ರಾಯಚೂರು: ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ ಅತೀ ಹೆಚ್ಚು ಸ್ಥಾನಗಳಲ್ಲಿ ಗೆಲುವು ಸಾಧಿಸಲಿದ್ದು, ಮೋದಿ ಮತ್ತೊಮ್ಮೆ ಪ್ರಧಾನಿಯಾಗುವುದಿಲ್ಲ. 2014ರಲ್ಲಿ ಅಲ್ಪ ಪ್ರಮಾಣದಲ್ಲಿ ಮೋದಿ ಅಲೆ ಇತ್ತು. ಇದೀಗ ಆ ಅಲೆ ಎಲೆಯಾಗಿ ಮಾರ್ಪಟ್ಟಿದ್ದು, ಅದು ಒಣಗಿ ಹೋಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯ್ಲಿ ಲೇವಡಿ ಮಾಡಿದರು.

ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೋದಿ ಬಗ್ಗೆ ಯಾವ ಗಾಬರಿಯೂ ನಮಗಿಲ್ಲ. ಮೋದಿ ಅಲೆ ಹುಟ್ಟಲು ಅವರು ಏನು ಸಾಧನೆ ಮಾಡಿದ್ದಾರೆ. ಐದು ವರ್ಷದಲ್ಲಿ ನೋಟ್‌ ಬಂದ್‌, ಜಿಎಸ್‌ಟಿ ತಂದು ಜನರಿಗೆ ಸಂಕಷ್ಟತಂದಿದ್ದಾರೆ. ಕಪ್ಪು ಹಣ ವಾಪಸ್‌ ತರುವುದು, ಉದ್ಯೋಗ ಸೃಷ್ಟಿ, ಬಡವರ ಖಾತೆಗೆ ಹಣ ಹಾಕುವುದು ಸೇರಿ ದೇಶದ ಜನರಿಗೆ ನೀಡಿದ ಆಶ್ವಾಸನೆಗಳೆಲ್ಲವೂ ಸುಳ್ಳಾಗಿವೆ ಎಂದು ಆರೋಪಿಸಿದರು.

ಕರ್ನಾಟಕದಲ್ಲಿ ಬಿಜೆಪಿಗೆ 5 ರಿಂದ 6 ಸೀಟು ಬಂದರೂ ಅಚ್ಚರಿ ಪಡಬೇಕಿಲ್ಲ. ಇನ್ನು ದಕ್ಷಿಣ ಭಾರತದ ರಾಜ್ಯಗಳಾದ ಆಂಧ್ರ, ತೆಲಂಗಾಣ, ತಮಿಳುನಾಡು ಮತ್ತು ಕೇರಳಾದಲ್ಲಿ ಬಿಜೆಪಿ ಒಂದೇ ಒಂದು ಸೀಟು ಗೆಲ್ಲುವುದಿಲ್ಲ ಎಂದರು.

ಬಿಜೆಪಿಯನ್ನು ದೂರವಿಡಲು ಒಂದಾಗಿರುವ ಮಹಾಗಠಬಂಧನ್‌ನಲ್ಲಿ ಯಾವುದೇ ಗೊಂದಲಗಳಿಲ್ಲ. ಎಲ್ಲ 27 ಪಕ್ಷಗಳು ಒಗ್ಗಟ್ಟಿನಿಂದಿವೆ. ಲೋಕಸಭೆಯಲ್ಲಿ ಯಾವ ಪಕ್ಷಕ್ಕೆ ಹೆಚ್ಚಿನ ಸ್ಥಾನ ಬರುತ್ತದೆಯೋ ಅವರೇ ಪ್ರಧಾನಿಯಾಗಲಿದ್ದಾರೆ. ಕಾಂಗ್ರೆಸ್‌ ಪಕ್ಷ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದ್ದು, ರಾಹುಲ್‌ ಗಾಂಧಿ ಅವರೇ ಪ್ರಧಾನಿಯಾಗಲಿದ್ದಾರೆ ಎಂದು ನುಡಿದರು.