ಉಡುಪಿ: ತುಮಕೂರು ರೀತಿಯಲ್ಲೇ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲೂ ಜೆಡಿಎಸ್ ಅಭ್ಯರ್ಥಿಗೆ ಬಂಡಾಯದ ಭೀತಿ ಎದುರಾಗಿದೆ. ಕ್ಷೇತ್ರದಿಂದ ಎಐಸಿಸಿ ಸದಸ್ಯ ಅಮೃತ್ ಶೆಣೈ ಪಕ್ಷೇತರರಾಗಿ ಸ್ಪರ್ಧಿಸುವ ಬಗ್ಗೆ ಚಿಂತನೆ ನಡೆಸಿದ್ದಾರೆ. 

ಭಾನುವಾರ ಅಧಿಕೃತವಾಗಿ ನಿರ್ಧಾರ ಪ್ರಕಟಿಸುವ ನಿರೀಕ್ಷೆ ಇದೆ. ಮೈತ್ರಿ ಒಪ್ಪಂದದ ನೆಪದಲ್ಲಿ ಕ್ಷೇತ್ರವನ್ನು ಕೆಪಿಸಿಸಿ  ನಾಯಕರು ಜೆಡಿಎಸ್‌ಗೆ ಬಿಟ್ಟುಕೊಟ್ಟಿದ್ದು, ಇದನ್ನು ಅಮೃತ್ ಶೆಣೈ ಬಹಿರಂಗವಾಗಿಯೇ ವಿರೋಧಿಸಿದ್ದಾರೆ. ಮಾಜಿ ಸಚಿವ ಪ್ರಮೋದ್ ಜೆಡಿಎಸ್ ಟಿಕೆಟ್‌ನಲ್ಲಿ ಸ್ಪರ್ಧಿಸುತ್ತಿರುವ ಹಿನ್ನೆಲೆಯಲ್ಲಿ ಬೇಸರಗೊಂಡ ಒಂದಷ್ಟು ಮಂದಿ ಶೆಣೈ ಅವರಿಗೆ ಪಕ್ಷೇತರರಾಗಿ ಸ್ಪರ್ಧಿಸುವಂತೆ ಮನವಿ ಮಾಡಿದ್ದರು. 

ಏತನ್ಮಧ್ಯೆ, ಪ್ರಮೋದ್ ಕೂಡ ಶೆಣೈ ಮನೆಗೆ ತೆರಳಿ ಮನವೊಲಿಕೆ ಪ್ರಯತ್ನ ಮಾಡಿದ್ದರು. ಆದರೂ ಕಾರ್ಯಕರ್ತರ ಮನೋಬಲ ಕುಂದದಂತೆ ನೋಡಿಕೊಳ್ಳಲು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವ ಚಿಂತನೆ ನಡೆಸಿರುವುದಾಗಿ ಶೆಣೈ ತಿಳಿಸಿದ್ದಾರೆ.