ಬೆಂಗಳೂರು[ಏ.20]: ಕಾಂಗ್ರೆಸ್‌ ಪಕ್ಷದ ಪ್ರಭಾವಿ ನಾಯಕ, ‘ಟ್ರಬಲ್‌ ಶೂಟರ್‌’ ಎಂದೇ ಖ್ಯಾತಿವೆತ್ತ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌ ಲೋಕಸಭಾ ಚುನಾವಣೆಯ ಅಭ್ಯರ್ಥಿಯೇನು ಅಲ್ಲ. ಆದರೂ ಇಡೀ ಚುನಾವಣಾ ಪ್ರಚಾರದ ವೇಳೆ ಹೆಚ್ಚು ಸುದ್ದಿ ಮಾಡಿದ ಹೆಸರು ಡಿ.ಕೆ. ಶಿವಕುಮಾರ್‌.

ಐಟಿ ಪ್ರಕರಣಗಳಿಂದಾಗಿ ತಾವೇ ಸಮಸ್ಯೆಯ ಸುಳಿಯಲ್ಲಿದ್ದರೂ ತಮ್ಮ ಬಿಡು ಬೀಸು ನಾಯಕತ್ವದ ಶೈಲಿಯಿಂದ ಯಾವುದಕ್ಕೂ ಕೇರ್‌ ಮಾಡುವುದಿಲ್ಲ ಎಂದೇ ಬಿಂಬಿಸಲ್ಪಟ್ಟಿದ್ದಾರೆ. ಅಲ್ಲದೆ, ಯಡಿಯೂರಪ್ಪ ಅವರ ಡೈರಿ ರಹಸ್ಯ ವಿಚಾರ ಪ್ರಸ್ತಾಪಿಸುತ್ತಾ, ಲಿಂಗಾಯತ ವಿಚಾರದಲ್ಲಿ ತಮ್ಮ ಅಭಿಪ್ರಾಯ ಹೇಳುತ್ತಾ, ‘ನಾನು ಮುಖ್ಯಮಂತ್ರಿಯಾದರೇ ಹಲವರ ರಹಸ್ಯ ಬಹಿರಂಗವಾಗುತ್ತದೆ’ ಎಂದು ತಮ್ಮ ವಿರೋಧಿಗಳ ಎದೆಯಲ್ಲಿ ಚಳಕು ಮೂಡಿಸುತ್ತಾ ಒಂದಲ್ಲ ಒಂದು ಕಾರಣಕ್ಕೆ ಲೈಮ್‌ಲೈಟ್‌ನಲ್ಲಿ ಇರುತ್ತಾರೆ. ಇಂತಹ ಪವರ್‌ ಫುಲ್‌ ನಾಯಕ ಡಿ.ಕೆ. ಶಿವಕುಮಾರ್‌ ಅವರು ಲೋಕಸಭೆಯ ಎರಡನೇ ಹಂತದ ಚುನಾವಣಾ ಪ್ರಚಾರ ಕೈಗೊಂಡಿದ್ದಾರೆ. ಈ ಹಂತದಲ್ಲಿ ಮೈತ್ರಿ ಧರ್ಮ ಪಾಲನೆ, ತಮ್ಮನ್ನು ಕಾಡಿದ ಐಟಿ ಪ್ರಕರಣಗಳು, ಪ್ರತ್ಯೇಕ ಲಿಗಾಯತ ಧರ್ಮ ವಿಚಾರದಲ್ಲಿ ತಮ್ಮ ಅಭಿಪ್ರಾಯ ಹೇಳಲು ಕಾರಣ ಸೇರಿದಂತೆ ಹತ್ತು ಹಲವು ವಿಚಾರಗಳ ಬಗ್ಗೆ ವಿಶೇಷ ಸಂದರ್ಶನದಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

* ಮೊದಲ ಹಂತದ ಚುನಾವಣೆ ಮುಗಿದಿದೆ. ನೀವ್ಯಾಕೋ ಬಳಲಿದಂತೆ ಕಾಣುತ್ತಿದೆ?

ಹಾಗೇನಿಲ್ಲ. ನಾನು ಯಾವಾಗಲೂ ಚೆನ್ನಾಗಿರುತ್ತೇನೆ. ಆದರೆ, ಲೋಕಸಭಾ ಚುನಾವಣೆ ಅಲ್ವಾ. ಬಿಡುವಿಲ್ಲ, ಸರಿಯಾಗಿ ನಿದ್ರೆ ಇಲ್ಲ. ದಿನಾ ಮಲಗುವ ವೇಳೆಗೆ ರಾತ್ರಿ 2-3 ಗಂಟೆ ಆಗುತ್ತೆ. ಬೆಳಗ್ಗೆ ಮತ್ತೆ 6 ಗಂಟೆಗೇ ಎದ್ದೇಳಬೇಕು. ದೇಹ ದಣಿದಿದೆ.

