ಬೆಂಗಳೂರು :  ಚುನಾವಣಾ ಕಣ ರಂಗೇರಿದ್ದು, ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪಿ.ಸಿ.ಮೋಹನ್‌ ಅವರು ಹ್ಯಾಟ್ರಿಕ್‌ ಜಯದ ನಿರೀಕ್ಷೆಯಲ್ಲಿದ್ದಾರೆ. ಕಳೆದ ಬಾರಿ ಕಾಂಗ್ರೆಸ್‌ನಿಂದ ಪರಾಭವಗೊಂಡಿದ್ದ ರಿಜ್ವಾನ್‌ ಅರ್ಷದ್‌ ಅವರೇ ಈ ಬಾರಿಯೂ ಎದುರಾಳಿಯಾಗಿದ್ದಾರೆ. 

ಇವರಿಬ್ಬರ ನಡುವೆ ನಟ ಪ್ರಕಾಶ್‌ ರಾಜ್‌ ಅವರು ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಕ್ಷೇತ್ರದಲ್ಲಿ ಕಳೆದ ಎರಡು ಬಾರಿ ಸಂಸದರಾಗಿ ವರ್ಷ ನಾನು ಮಾಡಿರುವ ಅಭಿವೃದ್ಧಿ ಹಾಗೂ ಐದು ವರ್ಷ ನರೇಂದ್ರ ಮೋದಿ ಸರ್ಕಾರದ ಸಾಧನೆಯಿಂದಾಗಿ ಮತ್ತೆ ಗೆಲುವು ಸಾಧಿಸುವುದಾಗಿ ಹಾಲಿ ಸಂಸದ ಪಿ.ಸಿ.ಮೋಹನ್‌ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ತಮ್ಮ ಬಿಡುವಿಲ್ಲದ ಪ್ರಚಾರದ ವೇಳೆ ‘ಕನ್ನಡಪ್ರಭ’ಕ್ಕೆ ವಿಶೇಷ ಸಂದರ್ಶನ ಕೊಟ್ಟಮೋಹನ್‌ ಅವರು ಚುನಾವಣೆ ಕುರಿತು ಮಾತನಾಡಿದರು.

*ನಿಮ್ಮ ಚುನಾವಣಾ ಪ್ರಚಾರ ಭರ್ಜರಿಯಾಗಿಯೇ ನಡೆಯುತ್ತಿದೆ. ಹ್ಯಾಟ್ರಿಕ್‌ ಗೆಲುವಿನ ನಿರೀಕ್ಷೆಯಲ್ಲಿದ್ದೀರಾ?

-ಪ್ರಚಾರ ಚೆನ್ನಾಗಿ ನಡೆಯುತ್ತಿದೆ. ಬೆಂಗಳೂರಿನಲ್ಲೇ ನಾನು ಬೆಳೆದಿದ್ದು, 10 ವರ್ಷ ಶಾಸಕನಾಗಿ ಹಾಗೂ 10 ವರ್ಷ ಸಂಸತ್‌ ಸದಸ್ಯನಾಗಿ ಕಾರ್ಯ ನಿರ್ವಹಿಸಿದ್ದೇನೆ. ಹೀಗಾಗಿ ಬೆಂಗಳೂರು ಹಾಗೂ ಕ್ಷೇತ್ರದ ಪರಿಚಯ ಇದೆ. ಕಳೆದ ಹತ್ತು ವರ್ಷದಿಂದ ಕ್ಷೇತ್ರದ ಜನತೆ ಜತೆ ನಿರಂತರ ಸಂಪರ್ಕದಲ್ಲಿರುವುದು ನನಗೆ ಹೆಚ್ಚು ಸಹಕಾರಿಯಾಗಲಿದೆ. ವಿಶೇಷವೆಂದರೆ ಕಾರ್ಯಕರ್ತರು ಇಂದೆದಿಗಿಂತ ಹೆಚ್ಚು ಉತ್ಸಾಹದಲ್ಲಿ ಪ್ರಚಾರ ಕಾರ್ಯದಲ್ಲಿ ತೊಡಿಸಿಕೊಂದ್ದಾರೆ. ಎಲ್ಲೇ ಪ್ರಚಾರಕ್ಕೆ ಹೋದರೂ ಸಾರ್ವಜನಿಕರು ತಾವೇ ಸ್ವಯಂ ಪ್ರೇರೀತರಾಗಿ ಪ್ರಚಾರಕ್ಕೆ ಬರುತ್ತಿರುವುದು ಸಂತಸ ತರಿಸಿದೆ. ದೇಶದಲ್ಲಿ ಮತ್ತೆ ಮೋದಿ ಪ್ರಧಾನಿಯಾಗಬೇಕೆಂದು ಜನ ಬಯಸಿದ್ದಾರೆ.

