Asianet Suvarna News Asianet Suvarna News

ನಾಲ್ಕನೇ ಬಾರಿ ಒಲಿಯುತ್ತಾ ಜೋಶಿಗೆ ಗೆಲುವು : ಅವರು ಹೇಳೋದೇನು..?

ತೊಂಭತ್ತರ ದಶಕದಲ್ಲಿ ನಡೆದ ಈದ್ಗಾ ಮೈದಾನದ ಹೋರಾಟದಿಂದ ಮುಂಚೂಣಿಗೆ ಬಂದ ನಾಯಕರಲ್ಲಿ ಒಬ್ಬರಾದ ಪ್ರಹ್ಲಾದ ಜೋಶಿ, ಬಿಜೆಪಿ ಪ್ರಭಾವಿ ಸಂಸದರ ಪೈಕಿ ಒಬ್ಬರು. ಪ್ರಖರ ವಾಗ್ಮಿ ಆಗಿರುವ ಜೋಶಿ, ಸಂಸದರಾಗಿ ಹ್ಯಾಟ್ರಿಕ್‌ ಬಾರಿಸಿದ್ದಾರೆ. ಅಧಿವೇಶನದಲ್ಲಿ ಪ್ರಶ್ನೆಗಳನ್ನು ಕೇಳುವಲ್ಲಿ ಎತ್ತಿದ ಕೈ ಎನಿಸಿಕೊಂಡವರು. ಬಿಜೆಪಿ ರಾಜ್ಯಾಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿ ಸಾಕಷ್ಟುಅನುಭವ ಹೊಂದಿರುವ ಜೋಶಿ, ಇದೀಗ ಮತ್ತೆ ಧಾರವಾಡ ಲೋಕಸಭಾ ಕ್ಷೇತ್ರದಿಂದ ನಾಲ್ಕನೇ ಬಾರಿ ಗೆಲುವು ಸಾಧಿಸುವ ಗುರಿಯೊಂದಿಗೆ ಕಣಕ್ಕಿಳಿದಿದ್ದಾರೆ.

Loksabha Elections 2019 BJP Leader Prahlad Joshi interview
Author
Bengaluru, First Published Apr 20, 2019, 4:51 PM IST

ಹುಬ್ಬಳ್ಳಿ :  ತೊಂಭತ್ತರ ದಶಕದಲ್ಲಿ ನಡೆದ ಈದ್ಗಾ ಮೈದಾನದ ಹೋರಾಟದಿಂದ ಮುಂಚೂಣಿಗೆ ಬಂದ ನಾಯಕರಲ್ಲಿ ಒಬ್ಬರಾದ ಪ್ರಹ್ಲಾದ ಜೋಶಿ, ಬಿಜೆಪಿ ಪ್ರಭಾವಿ ಸಂಸದರ ಪೈಕಿ ಒಬ್ಬರು. ಪ್ರಖರ ವಾಗ್ಮಿ ಆಗಿರುವ ಜೋಶಿ, ಸಂಸದರಾಗಿ ಹ್ಯಾಟ್ರಿಕ್‌ ಬಾರಿಸಿದ್ದಾರೆ. ಅಧಿವೇಶನದಲ್ಲಿ ಪ್ರಶ್ನೆಗಳನ್ನು ಕೇಳುವಲ್ಲಿ ಎತ್ತಿದ ಕೈ ಎನಿಸಿಕೊಂಡವರು. ಬಿಜೆಪಿ ರಾಜ್ಯಾಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿ ಸಾಕಷ್ಟುಅನುಭವ ಹೊಂದಿರುವ ಜೋಶಿ, ಇದೀಗ ಮತ್ತೆ ಧಾರವಾಡ ಲೋಕಸಭಾ ಕ್ಷೇತ್ರದಿಂದ ನಾಲ್ಕನೇ ಬಾರಿ ಗೆಲುವು ಸಾಧಿಸುವ ಗುರಿಯೊಂದಿಗೆ ಕಣಕ್ಕಿಳಿದಿದ್ದಾರೆ.

