ಕ್ಷೇತ್ರ ಸಮೀಕ್ಷೆ: ರಾಯಚೂರು ಲೋಕಸಭಾ ಕ್ಷೇತ್ರ

ರಾಮಕೃಷ್ಣ ದಾಸರಿ, ಕನ್ನಡಪ್ರಭ

ರಾಯಚೂರು[ಏ.17]: ಬಿಸಿಲ ಬದುಕಿನ ಜಿಲ್ಲೆ ರಾಯಚೂರು ಲೋಕಸಭಾ ಕ್ಷೇತ್ರವು, 2ನೇ ಬಾರಿಗೆ ಸಂಸದರಾಗಲು ಮುಂದಾಗಿರುವ ಕಾಂಗ್ರೆಸ್‌ನ ಬಿ.ವಿ.ನಾಯಕ್ ಹಾಗೂ ಕಾಂಗ್ರೆಸ್ ಭದ್ರಕೋಟೆಯಲ್ಲಿ ಕಮಲ ಅರಳಿಸಲು ಯತ್ನಿಸುತ್ತಿರುವ ಗುಂತಗೋಳ ಸಂಸ್ಥಾನ ದ ರಾಜ ವಂಶಸ್ಥ ರಾಜಾ ಅಮರೇಶ್ವರ ನಾಯಕ್ ನಡುವಿನ ನೇರ ದಂಗಲ್ ಆಗಿದೆ. ಮೋದಿ ಅಲೆಯನ್ನು ಬಿಜೆಪಿ ನಂಬಿದ್ದರೆ, ತನ್ನ ಭದ್ರಕೋಟೆಯನ್ನು ಯಾವ ಹವಾ ಅಲುಗಾ ಡಿಸದು ಎಂಬ ವಿಶ್ವಾಸದಲ್ಲಿ ಕಾಂಗ್ರೆಸ್ ಇದ್ದು, ಉರಿವ ಬಿಸಿಲಿನಲ್ಲೇ ಮತದಾರರನ್ನು ಒಲೈಸಲು ಎರಡು ಪಕ್ಷಗಳು ತೀವ್ರ ಪ್ರಯತ್ನ ನಡೆಸಿವೆ.

ದೇಶಕ್ಕೆ ಚಿನ್ನ ನೀಡುತ್ತಿರುವ ರಾಜ್ಯದ ಏಕೈಕ ನಾಡು, ಅತೀ ಹೆಚ್ಚಿನ ಪ್ರಮಾಣದಲ್ಲಿ ಶಾಖೋತ್ಪನ್ನ ವಿದ್ಯುತ್ ಉತ್ಪಾ ದನೆ ಮಾಡುತ್ತಿರುವ ಬೀಡು ಇತ್ಯಾದಿ ಏನೇ ಹೆಗ್ಗಳಿಕೆಗಳಿದ್ದರೂ ರಾಯಚೂರಿನ ಪಾಡು ಬದಲಾಗಿಲ್ಲ. ಸದಾ ಬೆಂಬಿಡದ ಭೂತದಂತೆ ಕಾಡುವ ಬರಗಾ ಲದ ಕ್ಷೇತ್ರದಲ್ಲಿ ಬಿರುಬಿಸಿಲನ್ನೂ ಲೆಕ್ಕಿಸದೆ ಲೋಕಸಭೆ ಮಹಾ ಸಮರ ಕಾವು ಪಡೆದುಕೊಂಡಿದೆ. ಕಾಂಗ್ರೆಸ್-ಬಿಜೆಪಿ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ. ದೇವದುರ್ಗದ ಅರಕೇರಾದ ಬಿ.ವಿ.ನಾಯಕ ಕಾಂಗ್ರೆಸ್‌ನಿಂದ 2ನೇ ಸಲ ಸಂಸದರಾಗಲು ಕಣಕ್ಕೆ ದುಮುಕಿದ್ದಾರೆ. ಕಾಂಗ್ರೆಸ್ ಭದ್ರಕೋಟೆಯನ್ನು ಭೇದಿಸಲು ರಾಜಾ ಅಮರೇಶ್ವರ ನಾಯಕ ಕಮಲ ಪಕ್ಷದ ಅಭ್ಯರ್ಥಿಯಾಗಿ ಅಖಾಡಕ್ಕಿಳಿದಿದ್ದಾರೆ.