* ಮೈತ್ರಿ ಧರ್ಮ ಪಾಲನೆ ವಿಚಾರ ನಿಮ್ಮನ್ನ ಸುಸ್ತು ಮಾಡುತ್ತಿರುವಂತಿದೆ?

ಇಲ್ಲ, ಸುಸ್ತೇನೂ ಮಾಡ್ತಿಲ್ಲ. ಕಾಂಗ್ರೆಸ್‌-ಜೆಡಿಎಸ್‌ ಇಬ್ಬರೂ ಒಟ್ಟಾಗಿ ಚುನಾವಣೆ ಎದುರಿಸಲು ಒಪ್ಪಿಕೊಂಡಿದ್ದೇವೆ. ಕಷ್ಟ, ಸುಖ ಎರಡೂ ಇದ್ದೇ ಇರುತ್ತೆ. ಮನಸ್ಸಿದ್ದೆಡೆ ಮಾರ್ಗ, ಭಕ್ತಿ ಇದ್ದೆಡೆ ಭಗವಂತ, ಎಲ್ಲಿ ಶ್ರಮ ಇದೆಯೋ ಅಲ್ಲಿ ಫಲ ಇರುತ್ತೆ ಅನ್ನೋದು ನನ್ನ ಭಾವನೆ.

* ಮೈತ್ರಿ ಕರ್ನಾಟಕದಲ್ಲಿ ಪಕ್ಷಕ್ಕೆ ಎಷ್ಟರ ಮಟ್ಟಿಗೆ ಒಳ್ಳೆಯದು?

ಮೈತ್ರಿ ಇಡೀ ದೇಶಕ್ಕೆ ಒಳ್ಳೆಯದು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಾವು (ಕಾಂಗ್ರೆಸ್‌ನವರು) ಸೋತಿದ್ದೇವೆ. ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ 120 ಸೀಟು ಗೆಲ್ಲುವ ನಿರೀಕ್ಷೆ ಇತ್ತು. ಆದರೆ, ಜನ ನಮ್ಮನ್ನು ಒಪ್ಪಿಕೊಳ್ಳಲಿಲ್ಲ. ಬರೀ 80 ಸೀಟಿಗೆ ತಂದು ನಿಲ್ಲಿಸಿದ್ರು. ಜೆಡಿಎಸ್‌ನವರು ನಾವೇ ಸರ್ಕಾರ ರಚಿಸುತ್ತೇವೆ ಅಂತಿದ್ರು, ಅವರನ್ನೂ ಜನರು ಒಪ್ಪಲಿಲ್ಲ. ಇನ್ನು ಎಲ್ಲ ರೀತಿಯ ಪ್ರಯೋಗ ಮಾಡಿದ ಬಿಜೆಪಿಯವರನ್ನೂ ಜನರು 104ಕ್ಕೆ ಸೀಮಿತಗೊಳಿಸಿದರು. ಯಾರಿಗೂ ಬಹುಮತ ಕೊಡಲಿಲ್ಲ. ಹಾಗಾಗಿ ಬಿಜೆಪಿಯವರನ್ನ ಅಧಿಕಾರದಿಂದ ದೂರ ಇಡಬೇಕೆಂದು ಯಾವ ಷರತ್ತೂ ಇಲ್ಲದೆ ಜೆಡಿಎಸ್‌ನವರಿಗೆ ಬೆಂಬಲ ನೀಡಿದೆವು. ಕುಮಾರಸ್ವಾಮಿ ಅದೃಷ್ಟವಂತರು. ಮುಖ್ಯಮಂತ್ರಿ ಆಗಿ ಸರ್ಕಾರ ರಚಿಸುವ ಅವಕಾಶ ಸಿಕ್ಕಿತು, ಆಡಳಿತ ಮಾಡುತ್ತಿದ್ದಾರೆ. ಇದಕ್ಕೆ ಇಡೀ ದೇಶದ ನಾಯಕರು ಸಾಕ್ಷಿಯಾಗಿ ಮುದ್ರೆ ಒತ್ತಿದ್ದಾರೆ.

* ನಿಮ್ಮಂತೆ ಉಳಿದ ಕಾಂಗ್ರೆಸ್‌ ಮುಖಂಡರು ಮೈತ್ರಿ ಒಪ್ಪಿದ್ದರೆ ಸರ್ಕಾರ ಇನ್ನಷ್ಟುಸುಭದ್ರವಾಗಿರುತ್ತಿತ್ತಲ್ವಾ?

