ಬೆಂಗಳೂರು :  ರಾಜ್ಯದಲ್ಲಿ ಕಾಂಗ್ರೆಸ್‌ ಹಾಗೂ ಜೆಡಿಎಸ್‌ನ ಚುನಾವಣಾ ಪೂರ್ವ ಮೈತ್ರಿಯು ಗುರುವಾರ ನಡೆದ ಮತದಾನದ ವೇಳೆ ಕುತೂಹಲಕರ ಬೆಳವಣಿಗೆಗೆ ಸಾಕ್ಷಿಯಾಯಿತು. ಅದು- ಕಾಂಗ್ರೆಸ್‌ ಹಾಗೂ ಜೆಡಿಎಸ್‌ನ ಕೆಲ ಘಟಾನುಘಟಿ ನಾಯಕರು ಇದೇ ಮೊದಲ ಬಾರಿಗೆ ತಾವು ಪ್ರತಿನಿಧಿಸುವ ಪಕ್ಷಕ್ಕೆ ಮತ ಹಾಕುವ ಅವಕಾಶದಿಂದ ವಂಚಿತರಾಗಿದ್ದು!

ಹೌದು, ಕಾಂಗ್ರೆಸ್‌ ಹಾಗೂ ಜೆಡಿಎಸ್‌ ವರಿಷ್ಠರು ಪರಿಶ್ರಮದಿಂದ ಕಟ್ಟಿದ ಪಕ್ಷವನ್ನು ಬಿಟ್ಟು ದಶಕಗಳ ಕಾಲ ರಾಜಕೀಯ ವೈರತ್ವ ಬೆಳೆಸಿಕೊಂಡಿದ್ದ ಪಕ್ಷಗಳ ಅಭ್ಯರ್ಥಿಗೆ ಮತ ಚಲಾಯಿಸುವ ಅನಿವಾರ್ಯತೆ ನಿರ್ಮಾಣ ಆಗಿತ್ತು.

ಮೈತ್ರಿ ಧರ್ಮದ ಅನಿವಾರ್ಯತೆಯ ಭಾಗವಾಗಿ ದಶಕಗಳಿಂದ ಕಾಂಗ್ರೆಸ್‌ ವಿರುದ್ಧವೇ ಹೋರಾಡುತ್ತ ಬಂದಿರುವ ಹಾಲಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್‌ಗೆ ಮತಹಾಕಲು ಅವಕಾಶವಿರಲಿಲ್ಲ. ಏಕೆಂದರೆ, ಅಲ್ಲಿ ಮೈತ್ರಿಕೂಟವು ಕಾಂಗ್ರೆಸ್‌ನ ಡಿ.ಕೆ.ಸುರೇಶ್‌ ಅವರನ್ನು ಅಭ್ಯರ್ಥಿಯಾಗಿಸಿತ್ತು. ಅಲ್ಲಿ ಕುಮಾರಸ್ವಾಮಿ ಮೈತ್ರಿಕೂಟಕ್ಕೆ ಮತ ಚಲಾಯಿಸಿದ್ದರೆ ಅದು ಕಾಂಗ್ರೆಸ್ಸಿನ ಅಭ್ಯರ್ಥಿಗೆ ಬಿದ್ದಿರುತ್ತದೆ. ಅದೇ ರೀತಿ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್‌ ಅವರಿಗೂ ಸ್ವಕ್ಷೇತ್ರ ತುಮಕೂರಿನಲ್ಲಿ ಕಾಂಗ್ರೆಸ್‌ಗೆ ಮತ ಚಲಾಯಿಸುವ ಅವಕಾಶವಿರಲಿಲ್ಲ. ಮೈತ್ರಿಕೂಟದಿಂದ ದೇವೇಗೌಡರು ಅಭ್ಯರ್ಥಿಯಾದ ಕಾರಣ ಅವರ ಮತ ದೊಡ್ಡಗೌಡರಿಗೆ ಒಲಿದಿರುವ ಸಾಧ್ಯತೆಯಿದೆ.

ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌. ವಿಶ್ವನಾಥ್‌ ಅವರು ಮೈತ್ರಿಕೂಟಕ್ಕೆ ಮತ ಹಾಕಿದ್ದರೆ ಅದು ಕಾಂಗ್ರೆಸ್ಸಿನ ಅಭ್ಯರ್ಥಿ ಸಿ.ಎಚ್‌. ವಿಜಯಶಂಕರ್‌ ಅವರಿಗೆ ಬಿದ್ದಿರುತ್ತದೆ.