ಕ್ಷೇತ್ರದ ಕುರಿತು ಮಾಹಿತಿ :

ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿರುವ ರಾಯಚೂರು ಲೋಕ ಸಭೆ ಕ್ಷೇತ್ರದ ವ್ಯಾಪ್ತಿಗೆ ರಾಯಚೂರು ಹಾಗೂ ಯಾದಗಿರಿ ಜಿಲ್ಲೆಗಳು ಒಳಪಡುತ್ತವೆ. ಜಿಲ್ಲೆ ರಾಯಚೂರು ಗ್ರಾಮೀಣ, ರಾಯಚೂರು ನಗರ, ಮಾನ್ವಿ, ದೇವದುರ್ಗ ಮತ್ತು ಲಿಂಗಸು ಗೂರು ಸೇರಿ 5, ಯಾದಗಿರಿಯ ಶಹಾಪುರ, ಸುರಪುರ ಮತ್ತು ಯಾದಗಿರಿ ಸೇರಿ ಒಟ್ಟು 8 ವಿಧಾನಸಭೆ ಕ್ಷೇತ್ರಗಳ ಪ್ರಸ್ತುತ 4 ಜನ ಬಿಜೆಪಿ, 3 ಕಾಂಗ್ರೆಸ್, ಒಬ್ಬರು ಜೆಡಿಎಸ್ ಶಾಸಕರಿದ್ದಾರೆ. ಈ ಬಾರಿಯ ಚುನಾವಣಾ ಕಣದಲ್ಲಿ ಒಟ್ಟು 5 ಜನ ಅಭ್ಯರ್ಥಿಗಳಿದ್ದು ಇವರಲ್ಲಿ ಕೈ ನಾಯಕ ಮತ್ತು ಕಮಲ ದೊರೆಯ ನಡುವೆ ದಂಗಲ್‌ಗೆ ವೇದಿಕೆ ಕಲ್ಪಿಸಿಕೊಡಲಾಗಿದೆ.

1957ರಲ್ಲಿ ಉದಯವಾದ ರಾಯಚೂರು ಲೋಕಸಭೆ ಕ್ಷೇತ್ರಕ್ಕೆ ಇಲ್ಲಿ ತನಕ 16 ಚುನಾವಣೆಗಳು ನಡೆದಿದ್ದು, ಅದರಲ್ಲಿ 14 ಸಲ ಕಾಂಗ್ರೆಸ್ ಬಿದಿದ್ದು, ಕೇವಲ ಎರಡು ಸಲ ಅನ್ಯ ಪಕ್ಷದವರನ್ನು ಆಯ್ಕೆಯಾಗಿದ್ದಾರೆ. ಇಲ್ಲಿನ ಮತದಾರರು ಬಹುತೇಕ ಕಾಂಗ್ರೆಸ್ ಪಕ್ಷದವರಿಗೆ ಸಂಸದ ಸ್ಥಾನವನ್ನು ದೊರಕಿಸಿಕೊಟ್ಟಿದ್ದು, ಇದರ ಜೊತೆಗೆ ತಲಾ ಒಂದು ಸಲ ಜೆಡಿಎಸ್ ಹಾಗೂ ಬಿಜೆಪಿಗೆ ಅವಕಾಶ (1996 ರಲ್ಲಿ ಜೆಡಿಎಸ್ ನಿಂದ ರಾಜಾ ರಂಗಪ್ಪ ನಾಯಕ ಮತ್ತು ೨೦೦೯ ರಲ್ಲಿ ಬಿಜೆಪಿಯ ಎಸ್. ಫಕೀರಪ್ಪ ಗೆದ್ದಿದ್ದಾರೆ.) ಮಾಡಿಕೊಟ್ಟಿದ್ದಾರೆ. ರಾಜಕೀಯ ತೋಳ್ಬಲದ ಜೊತೆ ಜಾತಿ, ಪ್ರಾಂತೀಯತೆಯ ಅಭಿಮಾನ, ಅಲೆಗಳ ಲೆಕ್ಕಾಚಾರವೂ ಸೋಲು-ಗೆಲುವನ್ನು ನಿರ್ಧರಿಸುತ್ತವೆ. 2014ರಲ್ಲಿ ಮೋದಿ ಅಲೆಯ ನಡುವೆಯೂ ಕ್ಷೇತ್ರದ ಮತದಾರರು ಕೇವಲ 1499 ಮತಗಳಿಂದ ಬಿಜೆಪಿ ಅಭ್ಯರ್ಥಿ ಕೆ.ಶಿವನಗೌಡ ನಾಯಕ ಅವರನ್ನು ಸೋಲಿಸಿ ಕಾಂಗ್ರೆಸ್‌ನ ಬಿ.ವಿ.ನಾಯಕ ಅವರಿಗೆ ಗೆಲುವಿನ ಹಾರಹಾಕಿದ್ದರು.

