ಬೆಂಗಳೂರು[ಮಾ.17]: ಲೋಕಸಭಾ ಚುನಾವಣಾ ಸಮರಕ್ಕೆ ಸೀಟು ಹಂಚಿಕೆ ಕಸರತ್ತು ಮುಗಿದ ಬೆನ್ನಲ್ಲೇ ಮಿತ್ರ ಪಕ್ಷಗಳಲ್ಲಿ ‘ಅಸಹಕಾರ ಚಳವಳಿ’ ಪ್ರಾರಂಭವಾಗಿದ್ದು, ಪರಸ್ಪರ ಗೆಲುವಿಗೆ ಅಡ್ಡಿಯಾಗುವ ಆತಂಕ ಎದುರಾಗಿದೆ. ಅದರಲ್ಲೂ ಮುಖ್ಯವಾಗಿ ಕಾಂಗ್ರೆಸ್ ಪಕ್ಷವು ಮಂಡ್ಯ, ತುಮಕೂರು, ಹಾಸನ ಹಾಗೂ ಬೆಂಗಳೂರು ಉತ್ತರದಂತಹ ಕ್ಷೇತ್ರಗಳಲ್ಲಿ ತನಗೆ ಒಳಏಟು ನೀಡುವ ವಾಸನೆ ಹಿಡಿದಿರುವ ಜೆಡಿಎಸ್ ಇದಕ್ಕೆ ತಿರುಗೇಟು ನೀಡುವ ಎಚ್ಚರಿಕೆಯನ್ನು ರವಾನಿಸಿದೆ

ಮಂಡ್ಯ ಮತ್ತು ಹಾಸನದಲ್ಲಿ ಜೆಡಿಎಸ್ ವರಿಷ್ಠ ಎಚ್. ಡಿ.ದೇವೇಗೌಡ ಕುಟುಂಬದ ವಿರುದ್ಧ ಸಿಡಿದೆದ್ದಿರುವ ಕಾಂಗ್ರೆಸ್ ಗೆ ತಿರುಗೇಟು ನೀಡಲು ಜೆಡಿಎಸ್ ಕೂಡ ಸಜ್ಜಾಗಿದೆ. ಇದಕ್ಕಾಗಿ ಮೈಸೂರು ಸೇರಿದಂತೆ ಕಾಂಗ್ರೆಸ್ ಪ್ರಾಬಲ್ಯ ಇರುವ ಕ್ಷೇತ್ರದಲ್ಲಿ ಸಹಕಾರ ನೀಡಲು ಹಿಂದೇಟು ಹಾಕುವ ಪ್ರಯತ್ನಕ್ಕೆ ಮುಂದಾಗಿದೆ. ಮಿತ್ರಪಕ್ಷದಲ್ಲಿ ಭಿನ್ನರಾಗ ಮೂಡಿರುವ ಹಿನ್ನೆಲೆಯಲ್ಲಿ ಮಂಡ್ಯ, ಹಾಸನದಲ್ಲಿ ದಳಪತಿಗಳನ್ನು ಮಣಿಸುವ ಕಾಂಗ್ರೆಸ್‌ನ ತಂತ್ರಕ್ಕೆ ಜೆಡಿಎಸ್ ಪ್ರತಿತಂತ್ರ ರೂಪಿಸಲು ಮುಂದಾಗಿದೆ.

ಹಾಸನ, ಮಂಡ್ಯ ಜೆಡಿಎಸ್‌ಗೆ ಭದ್ರಕೋಟೆಯಾಗಿದ್ದು, ಮಂಡ್ಯ ಕ್ಷೇತ್ರದಲ್ಲಿ ಜೆಡಿಎಸ್ ಮಣಿಸಲು ಸರ್ಕಾರದ ಪಾಲುದಾರ ಪಕ್ಷವೇ ಪರೋಕ್ಷ ತಂತ್ರಗಾರಿಕೆ ನಡೆಸುವಲ್ಲಿ ತೊಡಗಿದೆ ಎಂಬ ಅನುಮಾನ ಜೆಡಿಎಸ್‌ಗೆ ಬಂದಿದೆ. ಇದಕ್ಕೆ ತಿರುಗೇಟು ನೀಡಲು ಕಾಂಗ್ರೆಸ್‌ನ ಪ್ರಮುಖ ಕ್ಷೇತ್ರಗಳಾದ ಮೈಸೂರು, ಕಲಬುರಗಿ, ಕೋಲಾರ, ಚಿಕ್ಕಬಳ್ಳಾಪುರ, ರಾಯಚೂರು, ಬೀದರ್ ಸೇರಿದಂತೆ ಇನ್ನು ಕೆಲವು ಕ್ಷೇತ್ರದಲ್ಲಿ ಅಂತರ ಕಾಯ್ದುಕೊಳ್ಳುವ ಬಗ್ಗೆ ಜೆಡಿಎಸ್ ಚಿಂತನೆ ಆರಂಭಿ ಸಿದೆ. ಈ ಮೂಲಕ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಹಿನ್ನಡೆಯಾಗಲು ರಾಜಕೀಯ ರಣತಂತ್ರ ರೂಪಿ ಸುವಲ್ಲಿ ನಿರತವಾಗಿದೆ ಎಂದು ಹೇಳಲಾಗಿದೆ.

