-ವಿಜಯ್‌ ಮಲಗಿಹಾಳ, ಕನ್ನಡ ಪ್ರಭ

ಬೆಂಗಳೂರು[ಮಾ.31]: ಲೋಕಸಭಾ ಚುನಾವಣೆಯ ಅಭ್ಯರ್ಥಿಗಳ ಆಯ್ಕೆಗೆ ಸಂಬಂಧಿಸಿದಂತೆ ಪ್ರಮುಖ ಪಕ್ಷ ಬಿಜೆಪಿಯಲ್ಲೂ ಹಲವು ರೀತಿಯ ಗೊಂದಲಗಳು ಉದ್ಭವಿಸಿ ಅಸಮಾಧಾನ ಸೃಷ್ಟಿಸಿದ್ದರೂ ಅದನ್ನು ಪ್ರಸ್ತಾಪಿಸಲು ಮುಂದೆ ಬಂದವರು ಯಾರೂ ಇಲ್ಲ. ಅದಕ್ಕೆ ನಾನಾ ಕಾರಣಗಳು ಇರಬಹುದು. ಆದರೆ, ಪಕ್ಷದ ರಾಜ್ಯ ಉಪಾಧ್ಯಕ್ಷರೂ ಆಗಿರುವ ಮಾಜಿ ಸಚಿವ ಹಾಗೂ ಹಾಲಿ ಶಾಸಕ ವಿ.ಸೋಮಣ್ಣ ಅವರು ಬೆಂಗಳೂರು ದಕ್ಷಿಣ ಕ್ಷೇತ್ರದ ಅಭ್ಯರ್ಥಿಯ ಆಯ್ಕೆ ಕುರಿತಂತೆ ಬಹಿರಂಗವಾಗಿಯೇ ಅತೃಪ್ತಿ ಹೊರಹಾಕಿದ್ದಾರೆ.

ಈ ಹಿನ್ನೆಲೆಯಲ್ಲಿ ಪಕ್ಷದಲ್ಲಿನ ಪ್ರಸಕ್ತ ಬೆಳವಣಿಗೆಗಳ ಕುರಿತು ಶನಿವಾರ ‘ಕನ್ನಡಪ್ರಭ’ಕ್ಕೆ ನೀಡಿರುವ ವಿಶೇಷ ಸಂದರ್ಶನದಲ್ಲಿ ಸೋಮಣ್ಣ ಅವರು ಹಲವಾರು ವಿಚಾರಗಳನ್ನು ಮುಲಾಜಿಲ್ಲದೆ ಪ್ರಸ್ತಾಪಿಸಿದ್ದಾರೆ. ಈ ಮೂಲಕ ಪಕ್ಷದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದನ್ನು ಸೂಕ್ಷ್ಮವಾಗಿ ಹೇಳಿದ್ದಾರೆ. ಅವರ ಸಂದರ್ಶನದ ಪೂರ್ಣ ಪಾಠ ಹೀಗಿದೆ:

* ಟಕೆಟ್‌ ಹಂಚಿಕೆ ಸುಸೂತ್ರವಾಗಿ ನಡೆಯಿತು ಅಂತ ಅನ್ನಿಸಿದೆಯೇ?

ಒಟ್ಟಾರೆ ಟಿಕೆಟ್‌ ಹಂಚಿಕೆಯಲ್ಲಿ ಸ್ವಲ್ಪ ಗೊಂದಲವಾಗಿದೆ. ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರು ಅನುಭವಿ ರಾಜಕಾರಣಿಯಾಗಿ ಎಷ್ಟರ ಮಟ್ಟಿಗೆ ವರಿಷ್ಠರಿಗೆ ಬೆಳಕು ಚೆಲ್ಲಿದರೋ ಗೊತ್ತಿಲ್ಲ. ಎಲ್ಲೆಲ್ಲಿ ಗೆಲ್ಲುವ ಅವಕಾಶವಿತ್ತೋ ಅಲ್ಲಿ ಗೊಂದಲ ಸೃಷ್ಟಿಮಾಡಿ ಕೊನೆಯ ಕ್ಷಣದಲ್ಲಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ. ಯಡಿಯೂರಪ್ಪ ಅವರು ಹೈಕಮಾಂಡ್‌ಗೆ ಸರಿಯಾದ ಮಾಹಿತಿ ನೀಡಲಿಲ್ಲವೋ ಅಥವಾ ಪರಿಣಾಮಕಾರಿಯಾಗಿ ಮನವೊಲಿಸಲಿಲ್ಲವೋ ಎಂಬುದು ತಿಳಿಯುತ್ತಿಲ್ಲ. ಇದು ಆಗಬಾರದಿತ್ತು.

