Asianet Suvarna News Asianet Suvarna News

ರಜೆ ಹಾಕಿ ಖರ್ಗೆ ಪರ ಕೆಲಸ : ಡಿಸಿಪಿ ವಿರುದ್ಧ ದೂರು

ರಜೆ ಪಡೆದುಕೊಂಡು ಮಲ್ಲಿಕಾರ್ಜುನ್ ಖರ್ಗೆ ಪರವಾಗಿ ಕೆಲಸ ಮಾಡಿದ್ದಾರೆ ಎಂದು ಪೊಲೀಸ್ ಅಧಿಕಾರಿಯೋರ್ವರ ವಿರುದ್ಧ ದೂರು ನೀಡಲಾಗಿದೆ. 

Loksabha Elections 2019 BJP Complaint Against DCP Campaign For Mallikarjun Kharge
Author
Bengaluru, First Published Apr 23, 2019, 7:48 AM IST

ಬೆಂಗಳೂರು :  ಚುನಾವಣೆ ಸಂದರ್ಭದಲ್ಲಿ ರಜೆ ಪಡೆದು ಬೆಂಗಳೂರು ಉತ್ತರ ವಿಭಾಗದ ಡಿಸಿಪಿ ಶಶಿಕುಮಾರ್‌ ಅವರು ಕಲಬುರಗಿ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ಪರವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿ ರಾಜ್ಯ ಮುಖ್ಯ ಚುನಾವಣಾಧಿಕಾರಿಗಳಿಗೆ ಬಿಜೆಪಿ ದೂರು ನೀಡಿದೆ.

ಶಶಿಕುಮಾರ್‌ ಅವರನ್ನು ತಕ್ಷಣವೇ ಬಂಧಿಸಿ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದೂ ಪಕ್ಷ ಒತ್ತಾಯಿಸಿದೆ.

ಅಲ್ಲದೆ, ಪಕ್ಷಪಾತವಾಗಿ ಚುನಾವಣೆ ನಡೆಸುತ್ತಿದ್ದಾರೆ ಎಂಬ ಆಪಾದನೆಗೆ ತುತ್ತಾಗಿರುವ ಕಲಬುರಗಿ ಜಿಲ್ಲಾಧಿಕಾರಿ ವೆಂಕಟೇಶ್‌ ಕುಮಾರ್‌ ಹಾಗೂ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಯಡಾ ಮಾರ್ಟಿನ್‌ ಅವರನ್ನು ಕೂಡ ತಕ್ಷಣವೇ ವರ್ಗಾವಣೆಗೊಳಿಸುವಂತೆ ಬಿಜೆಪಿ ಆಗ್ರಹಿಸಿದೆ.

ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ವಿಧಾನಪರಿಷತ್‌ ಸದಸ್ಯ ಎನ್‌.ರವಿಕುಮಾರ್‌ ನೇತೃತ್ವದ ಬಿಜೆಪಿ ಮುಖಂಡರ ನಿಯೋಗವು ಸೋಮವಾರ ಮುಖ್ಯ ಚುನಾವಣಾಧಿಕಾರಿ ಸಂಜೀವ್‌ ಕುಮಾರ್‌ ಅವರನ್ನು ಭೇಟಿಯಾಗಿ ದೂರು ಸಲ್ಲಿಸಿತು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ರವಿಕುಮಾರ್‌ ಅವರು, ಕಾಂಗ್ರೆಸ್‌ ಮುಖಂಡ ಮಲ್ಲಿಕಾರ್ಜುನ ಖರ್ಗೆ ಮತ್ತು ಅವರ ಪುತ್ರ ಸಚಿವ ಪ್ರಿಯಾಂಕ ಖರ್ಗೆ ಅವರಿಗೆ ಅತ್ಯಾಪ್ತ ಅಧಿಕಾರಿಯಾಗಿರುವ ಬೆಂಗಳೂರು ಉತ್ತರ ವಿಭಾಗದ ಡಿಸಿಪಿ ಶಶಿಕುಮಾರ್‌ ಅವರು ಖರ್ಗೆ ಪರವಾಗಿ ಮತದಾರರಿಗೆ ಹಂಚಲು ಪೊಲೀಸ್‌ ವಾಹನದಲ್ಲಿ ಹಣ ಸಾಗಾಣಿಕೆ ಮಾಡುತ್ತಿದ್ದಾರೆ ಎಂದು ರವಿಕುಮಾರ್‌ ಆರೋಪಿಸಿದರು.

