ಎಂ.ಅಫ್ರೋಜ್ ಖಾನ್,  ಕನ್ನಡಪ್ರಭ

ಕ್ಷೇತ್ರ ಸಮೀಕ್ಷೆ: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ

ರಾಮನಗರ[ಏ.11]: ಕ್ಷೇತ್ರ ಮರು ವಿಂಗಡಣೆ ವೇಳೆ ಕನಕಪುರ ಅಸ್ತಿತ್ವ ಕಳೆದುಕೊಂಡ ಹಿನ್ನೆಲೆಯಲ್ಲಿ ಮೈದಳೆದ ಕ್ಷೇತ್ರ ಬೆಂಗಳೂರು ಗ್ರಾಮಾಂತರ. ಬೆಂಗಳೂರು ನಗರ, ರಾಮನಗರ, ತುಮಕೂರು ಜಿಲ್ಲೆಗಳಲ್ಲಿ ಈ ಕ್ಷೇತ್ರ ಹಬ್ಬಿಕೊಂಡಿದೆ. ಇಲ್ಲಿನ ರಾಜಕಾರಣದ ಎರಡು ಮುಖ್ಯ ಗುಣಲಕ್ಷಣವೆಂದರೆ, ಸಮಾನ ಶತ್ರು ನಿಗ್ರಹಕ್ಕೆ ವಿರೋಧಿಗಳ ಹೊಂದಾಣಿಕೆ ಮತ್ತು ವೈಯಕ್ತಿಕ ವರ್ಚಸ್ಸು. ಈ ಜಿಲ್ಲೆಯ ಸಂಪೂರ್ಣ ರಾಜಕಾರಣ ತ್ರಿಮೂರ್ತಿಗಳ (ಎಚ್ .ಡಿ. ಕುಮಾರಸ್ವಾಮಿ, ಡಿ.ಕೆ. ಶಿವಕುಮಾರ್ ಮತ್ತು ಸಿ.ಪಿ. ಯೋಗೇಶ್ವರ್) ನಡುವೆ ಗಿರಕಿ ಹೊಡೆಯುತ್ತದೆ.

ಈ ತ್ರಿಮೂರ್ತಿಗಳು ಪರಸ್ಪರ ಹೊಂದಾಣಿಕೆ ಆಧಾರ ದಲ್ಲೇ ಹಲವು ವರ್ಷಗಳಿಂದಲೂ ಯುದ್ಧ ಗೆಲ್ಲುತ್ತಾ ಬಂದಿದ್ದಾರೆ ಎಂಬ ಮಾತು ರಾಜ್ಯ ರಾಜಕಾರಣದಲ್ಲಿ ಜನಜನಿತವಾಗಿದೆ. ಈ ಹಿಂದಿನ ಸಂಸತ್ ಚುನಾವಣಾ ಫಲಿತಾಂಶಗಳೂ ಇದನ್ನೇ ಹೇಳುತ್ತ

ಎಚ್‌ಡಿಕೆ, ಡಿಕೆಶಿ-ಯೋಗಿ ಅಧಿಪತ್ಯ ಕದನ

ಈ ಹಿಂದೆ ರಾಜಕೀಯ ಶತ್ರುಗಳಾಗಿದ್ದು, ಈಗ ಜೋಡೆತ್ತುಗಳು ಎಂದು ಬಿಂಬಿಸಿಕೊಳ್ಳುತ್ತಿರುವ ಮುಖ್ಯಮಂತ್ರಿ ಕುಮಾರ ಸ್ವಾಮಿ, ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಮತ್ತು ‘ಸೈನಿಕ’ ಖ್ಯಾತಿಯ ಬಿಜೆಪಿ ನಾಯಕ, ಮಾಜಿ ಸಚಿವ ಸಿ.ಪಿ. ಯೋಗೇಶ್ವರ್ ನಡುವೆ ಬೆಂಗಳೂರು ಗ್ರಾಮಾಂತರ ಲೋಕ ಸಭಾ ಕ್ಷೇತ್ರದ ಅಧಿಪತ್ಯಕ್ಕಾಗಿ ದೊಡ್ಡ ಹೋರಾಟ ನಡೆದಿರು ವುದು ಚುನಾವಣಾ ಕಣ ರಂಗೇರುವಂತೆ ಮಾಡಿದೆ.

