ಶಿವಮೊಗ್ಗ : ಲೋಕಸಭಾ ಚುನಾವಣೆ ಮುಕ್ತಾಯವಾಗಿದ್ದು,  ಈ ಬಾರಿ ಶಿವಮೊಗ್ಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮತದಾನವಾಗಿದೆ. ಜಿಲ್ಲಾಧಿಕಾರಿ ದಯಾನಂದ ಅವರ ಪರಿಶ್ರಮವೂ ಕಾರಣವಾಗಿದೆ ಎಂದು ಬಿಜೆಪಿ ಅಭ್ಯರ್ಥಿ ಬಿ ವೈ ರಾಘವೇಂದ್ರ ಹೇಳಿದರು. 

ಸ್ವಾತಂತ್ರ್ಯ ನಂತರ 1952 ರಲ್ಲಿ ಬಿಟ್ಟರೆ ಇದೇ ಮೊದಲ ಬಾರಿಗೆ 76.42 ಪರ್ಸೆಂಟ್ ಹೆಚ್ಚಿನ ಮತದಾನ ಆಗಿದೆ. ಇದೊಂದು ಉತ್ತಮ ಬೆಳವಣಿಗೆ ಎಂದು ಹೇಳಿದರು. 

ಇನ್ನು ಇದೇ ವೇಳೆ ಜೆಡಿಎಸ್ ಹಾಗೂ ಕಾಂಗ್ರೆಸ್ ಮುಖಂಡರ ವಿರುದ್ಧ ವಾಗ್ದಾಳಿ ನಡೆಸಿದ ರಾಘವೇಂದ್ರ ಸಿಎಂ ಕುಮಾರಸ್ವಾಮಿ, ಮಾಜಿ ಪ್ರಧಾನಿ ದೇವೇಗೌಡ, ‌ಸಚಿವ ಡಿಕೆಶಿ ಬ್ರದರ್ಸ್ ಮತದಾನದ ಪೂರ್ವದಲ್ಲಿ  ಸರ್ಕಾರವೇ ಚುನಾವಣೆ ನಡೆಸಿದೆ. 

ಮತದಾರರಿಗೆ ಹಣದ ಆಮಿಷ, ಅಧಿಕಾರದ ದುರ್ಬಳಕೆ ಮಾಡಿಕೊಂಡು ಸಮ್ಮಿಶ್ರ ಸರ್ಕಾರದಿಂದ ಪ್ರಭಾವ ಬೀರುವ ಕೆಲಸ ಮಾಡಿದ್ದರೂ ಮತದಾರರು ಬಿಜೆಪಿ ಕೈ ಹಿಡಿದಿದ್ದಾರೆ ಎಂದರು.

ಬಿಜೆಪಿಯಿಂದ ಆಯನೂರು ಮಂಜುನಾಥ, ಎಸ್ . ಬಂಗಾರಪ್ಪ, ಯಡಿಯೂರಪ್ಪ ಹಾಗೂ ನನಗೆ ಎರಡು ಬಾರಿ ಸಂಸದರನ್ನಾಗಿ ಕ್ಷೇತ್ರದ ಮತದಾರರು ಬಿಜೆಪಿ ಗೆಲ್ಲಿಸಿದ್ದಾರೆ. ಈ ಬಾರಿ ನೂರಕ್ಕೆ ನೂರು ಗೆಲ್ಲುವ ವಿಶ್ವಾಸ ಇದೆ. 
ಶಿವಮೊಗ್ಗ ಲೋಕಸಭಾ ಕ್ಷೇತ್ರದ 8 ವಿಧಾನಸಭಾ ಕ್ಷೇತ್ರದಿಂದ ಬಿಜೆಪಿಗೆ ಲೀಡ್ ಸಿಗಲಿದೆ. ನನ್ನನ್ನು ಸಂಸದನಾಗಿ ಆರ್ಶಿವಾದ ಮಾಡುತ್ತಾರೆ. ಒಂದು ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲುವು ಬಿಜೆಪಿಯದ್ದಾಗಲಿದೆ ಎಂದರು. 

ಮೋದಿ ಅಲೆ ಅಂತರ್ಗತವಾಗಿ ಕೆಲಸ ಮಾಡುತ್ತದೆ. ಇಡೀ ರಾಜ್ಯದಲ್ಲಿ ಬಿಜೆಪಿ 22 ಸ್ಥಾನವನ್ನು ಗೆಲ್ಲಲಿದೆ. ದೇಶದಲ್ಲಿ ಬಿಜೆಪಿ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ ಎಂದು ಬಿ ವೈ ರಾಘವೇಂದ್ರ ವಿಶ್ವಾಸ ವ್ಯಕ್ತಪಡಿಸಿದರು.