* ರಾಜ್ಯ ಬಿಜೆಪಿಯಲ್ಲಿ ಪಕ್ಷಕ್ಕೆ ಸಂಬಂಧಿಸಿದ ಅಥವಾ ರಾಜ್ಯಕ್ಕೆ ಸಂಬಂಧಿಸಿದ ವಿಷಯಗಳನ್ನು ಪ್ರಧಾನಿ ನರೇಂದ್ರ ಮೋದಿ ಮತ್ತು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರೊಂದಿಗೆ ಮುಕ್ತವಾಗಿ ಹಂಚಿಕೊಳ್ಳಲು ಸಂಪರ್ಕ ಹಾಗೂ ಸಂವಹನದ ಕೊರತೆ ಇದ್ದಂತಿದೆ?

ನೋಡಿ, ಇದು ಒಂದು ನೋವಿನ ಸಂಗತಿ. ಅನಂತಕುಮಾರ್‌ ಅವರು ಇದ್ದಾಗ ಈ ರೀತಿ ಆಗುತ್ತಿರಲಿಲ್ಲ. ಮೋದಿ ನೇತೃತ್ವದ ಕೇಂದ್ರ ಸರ್ಕಾರ ಅಸ್ತಿತ್ವಕ್ಕೆ ಬಂದು ಐದು ವರ್ಷಗಳಾಗುತ್ತಾ ಬಂದಿದೆ. ನಮ್ಮ ರಾಜ್ಯ ನಾಯಕರು ಯಾರನ್ನೂ ಪರಿಚಯ ಮಾಡಿಲ್ಲ. ಮೊದಲಾದರೆ ರಾಷ್ಟ್ರೀಯ ನಾಯಕರಾದ ರಾಜನಾಥ್‌ ಸಿಂಗ್‌, ಅರುಣ್‌ ಜೇಟ್ಲಿ, ನಿತಿನ್‌ ಗಡ್ಕರಿ, ಸುಷ್ಮಾ ಸ್ವರಾಜ್‌ ಮತ್ತಿತರರಿಗೆ ನಮ್ಮ ಮುಖ ಪರಿಚಯವಾದರೂ ಇರುತ್ತಿತ್ತು. ಇತ್ತೀಚೆಗೆ ದೊಡ್ಡ ನಿರ್ವಾತ ಸೃಷ್ಟಿಯಾಗಿದೆ. ಅದನ್ನು ಯಡಿಯೂರಪ್ಪ ಅವರು ತುಂಬಬೇಕು.

* ರಾಜ್ಯ ಬಿಜೆಪಿಯ ಎಲ್ಲ ನಾಯಕರು ಹಾಗೂ ಅಭ್ಯರ್ಥಿಗಳು ಮೋದಿ ಅವರ ಮೇಲೆಯೇ ಅವಲಂಬಿತರಾದಂತಿದೆ?

ದೇಶಾದ್ಯಂತ ಎಲ್ಲ ಪಕ್ಷಗಳಿಗೂ ಕಾಣುತ್ತಿರುವ ಒಬ್ಬ ನಾಯಕ ನರೇಂದ್ರ ಮೋದಿ. ಅವರು ನಮ್ಮ ಪಕ್ಷದ ಹಾಲಿ ಪ್ರಧಾನಿ ಹಾಗೂ ಮತ್ತೊಮ್ಮೆ ಪ್ರಧಾನಿಯಾಗುವವರು. ಹೀಗಾಗಿ ನಾವು ಅವರ ಹೆಸರನ್ನು ಹೇಳುತ್ತೇವೆ.

