Asianet Suvarna News Asianet Suvarna News

ಶಿವಮೊಗ್ಗ ಅಭ್ಯರ್ಥಿಗಳಿಗೆ ಐಟಿ ಶಾಕ್! ಪತ್ತೆಯಾಗಿದ್ದೆಷ್ಟು..?

ಎರಡನೇ ಹಂತದ ಚುನಾವಣೆಯ ಮತದಾನಕ್ಕೆ ಎರಡು ದಿನ ಬಾಕಿ ಉಳಿದಿರುವ ವೇಳೆ ಶನಿವಾರ ಆದಾಯ ತೆರಿಗೆ ಇಲಾಖೆ ನಡೆಸಿದ ಭಾರಿ ಕಾರ್ಯಾಚರಣೆಯಲ್ಲಿ ನಾಲ್ಕೂವರೆ ಕೋಟಿ ರು.ಗಿಂತ ಹೆಚ್ಚಿನ ನಗದನ್ನು ಜಪ್ತಿ ಮಾಡಲಾಗಿದೆ. 

Loksabha Elections 2019 IT Officers Seized 4 Crore In Raids Across Karnataka
Author
Bengaluru, First Published Apr 21, 2019, 7:43 AM IST

ಬೆಂಗಳೂರು :  ಎರಡನೇ ಹಂತದ ಚುನಾವಣೆಯ ಮತದಾನಕ್ಕೆ ಎರಡು ದಿನ ಬಾಕಿ ಉಳಿದಿರುವ ವೇಳೆ ಶನಿವಾರ ಆದಾಯ ತೆರಿಗೆ ಇಲಾಖೆ ನಡೆಸಿದ ಭಾರಿ ಕಾರ್ಯಾಚರಣೆಯಲ್ಲಿ ನಾಲ್ಕೂವರೆ ಕೋಟಿ ರು.ಗಿಂತ ಹೆಚ್ಚಿನ ನಗದನ್ನು ಜಪ್ತಿ ಮಾಡಲಾಗಿದೆ. ಈ ಪೈಕಿ ಕಾರೊಂದರ ಸ್ಟೆಪ್ನಿ (ಹೆಚ್ಚುವರಿ ಟೈರ್‌)ಯಲ್ಲಿ 2.3 ಕೋಟಿ ರು. ನಗದು ಪತ್ತೆಯಾಗಿರುವುದು ಕುತೂಹಲಕರವಾಗಿದೆ. ಬೆಂಗಳೂರು, ಭದ್ರಾವತಿ, ಶಿವಮೊಗ್ಗ, ಬಾಗಲಕೋಟೆ, ವಿಜಯಪುರ ಮುಂತಾದೆಡೆ ಶನಿವಾರ ಐಟಿ ದಾಳಿ ನಡೆದಿದೆ.

ಬೆಂಗಳೂರಿನಿಂದ ಭದ್ರಾವತಿ ಹಾಗೂ ಶಿವಮೊಗ್ಗಕ್ಕೆ ನಾಲ್ಕು ಕೋಟಿ ರು.ಗಿಂತ ಹೆಚ್ಚು ಮೊತ್ತವನ್ನು ಕೊಂಡೊಯ್ಯುತ್ತಿರುವ ಬಗ್ಗೆ ತಮ್ಮದೇ ಮೂಲಗಳಿಂದ ಮಾಹಿತಿ ಪಡೆದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ವಶಕ್ಕೆ ಪಡೆದುಕೊಂಡಿದ್ದಾರೆ. ಆಶ್ಚರ್ಯವೆಂದರೆ ವಾಹನದಲ್ಲಿನ ಹೆಚ್ಚುವರಿ ಟೈರ್‌ನಲ್ಲಿಟ್ಟುಕೊಂಡು ಹಣ ಸಾಗಿಸುತ್ತಿರುವುದನ್ನು ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಪತ್ತೆ ಮಾಡಿದ್ದಾರೆ. ಸ್ಟೆಪ್ನಿಯಲ್ಲಿ 2.3 ಕೋಟಿ ರು. ದೊರಕಿದ್ದು, ಅದನ್ನು ಜಪ್ತಿ ಮಾಡಲಾಗಿದೆ.

