ಬೆಂಗಳೂರು :  ಬೆಂಗಳೂರಿನ ಮೂರು ಲೋಕಸಭಾ ಕ್ಷೇತ್ರಗಳಲ್ಲೂ ಯಾವುದೇ ಅನುಮಾನ ಇಲ್ಲದೆ ಬಿಜೆಪಿ ಅಭ್ಯರ್ಥಿಗಳು ಭಾರಿ ಅಂತರದಿಂದ ಜಯ ಗಳಿಸುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಪಕ್ಷದ ಹಿರಿಯ ನಾಯಕ ಎಸ್‌.ಎಂ.ಕೃಷ್ಣ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಶುಕ್ರವಾರ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ಪರ ಗೋವಿಂದರಾಜನಗರ ಮತ್ತು ವಿಜಯನಗರ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಬಿರುಸಿನ ಪ್ರಚಾರ ನಡೆಸಿದ ಕೃಷ್ಣ, ಈಗಾಗಲೇ ನಾನು ಮೂರು ಕ್ಷೇತ್ರಗಳಲ್ಲಿ ಪಕ್ಷದ ಪ್ರಚಾರ ನಡೆಸಿದ್ದೇನೆ. ಎಲ್ಲಾ ಕಡೆ ಸಹ ಪಕ್ಷದ ಹುರಿಯಾಳುಗಳ ಗೆಲುವಿಗೆ ಉತ್ತಮ ವಾತಾವರಣ ವ್ಯಕ್ತವಾಗಿದೆ ಎಂದರು.

ನಾಗರಿಕರು ಮತವನ್ನು ಚಲಾಯಿಸುವ ಮೂಲಕ ಪ್ರಜಾಪ್ರಭುತ್ವವನ್ನು ಉಳಿಸಬೇಕು. ಹೆಚ್ಚು ಹೆಚ್ಚು ಮತದಾರರು ಮತಗಟ್ಟೆಗೆ ಹೋದರೆ ಬಿಜೆಪಿಗೆ ಹೆಚ್ಚು ಅನುಕೂಲವಾಗಲಿದೆ. ಅದರಲ್ಲೂ ವಿಶೇಷವಾಗಿ ಮತದಾನದಲ್ಲಿ ಅಧಿಕ ಸಂಖ್ಯೆಯಲ್ಲಿ ಬೆಂಗಳೂರಿನ ನಾಗರಿಕರು ಪಾಲ್ಗೊಳ್ಳಬೇಕಿದೆ. ತನ್ಮೂಲಕ ಪ್ರಜಾಪ್ರಭುತ್ವ ಉಳಿಸಬೇಕು ಎಂದು ಮನವಿ ಮಾಡಿದರು.

ಬಿರುಸಿನ ಪ್ರಚಾರ:  ವಿಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ದಕ್ಷಿಣದ ಅಭ್ಯರ್ಥಿ ತೇಜಸ್ವಿ ಸೂರ್ಯ ಹಾಗೂ ಮುಖಂಡ ಎಚ್‌.ರವೀಂದ್ರ ಸೇರಿದಂತೆ ಸ್ಥಳೀಯ ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರ ಜತೆ ವಿಜಯಸಂಕಲ್ಪ ಯಾತ್ರೆ ಮೂಲಕ ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಮತ ಕೇಳಿದರು.

ಮೈಸೂರು ರಸ್ತೆಯ ಸ್ಯಾಟ್‌ಲೈಟ್‌ ಬಸ್‌ ನಿಲ್ದಾಣದಿಂದ ಪ್ರಚಾರ ಆರಂಭಿಸಿದ ಕೃಷ್ಣ, ವಿಜಯನಗರ ಕ್ಷೇತ್ರ ವ್ಯಾಪ್ತಿ ಬ್ಯಾಟರಾಯನಪುರ, ಆವಲಹಳ್ಳಿ, ಟಿ.ಆರ್‌.ಮಿಲ್ ಮಾರ್ಗವಾಗಿ ಗಾಳಿ ಆಂಜನೇಯ ದೇವಸ್ಥಾನದವರೆಗೆ ಯಾತ್ರೆ ನಡೆಸಿ ಮತಯಾಚಿಸಿದರು.

ಇದಕ್ಕೂ ಮೊದಲು ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಪ್ರಶಾಂತ ನಗರ, ಮೂಡಲಪಾಳ್ಯ, ನಾಗರಬಾವಿ ಮುಖ್ಯ ರಸ್ತೆ ಮಾರ್ಗವಾಗಿ ಅನುಭವನಗರ, ಮಾರುತಿ ನಗರದಲ್ಲಿ ಯಾತ್ರೆ ನಡೆಸಿದರು.

ಪ್ರಚಾರದಲ್ಲಿ ತೇಜಸ್ವಿ ಸೂರ್ಯ, ಮಾಜಿ ಉಪ ಮುಖ್ಯಮಂತ್ರಿ ಆರ್‌.ಅಶೋಕ್‌, ಮಾಜಿ ಸಚಿವ ವಿ.ಸೋಮಣ್ಣ, ವಿಧಾನ ಪರಿಷತ್‌ ಸದಸ್ಯ ಆ.ದೇವೇಗೌಡ, ಮಾಜಿ ಮೇಯರ್‌ ಶಾಂತಕುಮಾರಿ, ಬಿಬಿಎಂಪಿ ಸದಸ್ಯ ಉಮೇಶ್‌ ಶೆಟ್ಟಿ, ಮುಖಂಡ ಡಾ.ಅರುಣ್‌ ಸೋಮಣ್ಣ ಹಾಗೂ ಖ್ಯಾತ ಚಲನಚಿತ್ರ ಹಾಸ್ಯ ನಟ ಬುಲೆಟ್‌ ಪ್ರಕಾಶ್‌ ಸೇರಿದಂತೆ ಕಾರ್ಯಕರ್ತರು ಇದ್ದರು.

ದೇಶದಲ್ಲಿ ಏ.11 ರಿಂದ ಮೇ.19ರವರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ, ಕರ್ನಾಟಕದಲ್ಲಿ 28.