* ನಿಮ್ಮ ಪ್ರಕಾರ ಟಿಕೆಟ್‌ ಹಂಚಿಕೆಯಲ್ಲಿ ಯಾರ ಕೈ ಮೇಲಾಗಿದೆ?

ಯಾರ ಕೈ ಮೇಲಾಗಿದೆಯೋ ಬಿಟ್ಟಿದೆಯೋ ಗೊತ್ತಿಲ್ಲ. ಆದರೆ, ಸರಿಯಾಗಿ ಹಂಚಿಕೆ ಆಗಿಲ್ಲ ಎಂಬುದು ನಿಜ. ರಾಷ್ಟ್ರದ ಚಿತ್ರಣವನ್ನು ಬದಲಾವಣೆ ಮಾಡುವ ಚುನಾವಣೆ. ವಿಧಾನಸಭೆ, ಜಿಲ್ಲಾ ಪಂಚಾಯಿತಿ ಚುನಾವಣೆ ಅಲ್ಲ. ಇಂಥ ಸಂದರ್ಭದಲ್ಲಿ ಟಿಕೆಟ್‌ ಹಂಚಿಕೆಯಲ್ಲಿ ಗೊಂದಲ ಮಾಡಿಕೊಂಡಿರುವುದು ಸರಿಯಲ್ಲ. ಇನ್ನು ಮುಂದಾದರೂ ಹೀಗೆ ಆಗದಂತೆ ನೋಡಿಕೊಳ್ಳುವುದು ವರಿಷ್ಠರ ಕರ್ತವ್ಯ. ನನಗೆ ಅವಕಾಶ ಸಿಕ್ಕಿದರೆ ವರಿಷ್ಠರಿಗೆ ನೇರವಾಗಿಯೇ ಹೇಳುತ್ತೇನೆ. ನನಗೇನೂ ಮುಲಾಜಿಲ್ಲ.

* ಕಳೆದ ವಿಧಾನಸಭಾ ಚುನಾವಣೆಯಲ್ಲೂ ಟಿಕೆಟ್‌ ಹಂಚಿಕೆಯಲ್ಲಿ ಕೊನೆಯ ಕ್ಷಣದ ಗೊಂದಲದಿಂದಾಗಿ ಹಲವು ಕ್ಷೇತ್ರಗಳನ್ನು ಕಳೆದುಕೊಳ್ಳಬೇಕಾಯಿತಂತೆ?

ನೂರಕ್ಕೆ ನೂರರಷ್ಟುನಿಜ. ಆ ಚುನಾವಣೆಯಲ್ಲಿ ನಮಗೆ 122ರಿಂದ 125 ಸ್ಥಾನ ಬರಬೇಕಾಗಿತ್ತು. ಯಡಿಯೂರಪ್ಪ ಅವರು ಎಲ್ಲೋ ಒಂದು ಕಡೆ ಅವರಿವರು ಹೇಳುವುದನ್ನು ಕೇಳುವುದನ್ನು ಬಿಟ್ಟು ಅವರಿಗಿರುವ ವಿಶಾಲ ಅನುಭವದಿಂದ ನಿರ್ಧಾರ ಕೈಗೊಳ್ಳಬೇಕಾಗಿತ್ತು. ಕೆಲಸಕ್ಕೆ ಬಾರದವರ ಮಾತುಗಳನ್ನು ಕೇಳಿದ್ದರಿಂದಲೇ ಯಡಿಯೂರಪ್ಪ ಅವರಿಗೆ ಮುಖ್ಯಮಂತ್ರಿ ಸ್ಥಾನ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬಂತಾಯಿತು. ಇದಕ್ಕೆ ನಾವ್ಯಾರೂ ಕಾರಣರಲ್ಲ.

* ಕೊನೆಯ ಕ್ಷಣದಲ್ಲಿ ತೇಜಸ್ವಿನಿ ಅನಂತಕುಮಾರ್‌ ಅವರಿಗೆ ಟಿಕೆಟ್‌ ನಿರಾಕರಿಸಿದ್ದು ಯಾಕೆ? ಇದರ ಹಿಂದಿನ ರಾಜಕಾರಣವೇನು?

ಬೆಂಗಳೂರು ದಕ್ಷಿಣ ಕ್ಷೇತ್ರವನ್ನು ಸ್ವಲ್ಪ ಗಂಭೀರವಾಗಿ ಪರಿಗಣಿಸಿ ತೇಜಸ್ವಿನಿ ಅನಂತಕುಮಾರ್‌ ಅವರಿಗೆ ನೀಡಿದ್ದರೆ ಗೆಲುವು ಸುಲಭವಾಗುತ್ತಿತ್ತು. ಜೊತೆಗೆ ಉತ್ತಮ ಸಂದೇಶ ರವಾನಿಸಿದಂತಾಗುತ್ತಿತ್ತು. ತೇಜಸ್ವಿನಿ ಅವರನ್ನು ಕೇವಲ ಅನಂತಕುಮಾರ್‌ ಪತ್ನಿ ಎಂದಷ್ಟೇ ನೋಡಬಾರದು. ಅವರು ಅದಮ್ಯಚೇತನದಂಥ ದೊಡ್ಡ ಸಂಸ್ಥೆಯನ್ನು ಕಟ್ಟಿಬೆಳೆಸಿದ್ದಾರೆ. ಅದ್ಯಾಕೋ ಏನೋ ಎಲ್ಲಿ ಎಡವಟ್ಟಾಯಿತು ಎಂಬುದು ಗೊತ್ತಾಗುತ್ತಿಲ್ಲ. ತನ್ನ ಗಂಡನನ್ನು ಕಳೆದುಕೊಂಡು ದೊಡ್ಡ ನೋವಿನಲ್ಲಿರುವ ತೇಜಸ್ವಿನಿ ಅವರಿಗೆ ಈ ಆಘಾತ ಕೊಡಬಾರದಿತ್ತು. ಇಂಥ ಆಘಾತವಾದರೂ ತಡೆದುಕೊಂಡಿದ್ದಾರಲ್ಲ ಅದಕ್ಕೆ ಅವರಿಗೆ ಕೋಟಿ ಕೋಟಿ ನಮನಗಳು.

* ತೇಜಸ್ವಿನಿ ಅವರಿಗೆ ಟಿಕೆಟ್‌ ತಪ್ಪಿಸಿದ್ದು ಪ್ರಧಾನಿ ನರೇಂದ್ರ ಮೋದಿ ಅವರಂತೆ? ಅನಂತಕುಮಾರ್‌ ಮೇಲಿನ ಹಳೆಯ ಸೇಡನ್ನು ಹೀಗೆ ತೀರಿಸಿಕೊಂಡರಂತೆ?

ನೋಡಿ ಮೋದಿ ಮತ್ತು ಅಮಿತ್‌ ಶಾ ಅವರು ದೇವರೇನಲ್ಲ. ಇಲ್ಲಿಂದ ಏನು ಮಾಹಿತಿ ಹೋಗಿದೆಯೋ ಅದರ ಮೇಲೆ ನಿರ್ಣಯ ಕೈಗೊಂಡಿರಬಹುದು. ಮೋದಿ ಅವರು ಈ ಒಂದು ಕ್ಷೇತ್ರದ ಬಗ್ಗೆ ತಲೆಕೆಡಿಸಿಕೊಂಡಿರುವುದಿಲ್ಲ. ಅವರು ಅಂಥ ಕೀಳು ರಾಜಕಾರಣ ಮಾಡಲು ಸಾಧ್ಯವಿಲ್ಲ. ಈ ಎಲ್ಲ ಬೆಳವಣಿಗೆಗಳ ಹಿಂದೆ ಬಸವನಗುಡಿ ಶಾಸಕ ರವಿ ಸುಬ್ರಹ್ಮಣ್ಯ ಅವರ ಸ್ವಾರ್ಥ ತುಂಬಾ ಇದೆ ಎನ್ನುವುದು ನೂರಕ್ಕೆ ನೂರರಷ್ಟುಸತ್ಯ.

