವಾ ಇದೆ. ರಾಜ್ಯದಲ್ಲಿ ಮಿತ್ರ ಪಕ್ಷಗಳ ನಾಯಕರು ಇದನ್ನು ಹೇಗೆ ಎದುರಿಸುತ್ತೀರಿ?

ಪ್ರಧಾನಿ ನರೇಂದ್ರ ಮೋದಿ ಹವಾ ಇಲ್ಲ ಅಂತ ಹೇಳುವುದಿಲ್ಲ. ಆದರೆ, ಕರ್ನಾಟಕಕ್ಕೆ ಮೋದಿ ಕೊಡುಗೆ ಏನು? ಹೇಳಿಕೊಳ್ಳುವಂತಹದ್ದು ಏನೂ ಕೊಟ್ಟಿಲ್ಲ. ಮಹದಾಯಿ ವಿಚಾರದಲ್ಲಿ ಸಮಸ್ಯೆಯನ್ನು ಬಗೆಹರಿಸಿಲ್ಲ. ಅಕ್ಷರ, ಆರೋಗ್ಯ, ಕೃಷಿ ಯಾವುದರಲ್ಲಿಯೂ ಕೊಡುಗೆ ಇಲ್ಲ. ಕರ್ನಾಟಕಕ್ಕೆ ಮೋದಿ ಕೊಡುಗೆ ಶೂನ್ಯ. ಇರುವ ಸವಲತ್ತುಗಳನ್ನೇ ಕಿತ್ತುಕೊಂಡರು.

ಮತದಾನ ನಮ್ಮ ಹಕ್ಕು... ಪ್ರಜಾಪ್ರಭುತ್ವದ ಉತ್ಸವವನ್ನು ಯಶಸ್ವಿಗೊಳಿಸೋಣ...

ದೇಶದಲ್ಲಿ ಏ.11 ರಿಂದ ಮೇ 19ರವರೆಗೆ ಏಳು ಹಂತಗಳಲ್ಲಿ ಮತದಾನ ನಡೆಯಲಿದ್ದು, ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. 543 ಲೋಕಸಭಾ ಕ್ಷೇತ್ರಗಳಿಗೆ ನಡೆ

Follow Us:
Download App:
  • android
  • ios