ತಮ್ಮ ಪ್ರಚಾರದ ಮಧ್ಯೆಯೇ ವಿಶೇಷ ಸಂದರ್ಶನದಲ್ಲಿ ಈ ದೇಶಕ್ಕೆ ಮೋದಿ ಏಕೆ ಅನಿವಾರ್ಯ? ಮೋದಿ ಹವಾ ಹೇಗಿದೆ? ಮೋದಿ ಹೆಸರನ್ನೇಕೆ ಬಳಸಬೇಕು ಎಂಬಿತ್ಯಾದಿ ಕುರಿತು ಮನಬಿಚ್ಚಿ ಮಾತನಾಡಿದ್ದಾರೆ.

ಸಂದರ್ಶನದ ಪೂರ್ಣಪಾಠ ಹೀಗಿದೆ:

* ನಾಲ್ಕನೇ ಬಾರಿ ಸಂಸತ್‌ ಚುನಾವಣೆ ಎದುರಿಸುತ್ತಿರುವ ನಿಮ್ಮ ತಯಾರಿ, ಪ್ರಚಾರ ಹೇಗೆ ಸಾಗಿದೆ?

ಚುನಾವಣೆ ತಯಾರಿ ಎಂಬುದು ಪ್ರತ್ಯೇಕವೇನೂ ಇಲ್ಲ. ಬಿಜೆಪಿ ಬರೀ ಚುನಾವಣೆ ಇದ್ದಾಗಲಷ್ಟೇ ಜನರ ಬಳಿ ಹೋಗಲ್ಲ. ನಿರಂತರವಾಗಿ ಜನರೊಂದಿಗೆ ಸಂಪರ್ಕ ಹೊಂದಿರುತ್ತದೆ. ಪ್ರಚಾರವಂತೂ ಅದ್ಭುತವಾಗಿ ಸಾಗಿದೆ.

* ಈ ಬಾರಿ ಯಾವ ವಿಷಯ ಮುಂದಿಟ್ಟುಕೊಂಡು ಚುನಾವಣೆ ಎದುರಿಸುತ್ತಿದ್ದೀರಿ?

ಅಭಿವೃದ್ಧಿಯೇ ಈ ಬಾರಿಯ ಚುನಾವಣಾ ವಿಷಯ. ಇದು ಪರ್ಫಾಮನ್ಸ್‌ ಬೇಸ್ಡ್‌ ಎಲೆಕ್ಷನ್‌ (ಸಾಧನೆ ಆಧಾರಿತ ಚುನಾವಣೆ).

* ಕಳೆದ ಬಾರಿ ಚುನಾವಣೆ ಹಾಗೂ ಈ ಚುನಾವಣೆಯಲ್ಲಿನ ಪ್ರಧಾನಿ ಮೋದಿ ಹವಾದಲ್ಲಿ ಆಗಿರುವ ವ್ಯತ್ಯಾಸವೇನು?

ಕಳೆದ ಬಾರಿಗಿಂತಲೂ ಈ ಬಾರಿ ಮೋದಿ ಹವಾ ಜಾಸ್ತಿ. ಕಳೆದ ಚುನಾವಣೆಯಲ್ಲಿ ಮೋದಿ ಇನ್ನೂ ಪ್ರಧಾನಿಯಾಗಿರಲಿಲ್ಲ. ಈಗ ಒಂದು ಬಾರಿ ಆಡಳಿತ ನಡೆಸಿದ್ದಾರೆ. ರಾಷ್ಟ್ರೀಯತೆಯ ಕುರಿತು ಮೋದಿ ಕೈಗೊಳ್ಳುವ ದೃಢ ನಿಲುವು, ಲೆಕ್ಕವಿಲ್ಲದಷ್ಟುಅಭಿವೃದ್ಧಿ ಕೆಲಸಗಳನ್ನು ಮಾಡಿ ತೋರಿಸಿದ್ದಾರೆ. ಇಡೀ ವಿಶ್ವವೇ ಭಾರತದತ್ತ ತಿರುಗಿ ನೋಡುವಂತೆ ಮಾಡಿದ ಕೀರ್ತಿ ಮೋದಿ ಅವರಿಗೆ ಸಲ್ಲುತ್ತದೆ. ಇವೆಲ್ಲವು ಅವರ ಅಲೆಯನ್ನು ಸುನಾಮಿಯಂತೆ ಸೃಷ್ಟಿಸಿವೆ.