ಚುನಾವಣಾ ಕೆಲಸಗಳಿಗೆ ನಿಯೋಜಿತ ಅಧಿಕಾರಿಗಳು ರಜೆ ಪಡೆಯಬೇಕಾದರೆ ಚುನಾವಣಾ ಆಯೋಗದ ಪೂರ್ವಾನುತಿ ಕಡ್ಡಾಯವಾಗಿದೆ. ಹೀಗಿದ್ದರೂ ಬೆಂಗಳೂರು ಉತ್ತರ ಡಿಸಿಪಿ ಶಶಿಕುಮಾರ್‌ ಅವರಿಗೆ ಹೇಗೆ ರಜೆ ಸಿಕ್ಕಿತು? ಏ.19ರಂದು ರಜೆ ಪಡೆದು ಕಲುಬರಗಿಗೆ ಹೋಗಿ ಕಾಂಗ್ರೆಸ್‌ಗೆ ಬೆಂಬಲವಾಗಿ ಅವರು ಚುನಾವಣೆ ನಡೆಸುತ್ತಿದ್ದಾರೆ ಎಂದು ದೂರಿದರು.

ಎರಡ್ಮೂರು ವರ್ಷಗಳ ಕಾಲ ಕಲಬುರ್ಗಿ ಜಿಲ್ಲಾ ಎಸ್ಪಿಯಾಗಿ ಕೆಲಸ ಮಾಡಿರುವ ಅವರಿಗೆ ಜಿಲ್ಲೆಯಲ್ಲಿ ಸಂಪರ್ಕ ಜಾಲವಿದೆ. ಹೀಗಾಗಿಯೇ ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದರೂ ಶಶಿಕುಮಾರ್‌ ಚುನಾವಣೆ ಸಲುವಾಗಿಯೇ ರಜೆ ಪಡೆದು ಬಂದಿದ್ದಾರೆ. ತಕ್ಷಣವೇ ಚುನಾವಣಾ ಅಕ್ರಮದಲ್ಲಿ ತೊಡಗಿಸಿರುವ ಅವರನ್ನು ಬಂಧಿಸಬೇಕು ಎಂದು ಒತ್ತಾಯಿಸಿದರು.

ಕಲುಬರಗಿ ಕ್ಷೇತ್ರದಲ್ಲಿ ಚುನಾವಣಾ ಆಯೋಗವೇ ಇಲ್ಲದಂತೆ ಚುನಾವಣೆ ನಡೆದಿದೆ. ಆ ಕ್ಷೇತ್ರದಲ್ಲಿ 516 ಸೂಕ್ಷ್ಮ ಮತಗಟ್ಟೆಗಳಿವೆ. ಹೀಗಾಗಿ ಚುನಾವಣೆ ಸಂದರ್ಭದಲ್ಲಿ ಮುಂಜಾಗ್ರತೆಯಾಗಿ ರೌಡಿಶೀಟರ್‌ಗಳನ್ನು ದಸ್ತಗಿರಿ ಮಾಡಿ ಎಚ್ಚರಿಕೆ ನೀಡಬೇಕಿತ್ತು. ಮುಕ್ತವಾಗಿ ಮತದಾನ ಮಾಡುವಂತೆ ಜನರಿಗೆ ಸ್ಥೈರ್ಯ ತುಂಬಲು ಪೊಲೀಸ್‌ ಪಥ ಸಂಚಲನ ನಡೆಸಬೇಕಿತ್ತು. ಆದರೆ ಈ ಯಾವುದೇ ಪ್ರಕ್ರಿಯೆ ನಡೆಸದೆ ಏಕಪಕ್ಷೀಯವಾಗಿ ಡಿಸಿ ಮತ್ತು ಎಸ್ಪಿ ಚುನಾವಣೆ ನಡೆಸಿದ್ದಾರೆ ಎಂದು ರವಿಕುಮಾರ್‌ ವಾಗ್ದಾಳಿ ನಡೆಸಿದರು.

ಡಿಸಿಪಿ ರಜೆ ಬಗ್ಗೆ ಆಯೋಗ ಗರಂ

ಬಿಜೆಪಿ ದೂರಿನ ಹಿನ್ನೆಲೆಯಲ್ಲಿ ಡಿಸಿಪಿ ಶಶಿಕುಮಾರ್‌ ಅವರ ರಜೆಯ ವಿಚಾರವಾಗಿ ಬೆಂಗಳೂರು ನಗರ ಪೊಲೀಸ್‌ ಆಯುಕ್ತ ಟಿ.ಸುನೀಲ್‌ ಕುಮಾರ್‌ ಅವರಿಂದ ಮುಖ್ಯ ಚುನಾವಣಾಧಿಕಾರಿಗಳು ವಿವರಣೆ ಪಡೆದಿದ್ದಾರೆ.

ಆಯೋಗದ ಗಮನಕ್ಕೆ ತಾರದೆ ಡಿಸಿಪಿ ಅವರಿಗೆ ಹೇಗೆ ರಜೆ ಮಂಜೂರು ಮಾಡಿದ್ದೀರಿ ಎಂದು ಆಯುಕ್ತರನ್ನು ಮುಖ್ಯ ಚುನಾವಣಾಧಿಕಾರಿ ಸಂಜೀವ್‌ ಕುಮಾರ್‌ ಖಾರವಾಗಿ ಪ್ರಶ್ನಿಸಿದ್ದಾರೆ ಎಂದು ತಿಳಿದುಬಂದಿದೆ.

Follow Us:
Download App:
  • android
  • ios