ಕೆ.ಆರ್.ನಗರ ಕ್ಷೇತ್ರದಲ್ಲಿ ಸಚಿವ ಸಾ.ರಾ. ಮಹೇಶ್ ಕಾರ್ಯಕ್ರಮವೊಂದರಲ್ಲಿ ಮಾತನಾಡಿ, ಮೈತ್ರಿ ನಿಯಮವನ್ನು ಪಾಲನೆ ಮಾಡಬೇಕು. ಮಂಡ್ಯ ಕ್ಷೇತ್ರದಲ್ಲಿ ಜೆಡಿಎಸ್‌ಗೆ ಸಂಪೂರ್ಣವಾಗಿ ಕಾಂಗ್ರೆಸ್ ಬೆಂಬಲ ವ್ಯಕ್ತಪಡಿಸಬೇಕು. ಸಹಾಯ ಮಾಡದಿದ್ದರೆ ಮೈಸೂರಿನಲ್ಲಿ ಜೆಡಿಎಸ್ ತನ್ನದೇ ಪ್ರಾಬಲ್ಯ ಹೊಂದಿದ್ದು, ತಮ್ಮ ಅಸ್ತಿತ್ವವನ್ನು ಪ್ರದರ್ಶಿಸಬೇಕು ಎಂದು ನೀಡಿರುವ ಎಚ್ಚರಿಕೆಯೇ ಮಿತ್ರ ಪಕ್ಷಗಳ ನಡುವಿನ ಮುಸುಕಿನ ಗುದ್ದಾಟಕ್ಕೆ ಸಾಕ್ಷಿಯಾಗಿದೆ.

ಹಾಸನದಲ್ಲಿ ಜೆಡಿಎಸ್ ಗೆಲುವಿಗೆ ಯಾವುದೇ ಪ್ರಯಾಸ ಪಡಬೇಕಾದ ಅಗತ್ಯ ಇಲ್ಲ. ಆದರೆ, ಮಂಡ್ಯ ಕ್ಷೇತ್ರವು ಜೆಡಿಎಸ್ ಪಾಲಿಗೆ ಪ್ರತಿಷ್ಠೆಯ ಕಣವಾಗಿದೆ. ಅಂಬರೀಷ್ ಪತ್ನಿ ಸುಮಲತಾ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿ ಯುತ್ತಿರುವುದು ಜೆಡಿಎಸ್‌ಗೆ ನುಂಗಲಾರದ ತುತ್ತಾಗಿದೆ. ಮುಖ್ಯಮಂತ್ರಿ ಎಚ್.ಡಿ.ಕುಮಾರ ಸ್ವಾಮಿ ಅವರು ತಮ್ಮ ಪುತ್ರ ನಿಖಿಲ್ ಅವರನ್ನು ಕಣಕ್ಕಿಳಿಸುತ್ತಿರುವುದರಿಂದ ತಂದೆ ಕುಮಾರಸ್ವಾಮಿ ಮತ್ತು ತಾತ ಎಚ್.ಡಿ.ದೇವೇಗೌಡ ಅವರು ತಮ್ಮ ರಾಜಕೀಯ ಅನುಭವವನ್ನು ಧಾರೆ ಎರೆದು ಗೆಲ್ಲಿಸಲು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ಮೈತ್ರಿ ಸರ್ಕಾರದಲ್ಲಿ ಪಾಲುದಾರ ಪಕ್ಷವಾಗಿದ್ದರೂ ಕಾಂಗ್ರೆಸ್ ಮಂಡ್ಯದ ವಿಚಾರದಲ್ಲಿ ಸುಮಲತಾ ಅವರಿಗೆ ಪರೋಕ್ಷವಾಗಿ ಬೆನ್ನಿಗೆ ನಿಂತಿದೆ. ಇದು ಜೆಡಿಎಸ್ ವರಿಷ್ಠರನ್ನು ಚಿಂತೆಗೀಡುಮಾಡಿ