* ನೀವು ಸೇರಿದಂತೆ ಬಿಜೆಪಿ ಅಭ್ಯರ್ಥಿಗಳಿಗೆ ವೈಯಕ್ತಿಕ ವರ್ಚಸ್ಸೇ ಇಲ್ಲ. ಮೋದಿ ಹೆಸರಿನ ಮೇಲೆ ಮತ ಕೇಳುತ್ತಿದ್ದಾರೆ ಎಂಬುದು ವಿಪಕ್ಷಗಳ ಆರೋಪ?

ದೇಶಕ್ಕೆ ಅತ್ಯಂತ ಸಮರ್ಥ ನಾಯಕ ಎಂಬುದನ್ನು ಐದು ವರ್ಷದಲ್ಲಿ ಮೋದಿ ತೋರಿಸಿಕೊಟ್ಟಿದ್ದಾರೆ. ಮೋದಿ ಸಹಕಾರದಿಂದ ಪ್ರತಿಯೊಬ್ಬ ಸಂಸದರೂ ಸಾಕಷ್ಟುಕೆಲಸವನ್ನೂ ಮಾಡಿದ್ದಾರೆ. 60 ವರ್ಷಗಳಲ್ಲಿ ಆಗದಷ್ಟುಕೆಲಸಗಳು ದಾಖಲೆ ಪ್ರಮಾಣದಲ್ಲಿ ಮೋದಿ ಅವಧಿಯಲ್ಲಿ ಆಗಿವೆ. ಹೀಗಾಗಿ ಸಹಜವಾಗಿ ಮೋದಿ ಅಲೆ ಇದೆ. ನಮ್ಮನ್ನು ಮೋದಿ ಅಭಿಮಾನಿ, ಬೆಂಬಲಿಗ ಅಥವಾ ಭಕ್ತ ಎಂದು ಕರೆದುಕೊಳ್ಳಲು ನಮಗೇನೂ ಆತಂಕವಾಗಲಿ, ಅನುಮಾನವಾಗಲಿ ಇಲ್ಲ. ವಿರೋಧ ಪಕ್ಷಗಳು ತಮ್ಮ ಪಕ್ಷದ ರಾಷ್ಟ್ರೀಯ ನಾಯಕರ ಹೆಸರು ಹೇಳಿಕೊಂಡು ಮತ ಕೇಳಲಿ, ಬೇಡ ಎಂದವರು ಯಾರು? ಅವರಿಗೆ ಅವರ ರಾಷ್ಟ್ರೀಯ ನಾಯಕರ ಹೆಸರು ಹೇಳಿದರೆ ಮತ ಬೀಳಲ್ಲ ಎಂದೆನಿಸಿದರೆ ನಾವೇನು ಮಾಡಕ್ಕಾಗುತ್ತೆ.

* ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿಯಿಂದ ಬಿಜೆಪಿಗೆ ರಾಜ್ಯದಲ್ಲಿ ಹೊಡೆತ ಬೀಳುವುದಿಲ್ಲವೇ?