ಯಾರು ಒಪ್ಪುತ್ತಾರೋ ಬಿಡುತ್ತಾರೋ, ಸಿದ್ದರಾಮಯ್ಯ ನಮ್ಮ ಶಾಸಕಾಂಗ ಪಕ್ಷದ ನಾಯಕರು. ಅವರಿಗೆ ಆ ಸ್ಥಾನ ಕೊಡೋಕೆ ಆಗಲ್ಲ ಎಂದು ಬೇಕಾದಷ್ಟುವಾದ- ವಿವಾದ ಆಯಿತು. ಆದರೆ, ನಾನು, ಪರಮೇಶ್ವರ್‌ ಇತರೆ ನಾಯಕರೇ ಸಿದ್ದರಾಮಯ್ಯ ಅವರು ಸಿಎಲ್‌ಪಿ ನಾಯಕರಾಗಲಿ ಎಂದು ಸೂಚಿಸಿದೆವು. ಅದರಂತೆ ಆಯಿತು. ಸಿದ್ದರಾಮಯ್ಯ ಅವರು ರಾಜ್ಯಪಾಲರನ್ನು ಭೇಟಿ ಮಾಡಿ ಎಚ್‌.ಡಿ. ಕುಮಾರಸ್ವಾಮಿ ಅವರ ನೇತೃತ್ವದ ಸರ್ಕಾರ ರಚನೆಗೆ ಒಪ್ಪಿ ಪತ್ರ ನೀಡಿದರು. ಅವರ ಹಿಂದೆ ನಾವು ಬಾಲದಂತೆ ಹೋಗಿದ್ದೇವೆ. ನಮ್ಮ ಕರ್ತವ್ಯ ಮಾಡುತ್ತಿದ್ದೇವೆ.

* ನೀವು ಮತ್ತು ದೇವೇಗೌಡರು ಒಂದೇ ವೇದಿಕೆಯಲ್ಲಿ ಒಬ್ಬರೇ ಅಭ್ಯರ್ಥಿ ಪರ ಪ್ರಚಾರ ಮಾಡ್ತಿದ್ದೀರಿ. ಇಂತಹ ದಿನ ಬರಬಹುದು ಅಂತ ಅನಿಸಿತ್ತಾ?

ನಾನಂತೂ ಇದನ್ನು ಊಹಿಸಿರಲಿಲ್ಲ. ರಾಜಕೀಯ ಅನ್ನೋದು ಸಾಧ್ಯತೆಯ ಕಲೆ, ಯಾವಾಗ ಏನು ಬೇಕಾದರೂ ಆಗಬಹುದು. ಧರ್ಮಸಿಂಗ್‌ ಅವರ ಸರ್ಕಾರ ರಚನೆಗೂ ಮೊದಲು ನಾನು ಮತ್ತು ಎಸ್‌.ಎಂ. ಕೃಷ್ಣ ಪಕ್ಷಕ್ಕೆ ಎಷ್ಟೊಂದು ಜನ ಶಾಸಕರನ್ನು ಕರೆತಂದಿದ್ವಿ. ಆದರೆ, ಧರ್ಮಸಿಂಗ್‌ ಸರ್ಕಾರ ರಚನೆ ಆದ ಮೇಲೆ ಕೃಷ್ಣ ಮತ್ತು ಶಿವಕುಮಾರ್‌ ಈ ಸರ್ಕಾರದಲ್ಲಿ ಇರಬಾರದು ಎಂದು ಜೆಡಿಎಸ್‌ನವರು ಷರತ್ತು ಹಾಕಿದ್ರು. ಪಕ್ಷದ ಧರ್ಮ ಒಪ್ಪಿ ಮನೆಯಲ್ಲಿ ಕೂರುವ ಪರಿಸ್ಥಿತಿ ಬಂತು. ಆದರೆ, ಇವತ್ತು ಅವರೇ (ಜೆಡಿಎಸ್‌) ಶಿವಕುಮಾರ್‌ ಬೇಕು ಎಂದು ಮಂತ್ರಿ ಮಂಡಲಕ್ಕೆ ತೆಗೆದುಕೊಂಡು ಸರ್ಕಾರ ರಚಿಸಿದ್ದಾರೆ.

* ಕುಮಾರಸ್ವಾಮಿ ಮಂತ್ರಿ ಮಂಡಲ ಸೇರಿದ್ದರಿಂದ ಒಕ್ಕಲಿಗ ಮೇರು ನಾಯಕನಾಗುವ ಕನಸಿಗೆ ಅಡ್ಡಿಯಾಗಲಿಲ್ಲವೆ?