ಮೋದಿ ಅಲೆ ಬಿಜೆಪಿಗೆ ಶ್ರೀರಕ್ಷೆ :

2014ರ ಚುನಾವಣೆಯಲ್ಲಿ ಮೋದಿ ಅಲೆಯ ನಡುವೆಯೂ ಕೇವಲ 1499 ಮತಗಳ ಅಂತರದಿಂದ ಕಾಂಗ್ರೆಸ್ ಕ್ಷೇತ್ರವನ್ನು ಗೆದ್ದುಕೊಂಡಿತ್ತು. ಈ ಬಾರಿಯೂ ಮೋದಿ ಅಲೆಯ ಮೇಲೆ ನಂಬಿಕೆಯಿಟ್ಟು ರಾಜಾ ಅಮರೇಶ್ವರ ನಾಯಕ ಅದೃಷ್ಟ ಪರೀಕ್ಷೆಗೆ ನಿಂತಿದ್ದಾರೆ. ಟಿಕೆಟ್ ಪಡೆಯಲು ಮಾಜಿ ಶಾಸಕ ತಿಪ್ಪರಾಜು ಹವಾಲ್ದಾರ ಅವರ ನೀಡಿದ್ದ ತೀವ್ರ ಪೈಪೋಟಿ ಯನ್ನು ಎದುರಿಸಿ ಕೊನೇಕ್ಷಣದಲ್ಲಿ ಟಿಕೆಟ್ ಪಡೆದ ರಾಜಾ ಅಮರೇಶ್ವರ ನಾಯಕ ಎರಡು ಸಲ ಶಾಸಕರು-ಸಚಿವರಾಗಿ ಕೆಲಸ ಮಾಡಿದವರು. 2009ರ ಚುನಾವಣೆಯಲ್ಲಿ ಬಿಜೆಪಿ ಯಿಂದ ಟಿಕೆಟ್‌ಗಾಗಿ ಪ್ರಯತ್ನಿಸಿದ್ದರು. ಕೊನೆ ಗಳಿಗೆಯಲ್ಲಿ ಬಳ್ಳಾರಿಯ ಎಸ್. ಫಕ್ಕೀರಪ್ಪ ಅವರಿಗೆ ಟಿಕೆಟ್ ಕೊಟ್ಟಿದ್ದರು. ಇದರಿಂದ ಬೇಸತ್ತು ಕೆಲ ವರ್ಷಗಳ ಕಾಲ ಜೆಡಿಎಸ್‌ಗೆ ಹೋಗಿ ಅಲ್ಲಿ ನೆಲೆ ಸಿಗದೇ ಮತ್ತೆ ಕಾಂಗ್ರೆಸ್‌ನಲ್ಲಿದ್ದ ಅವರು ಇತ್ತೀಚೆಗೆ ಬಿಜೆಪಿಗೆ ಬಂದು ಟಿಕೆಟ್ ಗಿಟ್ಟಿಸಿಕೊಂಡಿದ್ದಾ

ಬಿ.ವಿ.ನಾಯಕಗೆ ಕೈ ಭದ್ರಕೋಟೆಯೇ ಬಲ

ಅತೀ ಹೆಚ್ಚು ಸಲ ಕಾಂಗ್ರೆಸ್ ಗೆಲವು ಸಾಧಿಸುವುದರ ಮೂಲಕ ಕ್ಷೇತ್ರವನ್ನು ಭದ್ರಕೋಟೆ ಮಾಡಿಕೊಂಡಿದೆ. ಬಿ.ವಿ.ನಾಯಕ ಅವರಿಗೆ ಕೈ ಭದ್ರಕೋಟೆಯೇ ಬಹುದೊಡ್ಡ ಬಲವಾಗಿ ಮಾರ್ಪಟ್ಟಿದೆ. ತಂದೆ ದಿ.ಎ.ವೆಂಕಟೇಶ ನಾಯಕ ೪ ಬಾರಿ ಸಂಸದರಾಗಿದ್ದರೂ ಕಳೆದ ಲೋಕಸಭೆ ಚುನಾವಣೆಯಲ್ಲಿ ಕಡಿಮೆ ಅಂತರದಲ್ಲಿ ಗೆದ್ದು ಮೊದಲ ಸಲ ಸಂಸದರಾದ ನಾಯಕ ಮೃದು ಸ್ವಭಾವದ ವ್ಯಕ್ತಿ ಹಾಗೂ ನೇರ ಸಂಪರ್ಕಕ್ಕೆ ಸಿಗುತ್ತಾರೆ ಎಂಬುದು ಅವರ ಹೆಗ್ಗಳಿಕೆ ಹೊಂದಿದ್ದಾರೆ.

ಮೈತ್ರಿಗೆ ಇನ್ನೂ ಸಿಗದ ಖಾತ್ರಿ

ಸಮ್ಮಿಶ್ರ ಸರ್ಕಾರದ ಫಲವಾಗಿ ರಾಯಚೂರು ಕ್ಷೇತ್ರವನ್ನು ಜೆಡಿಎಸ್ ಕೈ ಪಕ್ಷಕ್ಕೆ ಬಿಟ್ಟುಕೊಟ್ಟಿದೆ. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿಯ ಜಂಟಿ ಪ್ರಚಾರ ನಡೆದಿಲ್ಲ. ಕಾಂಗ್ರೆಸ್, ಜೆಡಿಎಸ್ ಪ್ರತ್ಯೇಕವಾಗಿ ಪ್ರಚಾರದಲ್ಲಿ ತೊಡಗಿದ್ದಾರೆ. ಮೈತ್ರಿ ಕೂಟವನ್ನು ಒಟ್ಟಿಗೆ ಪ್ರಚಾರಕ್ಕೆ ಇಳಿಸುವ ಪ್ರಯತ್ನ ನಡೆದಿದೆ. ಇನ್ನೂ ಜೆಡಿಎಸ್‌ಗೆ ಈ ಕ್ಷೇತ್ರದಲ್ಲಿ ಸೀಮಿತ ಬಲವಿದೆ. ಇದು ಕಾಂಗ್ರೆಸ್ ಪರ ನಿಂತರೆ ಅದು 2ನೇ ಬಾರಿಗೆ ಸಂಸದರಾಗ ಬಯಸಿರುವ ಬಿ.ವಿ.ನಾಯಕರಿಗೆ ವರದಾನವಾಗಬಹುದು. ಈ ಹಿನ್ನೆಲೆಯಲ್ಲಿ ಜೆಡಿಎಸ್ ಕಾರ್ಯಕರ್ತರು ಹಾಗೂ ನಾಯಕರನ್ನು ಒಗ್ಗೂಡಿಸುವ ಪ್ರಯತ್ನವನ್ನು ನಡೆಸಿದ್ದು, ರಾಜ್ಯ ಮಟ್ಟದ ನಾಯಕರ ಮಧ್ಯಸ್ಥಿಕೆಯನ್ನು ಬಯಸಿದ್ದಾರೆ. ಇದು ಸರಿ ಹೋದರೆ ಬಿಜೆಪಿ ಹಾಗೂ ಕಾಂಗ್ರೆಸ್ ನಡುವಿನ ಸ್ಪರ್ಧೆ ಮತ್ತಷ್ಟು ತುರುಸು ಪಡೆದುಕೊಳ್ಳಬಹುದು.

ಯುವ ಮತದಾರರೇ ನಿರ್ಣಾಯಕರು

ಕ್ಷೆ ೀತ್ರ ಪರಿಶಿಷ್ಟ ಪಂಗಡಕ್ಕೆ ಮೀಸಲಿರುವುದರಿಂದ ಎರಡೂ ಪಕ್ಷಗಳಿಂದ ಪ್ರಭಾವಿ ನಾಯಕರೇ ಸ್ಪರ್ಧೆಯಲ್ಲಿರುವುದರಿಂದ ಎಸ್ಟಿ ಮತಗಳು ವಿಭಜನೆಗೊಳ್ಳಲಿವೆ. ಇದರ ಜೊತೆಗೆ ಅಲ್ಪಸಂಖ್ಯಾತರ ಮತಗಳನ್ನು ಸೆಳೆಯಲು ಕಾಂಗ್ರೆಸ್ ಸಫಲವಾಗುತ್ತದೆ. ಸಿದ್ದರಾಮಯ್ಯ ಅವರ ಕಾರಣಕ್ಕಾಗಿ ಕುರುಬ ಮತಗಳು ಕಾಂಗ್ರೆಸ್ ಪರ ಒಲಿಯಬಹುದು. ಇನ್ನು ಲಿಂಗಾಯತ ಮತಗಳನ್ನು ಯಾವ ಪಕ್ಷ ಸೆಳೆಯುತ್ತದೆ ಎನ್ನುವುದು ಮುಖ್ಯವಾಗಿದೆ. ಪ್ರಸಕ್ತ ಚುನಾವಣೆಯಲ್ಲಿ ಸುಮಾರು ಮೂರು ಲಕ್ಷ ಯುವ ಮತದಾರರು ಸೇರ್ಪಡೆಯಾಗಿದ್ದರಿಂದ ಈ ಬಾರಿ ಇವರೇ ನಿರ್ಣಾಯಕ ಪಾತ್ರವನ್ನು ನಿಭಾಯಿಸಲಿದ್ದು, ಯುವಕರನ್ನು ಸೆಳೆಯುವ ಪ್ರಯತ್ನದಲ್ಲಿ ಎರಡು ಪಕ್ಷಗಳು ನಿರತವಾಗಿವೆ.

ಅಭ್ಯರ್ಥಿಗಳು

ಬಿಜೆಪಿಯಿಂದ ರಾಜಾ ಅಮರೇಶ್ವರ ನಾಯಕ, ಕಾಂಗ್ರೆಸ್‌ನಿಂದ ಹಾಲಿ ಸಂಸದ ಬಿ.ವಿ.ನಾಯಕ, ಬಿಎಸ್ಪಿಯಿಂದ ಕೆ.ವೆಂಕನಗೌಡ ನಾಯಕ, ಉತ್ತಮ ಪ್ರಜಾಕೀಯ ಪಕ್ಷದಿಂದ ನಿರಂಜನ ನಾಯಕ, ಸೋಷಿಯಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ-ಕಮ್ಯೂನಿಸ್ಟ್ (ಎಸ್‌ಯುಸಿಐಸಿ)ಪಕ್ಷದಿಂದ ಕೆ. ಸೋಮಶೇಖರ ಯಾದಗಿರಿ ಸೇರಿ ಒಟ್ಟು ೫ ಜನ ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಕಳೆದ ಚುನಾವಣೆ ಫಲಿತಾಂಶ

ಬಿ. ವಿ ನಾಯಕ್[ಕಾಂಗ್ರೆಸ್]: 4,43,659

ಕೆ. ಶಿವನಗೌಡ ನಾಯಕ[ಬಿಜೆಪಿ]: 4,42,160

ಡಿ. ಬಿ ನಾಯಕ[ಜೆಡಿಎಸ್]: 21,706

ಗೆಲುವಿನ ಅಂತರ: 1499

ಮತದಾರರು: 19,27,758 | ಪುರುಷ:9,55,586 | ಮಹಿಳೆ: :9,71,805 | ಇತರೆ: 367