ಏನೇನೂ ಸಮಸ್ಯೆಯಾಗಲ್ಲ. ಮೈತ್ರಿ ಎಂಬುದಕ್ಕೆ ರಾಜ್ಯದಲ್ಲೇ ಅರ್ಥವೇ ಇಲ್ಲದಂತಹ ಪರಿಸ್ಥಿತಿ ಇದೆ. ಯಾವ ಪ್ರಮಾಣದಲ್ಲಿ ಪರಸ್ಪರ ಜಗಳವಾಡುತ್ತಿದ್ದಾರೆ ಎಂಬುದು ಇಡೀ ರಾಜ್ಯದ ಜನತೆಯೇ ನೋಡುತ್ತಿದೆ. ಕಳೆದ ಸಲಕ್ಕಿಂತ ಈ ಸಲ ಬಿಜೆಪಿ ಹೆಚ್ಚಿನ ಅಂದರೆ 18-20ರಷ್ಟುಸ್ಥಾನ ಗೆಲ್ಲಲಿದೆ.

* ಈ ಚುನಾವಣಾ ಫಲಿತಾಂಶದ ನಂತರ ಸಮ್ಮಿಶ್ರ ಸರ್ಕಾರ ಪತನಗೊಳ್ಳಲಿದೆ ಎಂದು ಬಿಜೆಪಿ ನಾಯಕರು ಪದೇ ಪದೇ ಹೇಳುತ್ತಿದ್ದಾರಲ್ಲ?

ನಿಜ. ಈಗ ನಡೆಯುತ್ತಿರುವ ಬಡಿದಾಟ ನೋಡಿದರೆ ಈ ಸರ್ಕಾರ ಬಹಳ ದಿನ ಉಳಿಯಲ್ಲ. ಲೋಕಸಭೆ ಚುನಾವಣೆ ನಂತರ ಮೈತ್ರಿ ಪಕ್ಷಗಳಲ್ಲಿನ ಕಿತ್ತಾಟ ಇನ್ನಷ್ಟುಜೋರಾಗುತ್ತದೆ. ತಾನಾಗಿಯೇ ಸರ್ಕಾರ ಉರುಳುತ್ತದೆ. ನಾವೇನೂ ಆಪರೇಷನ್‌ ಕಮಲ ಮಾಡುವುದಿಲ್ಲ. ಮೈತ್ರಿ ಸರ್ಕಾರದ ಶಾಸಕರೇ ಆಪರೇಷನ್‌ ಮಾಡಿ ಎಂದು ನಮ್ಮನ್ನೇ ದುಂಬಾಲು ಬೀಳುತ್ತಾರೆ. ಸಿದ್ದರಾಮಯ್ಯ ಸಂಧಾನವೆಲ್ಲ ಕಾಟಾಚಾರದ್ದಾಗಿದೆ.

* ಮಹದಾಯಿ ವಿಷಯಕ್ಕೆ ಬಂದಾಗ ಬಿಜೆಪಿ ಸಂಸದರು ಮಾತನಾಡಲಿಲ್ಲ? ಕೇಂದ್ರದ ಮೇಲೆ ಒತ್ತಡ ಹಾಕುವ ಕೆಲಸ ಮಾಡಲಿಲ್ಲ?