ಕುಟುಂಬದವರಿಂದಲೂ ಮೈತ್ರಿಗೆ ಮತ:

ಘಟಾನುಘಟಿ ನಾಯಕರು ಮಾತ್ರವಲ್ಲ ಅವರ ಕುಟುಂಬವೂ ಕೂಡ ಮೈತ್ರಿ ಧರ್ಮ ಪಾಲಿಸಿದ್ದರೆ ರಾಜಕೀಯ ವಿರೋಧಿಯಾಗಿದ್ದವರಿಗೇ ಮತದಾನ ಮಾಡಿರುತ್ತದೆ.

ಕುಮಾರಸ್ವಾಮಿ ಅವರ ಪತ್ನಿ ಹಾಗೂ ರಾಮನಗರ ಜೆಡಿಎಸ್‌ ಶಾಸಕಿ ಅನಿತಾ ಕುಮಾರಸ್ವಾಮಿ, ಪುತ್ರ ಹಾಗೂ ಮಂಡ್ಯಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ನಿಖಿಲ್‌ ಕುಮಾರಸ್ವಾಮಿ ಅವರು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ರಾಮನಗರ ತಾಲೂಕಿನ ಕೇತಗಾನಹಳ್ಳಿ ಮತಗಟ್ಟೆಸಂಖ್ಯೆ 235ರಲ್ಲಿ ಮತ ಚಲಾಯಿಸಿದರು. ಈ ವೇಳೆ ಬೆಂಗಳೂರು ಗ್ರಾಮಾಂತರ ಮೈತ್ರಿ ಅಭ್ಯರ್ಥಿ ಕಾಂಗ್ರೆಸ್‌ನ ಡಿ.ಕೆ.ಸುರೇಶ್‌ ಕೂಡ ಹಾಜರಿದ್ದರು. ಇದೇ ವೇಳೆ ದಶಕಗಳಿಂದ ಡಿ.ಕೆ.ಶಿವಕುಮಾರ್‌ ಕುಟುಂಬದ ವಿರುದ್ಧ ಹೋರಾಡುತ್ತಾ ಬಂದಿರುವ ಪಿ.ಜಿ.ಆರ್‌. ಸಿಂಧ್ಯಾ ಅವರೂ ದೊಡ್ಡಮರಳವಾಡಿಯಲ್ಲಿ ಮತ ಚಲಾಯಿಸಿದ್ದು, ಮೈತ್ರಿ ಪಕ್ಷಕ್ಕೆ ಮತ ಹಾಕಿದ್ದರೆ ಅದು ಕಾಂಗ್ರೆಸ್‌ ಪಾಲಾಗಿರುತ್ತದೆ.

ಉಳಿದಂತೆ ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡರ ಗೆಲುವಿಗಾಗಿ ದುಡಿಯುತ್ತಿರುವ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್‌ ಅವರು ತುಮಕೂರಿನ ಸಿದ್ದಾರ್ಥನಗರದ ಸರ್ಕಾರಿ ಶಾಲೆಯಲ್ಲಿ ಪತ್ನಿ ಕನ್ನಿಕಾ ಪರಮೇಶ್ವರ್‌ ಅವರೊಂದಿಗೆ ಮತ ಚಲಾಯಿಸಿದರು. ವಿಚಿತ್ರವೆಂದರೆ, ತುಮಕೂರಿನ ಹಾಲಿ ಕಾಂಗ್ರೆಸ್‌ ಸಂಸದ ಮುದ್ದಹನುಮೇಗೌಡ ಅವರೂ ಸಹ ಮತ ಚಲಾಯಿಸಿದ್ದಾರೆ. ಒಂದು ವೇಳೆ ಅವರು ಮೈತ್ರಿ ಧರ್ಮ ಪಾಲಿಸಿದ್ದರೆ, ಯಾರಿಂದಾಗಿ ತಮಗೆ ಟಿಕೆಟ್‌ ತಪ್ಪಿತೋ ಅವರಿಗೆ ಅರ್ಥಾತ್‌ ದೇವೇಗೌಡರಿಗೆ ಮತದಾನ ಮಾಡಿರುತ್ತಾರೆ.