* ತಮ್ಮನ್ನು ಶಾಸಕರನ್ನಾಗಿ ಮಾಡಿದ ಅನಂತಕುಮಾರ್‌ ಅವರ ಪತ್ನಿಗೆ ಟಿಕೆಟ್‌ ತಪ್ಪಿಸುವಷ್ಟುರವಿ ಸುಬ್ರಹ್ಮಣ್ಯ ಪ್ರಭಾವಿಶಾಲಿಯೇ?

ಅನಂತಕುಮಾರ್‌ ಅವರು ಅನಾರೋಗ್ಯದಿಂದ ಬಳಲುತ್ತಿರುವಾಗಲೇ ರವಿ ಸುಬ್ರಹ್ಮಣ್ಯ ಈ ತಂತ್ರ ರೂಪಿಸಿದ್ದಾರೆ. ಸುಳ್ಳುಗಳ ಮೇಲೆ ಸುಳ್ಳು ಹೇಳಿ ಪ್ರಯತ್ನ ಮಾಡಿದ್ದಾರೆ. ಒಂದೊಂದು ಸಲ ಸಣ್ಣ ಹುಲ್ಲು ಕಡ್ಡಿಯೂ ಬಗನಿ ಗೂಟವಾಗುತ್ತದೆ. ನನಗೇನು ಅವರ ಮೇಲೆ ದ್ವೇಷವಿಲ್ಲ. ಒಮ್ಮೊಮ್ಮೆ ಆಸೆ ಇಂಥ ಕೆಲಸ ಮಾಡಿಸಬಹುದು. ಅವರಿಗೆ ದೇವರು ಒಳ್ಳೆಯ ಬುದ್ಧಿ ಕೊಡಲಿ.

* ನೀವು ದೊಡ್ಡ ನಾಯಕರನ್ನು ಗುರಿಯಾಗಿಸಿ ಮಾತನಾಡುವ ಧೈರ್ಯವಿಲ್ಲದೆ ಶಾಸಕ ರವಿ ಸುಬ್ರಹ್ಮಣ್ಯ ಅವರನ್ನು ಟಾರ್ಗೆಟ್‌ ಮಾಡಿದಂತಿದೆ?

ದೊಡ್ಡವರು, ಸಣ್ಣವರು ಎನ್ನುವುದಕ್ಕಿಂತ ನನಗಿರುವ ಮಾಹಿತಿ ಆಧಾರದ ಮೇಲೆ ಹೇಳಿದ್ದೇನೆ. ಈಗಲಾದರೂ ರವಿ ಸುಬ್ರಹಣ್ಯ ಅವರು ತಮ್ಮ ಹಿಂದೆ ಯಾರಿದ್ದಾರೆ ಎಂಬುದನ್ನು ಹೇಳಲಿ. ಕನಿಷ್ಠ ಪಕ್ಷ ನಾಲ್ಕು ಗೋಡೆಗಳ ಮಧ್ಯೆ ಹೇಳಬಹುದಲ್ಲ.

* ಈ ಪ್ರಕರಣದಲ್ಲಿ ಪಕ್ಷದ ರಾಷ್ಟ್ರೀಯ ಸಹ ಸಂಘಟನಾ ಪ್ರಧಾನ ಕಾರ್ಯದರ್ಶಿ ಸಂತೋಷ್‌ ಅವರ ಪಾತ್ರ ಇದೆಯಂತೆ?

ಸಂತೋಷ್‌ ಅವರನ್ನು ನಾನು ಕಳೆದ 10 ವರ್ಷಗಳಿಂದ ನೋಡುತ್ತಿದ್ದೇನೆ. ತುಂಬಾ ಕ್ರಿಯಾಶೀಲವಾಗಿ ಕೆಲಸ ಮಾಡುವಂಥ ಒಬ್ಬ ಅಸಾಧಾರಣ ವ್ಯಕ್ತಿತ್ವವುಳ್ಳವರು. ಈ ವಿಚಾರದಲ್ಲಿ ಸತ್ಯ ಗೊತ್ತಿದ್ದದ್ದೇ ಆದರೆ ಅದು ಅಭ್ಯರ್ಥಿಯಾಗಿರುವ ತೇಜಸ್ವಿ ಸೂರ್ಯ ಮತ್ತು ಅವರ ಚಿಕ್ಕಪ್ಪ ರವಿ ಸುಬ್ರಹ್ಮಣ್ಯ ಅವರಿಗೆ ಮಾತ್ರ. ಈಗಲಾದರೂ ಅವರಿಬ್ಬರು ಇಂತಿಂಥವರಿಗೆ ತಪ್ಪು ಮಾಹಿತಿ ನೀಡಿ ದಾರಿ ತಪ್ಪಿಸಿದ್ದೇವೆ ಎಂಬುದನ್ನು ಪಕ್ಷದ ವೇದಿಕೆಯಲ್ಲಾದರೂ ಒಪ್ಪಿಕೊಳ್ಳಲಿ.

* ಹೋಗಲಿ ಪಕ್ಷದ ಅಭ್ಯರ್ಥಿಯಾಗಿರುವ ತೇಜಸ್ವಿ ಸೂರ್ಯ ಪರವಾಗಿ ಪ್ರಚಾರ ಮಾಡುತ್ತೀರಿ? ತೇಜಸ್ವಿನಿ ಅನಂತಕುಮಾರ್‌ ಅವರನ್ನೂ ಕರೆತರುತ್ತೀರಾ?

ನಮಗೆ ದೇಶ, ಪಕ್ಷ ಮುಖ್ಯ. ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿ ಮಾಡುವುದಕ್ಕಾಗಿ ಪಕ್ಷದ ಪರ ಪ್ರಚಾರ ಮಾಡುತ್ತೇನೆ. ಪರಿಸ್ಥಿತಿ ತಿಳಿಗೊಳಿಸುವ ಭರವಸೆಯನ್ನು ಪಕ್ಷದ ನಾಯಕರು ನೀಡಿದ್ದಾರೆ. ತೇಜಸ್ವಿನಿ ಅನಂತಕುಮಾರ್‌ ಅವರೂ ಪ್ರಚಾರಕ್ಕೆ ಬರುತ್ತಾರೆ ನೋಡುತ್ತಿರಿ.

* ದೇವೇಗೌಡರು ಇಬ್ಬರು ಮೊಮ್ಮಕ್ಕಳನ್ನು ಕಣಕ್ಕಿಳಿಸಿರುವುದರಿಂದ ಕುಟುಂಬ ರಾಜಕಾರಣದ ಬಗ್ಗೆ ಚರ್ಚೆ ತೀವ್ರವಾಗಿ ಕೇಳಿಬರುತ್ತಿದೆ?

ಆರಂಭದಲ್ಲಿ ದೇವೇಗೌಡರು ತಾವು ಸ್ಪರ್ಧಿಸುವುದಿಲ್ಲ ಎಂದೇ ಹೇಳುತ್ತಿದ್ದರು. ತಮ್ಮ ಇಬ್ಬರು ಮೊಮ್ಮಕ್ಕಳನ್ನು ಕಣಕ್ಕಿಳಿಸಿ ಪಕ್ಷದ ಪರ ಕೆಲಸ ಮಾಡಬಹುದಿತ್ತು ಎನ್ನುವುದು ನನ್ನ ವೈಯಕ್ತಿಕ ನಿಲುವು. ಸಮ್ಮಿಶ್ರ ಸರ್ಕಾರಕ್ಕೆ ಮಾರ್ಗದರ್ಶನ ಮಾಡಬಹುದಿತ್ತು. ಆದರೆ, ಯಾಕೆ ಇಂಥ ನಿರ್ಣಯ ಕೈಗೊಂಡರೋ ಗೊತ್ತಿಲ್ಲ.

* ನೀವು ಬಿಜೆಪಿಯಲ್ಲಿ ಸಮಾಧಾನದಿಂದ ಇಲ್ಲವಂತೆ?

ನಾನು ಬೌಂಡರಿ ಆದರೂ ಇಲ್ಲೇ ಹೊಡೆಯುತ್ತೇನೆ, ಸಿಕ್ಸರ್‌ ಆದರೂ ಇಲ್ಲೇ ಹೊಡೆಯುತ್ತೇನೆ ಎಂಬ ಮಾತನ್ನು ಹಿಂದೆ ಹೇಳಿದ್ದೆ. ಅಂದು ಅನುಕೂಲತೆಯ ದೃಷ್ಟಿಯಿಂದ ನಾನು ಕಾಂಗ್ರೆಸ್‌ನಿಂದ ಹೊರಬಂದು ಬಿಜೆಪಿಯೊಂದಿಗೆ ಕೈಜೋಡಿಸಿದೆ. ಅದಕ್ಕಾಗಿ ಏನೇನು ನೋವು ಅನುಭವಿಸಬೇಕೊ ಅನುಭವಿಸಿ ಆಗಿದೆ. ಇತ್ತೀಚೆಗೆ ಅನಂತಕುಮಾರ್‌ ಅವರು ನಿಧನ ಹೊಂದಿದ ನಂತರ ಒಂದು ರೀತಿಯ ನೋವು ಕಾಡುತ್ತಿದೆ. ಅನಂತಕುಮಾರ್‌ ಪತ್ನಿಗೆ ಟಿಕೆಟ್‌ ಕೊಟ್ಟಿದ್ದರೆ ನಾನು ಸಮಾಧಾನವಾಗಿ ಇರುತ್ತಿದ್ದೆ.

* ಪಕ್ಷದ ರಾಜ್ಯ ಉಪಾಧ್ಯಕ್ಷರು ನೀವು? ನೀವೇ ಹೀಗೆ ನೋವು ಅನುಭವಿಸಿದೆ ಎಂದರೆ ಏನರ್ಥ?

ಸಕ್ರಿಯವಾಗಿ ಇರಬೇಕು ಎಂದರೆ ಸಂಘಟನೆಯಲ್ಲಿ ಕೆಲಸ ಕೊಡಬೇಕು. ನನಗೆ ಒಂದು ರಾಜ್ಯ ಉಪಾಧ್ಯಕ್ಷ ಹುದ್ದೆ ಕೊಟ್ಟು ನಾಮ್‌ಕೇವಾಸ್ತೆ ಕೂಡಿಸಿದ್ದಾರೆ. ಚಾಮರಾಜನಗರ ಜಿಲ್ಲಾ ಉಸ್ತುವಾರಿ ಕೊಟ್ಟಿದ್ದರು. ಆ ಭಾಗದಿಂದ ಹತ್ತು ಸ್ಥಾನ ಗೆಲ್ಲಿಸಿಕೊಂಡು ಬರುತ್ತೇನೆ ಎಂದಿದ್ದೆ. ಆದರೆ, ಯಡಿಯೂರಪ್ಪ ಕೇಳಲಿಲ್ಲ. ಬದಲಾಯಿಸಿದರು. ನಾನು ನಿಂತ ನೀರಲ್ಲ. ಹರಿಯುವ ನೀರು. ನನ್ನನ್ನು ಕಡೆಗಣಿಸುತ್ತಿರುವ ಬಗ್ಗೆ ಯಡಿಯೂರಪ್ಪ ಅವರಿಗೇ ನೇರವಾಗಿ ಹೇಳಿದ್ದೇನೆ. ಆದರೆ, ಅದು ಅವರ ತಲೆಗೇ ಹೋಗುತ್ತಿಲ್ಲ.

* ನೀವು ಕಾಂಗ್ರೆಸ್ಸಿಗೆ ವಾಪಸ್‌ ಹೋಗುತ್ತೀರಿ ಎಂಬ ಮಾತಿದೆ?

ಇಲ್ಲ. ನಾನು ಕಾಂಗ್ರೆಸ್‌ ಪಕ್ಷಕ್ಕೆ ಮರಳುವ ಬಗ್ಗೆ ಯೋಚನೆ ಮಾಡಿಲ್ಲ. ಮಾಡುವುದೂ ಇಲ್ಲ. ಚಾಮರಾಜನಗರ, ಮೈಸೂರು, ಹಾಸನ, ತುಮಕೂರು ಜಿಲ್ಲೆಗಳಲ್ಲಿ ಜವಾಬ್ದಾರಿ ಕೊಟ್ಟಿದ್ದರೆ ಪಕ್ಷಕ್ಕೆ ಇನ್ನೂ 8ರಿಂದ 10 ಸ್ಥಾನ ಹೆಚ್ಚು ಬರುತ್ತಿತ್ತು. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಬಹುದಿತ್ತು. ಆದರೆ, ಆ ವೇಳೆ ಅವರು ನಮ್ಮ ಸಮಗ್ರತೆಯನ್ನೇ ಸಂಶಯಿಸಿದರು. ಹೀಗಾಗಿ, ನಾನು ತಟಸ್ಥನಾದೆ.

* ವಿಧಾನಸಭಾ ಚುನಾವಣೆ ವೇಳೆ ಯಡಿಯೂರಪ್ಪ ಅವರು ನಿಮ್ಮ ಮನೆಗೆ ಬಂದು ಊಟ ಮಾಡಿ ಹೋದ ನಂತರ ಬಿಕ್ಕಟ್ಟು ನಿವಾರಣೆಯಾಗಿದೆ ಎಂದೇ ಬಿಂಬಿಸಲಾಗಿತ್ತು?

-ಅಲ್ಲಿಂದಾಚೆಗೇ ಜಾಸ್ತಿ ಆಗಿದ್ದು. ಏನೋ ಆಯಿತು. ಇವತ್ತು ಯಡಿಯೂರಪ್ಪ ಅವರು ಮಾನಸಿಕವಾಗಿ ಖಿನ್ನರಾಗಿದ್ದಾರೆ. ಅವರು ಒಮ್ಮೆ ಮುಖ್ಯಮಂತ್ರಿಯಾಗಲಿ. ಭಗವಂತ ಅವರಿಗೆ ಆರೋಗ್ಯ ಮತ್ತು ಶಕ್ತಿ ಕೊಡಲಿ.

* ಬಳ್ಳಾರಿ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ‘ಶ್ರೀರಾಮುಲು ಮುಖ್ಯಮಂತ್ರಿಯಾಗುತ್ತಾರೆ’ ಎಂಬ ನಿಮ್ಮ ಹೇಳಿಕೆಯೂ ಪಕ್ಷದ ಸೋಲಿಗೆ ಕಾರಣವಾಯಿತಂತೆ?

- ಗೆದ್ದಾಗ ಯಾರೂ ಹೇಳುವುದಿಲ್ಲ. ಸೋತಾಗ ಎಲ್ಲರೂ ಕಾರಣ ಹುಡುಕುತ್ತಾರೆ. ನನಗೂ 40 ವರ್ಷಗಳ ರಾಜಕೀಯ ಅನುಭವವಿದೆ. ನಾನು ಆಗ ಆ ಹೇಳಿಕೆ ನೀಡದೇ ಇದ್ದಿದ್ದರೆ ಇನ್ನೂ ಅಧ್ವಾನವಾಗುತ್ತಿತ್ತು. ಅದರಿಂದ ಪಕ್ಷಕ್ಕೆ ಅನುಕೂಲವೇ ಆಗಿದೆ.