ಇದೊಂದು ವಿರೋಧ ಪಕ್ಷಗಳ ಕ್ಷುಲ್ಲಕ ಮತ್ತು ಜನರ ಹಾದಿ ತಪ್ಪಿಸುವ ಕೆಲಸ . ಮಹದಾಯಿಗಾಗಿ ಸಾಕಷ್ಟುಹೋರಾಟ ಮಾಡಿದ್ದೇವೆ. ಕಾಂಗ್ರೆಸಿನ ದ್ವಂದ್ವ ನೀತಿಯಿಂದಾಗಿಯೇ ಗೊಂದಲ ಸೃಷ್ಟಿಯಾಯಿತು. ಅಂತಾರಾಜ್ಯ ಜಲವಿವಾದ ಕಾಯ್ದೆ ಪ್ರಕಾರ ಎರಡು ರಾಜ್ಯಗಳು ಒಪ್ಪಲಿಲ್ಲವೆಂದರೆ ನ್ಯಾಯಾಧಿಕರಣದಲ್ಲೇ ಪರಿಹಾರ ಕಂಡುಕೊಳ್ಳಬೇಕು. ನ್ಯಾಯಾಧಿಕರಣ ರಚನೆಗೂ ಮುನ್ನ ಕುಡಿಯುವ ನೀರಿಗಾಗಿ 7.56 ಟಿಎಂಸಿ ನೀರನ್ನು ಮಾತುಕತೆ ಮೂಲಕ ಬಗೆಹರಿಸಿ. ನಂತರ ನ್ಯಾಯಾಧಿಕರಣ ರಚಿಸಿ ಎಂದು ಆಗಿನ ಪ್ರಧಾನಿ ಮನಮೋಹನಸಿಂಗ್‌ ಅವರನ್ನು ಕೇಳಿದ್ದೆವು. ಅವರು ಅದಕ್ಕೆ ಸ್ಪಂದಿಸದೆ ನ್ಯಾಯಾಧಿಕರಣ ರಚಿಸಿದರು. ಸಂಧಾನದ ವಿಷಯ ಬಂದಾಗಲೂ ಕಾಂಗ್ರೆಸ್‌ ದ್ವಂದ್ವ ನೀತಿಯನ್ನೇ ಅನುಸರಿಸಿದರು. ಹೀಗಾಗಿ ತೀರ್ಪು ಬರುವವರೆಗೂ ಕಾಯುವಂತಾಯಿತು. ಮಹದಾಯಿ ವಿಷಯದಲ್ಲಿ ಕಾಂಗ್ರೆಸ್‌ ಜನರ ಹಾದಿ ತಪ್ಪಿಸಿದರೂ ಅದನ್ನು ಮತದಾರರ ಒಪ್ಪಲಿಲ್ಲವೆಂಬುದಕ್ಕೆ ಕಳೆಗ ವಿಧಾನಸಭಾ ಚುನಾವಣೆ ಫಲಿತಾಂಶವೇ ಸಾಕ್ಷಿ.

* ಮತ್ತೆ ಪ್ರತ್ಯೇಕ ಲಿಂಗಾಯತ ಹೋರಾಟ ಮುನ್ನೆಲೆಗೆ ಬಂದಿದೆ. ಇದು ಬಿಜೆಪಿ ಅಭ್ಯರ್ಥಿಗಳಿಗೆ ತೊಂದರೆಯಾಗುವುದಿಲ್ಲವೇ?

ಪ್ರತ್ಯೇಕ ಲಿಂಗಾಯತ ಧರ್ಮ ಬೇಕೋ, ಬೇಡವೋ ಎಂಬುದರ ಬಗ್ಗೆ ನಾನೇನೂ ಹೇಳುವುದಿಲ್ಲ. ಅದನ್ನು ನಿರ್ಧರಿಸಲು ಆ ಸಮಾಜದ ಮುಖಂಡರು, ಧರ್ಮಗುರುಗಳು ಇದ್ದಾರೆ. ಅವರು ಪರಸ್ಪರ ಚರ್ಚಿಸಿ ನಿರ್ಧರಿಸಿಕೊಳ್ಳಲಿ. ಒಬ್ಬ ಮನುಷ್ಯನಾದವನಿಗೆ ಬದ್ಧತೆ ಎಂಬುದಿರಬೇಕು. ಒಂದು ಚುನಾವಣೆಯಲ್ಲಿ ಪ್ರತ್ಯೇಕ ಧರ್ಮ ಬೇಕು ಎಂದು ಹೋರಾಟ ಮಾಡಿ ಸೋತ ಬಳಿಕ, ಮತ್ತೊಂದು ಚುನಾವಣೆಯಲ್ಲಿ ಬಂದಾಗ ‘ಹೋರಾಟ ಈಗ ಅಪ್ರಸ್ತುತ, ಮುಗಿದ ಅಧ್ಯಾಯ’ ಎಂದು ಹೇಳುವುದು ಎಷ್ಟುಸರಿ. ಅಂದರೆ ಇವರು ಚುನಾವಣೆಯಲ್ಲಿ ಲಾಭ ಪಡೆಯಲು ಹೋರಾಟ ಮಾಡಿದ್ದರೇ? ಮನುಷ್ಯನಿಗೆ ಬದ್ಧತೆ ಮುಖ್ಯ.

