Asianet Suvarna News Asianet Suvarna News

ಫೈರ್ ಬ್ರಾಂಡ್ ಅನಂತ ಹೆಗಡೆಗೆ ದಣಿವಿಲ್ಲ: ಹೋದಲ್ಲೆಲ್ಲ ರಾಷ್ಟ್ರೀಯತೆ, ಮೋದಿ ಜಪ

ಮಾತಿನ ಮೋಡಿಗಾರನಿಗೆ ಸೆಲ್ಫಿಗಾಗಿ ಮುಗಿ ಬೀಳುತ್ತಿದ್ದ ಯುವಕರು | ಹೋದಲ್ಲೆಲ್ಲ ರಾಷ್ಟ್ರೀಯತೆ, ಮೋದಿ ಜಪ

Loksabha Elections 2019 BJP s Firebrand Anantkumar Hegde campaign In Uttara Kannada
Author
Bangalore, First Published Apr 13, 2019, 10:30 AM IST

ವಸಂತಕುಮಾರ್ ಕತಗಾಲ, ಕನ್ನಡಪ್ರಭ

ಕಾರವಾರ[ಏ.13]:  ಅದು ಖಾನಾಪುರ ತಾಲೂಕಿನ ಭೀಮಗಡ ವನ್ಯಜೀವಿಧಾಮದ ನಡುವಣ ಕುಗ್ರಾಮ ದೇಗಾಂವ. ಅಲ್ಲೊಂದು ಮದುವೆಯ ಎಂಗೇಜ್‌ಮೆಂಟ್ ನಡೆಯುತ್ತಿತ್ತು. ಕೇವಲ 40 ರಿಂದ 50 ಜನ ಸೇರಿದ್ದರು. ಹಠಾತ್ತಾಗಿ ಅವರ ಎದುರು ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಹೋಗಿ ನಿಂತು ಶುಭ ಹಾರೈಸಿದಾಗ ಎಲ್ಲರಿಗೂ ಅಚ್ಚರಿ. ಜತೆಗೆ ಸಂಭ್ರಮ. ಸಚಿವರ ಜತೆ ಫೋಟೋ ಸೆಶನ್ ಕೂಡ ನಡೆಯಿತು.

ಉತ್ತರ ಕನ್ನಡ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅನಂತಕುಮಾರ್ ಹೆಗಡೆ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಕುಗ್ರಾಮಗಳಲ್ಲಿ ಪ್ರಚಾರಕ್ಕೆ ಹೋದಲ್ಲೆಲ್ಲ ಇಂತಹ ಕೆಲವು ಅಪರೂಪದ ಘಟನೆ ನಡೆದವು.

ಸಚಿವ ಅನಂತ ಕುಮಾರ್ ಹೆಗಡೆ ತಮ್ಮ ವಾಹನದಿಂದ ಇಳಿಯುತ್ತಿದ್ದಂತೆ ಜನತೆ ಬೋಲೋ ಭಾರತ್ ಮಾತಾಕಿ ಜೈ ಎಂಬ ಘೋಷಣೆ ಕೂಗುತ್ತಿದ್ದರು. ಮಾರ್ಗ ಮಧ್ಯೆ ಬೆಂಬಲಿಗರು, ಕಾರ್ಯಕರ್ತರು ಹಾರ ಹಾಕಿ ಸ್ವಾಗತಿಸುತ್ತಿದ್ದರು. ಸ್ಥಳೀಯ ಮುಖಂಡರನ್ನು ಮುಂದಿಟ್ಟುಕೊಂಡು ತೆರಳುತ್ತಿದ್ದ ಹೆಗಡೆ ಅವರಿಗೆ ಹೋದಲ್ಲೆಲ್ಲ ಕಾರ್ಯಕರ್ತರು, ಜನತೆ ಆತ್ಮೀಯತೆಯಿಂದ ಬರಮಾಡಿಕೊಳ್ಳುತ್ತಿದ್ದುದು ಕಂಡುಬಂತು. ಬಾಳೆಹಣ್ಣು ಸೇರಿದಂತೆ ತಾವೆ ಬೆಳೆದ ಹಣ್ಣುಗಳನ್ನು ತಂದು ಪ್ರಚಾರಕ್ಕೆ ಬಂದವರಿಗೆ ಹಳ್ಳಿಗರು ಆತಿಥ್ಯ ಮಾಡುತ್ತಿದ್ದುದು ವಿಶೇಷವಾಗಿತ್ತು.