ಹಳೆ ರಾಜಕೀಯ ವೈರತ್ವ ಮರೆತು ಕುಮಾರಸ್ವಾಮಿ ಮತ್ತು ಡಿ.ಕೆ. ಶಿವಕುಮಾರ್ ರಾಜಕಾರಣದ ಜೋಡೆತ್ತು ಆಗಿದ್ದರೆ, ಸಿ.ಪಿ.ಯೋಗೇಶ್ವರ್ ಬಿಜೆಪಿ ಪಾಳೆಯದ ಒಂಟಿ ಸಲಗದಂತಾಗಿದ್ದಾರೆ. ೨೦೧೩ರ ಸಂಸತ್ ಉಪಚುನಾವಣೆ ಹಾಗೂ ೨೦೧೪ರಲ್ಲಿ ನಡೆದ ಲೋಕಸಭೆ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಡಿ.ಕೆ.ಸುರೇಶ್ ಅವರಿಗೆ ಜೆಡಿಎಸ್ ಪ್ರಬಲ ಪೈಪೋಟಿಯೊಡ್ಡಿತ್ತು. ಆಗ ಡಿ.ಕೆ. ಶಿವಕುಮಾರ್ ಅವರು ಸಿ.ಪಿ.ಯೋಗೇಶ್ವರ್ ಬೆಂಬಲ ಪಡೆದೇ ಸಹೋದರನನ್ನು ಗೆಲ್ಲಿಸಿದ್ದರು. ಕಳೆದ ವಿಧಾನಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಕುಮಾರಸ್ವಾಮಿ ಮತ್ತು ಶಿವಕುಮಾರ್ ರಾಜಕೀಯ ವೈಷಮ್ಯವಿದ್ದರೂ ಪರದೆಯ ಹಿಂದೆ ಒಂದಾಗಿ ಚನ್ನಪಟ್ಟಣ ಕ್ಷೇತ್ರದಲ್ಲಿ ಸಿ.ಪಿ. ಯೋಗೇಶ್ವರ್ ಅವರನ್ನು ಮಣಿಸಿ ಹೆಡೆಮುರಿ ಕಟ್ಟಿದ್ದರು. ಈ ಸೋಲಿನಿಂದ ಕಂಗೆಟ್ಟಿದ್ದ ಯೋಗೇಶ್ವರ್ ಸಂಸತ್ ಚುನಾವಣೆಯಲ್ಲಿ ಇಬ್ಬರ ಮೇಲೂ ಪ್ರತೀಕಾರ ತೀರಿಸಿಕೊಳ್ಳಲು ಹವಣಿಸುತ್ತಿದ್ದರು. ಪ್ರಾರಂಭದಲ್ಲಿಯೇ ಬಿಜೆಪಿ ಅಭ್ಯರ್ಥಿಯಾಗಿ ಅಶ್ವತ್ಥ್ ನಾರಾಯಣಗೌಡ ಹೆಸರು ಕೇಳಿ ಬಂದಿತ್ತು. ಆದರೆ, ವೈಯಕ್ತಿಕ ಕಾರಣ ಮುಂದೊಡ್ಡಿ ಅಶ್ವತ್ಥ್ ಹಿಂದೆ ಸರಿದಿದ್ದರು. ನಂತರದಲ್ಲಿ ಯೋಗೇಶ್ವರ್ ಅವರಿಗೆ ಟಿಕೆಟ್ ನೀಡುವ ಪ್ರಯತ್ನ ನಡೆದಿದ್ದವು. ಆದರೆ, ಯೋಗೇಶ್ವರ್ ಸ್ವತಃ ಸ್ಪರ್ಧೆ ಯಿಂದ ಹಿಂದೆ ಸರಿದು, ಪುತ್ರಿ ನಿಶಾ ಪರ ಲಾಬಿ ನಡೆಸಿದ್ದರು. ಅಂತಿಮವಾಗಿ ಬಿಜೆಪಿಯು ವಿಧಾನಪರಿಷತ್ ಮಾಜಿ ಸದಸ್ಯ ಅಶ್ವತ್ಥ್ ನಾರಾಯಣ ಗೌಡ ಅವರನ್ನು ಅಖಾಡಕ್ಕೆ ಇಳಿಸಿ

