ಗದಗ : ಲೋಕಸಭಾ ಚುನಾವಣೆ ಬೆನ್ನಲ್ಲೇ ಅಭ್ಯರ್ಥಿಗಳಿಂದ ಬಿರುಸಿನ ಪ್ರಚಾರ ನಡೆಯುತ್ತಿದೆ. ವಿವಿಧ ಪಕ್ಷಗಳಲ್ಲಿ 2ನೇ ಹಂತದ ಚುನಾವಣೆಗಾಗಿ ಅಭ್ಯರ್ಥಿಗಳ ಪರ ಮುಖಂಡರು ಪ್ರಚಾರ ಕೈಗೊಂಡಿದ್ದಾರೆ. 

ಗದಗ ಜಿಲ್ಲೆಯ ನರಗುಂದ ಪಟ್ಟಣದಲ್ಲಿ ಸಿಎಂ ಇಬ್ರಾಹಿಂ ಕಾಂಗ್ರೆಸ್ ಅಭ್ಯರ್ಥಿ ವೀಣಾ ಕಾಶಪ್ಪನರ್ ಪರ ಪ್ರಚಾರ ನಡೆಸಿದ್ದಾರೆ. ಈ ವೇಳೆ ಮಾತನಾಡಿದ ಅವರು ಒಂದು ತಿಂಗಳಿನಿಂದ ಭಿಕ್ಷೆ ಬೇಡಿಕೊಂಡು ಹೊರಟಿದ್ದೇವೆ. 70 ವರ್ಷದ ಇತಿಹಾಸದಲ್ಲಿ ಇಂತಹ ಚುನಾವಣೆ ನಡೆದಿಲ್ಲ. ಮುಂದೆಯೂ ನಡೆಯುವುದಿಲ್ಲ. ಪ್ರಜಾಪ್ರಭುತ್ವ ಉಳಿಯಬೇಕಾ, ಬೇಡವೇ ಎನ್ನುವ ಚುನಾವಣೆ ಇದಾಗಿದೆ ಎಂದರು. 

ಇದೇ ವೇಳೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಅವರು ಸಂಸದ ಗದ್ದಿಗೌಡ್ರು ನನ್ನ ನೋಡಬೇಡಿ, ಮೋದಿ ನೋಡಿ ಓಟು ಕೊಡಿ ಎಂದು ಹೇಳುತ್ತಾರೆ.  ಹುಡುಗಿ ಕೊಡಬೇಕು ಎಂದರೆ ಅವರ ಅಪ್ಪನ ನೋಡಿದರೆ ಸಾಕೇ ಎಂದು ಪ್ರಶ್ನೆ ಮಾಡಿದ್ದಾರೆ. ದೇಶ ಬಲಿಷ್ಟ ಆಗಬೇಕಾದರೆ ಮೋದಿಗೆ ಓಟು ಕೊಡಿ ಎಂದು ಹೇಳುತ್ತಾರೆ. ಯಾರಿದ್ದರೂ ಎಲ್ಲಾ ಯುಗದಲ್ಲೂ ಭಾರತ ಮಾತೆ ನನ್ನ ತಾಯಿ ಭದ್ರವಾಗೇ‌ ಇದ್ದಾಳೆ  ಎಂದರು. 

ಪೆಟ್ರೋಲ್ ಬೆಲೆ ಏರಿಕೆ ಬಗ್ಗೆ ಪ್ರಸ್ತಾಪಿಸಿದ ಅವರು ಮೋದಿ ಸ್ಟ್ರಾಂಗ್ ಆಗಿದ್ದರೆ ಪೆಟ್ರೋಲ್ ಬೆಲೆ 78 ಆಯ್ತು. ಸಿಂಗ್ ವೀಕ್ ಇದ್ದಿದ್ದಕ್ಕೆ 60 ರು.ಗೆ ಪೆಟ್ರೋಲ್ ಕೊಟ್ಟರು. ಸ್ಟ್ರಾಂಗ್ ಇದ್ದೋರು ಬೆಲೆ ಏಕೆ ಜಾಸ್ತಿ ಮಾಡಿದರು ಎಂದು ಪ್ರಶ್ನೆ ಇಬ್ರಾಹಿಂದ ಪ್ರಶ್ನೆ ಮಾಡಿದರು.