ಬೆಳಗಾವಿ :  ರಮೇಶ್‌ ಕತ್ತಿ ಅವರು ಮತ್ತೊಮ್ಮೆ ಲೋಕಸಭೆಗೆ ಪ್ರವೇಶಿಸಲು ಕ್ಷೇತ್ರದಲ್ಲಿ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ. ಕೊನೆ ಗಳಿಗೆಯಲ್ಲಿ ಬಿಜೆಪಿ ಕೈಕೊಟ್ಟಿರುವುದು ಕತ್ತಿ ಸಹೋದರರ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ರಮೇಶ್‌ ಕತ್ತಿ ಕಾಂಗ್ರೆಸ್‌ಗೆ ಸೇರುತ್ತಾರೆ ಎಂಬ ವದಂತಿಗಳು ಹರಡುತ್ತಿವೆ. ಈ ಬೆಳವಣಿಗೆ ಕಾಂಗ್ರೆಸ್‌ ಹಾಲಿ ಸಂಸದ ಪ್ರಕಾಶ ಹುಕ್ಕೇರಿ ಅವರ ಮೇಲೂ ಪರಿಣಾಮ ಬೀರುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ.

ಪ್ರಕಾಶ ಹುಕ್ಕೇರಿ ಅವರು ಈ ಮೊದಲೇ ಬೆಳಗಾವಿ ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸಲು ಒಲವು ತೋರಿದ್ದರು. ಒಂದು ವೇಳೆ ರಮೇಶ ಕತ್ತಿ ಕಾಂಗ್ರೆಸ್‌ ಸೇರಿದ್ದೇ ಆದಲ್ಲಿ, ಬೆಳಗಾವಿ ಕಾಂಗ್ರೆಸ್‌ ಅಭ್ಯರ್ಥಿ ಬದಲಾವಣೆಯಾಗುವ ಸಾಧ್ಯತೆ ಇದೆ. ಕಾಂಗ್ರೆಸ್‌ ಸೇರ್ಪಡೆಯಾಗದಿದ್ದಲ್ಲಿ ಬಿಜೆಪಿ ವಿರುದ್ಧ ಬಂಡಾಯದ ಬಾವುಟವನ್ನು ಹಾರಿಸುವ ಸಾಧ್ಯತೆ ದಟ್ಟವಾಗಿವೆ. ಕತ್ತಿ ಸಹೋದರರ ಬೆಂಬಲಿಗರು ಕೂಡ ರಮೇಶ ಕತ್ತಿ ಅವರನ್ನು ಲೋಕಸಭೆ ಕಣಕ್ಕಿಳಿಸುವಂತೆ ಒತ್ತಡ ಹೇರತೊಡಗಿದ್ದಾರೆ. 

ಈ ಎಲ್ಲ ರಾಜಕೀಯ ಬೆಳವಣಿಗೆಯಿಂದ ಕತ್ತಿ ಸಹೋದರರು ಸಂದಿಗ್ಧ ಸ್ಥಿತಿಯಲ್ಲಿದ್ದಾರೆ. ಪ್ರಭಾವಿ ನಾಯಕ , ಶಾಸಕ ಉಮೇಶ ಕತ್ತಿ ಅವರು ತಮ್ಮ ಮುಂದಿನ ರಾಜಕೀಯ ನಡೆಯ ಕುರಿತು ಏ.3ರವರೆಗೆ ಕಾದು ನೋಡುವ ತಂತ್ರಕ್ಕೆ ಮೊರೆ ಹೋಗಿದ್ದಾರೆ. ಇದು ಕೂಡ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.