* ಜೋಶಿ ಅವರು ಯಾವುದೇ ಕೆಲಸ ಮಾಡಿಲ್ಲ. ಧಾರವಾಡಕ್ಕೆ ಐಐಟಿ, ಐಐಐಟಿ ಬಂದಿದ್ದರಲ್ಲಿ ನಿಮ್ಮ ಪಾತ್ರವಿಲ್ಲ ಎಂಬ ಆರೋಪವಿದೆ?

ನಾನೇನು ಕೆಲಸ ಮಾಡಿದ್ದೇನೆ ಎಂಬುದನ್ನು ಜನರ ಎದುರಿಗೆ ಇಟ್ಟಿದ್ದೇನೆ. ಹಿಂದೆ ಯಾವ ಸರ್ಕಾರದಲ್ಲೂ ಆಗದಷ್ಟುಕೆಲಸಗಳು ಈ ಐದು ವರ್ಷಗಳಲ್ಲಿ ಆಗಿವೆ. ಐಐಟಿ, ಐಐಐಟಿ ಕಳೆದ 15-20 ವರ್ಷಗಳ ಬೇಡಿಕೆಯಾಗಿತ್ತು. ಇದಕ್ಕಾಗಿ ರಾಜ್ಯದಲ್ಲಿ ಆಡಳಿತ ನಡೆಸಿದ ಎಲ್ಲ ಮುಖ್ಯಮಂತ್ರಿಗಳು ಪತ್ರ ಬರೆದಿದ್ದುಂಟು. 10 ವರ್ಷ ಕೇಂದ್ರದಲ್ಲಿ ಯುಪಿಎ ಸರ್ಕಾರವೇ ಅಧಿಕಾರದಲ್ಲಿ ಇತ್ತಲ್ಲ. ಆಗ ಏಕೆ ಇವರು ತರಲಿಲ್ಲ. ಇನ್ನು ಇದಕ್ಕೆಲ್ಲ ಜಾಗ ಕೊಟ್ಟಿದ್ದು ರಾಜ್ಯ ಸರ್ಕಾರ ಎಂದು ಹೇಳುತ್ತಾರೆ. ಕೇಂದ್ರ ಸರ್ಕಾರದ ಯೋಜನೆಗಳಿಗೆ ರಾಜ್ಯ ಸರ್ಕಾರ ಜಾಗ ಕೊಡದೇ ಮತ್ಯಾರು ಕೊಡಬೇಕು. ಸರ್ಕಾರವಲ್ಲ ಅವರ ಮನೆ ದೇವರು ಜಾಗ ಕೊಡಬೇಕಾಗುತ್ತದೆ. ಇಲ್ಲದಿದ್ದಲ್ಲಿ ಜನರು ಸುಮ್ಮನಿರುತ್ತಾರಾ? ದಂಗೆ ಏಳುತ್ತಾರೆ.

* ಯೋಗೇಶಗೌಡ ಹತ್ಯೆ ಪ್ರಕರಣದಲ್ಲಿ ಸಾಕ್ಷ್ಯ ನಾಶ ಮಾಡಿದ ಆರೋಪದ ಹಿನ್ನೆಲೆಯಲ್ಲಿ ವಿನಯ್‌ ಕುಲಕರ್ಣಿ ವಿರುದ್ಧ ಪ್ರಕರಣ ದಾಖಲಾಗಲು ನಿಮ್ಮ ಕೈವಾಡವಿದೆಯಂತೆ?

