ಬೆಂಗಳೂರು[ಮಾ.17]: ಕರ್ನಾಟಕದ ಚುನಾವಣಾ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಎಂಟು ಲೋಕಸಭೆ ಕ್ಷೇತ್ರಗಳ ವಿದ್ಯು ನ್ಮಾನ ಮತಯಂತ್ರ (ಇವಿಎಂ)ದಲ್ಲಿ ಕಾಂಗ್ರೆಸ್ ಪಕ್ಷದ ಹಸ್ತದ ಚಿಹ್ನೆ ಇಲ್ಲದೆಯೇ ಲೋಕಸಭಾ ಚುನಾವಣೆಗೆ ಮತದಾನ ನಡೆಯಲಿದೆ.

ಅಂದಹಾಗೆ ಇದು ಮೈತ್ರಿಯ ಫಲ. ಕರ್ನಾಟಕ ಅಸ್ತಿತ್ವಕ್ಕೆ ಬಂದ ನಂತರ ನಡೆದ ಎಲ್ಲಾ ಚುನಾವಣೆಗಳಲ್ಲೂ ಕಾಂಗ್ರೆಸ್ ಪಕ್ಷದ ಗುರುತು ಮತಪತ್ರ ಹಾಗೂ ಅನಂತರದ ಮತಯಂತ್ರಗಳಲ್ಲಿ ಅವಿಭಾಜ್ಯ ಅಂಗದಂತೆ ಹಸ್ತದ ಚಿಹ್ನೆ ಇತ್ತು. ಕೆಲ ಸಂದರ್ಭಗಳಲ್ಲಿ ಮಾತ್ರ ಮಿತ್ರ ಪಕ್ಷಗಳಿಗಾಗಿ ಕ್ಷೇತ್ರ ಬಿಟ್ಟುಕೊಟ್ಟಾಗ ನಿರ್ದಿಷ್ಟ ಕ್ಷೇತ್ರದಲ್ಲಿ ಕಾಂಗ್ರೆಸ್ ಚಿಹ್ನೆ ಇಲ್ಲದೇ ಮತದಾನ ನಡೆದಿರುವುದು ಇದೆ.

ಆದರೆ, ಇದೇ ಮೊದಲ ಬಾರಿಗೆ ರಾಜ್ಯದ ಎಂಟು ಲೋಕಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷ ಕಣದಲ್ಲೇ ಇರುವುದಿಲ್ಲ. ೧೯೭೮ರಲ್ಲಿ ಮಾಜಿ ಪ್ರಧಾನಿ ದಿವಂಗತ ಇಂದಿರಾ ಗಾಂಧಿ ಅವರು ಸ್ಪರ್ಧಿಸಿದ್ದ ಚಿಕ್ಕಮಗಳೂರು ಕ್ಷೇತ್ರ ಅಂದರೆ ಈಗಿನ ಉಡುಪಿ ಚಿಕ್ಕಮಗಳೂರು ಕ್ಷೇತ್ರ ಹಾಗೂ ಹಾಲಿ ಸಂಸದರನ್ನು ಹೊಂದಿದ್ದ ತುಮ ಕೂರು ಕ್ಷೇತ್ರದಲ್ಲೂ ಹಸ್ತ ಚಿಹ್ನೆ ಕಾಣಸಿಗದು.

ಈ 2 ಕ್ಷೇತ್ರ ಸೇರಿದಂತೆ ಮೈತ್ರಿ ಧರ್ಮದ ಪ್ರಕಾರ ಜೆಡಿಎಸ್‌ಗೆ ಬಿಟ್ಟುಕೊಟ್ಟಿರುವ 8 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಕಣಕ್ಕಿಳಿಯದ ಕಾರಣ ಆ ಎಂಟೂ ಕ್ಷೇತ್ರಗಳ ಮತದಾನ ಕೇಂದ್ರಗಳಲ್ಲಿ ಅಳವಡಿಸಲಾಗುವ ಇವಿಎಂಗಳಲ್ಲಿ ಕಾಂಗ್ರೆಸ್‌ನ ಹಸ್ತ ಚಿಹ್ನೆ ಇರುವುದಿಲ್ಲ. ಕಾಂಗ್ರೆಸ್ ಮೈತ್ರಿಯ ಪರಿಣಾಮವಾಗಿ ಉಡುಪಿ- ಚಿಕ್ಕಮಗಳೂರು, ತುಮಕೂರು, ಉತ್ತರ ಕನ್ನಡ, ವಿಜಯಪುರ, ಹಾಸನ, ಮಂಡ್ಯ, ಬೆಂಗಳೂರು ಉತ್ತರ ಮತ್ತು ಶಿವಮೊಗ್ಗ ಕ್ಷೇತ್ರಗಳನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟಿದೆ. ಹಾಗಾಗಿ ಆ ಕ್ಷೇತ್ರಗಳಲ್ಲಿ ಕಾಂಗ್ರೆಸ್ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸದೆ ಜೆಡಿಎಸ್ ಅಭ್ಯರ್ಥಿಗಳನ್ನು ಬೆಂಬಲಿಸುತ್ತಿದೆ.

ಹಾಗಾಗಿ ಆ ಎಂಟೂ ಕ್ಷೇತ್ರಗಳ ಚುನಾವಣಾ ಇವಿಎಂಗಳಲ್ಲಿ ಕಾಂಗ್ರೆಸ್ ಚಿಹ್ನೆ ಇರುವುದಿಲ್ಲ. ನಿಯಮಾನುಸಾರ ಯಾವುದೇ ಕ್ಷೇತ್ರದಲ್ಲಿ ಚುನಾವಣೆಗೆ ಸ್ಪರ್ಧಿಸದ ಪಕ್ಷದ ಚಿಹ್ನೆಯನ್ನು ಇವಿಎಂ ಯಂತ್ರದಲ್ಲಿ ನೀಡುವಂತಿಲ್ಲ. ಅದರಂತೆ, ಚುನಾವಣಾ ಆಯೋಗ ಎಲ್ಲೆಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಸ್ಪರ್ಧಿಸುವುದಿಲ್ಲವೋ ಆ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ನ ಹಸ್ತ ಚಿಹ್ನೆಯನ್ನು ಇವಿಎಂನಲ್ಲಿ ಇರಿಸುವುದಿಲ್ಲ. ಜೆಡಿಎಸ್ ಸ್ಪರ್ಧಿಸದ 20 ಕ್ಷೇತ್ರಗಳಲ್ಲಿ ಜೆಡಿಎಸ್‌ನ ಚಿಹ್ನೆಯೂ ಇವಿಎಂಗಳಲ್ಲಿ ಇರುವುದಿಲ್ಲ.