ನಾನು ಯಾವತ್ತೂ ಒಕ್ಕಲಿಗ ನಾಯಕ ಎಂದು ಹೇಳಿಕೊಳ್ಳಲು ತಯಾರಿಲ್ಲ. ಒಕ್ಕಲಿಗ ಜಾತಿ ಮೇಲೆ ರಾಜಕೀಯ ಮಾಡುವವನೂ ಅಲ್ಲ. ಅಖಂಡ ಕರ್ನಾಟಕದ ಬಗ್ಗೆ ನಂಬಿಕೆ ಇರುವವನು. ಕಾಂಗ್ರೆಸ್‌ನ ನಾಯಕ ಎಂದುಕೊಳ್ಳಲೂ ನನಗೆ ಇನ್ನೂ ಶಕ್ತಿ ಬಂದಿಲ್ಲ. ಒಬ್ಬ ಕಾರ್ಯಕರ್ತ ಎನ್ನುವಷ್ಟುಶಕ್ತಿ ಇದೆ ಅಷ್ಟೆ.

* ಹೌದು, ನಿಮಗ್ಯಾಕೆ ಲಿಂಗಾಯತರ ಉಸಾಬರಿ?

ನೋಡಿ, ಲಿಂಗಾಯತ ಧರ್ಮ ವಿಚಾರ ಸಚಿವ ಸಂಪುಟ ಸಭೆಯಲ್ಲಿ (ಸಿದ್ದರಾಮಯ್ಯ ಸರ್ಕಾರದಲ್ಲಿ) ಪ್ರಸ್ತಾಪವಾದಾಗ ನಾನು ನನ್ನ ಅಭಿಪ್ರಾಯ ಸ್ಪಷ್ಟವಾಗಿ ಹೇಳಿದ್ದೆ. ಆದರೆ, ಅಂತಿಮವಾಗಿ ಸಂಪುಟದ ತೀರ್ಮಾನಕ್ಕೆ ತಲೆ ಬಾಗಿದ್ದೆ. ಆದರೆ, ಅನಂತರ ನಡೆದ ವಿಧಾನಸಭಾ ಚುನಾವಣೆಯಲ್ಲಿ ಜನರು ನೀಡಿದ ತೀರ್ಪು ಹೇಗಿತ್ತು ಎಂಬುದನ್ನು ನೋಡಿದ್ದಿರಿ. ನಾನು ಅನೇಕ ಶಾಸಕರು, ನಾಯಕರು, ಗೆದ್ದವರು ಹಾಗೂ ಸೋತ ಕಾಂಗ್ರೆಸ್‌ನ ಅಭ್ಯರ್ಥಿಗಳ ಜತೆ ಮಾತನಾಡಿದ್ದೆ. ಅವರೆಲ್ಲರ ಒಟ್ಟಾರೆ ಅಭಿಪ್ರಾಯ ಇದೇ ಆಗಿತ್ತು. ಖುದ್ದು ಸಿದ್ದರಾಮಯ್ಯಅವರು ವೇದಿಕೆಗಳಲ್ಲಿ ಏನು ಹೇಳಿದರು ಎಂದು ನೀವೇ (ಮಾಧ್ಯಮದವರು) ತೋರಿಸಿದ್ದೀರಿ. ಅಂದ ಮೇಲೆ ಅದರ ಅರ್ಥವೇನು? ಇಷ್ಟಕ್ಕೂ ನನ್ನ ವೈಯಕ್ತಿಕ ಅಭಿಪ್ರಾಯ ನಾನು ಹೇಳಿದ್ದೇನೆ. ಅದನ್ನು ಎಷ್ಟುಜನ ಒಪ್ಪುತ್ತಾರೋ, ಬಿಡುತ್ತಾರೋ ಅದು ಬೇರೆ ವಿಚಾರ. ಆತ್ಮಸಾಕ್ಷಿಯ ಮಾತುಗಳನ್ನು ನುಡಿದಿದ್ದೇನೆ. ಯಾರನ್ನೂ ನಾನು ಮೆಚ್ಚಿಸಬೇಕಾಗಿಲ್ಲ. ಖುಷಿ ಪಡೋರು ಖುಷಿ ಪಟ್ಟಿದ್ದಾರೆ. ದುಃಖ ಪಡೋರು ದುಃಖ ಪಟ್ಟಿದ್ದಾರೆ. ರಾಜಕಾರಣದಲ್ಲಿ ಧರ್ಮ ಇರಬೇಕೇ ಹೊರತು, ಧರ್ಮದಲ್ಲಿ ರಾಜಕಾರಣ ಇರಬಾರದು ಎನ್ನುವುದು ನನ್ನ ಪ್ರತಿಪಾದನೆ.

* ನಮ್ಮ ಧರ್ಮದಲ್ಲಿ ಮೂಗು ತೂರಿಸಬೇಡಿ ಎಂದು ನಿಮಗೆ ಸಂಪುಟ ಸಹೋದ್ಯೋಗಿ ಎಂ.ಬಿ. ಪಾಟೀಲ್‌ ಎಚ್ಚರಿಕೆ ನೀಡಿದ್ದಾರೆ?