ದೇಗುಲ ಓಟ: ಮಂಗಳವಾರ ಬೆಳಗ್ಗೆ ತೋಪಿನಕಟ್ಟಿ ಗ್ರಾಮಕ್ಕೆ ಭೇಟಿ ನೀಡಿದಾಗ ಅಲ್ಲಿ ಗ್ರಾಮದೇವಿ ಜಾತ್ರೆ ನಡೆಯುತ್ತಿತ್ತು. ಅನಂತಕುಮಾರ್ ಹೆಗಡೆ ಕಾರಿನಿಂದ ಇಳಿಯುತ್ತಿದ್ದಂತೆ ಡೊಳ್ಳು ಕುಣಿತ, ವಾದ್ಯ ಮೇಳಗ ಳೊಂದಿಗೆ ದೇವಿ ದರ್ಶನಕ್ಕೆ ಕರೆದೊಯ್ಯಲಾಯಿತು. ಅನಂತಕುಮಾರ್ ಹೆಗಡೆ ಪ್ರಚಾರಕ್ಕೆ ಹೋದಲ್ಲೆಲ್ಲ ದೇವಾಲ ಯಕ್ಕೆ ತೆರಳುವುದು ಸಂಪ್ರ ದಾಯ. ಅದನ್ನು ಇಲ್ಲಿಯೂ ಮುಂದುವರಿಸಿದರು. ತೋಪಿನ ಕಟ್ಟಿ ಗ್ರಾಮ ದೇವಿ, ಮಹಾಲಕ್ಷ್ಮೀ, ಶಿವ ದೇವಾಲಯ ಹೀಗೆ ೫ ದೇವಾಲಯಗಳಿಗೆ ತೆರಳಿ ದೇವರ ದರ್ಶನ ಪಡೆದರು.

ಮಂಗಳವಾರ ಅನಂತ ಹೆಗಡೆ ಪ್ರಚಾರ ನಡೆಸಿದ್ದು ಬಹುತೇಕ ಕುಗ್ರಾಮಗಳಲ್ಲಿ ಡಾಂಬರು ಕಾಣದ ರಸ್ತೆಯಲ್ಲಿ ಧೂಳೆಬ್ಬಿಸುತ್ತ ಹೋಗು ತ್ತಿದ್ದರು. ಎಲ್ಲಿಯೂ ಊಟ ತಿಂಡಿಗೆ ಹೋಟೆಲ್ ಗಳಿಲ್ಲ. ಹೀಗಾಗಿ ಪಕ್ಷದ ಪದಾಧಿಕಾರಿಗಳು ತಮ್ಮ ಮನೆಯಲ್ಲೆ ಊಟ, ತಿಂಡಿಗೆ ವ್ಯವಸ್ಥೆ ಕಲ್ಪಿಸಿದ್ದರು. ಹೆಗಡೆ ಅಪ್ಪಟ ಸಸ್ಯಾಹಾರಿ. ಮಿತವಾದ ಆಹಾರ. ದಣಿವು ಎನ್ನುವುದನ್ನು ಕೇಳಲೇಬೇಡಿ. ಪೊಲೀಸರು, ಚುನಾವಣಾ ವೀಕ್ಷಕರು ಬಸವಳಿದರೂ ಹೆಗಡೆ ನಗು ನಗುತ್ತಲೇ ಉತ್ಸಾಹದಿಂದ ಮುನ್ನಡೆಯುತ್ತಿದ್ದರು. ನೇರಸಾ, ಶಿರೋಲಿ, ದೇಗಾಂವ, ತಿವೋಲಿ, ಕಿರಾವಳೆ ಮತ್ತು ಗುಂಜಿ ಗ್ರಾಮಗಳಲ್ಲಿ ಸಭೆ ನಡೆಸಿದ ಅವರು ಸಭೆಗೆ ಜನರನ್ನು ಸೆಳೆಯುವಲ್ಲಿ ಯಶಸ್ವಿಯಾದರು.

