ಶಿರಸಿ : ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವ,  ಉತ್ತರಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅನಂತಕುಮಾರ ಹೆಗಡೆ ನಿವಾಸದ ದೂರವಾಣಿಗೆ ಕರೆ ಮಾಡಿ ಜೀವ ಬೆದರಿಕೆ ಹಾಕಿದ ಘಟನೆ ನಡೆದಿದೆ.

ಸಚಿವರ ಆಪ್ತ ಕಾರ್ಯದರ್ಶಿ ಸುರೇಶ ಶೆಟ್ಟಿ ನೀಡಿರುವ ದೂರಿನಲ್ಲಿ ಇಲ್ಲಿಯ ಕೆ.ಎಚ್.ಬಿ ಕಾಲೋನಿಯ ಸಚಿವ ನಿವಾಸಕ್ಕೆ ಶನಿವಾರ ಮಧ್ಯಾಹ್ನ 12  ಗಂಟೆ ಸುಮಾರಿಗೆ ಕರೆ ಮಾಡಿ ಉರ್ದು ಮಿಶ್ರಿತ ಹಿಂದಿ ಭಾಷೆಯಲ್ಲಿ ಅವಾಚ್ಯ ಶಬ್ದ ಬಳಕೆಯೊಂದಿಗೆ ಸಚಿವರಿಗೆ ಜೀವ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.
 
ಸಚಿವರ ನಿವಾಸದ 08384 - 234337 ಸಂಖ್ಯೆಯ ಸ್ಥಿರ ದೂರವಾಣಿಗೆ 0022330000 ಇಂಟರ್‌ನೆಟ್ ಮೂಲಕ ಕರೆ ಬಂದಿದೆ. ಸಚಿವರ ಪತ್ನಿ ರೂಪಾ ಹೆಗಡೆ ಕರೆ ಸ್ವೀಕರಿಸಿದ್ದಾರೆ. ಈ ವೇಳೆ ಕರೆ ಮಾಡಿದ ವ್ಯಕ್ತಿ ಅನಂತ್ ಕುಮಾರ್ ಹೆಗಡೆ ವಿರುದ್ಧ ಮಾತನಾಡಿದ್ದು, ಕೊಲೆ ಬೆದರಿಕೆ ಒಡ್ಡಿದ್ದಾನೆ ಎನ್ನಲಾಗಿದೆ. 

ಕರೆ ಬಂದ ತಕ್ಷಣ ಭದ್ರತಾ ಸಿಬ್ಬಂದಿಗೆ ಕರೆ ಮಾಡಿದ ಹೆಗಡೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಇದೇ ರೀತಿ ಹಲವಷ್ಟು ಬಾರಿ ಜೀವ ಬೆದರಿಕೆ ಕರೆಗಳು ಬಂದ ಪರಿಣಾಮ ಕೂಡಲೆ ಪೋಲಿಸ್ ಅಧಿಕಾರಿಗಳು ಹೆಚ್ಚಿನ ತನಿಕೆ ನಡೆಸಿ ಕ್ರಮ ಕೈಗೊಳ್ಳಬೇಕೆಂದು ಈ ಬಗ್ಗೆ ಸಚಿವರ ಆಪ್ತ ಸುರೇಶ ಶೆಟ್ಟಿ ಪೊಲೀಸರಿಗೆ ದೂರು ನೀಡಿದ್ದಾರೆ.  ಈ ಸಂಬಂಧ ಇಲ್ಲಿನ ನಗರ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿದೆ.