ಬೆಂಗಳೂರು :  ಲೋಕಸಭಾ ಚುನಾವಣೆಗೆ ನಡೆಯುತ್ತಿದೆ.  ಸಂಘ ಸಂಸ್ಥೆಗಳು ವಿವಿಧ ಕೊಡುಗೆಗಳನ್ನು ಘೋಷಿಸಿ ಮತದಾರರಲ್ಲಿ ಮತದಾನದ ಬಗ್ಗೆ ಜಾಗೃತಿ ಮೂಡಿಸಲು ಪ್ರಯತ್ನಿಸಿವೆ. ಸಿಲಿಕಾನ್‌ ಸಿಟಿ ಜನರು ಮತದಾನದ ಗುರುತು ತೋರಿಸಿ ಈ ಬಂಪರ್‌ ಆಫರ್‌ಗಳನ್ನು ಪಡೆಯಬಹುದು.

ಪ್ರಜಾಪ್ರಭುತ್ವದ ಹಬ್ಬದಲ್ಲಿ ಜನಸಾಮಾನ್ಯರು ಖುಷಿಯಿಂದ ಪಾಲ್ಗೊಳ್ಳುವಂತೆ ಪ್ರೇರೇಪಿಸಲು ಹೋಟೆಲ್‌ಗಳು, ಜ್ಯುವೆಲ್ಲರಿ ಶಾಪ್‌, ಡಯಗ್ನಾಸ್ಟಿಕ್ಸ್‌ ಸೆಂಟ​ರ್‍ಸ್, ಹೀರೋ ಬೈಕ್‌ ಕಂಪನಿ ಸೇರಿದಂತೆ ಹಲವು ಸಂಘ ಸಂಸ್ಥೆಗಳು ವಿಶೇಷ ಕೊಡುಗೆಗಳನ್ನು ಘೋಷಿಸಿವೆ.

ನಗರದಲ್ಲಿ ಅಕ್ಷರಸ್ಥರು ಹೆಚ್ಚಿದ್ದರೂ ಆಸಕ್ತಿಯಿಂದ ಮತದಾನ ಮಾಡುವವರು ಕಡಿಮೆ. ಮತ ಚಲಾಯಿಸದೆ ಆ ದಿನ ಪ್ರವಾಸ ಹೋಗುವ ಅಥವಾ ಮನೆಯಲ್ಲೇ ವಿಶ್ರಾಂತಿ ಪಡೆಯುವವರೂ ಇದ್ದಾರೆ. ಹಾಗಾಗಿ ಜನರಲ್ಲಿ ಮತದಾನದ ಮಹತ್ವ ಹಾಗೂ ಜಾಗೃತಿ ಮೂಡಿಸಲು ಮತದಾನ ಪ್ರಮಾಣವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸಂಘ-ಸಂಸ್ಥೆಗಳು ಈ ವಿಶೇಷ ಪ್ರಯತ್ನ ಮಾಡಿವೆ. ಆದರೆ, ಈ ಕೊಡುಗೆಗಳನ್ನು ಮತದಾನದಲ್ಲಿ ಕಡ್ಡಾಯವಾಗಿ ಭಾಗಿಯಾಗಿರುವ ಶಾಯಿಯ ಗುರುತಿನೊಂದಿಗೆ ಪಡೆಯಬಹುದು.

ನೃಪತುಂಗ ರಸ್ತೆಯ ಆರ್‌ಬಿಐ ಹತ್ತಿರ ಇರುವ ನಿಸರ್ಗ ಗ್ರ್ಯಾಂಡ್‌ ಹೋಟೆಲ್‌ ಮತದಾನ ಮಾಡಿದವರಿಗೆ ಗುರುವಾರ ಉಚಿತವಾಗಿ ಬೆಣ್ಣೆ ಖಾಲಿ ದೋಸೆ, ಸಿಹಿ ತಿಂಡಿ ಮತ್ತು ತಂಪು ಪಾನಕದ ಆಫರ್‌ ನೀಡಿದೆ. ಸಮೃದ್ಧ ಭಾರತ ನಿರ್ಮಾಣಕ್ಕೆ ತಮ್ಮ ಮತ ಚಲಾಯಿಸಿದವರು ಬೆರಳ ಗುರುತು ತೋರಿಸಿ ಬೆಣ್ಣೆ ದೋಸೆ ಸವಿಯಬಹುದು.

ಚಿನ್ನ ಖರೀದಿಸಷ್ಟೇ ಬೆಳ್ಳಿ:

ಮತ ಹಾಕಿ ಚಿನ್ನ ಖರೀದಿಸಿದರೆ ನಿಮಗೆ ಅಷ್ಟೇ ಪ್ರಮಾಣದ ಬೆಳ್ಳಿ ಉಚಿತವಾಗಿ ದೊರೆಯಲಿದೆ. ಯಲಹಂಕದ ಸುಮತಿ ಜ್ಯುವೆಲ್ಲರಿ ಶಾಪ್‌ನಲ್ಲಿ ಏ.18 ರಿಂದ 26ರವರೆಗೆ ಈ ಆಫರ್‌ ಸಿಗಲಿದೆ. ಮತದಾನ ಜಾಗೃತಿಗೆ ಈ ವಿನೂತನ ಪ್ರಯತ್ನ ಎಂದು ಶಾಪ್‌ ಮಾಲೀಕ ನವೀನ್‌ ಕೊಠಾರಿ ತಿಳಿಸಿದ್ದಾರೆ.

ತರಬೇತಿ ಶುಲ್ಕದಲ್ಲಿ ಕಡಿತ:

ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿರುವವರಿಗೆ ವಿಜಯನಗರದ ಉಜ್ವಲ ಅಕಾಡೆಮಿ ಶುಲ್ಕದಲ್ಲಿ ರಿಯಾಯಿತಿ ನೀಡಲಿದೆ. ಸ್ಪರ್ಧಾತ್ಮಕ ಪರೀಕ್ಷೆ ಸಿದ್ಧತೆಯಲ್ಲಿ ನಿರತರಾದ ಯಾರು ಬೇಕಾದರೂ ಪಾಲ್ಗೊಳ್ಳಬಹುದು. ಆಯ್ಕೆಯಾದವರಿಗೆ ಕೆಎಎಸ್‌ ತರಬೇತಿಯ .12 ಸಾವಿರ ಶುಲ್ಕದಲ್ಲಿ ತಲಾ 10 ಜನರಿಗೆ .10 ಸಾವಿರ ಹಾಗೂ .8 ಸಾವಿರ, 20 ಜನರಿಗೆ .6 ಸಾವಿರ ಕಡಿಮೆ ಮಾಡಲಾಗುವುದು. ಅಭ್ಯರ್ಥಿಗಳನ್ನು ಲಾಟರಿ ಮೂಲಕ ಆಯ್ಕೆ ಮಾಡಲಾಗುತ್ತದೆ. ಆಸಕ್ತರು ಹೆಚ್ಚಿನ ವಿವರಗಳಿಗೆ ಮೊ.7795959079, 8884334488 ಕರೆ ಮಾಡಬಹುದು.

ಹಿರಿಯ ನಾಗರಿಕರಿಂದ ಉಡುಗೊರೆ:

ಅವೆನ್ಯೂ ರಸ್ತೆಯ ಕುಸುಮ್‌ ಜನರಲ್‌ ಸ್ಟೋ​ರ್‍ಸ್ ಅಂಗಡಿ ಮಾಲೀಕರಾದ 80 ವರ್ಷದ ಕೃಷ್ಣಮೂರ್ತಿ ಎನ್ನುವವರು ಮತದಾನ ಮಾಡಿ ಬಂದವರಿಗೆ ಉಚಿತ ಉಡುಗೊರೆ ನೀಡುವ ಯೋಜನೆ ಹಾಕಿಕೊಂಡಿದ್ದಾರೆ. ಮತದಾನದ ಬಗ್ಗೆ ಜನರಲ್ಲಿ ಶ್ರದ್ಧೆ ಕಡಿಮೆಯಾಗಿದೆ. ಪ್ರತಿ ವರ್ಷವೂ ಮತದಾನ ಮಾಡಿದ ಪ್ರತಿಯೊಬ್ಬರಿಗೂ ಉಚಿತ ಬಹುಮಾನ ನೀಡಿದ್ದೇನೆ. ಏ.19ರಂದು ಮತದಾನದ ಬೆರಳಿನ ಗುರುತು ತೋರಿಸಿದ್ದಲ್ಲಿ ಉಡುಗೊರೆ ನೀಡಲಾಗುವುದು ಎಂದು ಕೃಷ್ಣಮೂರ್ತಿ ತಿಳಿಸಿದರು. ಒಟ್ಟಿನಲ್ಲಿ ಮತದಾನ ಮಾಡಿ ಬಂದಲ್ಲಿ ಪುಟ್ಟಉಡುಗೊರೆ ಸಿಗೋದು ಗ್ಯಾರಂಟಿ.

199 ರು.ಗೆ ಬೈಕ್‌ ಸರ್ವಿಸ್‌!

ಜನಸಾಮಾನ್ಯರಲ್ಲಿ ಮತ ಚಲಾವಣೆಯ ಅರಿವು ಮೂಡಿಸುವ ಸಲುವಾಗಿ ಹಲವಾರು ಕಾರ್ಪೋರೇಟ್‌ ಸಂಸ್ಥೆಗಳು ಜಾಗೃತಿ ಆಂದೋಲನ ಹಮ್ಮಿಕೊಂಡಿವೆ. ಹೀರೋ ಮೋಟೊಕಾಪ್‌ರ್‍ ಕಂಪನಿ ನಗರ ಪ್ರದೇಶದ ಮತದಾರರನ್ನು ಉತ್ತೇಜಿಸುವ ನಿಟ್ಟಿನಲ್ಲಿ ಮತದಾನ ಮಾಡಿದ ಗ್ರಾಹಕರಿಗೆ 199 ರು. ಬೆಲೆಗೆ ಜನರಲ್ ಬೈಕ್‌ ಸರ್ವಿಸ್‌ ನೀಡುವುದಾಗಿ ಹೇಳಿದೆ.