ಪ್ರತಿಯೊಂದು ಕಡೆಯೂ ಸಚಿವರು ಪ್ರಸ್ತಾಪಿಸಿದ್ದು ರಾಷ್ಟ್ರೀಯತೆ ಹಾಗೂ ಅಭಿವೃದ್ಧಿ. ಜತೆ ಜತೆಗೆ ಕಾಂಗ್ರೆಸ್ ಹಾಗೂ ಜೆಡಿಎಸ್ ಮುಖಂಡರನ್ನು ತೀಕ್ಷ್ಣವಾಗಿ ತಿವಿದರು. ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿ ಯಾಗಬೇಕು. ದೇಶ ಸಮೃದ್ಧ, ಸುಭದ್ರವಾಗಬೇಕೆಂದು ಕರೆ ನೀಡಿದರು.

ಸಂಜೆ ಗುಂಜಿಯಲ್ಲಿ ನೂರಾರು ಜನರು ಸೇರಿದ್ದರು. ಅನಂತಕುಮಾರ್ ಹೆಗಡೆ ಮಾತು ಆರಂಭಿಸಿದಾಗ ಕರೆಂಟ್ ಕೈಕೊಟ್ಟಿತು. ಮೈಕ್ ಬಂದ್ ಆಯ್ತು. ಆಗ ಕುರ್ಚಿಯಲ್ಲಿ ಕುಳಿತ ಜನರು ಸುತ್ತುವರಿದು ನಿಂತು. ಮಾತು ನಿಲ್ಲಿಸಬೇಡಿ. ಮಾತಾಡಿ ಎಂದು ಆಗ್ರಹಿಸಿದಾಗ ಹೆಗಡೆ ಮೈಕ್ ಇಲ್ಲದೆ ಮಾತನಾಡಿದರು.

ತಿವೋಲಿ ಎಂಬಲ್ಲಿ ಮನಗೌಡ ಪಾಟೀಲ್ ಎಂಬ ವೃದ್ಧ ನೆಹರು ಕಾಲದಿಂದ ಮೋದಿ ತನಕದ ಆಡಳಿತವನ್ನು ವಿಶ್ಲೇಷಿಸಿದರು. ಈಗಿನ ಕಾಂಗ್ರೆಸ್ ಹಾಗೂ ಜೆಡಿಎಸ್ ಸರ್ಕಾರ ಎಂದರೆ ಬೆಕ್ಕು, ಇಲಿಯ ಸ್ನೇಹ ಇದ್ದಂತೆ ಎಂದು ವ್ಯಂಗ್ಯವಾಡಿದ್ದು ಸಚಿವ ಹೆಗಡೆ ಅವರ ಗಮನ ಸೆಳೆಯಿತು. ತಮ್ಮ ಭಾಷಣದಲ್ಲೂ ಅದನ್ನು ಅವರು ಪ್ರಸ್ತಾಪಿಸಿದರು.

ಪ್ರತಿಯೊಂದು ಕಡೆ ಹೆಗಡೆ ಪ್ರಚಾರ ಭಾಷಣ ಮುಗಿಸುತ್ತಿದ್ದಂತೆ ಯುವಕರು ಸೆಲ್ಫಿಗಾಗಿ ಮುತ್ತಿಗೆ ಹಾಕುತ್ತಿದ್ದರು. ಕೇವಲ ಮಾತಿನಿಂದಲೇ ಮೋಡಿ ಮಾಡುವ ಹೆಗಡೆ ಭಾಷಣ ಮುಗಿಯುತ್ತಿದ್ದಂತೆ ಎಲ್ಲೆಡೆ ಸೆಲ್ಫಿ ಸೆಶನ್ ನಡೆಯುತ್ತಿತ್ತು.

