ಬೆಂಗಳೂರು: ತೀವ್ರ ಲಾಬಿ ಹಿನ್ನೆಲೆಯಲ್ಲಿ ಧಾರವಾಡ ಲೋಕಸಭಾ ಕ್ಷೇತ್ರಕ್ಕೆ  ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ವಿಚಾರ ಇನ್ನು ಕಗ್ಗಂಟಾಗಿಯೇ ಉಳಿದಿದೆ. ಏ.೪ರವರೆಗೆ ನಾಮಪತ್ರ ಸಲ್ಲಿಕೆ ಗೆ ಅವಕಾಶ ಇರುವ ಕಾರಣ ಆಯ್ಕೆ ಬಗ್ಗೆ ಅಂತಿಮ ನಿರ್ಣಯವನ್ನು ಹೈಕಮಾಂಡ್ ಕೈಗೊಂಡಿಲ್ಲ.

ಕಾಂಗ್ರೆಸ್ ಉಳಿದೆಲ್ಲಾ ಕ್ಷೇತ್ರಗಳಿಗೆ ಅಭ್ಯರ್ಥಿ ಘೋಷಿಸಿದ್ದರೂ ಧಾರವಾಡಕ್ಕೆ ಇನ್ನೂ ಅಖೈರುಗೊಳಿ ಸಲು ಸಾಧ್ಯವಾಗಿಲ್ಲ. ಇದಕ್ಕೆ ಕಾರಣ ರಾಜ್ಯದಲ್ಲಿ ಮುಸ್ಲಿಮರಿಗೆ ಎರಡು ಕ್ಷೇತ್ರಗಳನ್ನು ನೀಡಲೇಬೇಕು ಎಂದು ಆ ಸಮುದಾಯದ ಒತ್ತಾಯ. 

ಈಗಾಗಲೇ ಬೆಂಗಳೂರು ಸೆಂಟ್ರಲ್‌ನಿಂದ ರಿಜ್ವಾನ್‌ರಿಗೆ ಟಿಕೆಟ್ ನೀಡಿದೆ. ಉ.ಕರ್ನಾಟಕ ಕೋಟಾದಲ್ಲಿ ಮುಸ್ಲಿಮರಿಗೆ ಅವಕಾಶ ದೊರಕಿಲ್ಲ. ಹೀಗಾಗಿ ಐ.ಜಿ. ಸನದಿ ಅವರ ಪುತ್ರ ಶಾಕೀರ್‌ಗೆ ನೀಡಲೇಬೇಕು ಎಂಬುದು ಒತ್ತಾಯ. ಇದೇ ವೇಳೆ ಲಿಂಗಾಯತ ಸಮುದಾ ಯವೂ ಟಿಕೆಟ್‌ಗಾಗಿ ಒತ್ತಡ ಹಾಕಿದೆ. 

ಲಿಂಗಾಯತರ ಪೈಕಿ ವಿನಯ ಕುಲಕರ್ಣಿ, ಸದಾನಂದ ಡಂಗನವರ ಅವರು ತೀವ್ರ ಲಾಬಿ ನಡೆಸಿದ್ದಾರೆ. ಡಂಗನವರ ಪರವಾಗಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಲಾಬಿ ನಡೆಸಿದ್ದರೆ, ವಿನಯ ಕುಲಕರ್ಣಿ ಪರವಾಗಿ ಸಿದ್ದರಾಮಯ್ಯ ಹಾಗೂ ಎಂ.ಬಿ. ಪಾಟೀಲ್ ಪ್ರಯತ್ನ ನಡೆಸಿದ್ದಾರೆ.