8ರ ಪೈಕಿ 1 ಕ್ಷೇತ್ರದಲ್ಲಿ ಬಿಜೆಪಿ ಶಾಸಕರು

ಕುಮಾರಸ್ವಾಮಿ ಮತ್ತು ಡಿಕೆಶಿ ಪ್ರಾಬಲ್ಯ ಹೊಂದಿರುವ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ‘ಕಮಲ’ ಅರಳಿಸುವುದು ಅಷ್ಟೊಂದು ಸುಲಭದ ಕೆಲಸವಲ್ಲ. ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಶಾಸಕರು ಇರುವುದನ್ನು ಹೊರತುಪಡಿಸಿದರೆ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ನಗರ ಸ್ಥಳೀಯ ಸಂಸ್ಥೆಗಳಲ್ಲಿಯೂ ‘ಕಮಲ’ ಪಕ್ಷ ತನ್ನ ಅಸ್ತಿತ್ವ ಕಂಡುಕೊಳ್ಳಲು ಸಾಧ್ಯವಾಗಿಲ್ಲ. ಕನಕಪುರ, ಕುಣಿಗಲ್, ಆನೇಕಲ್, ರಾಜರಾಜೇಶ್ವರಿ ನಗರಗಳಲ್ಲಿ ಕಾಂಗ್ರೆಸ್ ಶಾಸಕರಿದ್ದು, ಚನ್ನಪಟ್ಟಣ, ಮಾಗಡಿ, ರಾಮನಗರಗಳಲ್ಲಿ ಜೆಡಿಎಸ್, ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಶಾಸಕರಿದ್ದಾರೆ