ಖಾನಾಪುರದಲ್ಲಿ ಬಹುತೇಕ ಜನರು ಸಮಸ್ಯೆಯ ಪರಿಹಾರಕ್ಕೆ ಸಚಿವರಲ್ಲಿ ಮುಗಿಬೀಳುತ್ತಿದ್ದರು. ಎದುರಿಗೆ ಚುನಾವಣೆ ಇದ್ದರೂ ಬೇಡಿಕೆಗಳ ಪಟ್ಟಿಯನ್ನು ಮುಂದಿಡುತ್ತಿದ್ದರು. ಈಗ ಚುನಾವಣೆ ಇದೆ. ಏನೂ ಹೇಳುವಂತಿಲ್ಲ ಎಂಬ ಸಚಿವರ ಮಾತಿಗೆ ಸಾಹೇಬ್ರ ಏನ ತೊಂದ್ರಿ ಇಲ್ರೀ. ನೀವೇ ಗೆದ್ದು ಬರ್ತೀರಿ ಅಂತ ಹೇಳಾಕ ಹತ್ತೀವ್ರಿ ಎನ್ನುತ್ತಿದ್ದರು.

ಗುಂಜಿಯಲ್ಲಿ ಅನಂತಕುಮಾರ್ ಹೆಗಡೆ ನಡೆದು ಹೋಗುವಾಗ ರಸ್ತೆಯ ಪಕ್ಕದಲ್ಲಿ ಬಿದಿರಿನ ಬುಟ್ಟಿ ಹೆಣೆಯುತ್ತಿದ್ದವರನ್ನು ಮಾತನಾಡಿಸಿದರು. ಈ ಕಲೆಯನ್ನು ಕಾಪಾಡಿಕೊಂಡ ಬಗ್ಗೆ ಪ್ರಂಶಸಿಸಿದರು

ಖಾನಾಪುರದ ಬಿಜೆಪಿ ಮುಖಂಡರಾದ ವಿಠ್ಠಲ ಪಾಟೀಲ, ಜ್ಯೋತಿಬಾ ರೇಮಾಣಿ, ಸಂಜಯ ಕುಬಲ, ಪ್ರಮೋದ ಕೊಚೇರಿ, ಮಂಜುಳಾ ಕಾಪ್ಸೆ ಇತರರು ಅನಂತಕುಮಾರ್‌ರಿಗೆ ಸಾಥ್ ನೀಡಿದರು.

ಕೋಮು ಭಾವನೆ ಕೆರಳಿಸುವ ಶಬ್ದ ಇಲ್ಲ

ಬೆಳಗ್ಗೆಯಿಂದ ಸಂಜೆ ತನಕ ಸಚಿವ ಅನಂತಕುಮಾರ್ ಹೆಗಡೆ ಹಿಂದು, ಮುಸ್ಲಿಂ ಹೀಗೆ ಧರ್ಮದ ಕುರಿತು, ಕೋಮು ಭಾವನೆ ಕೆರಳಿಸುವ ಯಾವುದೇ ಒಂದು ಶಬ್ದವನ್ನೂ ಹೇಳಲಿಲ್ಲ. ಈ ಬದಲಾವಣೆ ಎದ್ದು ಕಂಡಿತು. ವಿವಾದದಿಂದ ಅಂತರ ಕಾದುಕೊಳ್ಳುತ್ತಿರುವುದು ಸ್ಪಷ್ಟವಾಗಿತ್ತು. ಹಾಗಂತ ರಾಷ್ಟ್ರೀಯತೆಯನ್ನು ಬಲವಾಗಿ ಪ್ರತಿಪಾದಿಸಿದರು. ಕಾಂಗ್ರೆಸ್‌ನ ಪ್ರಣಾಳಿಕೆ ರಾಷ್ಟ್ರಘಾತುಕತನದ್ದು ಎಂದು ಹರಿಹಾಯ್ದರು. ಮೋದಿಯ ಹೆಸರನ್ನು ಮೇಲಿಂದ ಮೇಲೆ ಪ್ರಸ್ತಾಪಿಸಿದರು. ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆಯೂ ವಿವರಿಸಿದರು.

ದೇಶದಲ್ಲಿ ಏ.11 ರಿಂದ ಮೇ.19ರವರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ, ಕರ್ನಾಟಕದಲ್ಲಿ 28.

Follow Us:
Download App:
  • android
  • ios