ಅವರು ನನ್ನ ಒಳ್ಳೆಯ ಸ್ನೇಹಿತ. ನನ್ನ ಮೇಲೆ ತುಂಬಾ ಪ್ರೀತಿ. ಪ್ರೀತಿ ಇದ್ದ ಮೇಲೆ ಏಕವಚನದಿಂದ ಮಾತನಾಡ್ತಾರೆ. ಪ್ರೀತಿ ಇಲ್ಲದಿದ್ದರೆ ಏಕವಚನ ಪ್ರಯೋಗಿಸುವುದಿಲ್ಲ. ನಮ್ಮದು ಒಂದೇ ಧರ್ಮ ಕಾಂಗ್ರೆಸ್‌ ಧರ್ಮ. ಯಾರೂ ಇಂತಹ ಜಾತಿ, ಧರ್ಮದಲ್ಲಿ ಹುಟ್ಟಬೇಕು ಅಂತ ಅರ್ಜಿ ಹಾಕಿಕೊಂಡು ಹುಟ್ಟಿಲ್ಲ. ರಾಹುಲ್‌ಗಾಂಧಿ ಅವರು ಕೊಟ್ಟಿರುವ ದೀಕ್ಷೆಯಂತೆ ರಾಷ್ಟ್ರ ಧ್ವಜ ನಮ್ಮ ಧರ್ಮ. ಅದರ ಪಾಲನೆ ಮಾಡುತ್ತಿರೋನು ಈ ಡಿ.ಕೆ.ಶಿವಕುಮಾರ್‌.

* ಸರಿ, ಮಂಡ್ಯ ಜಿದ್ದಾಜಿದ್ದಿ ಬಗ್ಗೆ ಏನು ಹೇಳ್ತೀರಿ?

ಮಂಡ್ಯ ಬಗ್ಗೆ ಏನಿದೆ? ಅಲ್ಲಿನ ರೈತರು ಬುದ್ಧಿವಂತರು, ಪ್ರಜ್ಞಾವಂತರು. ಅವರ ಬದುಕನ್ನು ಬಿಟ್ಟು ಬೇರೇನನ್ನೂ ಅವರು ನೋಡುವುದಿಲ್ಲ. ಭಿನ್ನವಾದ ಅಭಿಪ್ರಾಯಗಳು ಇರುತ್ತವೆ. ನಾವು ಶ್ರೀರಂಗಪಟ್ಟಣ, ನಾಗಮಂಗಲ, ಮಾಗಡಿಯಿಂದ ಮೂವರನ್ನು ಜೆಡಿಎಸ್‌ನಿಂದ ಕರೆತಂದು ಸೀಟು ಕೊಟ್ಟಾಗ ನಮ್ಮ ಪಕ್ಷದ ಕಾರ್ಯಕರ್ತರು ಹೇಗೆ ಒಪ್ಪಿಕೊಂಡಿರಬೇಕು? ಕೆಲವರು ಒಪ್ಪಿಕೊಂಡರು, ಕೆಲವರು ಒಪ್ಪಲಿಲ್ಲ.

* ಸುಮಲತಾ ಪರ ಪ್ರಚಾರದಲ್ಲಿ ಕಾಂಗ್ರೆಸ್‌ ಧ್ವಜ ಹಾರಾಡಿತಲ್ಲ?

ನಾನೂ ಕೂಡ ನಮ್ಮ ಹುಡುಗರಿಗೆ ಹೇಳಿ ಐದೇ ನಿಮಿಷಕ್ಕೆ ಬಿಜೆಪಿ ಧ್ವಜ, ಜೆಡಿಎಸ್‌ ಧ್ವಜ ಹಿಡಿಸಬಹುದು. ಆ ಶಕ್ತಿ ನಮಗೂ ಇದೆ. ಆದರೆ, ಆದನ್ನು ನಾವು ಮಾಡಲು ಹೋಗಲ್ಲ ಅಷ್ಟೆ. ಕೆಲವು ಹುಡುಗರು ಕೆಲವೊಂದು ಭಾವನೆ ಮೇಲೆ ಮಾತನಾಡುತ್ತಿದ್ದಾರೆ. ಏನೇ ಆದರೂ, ಅಂತಿಮವಾಗಿ ಮೈತ್ರಿಧರ್ಮದ ಅಭ್ಯರ್ಥಿಯನ್ನು ಕಾಯಾ ವಾಚಾ ಮನಸಾ ಒಪ್ಪಿದರು ಎಂಬ ವಿಶ್ವಾಸವಿದೆ.

* ತುಮಕೂರಿನಲ್ಲಿ ದೇವೇಗೌಡರ ಹಡಗು ಗೆಲುವಿನ ದಡ ತಲುಪುತ್ತಾ?

