ಬೆಂಗಳೂರು :  ತುಮಕೂರಿನಲ್ಲಿ ಸ್ಪರ್ಧಿಸಿರುವ ದೇವೇಗೌಡರು ಸೋಲುವುದು ಖಚಿತ. ಹಿಂದೆ ಜೆಡಿಎಸ್‌ನಲ್ಲಿ ಅಪ್ಪ- ಮಕ್ಕಳ ರಾಜಕೀಯವಿತ್ತು. ಇದೀಗ ಕುಟುಂಬದ ಎಲ್ಲ ಸದಸ್ಯರನ್ನು ಸಂಸದರನ್ನಾಗಿಸಲು ದೇವೇಗೌಡರು ಮುಂದಾಗಿದ್ದಾರೆ. ಪ್ರಜ್ಞಾವಂತ ಜನರು ಎಲ್ಲವನ್ನೂ ವೀಕ್ಷಿಸುತ್ತಿದ್ದಾರೆ. ಜೆಡಿಎಸ್-ಕಾಂಗ್ರೆಸ್‌ನ ಮೈತ್ರಿ ಕೂಟಕ್ಕೆ ತಕ್ಕ ಉತ್ತರ ನೀಡುತ್ತಾರೆ ಎಂಬ ವಿಶ್ವಾಸವಿದೆ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.

ನಗರದಲ್ಲಿ ಮಂಗಳವಾರ ಪಕ್ಷದ ಕಾರ್ಯಕರ್ತರ ಬಹಿರಂಗ ಸಭೆಯಲ್ಲಿ ಮಾತನಾಡಿ, ಮಂಡ್ಯದಿಂದ ಸ್ಪರ್ಧಿಸಿರುವ ಸುಮಲತಾ ಅಂಬರೀಷ್ ಬಗ್ಗೆ ಕುಮಾರಸ್ವಾಮಿ ಹಗುರವಾಗಿ ಮಾತನಾಡುತ್ತಿದ್ದಾರೆ. ಜಾತಿ ವಿಷ ಬೀಜ ಬಿತ್ತುವ ಪ್ರಯತ್ನ ಮಾಡುತ್ತಿದ್ದಾರೆ. ಮಹಿಳೆ ಬಗ್ಗೆ ಕನಿಷ್ಠವಾಗಿ ಮಾತನಾಡುವುದುಎಷ್ಟು ಸರಿ ಎಂದು ಪ್ರಶ್ನಿಸಿದರಲ್ಲದೆ, ರಾಹುಲ್ ಗಾಂಧಿಯವರು ಚುನಾವಣೆಯಲ್ಲಿ ಸುಳ್ಳು ಭರವಸೆಗಳನ್ನು ನೀಡುವ ಮೂಲಕ ಜನರನ್ನು ವಂಚಿಸಲು ಹೊರಟಿದ್ದಾರೆ ಎಂದರು.

ಪಕ್ಷದ ವರಿಷ್ಠರಿಗೆ ನಾನು 1800 ಕೋಟಿ ಹಣ ವರ್ಗಾವಣೆ ಮಾಡಿದ್ದಾಗಿ ಕಾಂಗ್ರೆಸ್ ಆರೋಪಿಸಿದೆ. ಡೈರಿ ಬಾಂಬ್ ಸಿಡಿಸಿದ್ದಾಗಿ ಹೇಳುತ್ತಿದೆ. ತನಿಖೆ ನಡೆಸಿ ಸಾಬೀತುಪಡಿಸಿದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆಂದು ಸವಾಲು ಹಾಕಿದರು. ಕಾಂಗ್ರೆಸ್ಸಿಗರಿಗೆ ಬಿಜೆಪಿ ನಾಯಕರ ವಿರುದ್ಧ ಆರೋಪ ಮಾಡಲು ಬೇರೇನೂ ಸಿಕ್ಕಿಲ್ಲ. ಹೀಗಾಗಿ ಮನಸ್ಸಿಗೆ ಬಂದಂತೆ ಮಾತನಾಡು ತ್ತಿದ್ದಾರೆ. ಕಾಂಗ್ರೆಸ್ ನಾಯಕರಿಗೆ ಇದೇನು ಹೊಸದಲ್ಲ. ಈ
ಹಿಂದಿನಿಂದಲೂ ಹುರುಳಿಲ್ಲದ ಆರೋಪ ಮಾಡಿಕೊಂಡೇ ಬಂದಿದ್ದಾರೆ. ದೇಶದ ಜನತೆ ಕಾಂಗ್ರೆಸ್ ಅನ್ನು ಅಧಿಕಾರದಿಂದ ದೂರ ಇಡಲು ನಿರ್ಧರಿಸಿದ್ದು, ಬಿಜೆಪಿ ೩೦೦ಕ್ಕೂ ಹೆಚ್ಚು ಸ್ಥಾನ ಪಡೆದು ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗುವುದು ಖಚಿತ ಎಂದು ಯಡಿಯೂರಪ್ಪ ತಿಳಿಸಿದರು.