ಕಾಂಗ್ರೆಸ್‌ ಘಟಾನುಘಟಿಗಳಿಂದ ಜೆಡಿಎಸ್‌ಗೆ ಮತ:

ಕಾಂಗ್ರೆಸ್‌ನ ಹಿರಿಯ ನಾಯಕ ಆಸ್ಕರ್‌ ಫರ್ನಾಂಡಿಸ್‌ ಅವರು ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿರುವ ಪ್ರಮೋದ್‌ ಮಧ್ವರಾಜ್‌ಗೆ ಬೆಂಬಲ ಸೂಚಿಸಿದ್ದಾರೆ. ಕೆಪಿಸಿಸಿ ಉಪಾಧ್ಯಕ್ಷರು ಹಾಗೂ ಹಿರಿಯ ನಾಯಕರಾಗಿರುವ ಬಿ.ಎಲ್‌. ಶಂಕರ್‌, ಹಿರಿಯ ನಾಯಕಿ ಮೋಟಮ್ಮ ಅವರು ಚಿಕ್ಕಮಗಳೂರಿನಲ್ಲಿ ಮತ ಚಲಾಯಿಸಿದ್ದು, ಮೈತ್ರಿ ಧರ್ಮ ಪಾಲಿಸಿದ್ದರೆ ಜೆಡಿಎಸ್‌ಗೆ ಮತ ಚಲಾಯಿಸಿರುತ್ತಾರೆ.

ಉಪಸಭಾಧ್ಯಕ್ಷರ ಮತ ಕಾಂಗ್ರೆಸ್‌ಗೆ?

ಕೋಲಾರ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿಯಾಗಿ ಕಾಂಗ್ರೆಸ್‌ನ ಕೆ.ಎಚ್‌.ಮುನಿಯಪ್ಪ ಸ್ಪರ್ಧಿಸಿದ್ದಾರೆ. ಜೆಡಿಎಸ್‌ನ ಶಿಡ್ಲಘಟ್ಟಶಾಸಕ ಹಾಗೂ ವಿಧಾನಸಭೆ ಉಪಾಧ್ಯಕ್ಷರಾಗಿರುವ ಜೆ.ಕೆ.ಕೃಷ್ಣಾರೆಡ್ಡಿ ಮೈತ್ರಿ ಧರ್ಮ ಪಾಲಿಸಿದ್ದರೆ ಅವರ ಮತ ಕಾಂಗ್ರೆಸ್‌ಗೆ ಬಿದ್ದಿರುತ್ತದೆ.

ಉಳಿದಂತೆ 2018ರ ವಿಧಾನಸಭೆ ಚುನಾವಣೆಯಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ತೊಡೆ ತಟ್ಟಿಗೆದ್ದಿದ್ದ ಚಾಮುಂಡೇಶ್ವರಿ ಶಾಸಕ ಹಾಗೂ ಸಚಿವ ಜಿ.ಟಿ. ದೇವೇಗೌಡ ಅವರು ಮೈತ್ರಿ ಧರ್ಮ ಪಾಲಿಸಿದ್ದರೆ ಮೈಸೂರು ಕಾಂಗ್ರೆಸ್‌ ಅಭ್ಯರ್ಥಿ ಸಿ.ಎಚ್‌. ವಿಜಯಶಂಕರ್‌ಗೆ ಮತ ಹಾಕಿರುವ ಸಾಧ್ಯತೆಯಿದೆ.

ರಮ್ಯಾ ಮತ ಮತ್ತೆ ಮಿಸ್‌

ಎಐಸಿಸಿ ಮಾಧ್ಯಮ ವಿಭಾಗದ ಮುಖ್ಯಸ್ಥರಾದ ರಮ್ಯಾ ಅವರೂ ಜೆಡಿಎಸ್‌ನ ಅಭ್ಯರ್ಥಿ ನಿಖಿಲ್‌ ಕುಮಾರಸ್ವಾಮಿ ಅವರಿಗೆ ಮತದಾನ ಮಾಡುವ ಅನಿವಾರ್ಯತೆ ಎದುರಾಗಿತ್ತು. ಆದರೆ ಈ ಬಾರಿಯೂ ಅವರು ಮತದಾನದಲ್ಲಿ ಭಾಗವಹಿಸಿಲ್ಲ. ಹೀಗಾಗಿ ತಮ್ಮನ್ನು ಸೋಲಿಸಿದ್ದ ಪಕ್ಷಕ್ಕೆ ಮತ ಚಲಾಯಿಸುವ ಅನಿವಾರ್ಯತೆಯಿಂದ ತಪ್ಪಿಸಿಕೊಂಡಿದ್ದಾರೆ.