ರಾಜ್ಯ ಹಾಗೂ ದೇಶದ ರಾಜಕೀಯದಲ್ಲಿ ಎಲ್ಲರಿಗಿಂತ ಹೆಚ್ಚು ಅನುಭವ ದೇವೇಗೌಡರಿಗಿದೆ. ಅವರು ಛಲಗಾರರು, ಹೋರಾಟಗಾರರು. ತುಂಬಾ ಚೆನ್ನಾಗಿ ಚೆಸ್‌ಗೇಮ್‌ ಆಡುವ ಸಾಮರ್ಥ್ಯ ಅವರಿಗಿದೆ.

* ಮೋದಿ ಮತ್ತು ರಾಹುಲ್‌ಗಾಂಧಿ ನಡುವೆ ಸಮಬಲದ ಹೋರಾಟ ನಡೆಯುತ್ತಿದೆಯಾ?

ಈ ದೇಶಕ್ಕೆ ನಾಯಕತ್ವದ ಬದಲಾವಣೆ ಬೇಕು ಎಂದು ಜನ ಬಯಸಿದ್ದಾರೆ. ಹಲವು ರಾಜ್ಯಗಳಲ್ಲಿ ಆಡಳಿತ ಹೊಂದಿದ್ದ ಮೋದಿ ಸರ್ಕಾರಕ್ಕೆ ನುಡಿದಂತೆ ನಡೆಯಲು ಆಗಲಿಲ್ಲ. ಕೊಟ್ಟಮಾತು ಉಳಿಸಿಕೊಳ್ಳಲಿಲ್ಲ. ಹಿಂದಿ ಮಾತನಾಡುವ ರಾಜ್ಯಗಳಲ್ಲಿ ಬಿಜೆಪಿಗೆ ಕಷ್ಟದ ಸ್ಥಿತಿ ಎದುರಾಗಿದೆ. ಉತ್ತರ ಪ್ರದೇಶದಲ್ಲಿ ಮುಖ್ಯಮಂತ್ರಿಯೇ ತಮ್ಮ ಸ್ಥಾನ ಉಳಿಸಿಕೊಳ್ಳಲಾಗಲಿಲ್ಲ. ರಾಜಸ್ಥಾನ, ಛತ್ತೀಸ್‌ಗಢ, ಮಧ್ಯಪ್ರದೇಶದ ಪರಿಸ್ಥಿತಿ ಬದಲಾಗಿದೆ. ಹಾಗಾಗಿ ಪಾಪ ಮೋದಿ ಇಲ್ಲೇನಾದರೂ ಸಿಗುತ್ತಾ ಅಂತ ಮೂರ್ನಾಲ್ಕು ಬಾರಿ ಕರ್ನಾಟಕಕ್ಕೆ ಬಂದಿದ್ದಾರೆ. ದೇಶದಲ್ಲಿ ಈ ಬಾರಿ ಅಧಿಕಾರದ ಬದಲಾವಣೆ ಆಗುತ್ತೆ.

* ತಮ್ಮ ವಿರುದ್ಧದ ಐಟಿ ದಾಳಿ ಪ್ರಕರಣಗಳು ಎಲ್ಲಿಗೆ ಬಂತು?

ಹೋ, ಐಟಿ ಕೇಸ್‌ ದಿನಾಲು ನೋಡುತ್ತಿದ್ದೀರಲ್ಲಾ? ಐಟಿ ಅಧಿಕಾರಿಗಳನ್ನು ಕೇಳಿದರೆ ಹೇಳುತ್ತಾರೆ. ನಾನು ಬಿಚ್ಚಿ ಬಿಚ್ಚಿ ಹೇಳಲು ಹೋದರೆ, ಎಲ್ಲೆಲ್ಲಿ ಜನ ಏನೇನು ಮಾತಾಡಲು ಶುರುಮಾಡುತ್ತಾರೋ? ಏನೋ? ಅನುಭವಿಸುತ್ತಿರೋನಿಗೆ ಗೊತ್ತು. ಅನೇಕ ವಿಚಾರಗಳು ನ್ಯಾಯಾಲಯದಲ್ಲಿದೆ. ಅಧಿಕಾರಿಗಳು ಬಹಳ ಕಷ್ಟಪಟ್ಟು ಕೆಲಸ ಮಾಡುತ್ತಿದ್ದಾರೆ. ಅವರೂ ಒತ್ತಡದಲ್ಲಿದ್ದಾರೆ ಎನ್ನುವುದು ಅರಿವಿದೆ. ಹಾಗಾಗಿ ನಾನು ಮಾತನಾಡಿ ಯಾರಿಗೂ ತೊಂದರೆಯಾಗುವುದು ಬೇಡ.