*ಸಮ್ಮಿಶ್ರ ಸರ್ಕಾರದ ಮಿತ್ರ ಪಕ್ಷಗಳ ಒಮ್ಮತದ ಅಭ್ಯರ್ಥಿ ಕಣದಲ್ಲಿರುವುದು ಕಷ್ಟವಾಗುವುದಿಲ್ಲವೇ?

-ಕಳೆದ ಬಾರಿಗಿಂತ ಈ ಬಾರಿ ಕ್ಷೇತ್ರದಲ್ಲಿ ಹೆಚ್ಚು ಅನುಕೂಲ ವಾತಾವರಣ ನಿರ್ಮಾಣವಾಗಿದೆ. ಜೆಡಿಎಸ್‌ ಮತ್ತು ಕಾಂಗ್ರೆಸ್‌ ಒಂದಾಗಿರುವುದರಿಂದ ಯಾವುದೇ ಪರಿಣಾಮ ಬೀರುವುದಿಲ್ಲ. ಮತದಾರರು 2014ರ ಲೋಕಸಭಾ ಚುನಾವಣೆಗಿಂತ ಹೆಚ್ಚು ಮತಗಳಿಂದ ನನ್ನನ್ನು ಆಯ್ಕೆ ಮಾಡುವ ವಿಶ್ವಾಸವಿದೆ.

*ಬೆಂಗಳೂರು ನಗರಕ್ಕೆ ಸಮ್ಮಿಶ್ರ ಸರ್ಕಾರ ಹಾಗೂ ಹಿಂದಿನ ಕಾಂಗ್ರೆಸ್‌ ಸರ್ಕಾರ ಸಾಕಷ್ಟುಅಭಿವೃದ್ಧಿ ಕೆಲಸ ಮಾಡಿಲ್ಲವೇ?

-ಚುನಾವಣೆ ಬಂದಾಗಲೆಲ್ಲಾ ಸ್ಟೀಲ್‌ ಬ್ರಿಜ್‌ ಯೋಜನೆಗೆ ಬಗ್ಗೆ ಸರ್ಕಾರ ಪ್ರಸ್ತಾಪ ಮಾಡುತ್ತದೆ. ಬೆಂಗಳೂರಿನ ಹಲವೆಡೆ ರಸ್ತೆ ಹಾಗೂ ಕುಡಿಯುವ ನೀರಿನಂತಹ ಮೂಲ ಸೌಲಭ್ಯಗಳೇ ಇಲ್ಲ. ವೈಟ್‌ ಟಾಪಿಂಗ್‌ ಹೆಸರಿನಲ್ಲಿ ಸರ್ಕಾರ ಕೋಟ್ಯಂತರ ರುಪಾಯಿ ಲೂಟಿ ಮಾಡುತ್ತಿದೆ. ಒಂದು ಕಿ.ಮೀ. ಉದ್ದದ ವೈಟ್‌ ಟಾಪಿಂಗ್‌ ರಸ್ತೆಗೆ ಕೋಟ್ಯಂತರ ರು. ಹಣ ಬೇಕಾಗುತ್ತದೆ. ಆದರೆ ಒಂದು ಕಿ.ಮೀಟರ್‌ ಡಾಂಬರೀಕರಣ ರಸ್ತೆಗೆ .50ರಿಂದ .60 ಲಕ್ಷ ಹಣ ಸಾಕು. ನಾವು ವೈಟ್‌ ಟಾಪಿಂಗ್‌ ವಿರೋಧಿಗಳಲ್ಲ. ಆದರೆ ಹಣವಿಲ್ಲದೇ ಇಂತಹ ಕಾಮಗಾರಿ ನಡೆಸುವುದು ಸರಿಯಲ್ಲ. ಇವೆಲ್ಲವುಗಳನ್ನು ಜನತೆ ಗಮನಿಸುತ್ತಿದ್ದಾರೆ.

*ಬೆಂಗಳೂರು ನಗರವನ್ನು ಪ್ರತಿನಿಧಿಸುವ ಮೂರು ಲೋಕಸಭಾ ಕ್ಷೇತ್ರಗಳಲ್ಲಿ ಮತ್ತೆ ಬಿಜೆಪಿ ಜಯಭೇರಿ ಬಾರಿಸಲಿದೆಯೇ?