ಡಿಕೆಸುಗೆ 5 ಲಕ್ಷ ಲೀಡ್ ಟಾರ್ಗೆಟ್

ಕ್ಷೇತ್ರದಲ್ಲಿ 24.59 ಲಕ್ಷ ಮತದಾರರಿದ್ದು, ಬೆಂಗಳೂರು ನಗರ ಜಿಲ್ಲೆಯ ಮೂರು ವಿಧಾನಸಭಾ ಕ್ಷೇತ್ರಗಳಿಗೆ ಸೇರಿದವರೇ 14 ಲಕ್ಷಕ್ಕೂ ಅಧಿಕ ಮತದಾರರು ಇದ್ದಾರೆ. ಮಹಾನಗರ ವ್ಯಾಪ್ತಿಯಲ್ಲಿ ಪ್ರಧಾನಿ ಮೋದಿ ಮತ್ತು ಬಿಜೆಪಿ ಪರ ಅಲೆಯನ್ನೇ ಅಶ್ವತ್ಥ್ ನಾರಾಯಣ ಗೌಡ ನೆಚ್ಚಿಕೊಂಡಿದ್ದಾರೆ. ಬೆಂಗಳೂರು ನಗರ ಜಿಲ್ಲೆ ಮತದಾರರನ್ನು ಪ್ರಧಾನವಾಗಿಟ್ಟುಕೊಂಡು ಅಶ್ವತ್ಥ್ ನಾರಾಯಣ ಗೌಡ ಅವರಿಗೆ ಬಿಜೆಪಿ ಕೂಡ ಮಣೆ ಹಾಕಿದೆ. ಈ ಬೆನ್ನಲ್ಲೇ ದೋಸ್ತಿ ಪಕ್ಷಗಳು ಗ್ರಾಮೀಣ ಭಾಗದಲ್ಲಿ ದೊಡ್ಡ ಅಂತರದ ಮುನ್ನಡೆ ಸಾಧಿಸಲು ರಣತಂತ್ರ ರೂಪಿಸಿವೆ. ರಾಮನಗರ ಜಿಲ್ಲೆಯ ನಾಲ್ಕು ಕ್ಷೇತ್ರಗಳು ಮತ್ತು ಕುಣಿಗಲ್ ವಿಧಾನಸಭಾ ಕ್ಷೇತ್ರಗಳಿಂದ ಕನಿಷ್ಠ 5 ಲಕ್ಷ ಮತಗಳಷ್ಟು ದೊಡ್ಡ ಮುನ್ನಡೆ ನೀಡಬೇಕು ಎಂದು ಜೆಡಿಎಸ್- ಕಾಂಗ್ರೆಸ್ ಕಾರ್ಯಕರ್ತರಿಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತು ಸಚಿವ ಡಿ.ಕೆ.ಶಿವಕುಮಾರ್ ಕಟ್ಟಾಜ್ಞೆ ಹೊರಡಿಸಿದ್ದಾರೆ. ಭ್ರಷ್ಟಾಚಾರದ ಅಸ್ತ್ರ, ಕ್ರಿಮಿನಲ್ ಕೇಸುಗಳ ಕಂತೆ, ಅಭಿವೃದ್ಧಿ ಲೋಪ, ಸ್ಥಳೀಯರು, ವಲಸಿಗರು ಎಂಬ ಅಂಶ ಚುನಾವಣಾ ವಿಷಯವಾಗಿದೆ.

ದೋಸ್ತಿಗಳ ನಡುವೆ ಇಲ್ಲೀಗ ಕಿತ್ತಾಟ ಇಲ್ಲ

ಲೋಕಸಭೆ ಚುನಾವಣೆ ಘೋಷಣೆಗೂ ಮುನ್ನ ಸಂಸದ ಡಿ.ಕೆ. ಸುರೇಶ್ ಹ್ಯಾಟ್ರಿಕ್ ಗೆಲುವಿನ ಹಾದಿಗೆ ಅಡ್ಡಿಯೇ ಇಲ್ಲ ಎನ್ನುವ ವಾತಾವರಣ ನಿರ್ಮಾಣವಾಗಿತ್ತು. ಆದರೆ, ಪುಲ್ವಾಮಾ ದಾಳಿ, ಅದಕ್ಕೆ ಪ್ರತಿಯಾಗಿ ಪಾಕಿಸ್ತಾನದ ಮೇಲೆ ಭಾರತ ನಡೆಸಿದ ಪ್ರತಿದಾಳಿ ನಂತರದಲ್ಲಿ ದೇಶದ ವಿವಿಧೆಡೆ ಬಿಜೆಪಿ ಪರ ಅಲೆ ಕಂಡುಬರುತ್ತಿದೆ. ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿಯೂ ಪರಿಸ್ಥಿತಿ ಭಿನ್ನವಾಗಿಲ್ಲ. ಹೀಗಾಗಿ ಜಿದ್ದಾಜಿದ್ದಿನ ಸೆಣಸಾಟ ಎದುರಾಗಿದೆ. ಕೇಂದ್ರ ಸರ್ಕಾರದ ಅಭಿವೃದ್ಧಿ ಯೋಜನೆಗಳೇ ತಮ್ಮ ಗೆಲುವಿಗೆ ಶ್ರೀರಕ್ಷೆ ಎಂದು ಅಶ್ವತ್ಥ್ ನಂಬಿ ಕೂತಿದ್ದಾರೆ. ಆಡಳಿತ ವಿರೋಧಿ ಅಲೆಯ ಲಾಭ ಪಡೆಯುವ ಲೆಕ್ಕಾಚಾರದಲ್ಲಿರುವ ಡಿ.ಕೆ. ಸುರೇಶ್ ಅವರಿಗೆ ನಾಲ್ವರು ಕಾಂಗ್ರೆಸ್ ಮತ್ತು ಮೂವರು ಜೆಡಿಎಸ್ ಶಾಸಕರೊಂದಿಗೆ ಮೈತ್ರಿ ಪಕ್ಷಕ್ಕಿರುವ ಭದ್ರನೆಲೆ, ಕಳೆದ ಐದು ವರ್ಷಗಳಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯಗಳು, ದೇವೇಗೌಡ ಹಾಗೂ ಕುಮಾರಸ್ವಾಮಿ ಅವರ ವರ್ಚಸ್ಸಿನ ಮತಗಳು ವರದಾನವಾಗಲಿದೆ. ಜೆಡಿಎಸ್‌ನಲ್ಲಿನ ಭಿನ್ನಮತ ಶಮನಗೊಂಡಿರುವುದು ಅನುಕೂಲಕರವಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಆದರೆ, ನಗರ ಮತದಾ ರರನ್ನು ಓಲೈಸಿಕೊಳ್ಳುವುದು ಸವಾಲಿನ ಪ್ರಶ್ನೆಯಾಗಿದೆ.