* ಯಾರ ಒತ್ತಡ?

ಅದನ್ನು ಸದ್ಯಕ್ಕೆ ನಾನು ಚರ್ಚಿಸಲು ಹೋಗುವುದಿಲ್ಲ. ಬಿಜೆಪಿ ನಾಯಕರನ್ನು ಕೇಳಿ ಅವರೇ ಹೇಳುತ್ತಾರೆ.

* ಇತ್ತೀಚಿನ ಐಟಿ ದಾಳಿ ಬಳಿಕ ಪ್ರತಿಭಟನೆ ಮಾಡಿದಿರಿ?

ನಾವು ಪ್ರತಿಭಟನೆ ಮಾಡಲಿಲ್ಲ. ಐಟಿ ಅಧಿಕಾರಿಗಳ ಬಳಿ ಹೋಗಿ ‘ತಮ್ಮ ದಾಳಿ ಒಂದು ಮುಖವಾಗಿ ನಡೆಯುತ್ತಿದೆ. ಇದು ಸರಿಯಲ್ಲ. ಹಿಂದೆ ಬಿಜೆಪಿಯವರು ಆಪರೇಷನ್‌ ಮಾಡಲು ಶಾಸಕರಿಗೆ ಕೋಟಿಗಟ್ಟಲೆ ಆಮಿಷವೊಡ್ಡುತ್ತಿರುವುದಾಗಿ ನಮ್ಮ ಪಕ್ಷದ ಅಧ್ಯಕ್ಷರೇ ದೂರು ಕೊಟ್ಟಿದ್ದರು. ಇತ್ತೀಚೆಗೆ ಮೃತಪಟ್ಟಸಚಿವ ಸಿ.ಎಸ್‌. ಶಿವಳ್ಳಿ ಕೂಡ 30 ಕೋಟಿ ಆಮಿಷ ಬಂದಿರುವುದಾಗಿ ಹೇಳಿದ್ದರು. ನಮ್ಮ ದೂರಿನ ಬಗ್ಗೆ ಏನು ಕ್ರಮ ಕೈಗೊಂಡಿರಿ’ ಎಂದು ಕೇಳಲು ಎರಡೂ ಪಕ್ಷದವರು ಹೋದೆವು. ಆದರೆ, ಅಲ್ಲಿ ನಮ್ಮನ್ನು ಐಟಿ ಇಲಾಖೆ ಒಳಗೆ ಹೋಗಲೂ ಬಿಡಲೇ ಇಲ್ಲ. ಗೇಟ್‌ ಹಾಕಿಬಿಟ್ಟರು. ಅಷ್ಟರಲ್ಲಿ, ಚುನಾವಣೆ ಸಮಯದಲ್ಲಿ ಹೀಗೆ ನಡೆಯುತ್ತಿದೆಯಲ್ಲಾ ಎಂದು ಜನ ದಂಗೆ ಹೇಳಲು ಶುರುಮಾಡಿಬಿಟ್ಟಿದ್ದರು. ನಮ್ಮ ಕಾರ್ಯಕರ್ತರಿಗೆ ಸ್ವಲ್ಪ ಸಮಾಧಾನ ಹೇಳಿ ನಾವು ಬೇರೆ ಮಾತನಾಡುತ್ತೇವೆ ಸಮಾಧಾನದಿಂದ ನಡಿಯಿರಿ ಎಂದು ಹೇಳಿಕಳಿಸಿದೆವು.

* ಹಾಗಾದರೆ ನೀವು ಮಾಡಿದ್ದು ಪ್ರತಿಭಟನೆ ಅಲ್ಲ?

ನಾವು ಈ ದೇಶದಲ್ಲಿ ಸರ್ಕಾರ ನಡೆಸುತ್ತಿರುವವರು. ಪ್ರತಿಭಟನೆ ಮಾಡಬೇಕಾದ್ರೆ ಹೇಗೆ ಮಾಡಬೇಕು, ನಮಗೂ ಕಾನೂನು ಚೌಕಟ್ಟು, ನಮ್ಮ ಗೌರವವನ್ನ ಯಾವ ರೀತಿ ಕಾಪಾಡಿಕೊಳ್ಳಬೇಕು, ಅಧಿಕಾರಿಗಳಿಗೆ ಹೇಗೆ ಗೌರವ ಕೊಡಬೇಕು ಎಂಬುದು ಗೊತ್ತಿದೆ. ಅಷ್ಟಕ್ಕೂ, ಪ್ರತಿಭಟನೆ ಮಾಡುವು ಸಂದರ್ಭವೇನಿದೆ? ಅಧಿಕಾರಿಗಳ ಮೇಲೆ ಏನು ಪ್ರತಿಭಟನೆ ಮಾಡೋದು. ನಮ್ಮ ಮುಖ್ಯ ಉದ್ದೇಶ ಶಾಂತಿ ಪಾಲನೆ. ನಮ್ಮ ಜನ ರೊಚ್ಚಿಗೆದ್ದಿದ್ದರಿಂದ ಅವರನ್ನು ತಡೆಯಲು ಮುಖ್ಯಮಂತ್ರಿ ಹಾಗೂ ನಾವೆಲ್ಲಾ ಹೋಗಿದ್ದೆವು. ನಾವೇನು ಅಧಿಕೃತವಾಗಿ ಮೈಕು ಹಿಡಿದುಕೊಂಡು ಹೋಗಿರಲಿಲ್ಲ. ಚುನಾವಣಾ ಪ್ರಚಾರದ ಮೈಕಿನಲ್ಲಿ ನಿಂತು ವಿಚಾರ ತಿಳಿಸಿ ಬಂದೆವು ಅಷ್ಟೆ.