ಸಿದ್ದು, ಗೌಡ, ರೇವಣ್ಣ, ದಿನೇಶ್‌ ‘ಪಾರು’

ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌, ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡ, ಸಚಿವ ಎಚ್‌.ಡಿ. ರೇವಣ್ಣ ಅವರಿಗೆ ಮಾತ್ರ ಅನ್ಯ ಪಕ್ಷಕ್ಕೆ ಮತ ಹಾಕುವ ಅನಿವಾರ್ಯ ಪರಿಸ್ಥಿತಿ ಎದುರಾಗಿಲ್ಲ. ದಿನೇಶ್‌ ಗುಂಡೂರಾವ್‌ ಅವರು ಕಾಂಗ್ರೆಸ್‌ಗೆ ಮತ ಹಾಕಲು ಬೆಂಗಳೂರು ಉತ್ತರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಇದ್ದಾರೆ. ಸಿದ್ದರಾಮಯ್ಯ ಅವರಿಗೆ ಮೈಸೂರಿನಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯೇ ಇದ್ದಾರೆ. ದೇವೇಗೌಡ ಹಾಗೂ ಎಚ್‌.ಡಿ. ರೇವಣ್ಣ ಅವರು ಹಾಸನದಲ್ಲಿ ತಮ್ಮ ಪಕ್ಷದ ಅಭ್ಯರ್ಥಿಯನ್ನು ಹೊಂದಿದ್ದಾರೆ.

ಯಾರ್ಯಾರು ಹೀಗೆ?

1. ಎಚ್‌.ಡಿ.ಕುಮಾರಸ್ವಾಮಿ: ಬೆಂಗಳೂರು ಗ್ರಾಮಾಂತರದಲ್ಲಿ ಕಾಂಗ್ರೆಸ್‌ನ ಡಿ.ಕೆ.ಸುರೇಶ್‌ ಮೈತ್ರಿ ಅಭ್ಯರ್ಥಿ. ಅದೇ ಕ್ಷೇತ್ರದ ಮತದಾರರಾಗಿರುವ ಎಚ್‌ಡಿಕೆ ಮಾತ್ರವಲ್ಲ, ಶಾಸಕಿಯೂ ಆಗಿರುವ ಪತ್ನಿ ಅನಿತಾ, ಮಂಡ್ಯ ಅಭ್ಯರ್ಥಿಯಾಗಿರುವ ಪುತ್ರ ನಿಖಿಲ್‌ ಮತಗಳು ಜೆಡಿಎಸ್‌ಗೆ ಇಲ್ಲ.

2. ಡಾ. ಜಿ.ಪರಮೇಶ್ವರ್‌: ತುಮಕೂರಿನಲ್ಲಿ ಜೆಡಿಎಸ್‌ ವರಿಷ್ಠ, ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಮೈತ್ರಿ ಅಭ್ಯರ್ಥಿ. ಹಾಗಾಗಿ, ಅದೇ ಲೋಕಸಭಾ ಕ್ಷೇತ್ರದ ಮತದಾರರಾಗಿರುವ ಉಪಮುಖ್ಯಮಂತ್ರಿ ಡಾ

ಜಿ.ಪರಮೇಶ್ವರ್‌ ಅವರು ತಮ್ಮ ಮತವನ್ನು ಕಾಂಗ್ರೆಸ್‌ಗೆ ಚಲಾಯಿಸಲು ಆಗಲಿಲ್ಲ.

3. ಎಚ್‌.ವಿಶ್ವನಾಥ್‌: ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಸಿ.ಎಚ್‌.ವಿಜಯಶಂಕರ್‌ ಮೈತ್ರಿ ಪಕ್ಷಗಳ ಅಭ್ಯರ್ಥಿ. ಹಾಗಾಗಿ, ಅದೇ ಕ್ಷೇತ್ರದ ಮತದಾರರಾಗಿರುವ ಜೆಡಿಎಸ್‌ ರಾಜ್ಯಾಧ್ಯಕ್ಷ ಅಡಗೂರು ಎಚ್‌.ವಿಶ್ವನಾಥ್‌ ಅವರು ಜೆಡಿಎಸ್‌ಗೆ ಮತ ಚಲಾಯಿಸಲು ಸಾಧ್ಯವಾಗಲಿಲ್ಲ.

4. ಜೆ.ಕೆ.ಕೃಷ್ಣಾ ರೆಡ್ಡಿ: ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಕೆ.ಎಚ್‌.ಮುನಿಯಪ್ಪ ಮೈತ್ರಿ ಅಭ್ಯರ್ಥಿ. ಹಾಗಾಗಿ, ಜೆಡಿಎಸ್‌ ಶಾಸಕರೂ ಆಗಿರುವ ವಿಧಾನಸಭೆಯ ಉಪಾಧ್ಯಕ್ಷರಾದ ಜೆ.ಕೆ.ಕೃಷ್ಣಾ ರೆಡ್ಡಿ ಅವರು ತಮ್ಮ ಪಕ್ಷಕ್ಕೆ ಮತ ಚಲಾಯಿಸಲು ಸಾಧ್ಯವಾಗಿರುವುದಿಲ್ಲ.