ಸಾಮಾಜಿಕ ಜಾಲತಾಣದಲ್ಲಿಯೂ ಮಂಡ್ಯ ಕ್ಷೇತ್ರ ವಿಚಾರದಲ್ಲಿ ಸಾಕಷ್ಟು ಟೀಕೆಗಳು ವ್ಯಕ್ತವಾಗುತ್ತಿವೆ. ಮಂಡ್ಯದಲ್ಲಿ ಜೆಡಿಎಸ್‌ನ ಶಾಸಕರಿದ್ದರೂ ನಿಖಿಲ್ ಗೆಲುವಿಗೆ ಹರಸಾಹಸ ಪಡಬೇಕಾಗಿದೆ. ಸುಮಲತಾಗೆ ಬಿಜೆಪಿಯೂ ಸಹ ಬೆಂಬಲ ಸೂಚಿಸುವ ಸಾಧ್ಯತೆ ಇದೆ. ಸುಮಲತಾಗೆ ಭಾರೀ ಬೆಂಬಲ ವ್ಯಕ್ತವಾಗುತ್ತಿರುವುದು ಜೆಡಿಎಸ್ ಗೆ ನಿದ್ದೆಗೆಡಿಸಿದೆ. ಹೇಗಾದರೂ ಮಾಡಿ ಮಂಡ್ಯ ಕ್ಷೇತ್ರವನ್ನು ಒಲಿಸಿಕೊಳ್ಳಲು ರಣತಂತ್ರ ರೂಪಿಸುತ್ತಿರುವ ಜೆಡಿಎಸ್, ಬೇಷರತ್ ಆಗಿ ಬೆಂಬಲ ನೀಡುವಂತೆ ಕಾಂಗ್ರೆಸ್‌ಗೆ ಎಚ್ಚರಿಕೆ ನೀಡುವ ತಂತ್ರಗಾರಿಕೆಗೆ ಮೊರೆಹೋಗಿದೆ.

ಸಿದ್ದರಾಮಯ್ಯ ತವರು ಜಿಲ್ಲೆ ಮೈಸೂರು ಕ್ಷೇತ್ರ ಕಾಂಗ್ರೆಸ್‌ಗೆ ಪ್ರತಿಷ್ಠೆಯಾಗಿದೆ. ಅದೇ ಕ್ಷೇತ್ರವನ್ನೇ ಜೆಡಿಎಸ್ ಗುರಿಯಾಗಿಸಿಕೊಂಡಿದೆ. ಕಾಂಗ್ರೆಸ್ ಪೂರ್ತಿಯಾಗಿ ಬೆಂಬಲ ನೀಡದಿದ್ದರೆ ಮೈಸೂರಿನಲ್ಲಿ ಕಾಂಗ್ರೆಸ್‌ಗೆ ಹಿನ್ನಡೆಯನ್ನುಂಟು ಮಾಡಲು ಪ್ರಚಾರದಿಂದ ಹಿಂದೇಟು ಹಾಕುವ ಪ್ರಯತ್ನಕ್ಕೆ ಮುಂದಾಗಿದೆ ಎಂದು ಹೇಳಲಾಗಿದೆ.

ಕಲಬುರಗಿಯಲ್ಲಿ ಕಾಂಗ್ರೆಸ್‌ನ ಧುರೀಣ ಮಲ್ಲಿಕಾರ್ಜುನ ಖರ್ಗೆ, ಚಿಕ್ಕಬಳ್ಳಾಪುರದಲ್ಲಿ ವೀರಪ್ಪ ಮೊಯ್ಲಿ, ಕೋಲಾರದಲ್ಲಿ ಕೇಂದ್ರದ ಮಾಜಿ ಸಚಿವ ಮುನಿಯಪ್ಪ ಸೇರಿದಂತೆ ಇತರೆ ಹಾಲಿ ಸಂಸದರಿಗೆ ಬೆಂಬಲ ನೀಡಲು ಹಿಂದೇಟು ಹಾಕುವ ಬಗ್ಗೆ ಆಲೋಚನೆ ನಡೆಸಲಾಗಿದೆ ಎಂದು ಹೇಳಲಾಗಿದೆ.