ಕಾಂಗ್ರೆಸ್- ಬಿಜೆಪಿ ನಡುವೆ ಹಣಾಹಣಿ

ಕಾಂಗ್ರೆಸ್‌ಗೆ ಕ್ಷೇತ್ರ ಬಿಟ್ಟುಕೊಡುವ ನಿರ್ಧಾರ ಜೆಡಿಎಸ್‌ಗೆ ಹೆಚ್ಚೇನು ನಷ್ಟವಾದಂತೆ ತೋರುತ್ತಿಲ್ಲ. ಏಕೆಂದರೆ ಕಳೆದ ಎರಡು ಚುನಾವಣೆಗಳಲ್ಲಿ ಇಲ್ಲಿ ಪಕ್ಷದ ಹಿಡಿತ ಸಡಿಲ ಗೊಳ್ಳುತ್ತಲೇ ಬಂದಿದೆ. ಕ್ಷೇತ್ರದಲ್ಲಿ ಪ್ರತಿ ಚುನಾವಣೆ ಯಲ್ಲಿಯೂ ತ್ರಿಕೋನ ಹೋರಾಟ ನಡೆಯುತ್ತಿತ್ತು. ಇದರ ಲಾಭ ಪಡೆದು, ಕಾಂಗ್ರೆಸ್ ಇಲ್ಲವೇ ಜೆಡಿಎಸ್ ಜಯ ಗಳಿಸುತ್ತಿದ್ದವು. ಆದರೆ, ಈ ಬಾರಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರ ಹೋರಾಟ ಇದೆ.

ಒಕ್ಕಲಿಗರ ಮತ ವಿಭಜನೆ

ಸಂಭವ ಕ್ಷೇತ್ರದಲ್ಲಿ ಒಕ್ಕಲಿಗರೇ ಬಹುಸಂಖ್ಯಾತರು. ನಂತರದ ಸ್ಥಾನದಲ್ಲಿ ದಲಿತರು ಇದ್ದಾರೆ. ಬಳಿಕ ಲಿಂಗಾಯತರು, ಮುಸ್ಲಿಮರು, ಕುರುಬರು, ಬ್ರಾಹ್ಮಣರು, ಕ್ರಿಶ್ಚಿಯನ್ನರು ಬರುತ್ತಾರೆ. ಮೈತ್ರಿ ಅಭ್ಯರ್ಥಿ ಡಿ.ಕೆ.ಸುರೇಶ್ ಮತ್ತು ಬಿಜೆಪಿ ಅಭ್ಯರ್ಥಿ ಅಶ್ವತ್ಥ ನಾರಾಯಣಗೌಡ ಒಕ್ಕಲಿಗ ಸಮುದಾಯಕ್ಕೆ ಸೇರಿದವರು. ಹೀಗಾಗಿ ಒಕ್ಕಲಿಗ ಮತಗಳು ವಿಭಜನೆಗೊಳ್ಳುವ ಸಾಧ್ಯತೆಗಳು ಹೆಚ್ಚಾಗಿವೆ. ಲಿಂಗಾಯತ ಮತಗಳನ್ನು ಬಿಜೆಪಿ ನಂಬಿಕೊಂಡಿದ್ದರೆ, ಜೆಡಿಎಸ್ ಪಕ್ಷವು ಕಾಂಗ್ರೆಸ್ ಜತೆಗಿರುವ ಕಾರಣ ಅಹಿಂದ ಮತಗಳು ಚದುರಿ ಹೋಗುವುದಿಲ್ಲವೆಂಬ ವಿಶ್ವಾಸದಲ್ಲಿದೆ.

15 ಮಂದಿ ಕಣದಲ್ಲಿ

ಡಿ.ಕೆ. ಸುರೇಶ್ (ಕಾಂಗ್ರೆಸ್), ಅಶ್ವತ್ಥ ನಾರಾಯಣ ಗೌಡ (ಬಿಜೆಪಿ), ಡಾ. ಚೆನ್ನಪ್ಪ ವೈ. ಚಿಕ್ಕಹಾಗಡೆ (ಬಿಎಸ್ಪಿ), ಎನ್. ಕೃಷ್ಣಪ್ಪ (ಪಿರಮಿಡ್ ಪಾರ್ಟಿ ಆಫ್ ಇಂಡಿಯಾ), ಡಿ.ಎಂ. ಮಾದೇಗೌಡ (ರಿಪಬ್ಲಿಕ್ ಸೇನೆ), ಎಂ. ಮಂಜುನಾಥ್ (ಉತ್ತಮ ಪ್ರಜಾಕೀಯ ಪಾರ್ಟಿ), ಟಿ.ಸಿ. ರಮಾ (ಸೋಷಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯಾ - ಕಮ್ಯುನಿಸ್ಟ್), ಡಾ. ಎಂ. ವೆಂಕಟಸ್ವಾಮಿ (ರಿಪಬ್ಲಿಕ್ ಪಾರ್ಟಿ ಆಫ್ ಇಂಡಿಯಾ), ವೆಂಕಟೇಶಪ್ಪ (ಸರ್ವ ಜನತಾ ಪಾರ್ಟಿ), ಈಶ್ವರ, ಬಿ. ಗೋಪಾಲ್, ಎಚ್.ಟಿ. ಚಿಕ್ಕರಾಜು, ಎಂ.ಸಿ.ದೇವರಾಜು, ಜೆ.ಟಿ.ಪ್ರಕಾಶ್, ರಘು ಜಾಣಗೆರೆ (ಪಕ್ಷೇತರರು).

2014ರ ಫಲಿತಾಂಶ

ಡಿ.ಕೆ. ಸುರೇಶ್ (ಕಾಂಗ್ರೆಸ್) 6,52,723

ಮುನಿರಾಜು ಗೌಡ (ಬಿಜೆಪಿ) 4,21,243

ಪ್ರಭಾಕರ್ ರೆಡ್ಡಿ (ಜೆಡಿಎಸ್) 3,17,870

ಗೆಲುವಿನ ಅಂತರ 2,31,480

ಮತದಾರರು:24,56,207| ಪುರುಷ:12,67,379| ಮಹಿಳೆ:11,88,207 | ಇತರೆ:340

ದೇಶದಲ್ಲಿ ಏ.11 ರಿಂದ ಮೇ 19ರವರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ, ಕರ್ನಾಟಕದಲ್ಲಿ 28.