ಎರಡು ಸಾವಿರ ರು. ಮುಖಬೆಲೆಯ ನೋಟುಗಳ 2.3 ಕೋಟಿ ರು. ಚಕ್ರದಲ್ಲಿ ಪತ್ತೆಯಾಗಿದೆ. ಭದ್ರಾವತಿಯಲ್ಲಿ ತಪಾಸಣೆ ಕಾರ್ಯ ಮುಂದುವರಿಸಲಾಗಿದ್ದು, ಅಲ್ಲಿ ಮತ್ತೊಂದೆಡೆ 60 ಲಕ್ಷ ರು. ನಗದು ಪತ್ತೆಯಾಗಿದೆ. ಅದನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಐಟಿ ಇಲಾಖೆ ಹೇಳಿದೆ.

ಮೊದಲ ಹಂತದಲ್ಲಿ ಚುನಾವಣೆ ನಡೆದ 14 ಕ್ಷೇತ್ರಗಳ ಪೈಕಿ ಮಂಡ್ಯ, ಹಾಸನದಲ್ಲಿ ಜೆಡಿಎಸ್‌ ಬೆಂಬಲಿತರಿಗೆ ಸೇರಿದ ಸ್ಥಳಗಳ ಮೇಲೆ ದಾಳಿ ನಡೆಸಿ ಕೋಟ್ಯಂತರ ರು. ನಗದನ್ನು ಚುನಾವಣಾ ಆಯೋಗ ವಶಪಡಿಸಿಕೊಂಡಿತ್ತು. ಇದೀಗ ಎರಡನೇ ಹಂತದ ಚುನಾವಣೆ ಕ್ಷೇತ್ರಗಳ ಮೇಲೆ ನಿಗಾವಹಿಸಿರುವ ಐಟಿ ಅಧಿಕಾರಿಗಳು ಶಿವಮೊಗ್ಗ, ಬಾಗಲಕೋಟೆ, ವಿಜಯಪುರ ಕ್ಷೇತ್ರಗಳ ಅಭ್ಯರ್ಥಿಗಳಿಗೆ ಶಾಕ್‌ ಕೊಟ್ಟಿದ್ದಾರೆ. ಅವರ ಬೆಂಬಲಿತ ವ್ಯಕ್ತಿಗಳ ಮೇಲೆ ಕಾರ್ಯಾಚರಣೆ ಕೈಗೊಂಡಿದ್ದಾರೆ. ಎರಡು ಕ್ಷೇತ್ರಗಳ ಮೇಲೆ ನಡೆಸಿರುವ ಕಾರ್ಯಾಚರಣೆಯು ಮೈತ್ರಿ ಅಭ್ಯರ್ಥಿಗಳ ಬೆಂಬಲಿತರಿಗೆ ಸಂಬಂಧಪಟ್ಟಿದ್ದಾಗಿದೆ. ನಗದನ್ನು ಜಪ್ತಿ ಮಾಡಲಾಗಿದ್ದು, ಹೆಚ್ಚಿನ ವಿಚಾರಣೆಗೊಳಪಡಿಸಲಾಗಿದೆ ಎಂದು ಐಟಿ ಮೂಲಗಳು ತಿಳಿಸಿವೆ.

ಯಾರ್ಯಾರು ಮೇಲೆ ಐಟಿ ದಾಳಿ:

ಬಾಗಲಕೋಟೆಯಲ್ಲಿ ಆರೋಗ್ಯ ಸಚಿವ ಶಿವಾನಂದ ಪಾಟೀಲ ಅವರ ಆಪ್ತರಿಗೆ ಸೇರಿದ ಸ್ಥಳಗಳ ಮೇಲೆ ದಾಳಿ ನಡೆಸಲಾಗಿದೆ. ಬಿಡಿಸಿಸಿ ಬ್ಯಾಂಕ್‌ನ ಹಿರಿಯ ಅಧಿಕಾರಿ ಆರೀಫ್‌ ಕಾರ್ಲೆಕರ್‌ ಮತ್ತು ಪ್ರಥಮ ದರ್ಜೆ ನೌಕರ ಯಾಸೀನ್‌ ತುಂಬರಮಟ್ಟಿಎಂಬುವರ ನಿವಾಸಗಳ ಮೇಲೆ ದಾಳಿ ನಡೆದಿದ್ದು, ಕಾರ್ಯಾಚರಣೆ ವೇಳೆ ಒಂದು ಕೋಟಿ ರು. ಪತ್ತೆಯಾಗಿದೆ. ಅಲ್ಲದೇ, ಕಾಂಗ್ರೆಸ್‌ ಅಭ್ಯರ್ಥಿ ವೀಣಾ ಕಾಶಪ್ಪನವರ್‌ ಬೆಂಬಲಿಗರ ಸ್ಥಳಗಳ ಮೇಲೂ ದಾಳಿ ನಡೆದಿದೆ ಎಂದು ಹೇಳಲಾಗಿದೆ. ಆದರೆ, ಐಟಿ ಅಧಿಕಾರಿಗಳು ಈ ಬಗ್ಗೆ ಖಚಿತಪಡಿಸಲು ನಿರಾಕರಿಸಿದ್ದಾರೆ.

ಬಾಗಲಕೋಟೆ ಜಿಲ್ಲೆಯಲ್ಲೇ ಇನ್ನೊಂದೆಡೆ ಇಬ್ಬರು ಸಹೋದರ ಉದ್ಯಮಿಗಳ ಸ್ಥಳಗಳ ಮೇಲೆ ದಾಳಿ ನಡೆಸಲಾಗಿದ್ದು, ಅವರು ಗೋವಾದಲ್ಲಿ ಜ್ಯುವಲೆರಿ ಉದ್ಯಮ ನಡೆಸುತ್ತಿದ್ದಾರೆ. ಗೋವಾದಲ್ಲಿ ಕಾರ್ಯಾಚರಣೆ ಮುಂದುವರಿದಿದ್ದು, ದಾಖಲೆ ಇಲ್ಲದ ಹಣವನ್ನು ಪತ್ತೆಹಚ್ಚಲಾಗಿದೆ. ಕೇವಲ ನಗದಿನಲ್ಲಿ ವ್ಯವಹಾರ ನಡೆಸುತ್ತಿರುವ ಬಗ್ಗೆ ತಪಾಸಣೆ ವೇಳೆ ಗೊತ್ತಾಗಿದೆ. ಅವರಿಂದ 30 ಲಕ್ಷ ರು.ಗಿಂತ ಹೆಚ್ಚು ಮೊತ್ತವನ್ನು ವಶಕ್ಕೆ ಪಡೆದುಕೊಳ್ಳಾಗಿದೆ.

ವಿಜಯಪುರದಲ್ಲಿ ಮೈತ್ರಿ ಅಭ್ಯರ್ಥಿ ಡಾ.ಸುನೀತಾ ಚವ್ಹಾಣ್‌ ಬೆಂಬಲಿಗರ ಸ್ಥಳಗಳ ಮೇಲೆ ಕಾರ್ಯಾಚರಣೆ ನಡೆಸಲಾಗಿದೆ. ಸುನಿತಾ ಚವ್ಹಾಣ್‌ ಪತಿ ದೇವಾನಂದ ಚವ್ಹಾಣ್‌ ಅಳಿಯ ರಾಮಚಂದ್ರ ದೊಡಮನಿ, ಅವರ ಆಪ್ತ ದೇವಪ್ಪ ತದ್ದೇವಾಡಿ ಅವರಿಗೆ ಸೇರಿದ ಸ್ಥಳಗಳ ಮೇಲೆ ದಾಳಿ ನಡೆಸಲಾಗಿದೆ.

ಅಂತೆಯೇ ವಿಜಯಪುರದಲ್ಲಿ ನಡೆದ ಇನ್ನೊಂದು ಕಾರ್ಯಾಚರಣೆಯಲ್ಲಿ 10 ಲಕ್ಷ ರು. ನಗದು ವಶಕ್ಕೆ ಪಡೆದು ಮುಂದಿನ ಕ್ರಮ ಜರುಗಿಸಲಾಗಿದೆ ಎಂದು ಐಟಿ ಇಲಾಖೆ ತಿಳಿಸಿದೆ.

Follow Us:
Download App:
  • android
  • ios