ಬಿಪಿ, ಶುಗರ್‌ ಟೆಸ್ಟ್‌ ಉಚಿತ!

ಯಲಹಂಕದ ರೇಡಿಯಲ… ಡಯಾಗ್ನಾಸ್ಟಿಕ್ಸ್‌ ಸೆಂಟ​ರ್‍ಸ್ನಲ್ಲಿ ಮತದಾರರು ಉಚಿತವಾಗಿ ಮಧುಮೇಹ, ಮೂತ್ರಪಿಂಡ (ಕಿಡ್ನಿ) ಪರೀಕ್ಷೆ, ರಕ್ತದೊತ್ತಡ, ರಕ್ತ ಸೇರಿದಂತೆ ವಿವಿಧ ಪರೀಕ್ಷೆಗಳನ್ನು ಮಾಡಿಸಿಕೊಳ್ಳಬಹುದು. ಶಂಕರ ಕಣ್ಣಿನ ಆಸ್ಪತ್ರೆ ಹೊರ ರೋಗಿಗಳಿಗೆ ಶೇ.50ರಷ್ಟು, ಕನ್ನಡಕ ಹಾಗೂ ಲೆನ್ಸ್‌ಗಳ ಖರೀದಿಗೆ ಶೇ.10 ಹಾಗೂ ಕಣ್ಣಿನ ತಪಾಸಣೆ ಮಾಡಿಸಿಕೊಳ್ಳುವವರಿಗೆ ಶೇ.100ರಷ್ಟುರಿಯಾಯಿತಿ ಘೋಷಿಸಿದೆ.

ಯೋಧರ ಕುಟುಂಬದವರಿಗೆ ರಿಯಾಯಿತಿ

ಮತದಾನ ಮಾಡಿದವರಿಗೆ ಕೆಂಗೇರಿ ಉಪನಗರದ ಒಂದನೇ ಮುಖ್ಯರಸ್ತೆಯಲ್ಲಿರುವ ಶ್ರೀಕೃಷ್ಣ ಗ್ರ್ಯಾಂಡ್‌ ಹೋಟೆಲ್‌ನಲ್ಲಿ ತಿಂಡಿ ತಿನಿಸು ಮತ್ತು ಊಟಕ್ಕೆ ರಿಯಾಯಿತಿ ಹಾಗೂ ಉಚಿತವಾಗಿ ಕಾಫಿ, ಟೀ ದೊರೆಯಲಿದೆ. ಆದರೆ, ವಿದ್ಯಾರ್ಥಿಗಳು ಮತ್ತು ಯೋಧರ ಕುಟುಂಬದ ಸದಸ್ಯರಿಗೆ ಮಾತ್ರ ಈ ಕೊಡುಗೆ ಲಭ್ಯ ಎಂದು ಹೋಟೆಲ್‌ ಮುಖ್ಯಸ್ಥ ಪ್ರತಾಪ್‌ ಶೆಟ್ಟಿಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬಿ.ಪ್ಯಾಕ್‌ನಿಂದ ಸಸಿ ವಿತರಣೆ

ಲೋಕಸಭಾ ಚುನಾವಣೆಯಲ್ಲಿ ಪ್ರಥಮ ಬಾರಿಗೆ ಮತದಾನ ಮಾಡಿದವರಿಗೆ ಹಾಗೂ ಹಿರಿಯ ನಾಗರಿಕರಿಗೆ ಬಿ.ಪ್ಯಾಕ್‌ ಸಂಸ್ಥೆ ತುಳಸಿ ಗಿಡಗಳನ್ನು ನೀಡಿ ಗೌರವ ಸಲ್ಲಿಸಲಿದೆ. ನಗರದ ಮಲ್ಲೇಶ್ವರ, ಜೆ.ಪಿ.ನಗರ, ಜಯನಗರ, ಶಿವಾಜಿನಗರ, ಗೋವಿಂದರಾಜನಗರ ಸೇರಿದಂತೆ ವಿವಿಧೆಡೆ ಗಿಡಗಳನ್ನು ವಿತರಿಸಲಾಗುವುದೆಂದು ಸಂಸ್ಥೆ ಸದಸ್ಯರು ತಿಳಿಸಿದ್ದಾರೆ.

ವರದಿ : ಕಾವೇರಿ ಎಸ್‌.ಎಸ್‌.