* ಐಟಿ ದಾಳಿ ಬಗ್ಗೆ ಮುಖ್ಯಮಂತ್ರಿ ಅವರಿಗೆ 8 ಗಂಟೆ ಮೊದಲೇ ಮಾಹಿತಿ ಸಿಕ್ಕಿತ್ತು. ಲಾಕರ್‌ವೊಂದರಲ್ಲಿ 6 ಕೋಟಿ, ಇನ್ನೊಂದು ಮನೆಯಲ್ಲಿ ಕೋಟ್ಯಂತರ ರು. ಸಿಕ್ತು? ಏನೂ ಮಾಹಿತಿ ಇಲ್ಲದೆ ದಾಳಿ ನಡೆಯಿತಾ?

ಅದನ್ನು ಅವರನ್ನೇ ಹೇಳಬೇಕು. ಅವರ ಆಂತರಿಕ ಗೌಪ್ಯತೆ ನನಗೆ ಗೊತ್ತಿಲ್ಲ. ಅದನ್ನ ಅವರನ್ನೇ ಕೇಳಬೇಕು. ಗುಪ್ತಚರ ಇಲಾಖೆಯ ಗೌಪ್ಯತೆಗಳೆಲ್ಲಾ ನನಗೆ ಗೊತ್ತಾ? ಯಾರ ದುಡ್ಡು ಏನು ಅಂತ ಯಾರಿಗೆ ಗೊತ್ತು. ಗೌಪ್ಯತೆಯನ್ನು ಅವರೂ ಕಾಪಾಡಬೇಕು. ನಾವೂ ಕಾಪಾಡಬೇಕಾಗುತ್ತೆ. ನನ್ನ ಮನೆಯಲ್ಲಿ ಏನಾಯ್ತು ಅಂತ ನಾನು ಹೇಳಿಲ್ಲ. ಐಟಿಯವರೂ ಹೇಳಿಲ್ಲ. ಯಾರದ್ದಾದರೂ ಹೆಸರು ಹೇಳಿದ್ದಾರಾ ಅವರು? ಇಲ್ಲ.

* ಮೈತ್ರಿ ಸರ್ಕಾರ ಲೋಕಸಭಾ ಚುನಾವಣೆ ಫಲಿತಾಂಶ ಬಂದ ದಿನವೇ ಉರುಳುತ್ತೆ ಅನ್ನೋ ಮಾತುಗಳಿವೆ?

ರಾಜ್ಯದಲ್ಲಿ ಮೈತ್ರಿ ಸರ್ಕಾರ ರಚನೆಯಾದ ಗಂಟೆಯಿಂದಲೇ ಈ ಮಾತು ಕೇಳಿಬರುತ್ತಿದೆ. ಮುಂದಿನ ಐದು ವರ್ಷದವರೆಗೆ ಈ ಮಾತು ಇದ್ದೇ ಇರುತ್ತೆ. ಲೋಕಸಭಾ ಚುನಾವಣೆ ಫಲಿತಾಂಶದಲ್ಲಿ 20ಕ್ಕೂ ಹೆಚ್ಚು ಸೀಟು ಕಾಂಗ್ರೆಸ್‌ ಗೆಲ್ಲುತ್ತೆ. ನಂತರ ಬಿಜೆಪಿಯವರು ಅಡ್ವಾಣಿ, ಮುರಳಿ ಮನೋಹರ್‌ ಜೋಶಿ ಅವರಂತೆ ಯಡಿಯೂರಪ್ಪ ಅವರಿಗೂ ಬಿಡುವು ಕೊಡುತ್ತಾರೆ.

ದೇಶದಲ್ಲಿ ಏ.11ರಿಂದ ಮೇ.19ರವೆರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂಧು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ. ಕರ್ನಾಟಕದಲ್ಲಿ 28