ನ್ಯಾಯಾಲಯ, ಕಾನೂನಿನ ಬಗ್ಗೆ ಕಿಂಚಿತ್ತೂ ಜ್ಞಾನ ಇಲ್ಲದವರು ಆಡುವ ಮಾತಿದು. ಹಿಂದೆಯೇ ಹೈಕೋರ್ಟ್‌ ಈ ಕುರಿತು ನಿರ್ದೇಶನ ನೀಡಿದೆ. ಅದರಂತೆ ಜೆಎಂಎಫ್‌ಸಿ ಕೋರ್ಟ್‌ ವಿಚಾರಣೆ ನಡೆಸಿ ಎಫ್‌ಐಆರ್‌ ದಾಖಲಿಸಲು ಆದೇಶಿಸಿದೆ. ಅದೆಲ್ಲ ಚುನಾವಣಾ ಸಮಯದಲ್ಲೇ ಆದರೆ ನಾನೇನು ಮಾಡಲಿ? ಅವರ ಮಾತಿನಿಂದ ಹತಾಶರಾಗಿರುವುದು ಕಂಡು ಬರುತ್ತದೆ ಅಷ್ಟೇ. ಯೋಗೀಶಗೌಡ ಜಿ.ಪಂ.ನ ಬಿಜೆಪಿ ಸದಸ್ಯರಾಗಿದ್ದರು. ಅವರ ಸಹೋದರ ಗುರುನಾಥಗೌಡ ಈಗ ಬಿಜೆಪಿಯಲ್ಲಿದ್ದಾರೆ ಎಂಬ ಕಾರಣಕ್ಕೆ ಎಫ್‌ಐಆರ್‌ ದಾಖಲಾಗಲು ಜೋಶಿ ಕಾರಣ ಎಂದರೆ ಹೇಗೆ? ಜನತೆ ಎಲ್ಲವನ್ನೂ ನೋಡುತ್ತಿದ್ದಾರೆ.

* ಹುಬ್ಬಳ್ಳಿಯಲ್ಲಿ ಫ್ಲೈಓವರ್‌ ನಿರ್ಮಾಣಕ್ಕೆ ಇನ್ನೂ ಅನುಮತಿ ಸಿಕ್ಕಿಲ್ಲವಲ್ಲ?

ಕೇಂದ್ರ ಸಚಿವ ನಿತಿನ್‌ ಗಡ್ಕರಿ ಈ ಹಿಂದೆಯೇ ಭರವಸೆ ಕೊಟ್ಟು ಹೋಗಿದ್ದರು. ಅದರಂತೆ ರಾಜ್ಯ ಸರ್ಕಾರಕ್ಕೂ ಡಿಪಿಆರ್‌ ಕಳುಹಿಸುವಂತೆ ಕೇಳಿಕೊಂಡಿದ್ದೆವು. ಆದರೆ, ಸಿದ್ದರಾಮಯ್ಯ ಸರ್ಕಾರ ಬೇಗನೆ ಡಿಪಿಆರ್‌ ಕಳುಹಿಸಲಿಲ್ಲ. ಇತ್ತೀಚಿಗಷ್ಟೇ ಡಿಪಿಆರ್‌ ಸಿದ್ಧಪಡಿಸಿ ಕಳುಹಿಸಿಕೊಟ್ಟಿದೆ. ಕೇಂದ್ರ ಸರ್ಕಾರ ಫ್ಲೈಓವರ್‌ ನಿರ್ಮಾಣಕ್ಕೆ ತಾತ್ವಿಕ ಅನುಮತಿ ನೀಡಿದೆ. ಅಷ್ಟರೊಳಗೆ ಚುನಾವಣೆ ಘೋಷಣೆಯಾಯ್ತು. ಚುನಾವಣೆ ಮುಗಿದ ಬಳಿಕ ಅನುಮತಿ ದೊರೆತು ಕೆಲಸ ಆರಂಭವಾಗಲಿದೆ. ಸಾರಿಗೆ ಇಲಾಖೆಯಿಂದ .300 ಕೋಟಿ ಹಾಗೂ ಇನ್ನುಳಿದ ಹಣ ನಗರಾಭಿವೃದ್ಧಿ ಇಲಾಖೆಯಿಂದ ಬಳಕೆಯಾಗಲಿದೆ.

ವರದಿ : ಶಿವಾನಂದ ಗೊಂಬಿ

Follow Us:
Download App:
  • android
  • ios