-ಈ ಬಾರಿ ಬಿಜೆಪಿ 22 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದ್ದು, ಬೆಂಗಳೂರಿನ ವ್ಯಾಪ್ತಿಯ ಮೂರು ಕ್ಷೇತ್ರಗಳಲ್ಲೂ ಬಿಜೆಪಿಗೆ ಗೆಲುವು ನಿಶ್ಚಿತ.

*ಖ್ಯಾತ ನಟ ಪ್ರಕಾಶ್‌ ರಾಜ್‌ ಅವರು ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ?

-ಪ್ರಜಾ ಪ್ರಭುತ್ವದಲ್ಲಿ ಯಾರು ಎಲ್ಲಿ ಬೇಕಾದರೂ ಸ್ಪರ್ಧೆ ಮಾಡಬಹುದು. ಅದೇ ರೀತಿ ಪ್ರಕಾಶ್‌ ರಾಜ್‌ ಅವರು ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಿಂದ ಕಣಕ್ಕೆ ಇಳಿದಿದ್ದಾರೆ ಅಷ್ಟೇ. ಅವರ ಸ್ಪರ್ಧೆಯಿಂದ ಯಾವುದೇ ಬದಲಾವಣೆ ಆಗುವುದಿಲ್ಲ.

*ಕಳೆದ ಬಾರಿ ನಿಮ್ಮ ವಿರುದ್ಧ ಸ್ಪರ್ಧಿಸಿ ಸೋಲುಂಡಿದ್ದ ಕಾಂಗ್ರೆಸ್ಸಿನ ರಿಜ್ವಾನ್‌ ಅರ್ಷದ್‌ ಅವರೇ ಮತ್ತೆ ಮುಖಾಮುಖಿಯಾಗಿದ್ದಾರೆ?

-ರಿಜ್ವಾನ್‌ ಅರ್ಷದ್‌ ಅವರು ಕಳೆದ ನಾಲ್ಕು ವರ್ಷಗಳಿಂದ ವಿಧಾನ ಪರಿಷತ್‌ ಸದಸ್ಯರಾಗಿದ್ದಾರೆ. ಅಲ್ಲದೆ, ಐದು ವರ್ಷ ಅವರದ್ದೇ ಕಾಂಗ್ರೆಸ್‌ ಸರ್ಕಾರ ರಾಜ್ಯದಲ್ಲಿ ಅಧಿಕಾರದಲ್ಲಿತ್ತು. ಆದರೂ ಕ್ಷೇತ್ರಕ್ಕೆ ಯಾವುದೇ ಅನುದಾನ ತಂದು ಅಭಿವೃದ್ಧಿ ಕಾರ್ಯ ಮಾಡಿಲ್ಲ. ಮುಸ್ಲಿಂ ಅಭ್ಯರ್ಥಿ ಎಂಬ ಕಾರಣಕ್ಕೆ ಮತಗಳು ಚದುರಿ ಹೋಗುವುದಿಲ್ಲ. ಬಿಜೆಪಿ ಹಾಗೂ ಮೋದಿ ಎಲ್ಲಾ ಸಮುದಾಯದವರನ್ನು ಒಟ್ಟಾಗಿ ಕರೆದೊಯ್ಯುತ್ತಿದ್ದಾರೆ. ಬಿಜೆಪಿಯಲ್ಲಿ ವ್ಯಕ್ತಿ ನೋಡಿ ಟಿಕೆಟ್‌ ನೀಡಲಾಗುತ್ತಿದೆಯೇ ಹೊರತು? ಸಮುದಾಯ ನೋಡಿ ಅಲ್ಲ. ಹೀಗಾಗಿ ಎರಡು ಬಾರಿ ಈ ಕ್ಷೇತ್ರದಿಂದ ಸಂಸದನಾಗಿ ಆಯ್ಕೆಯಾಗಿದ್ದೇನೆ. ಈ ಬಾರಿಯೂ ಜನ ನನ್ನನ್ನು ಆಯ್ಕೆ ಮಾಡಲಿದ್ದಾರೆ ಎಂಬ ಸಂಪೂರ್ಣ ವಿಶ್ವಾಸವಿದೆ.

*ಯಾವ ವಿಷಯಗಳನ್ನು ಮುಂದಿಟ್ಟುಕೊಂಡು ಮತಯಾಚನೆ ಮಾಡುತ್ತಿದ್ದೀರಿ?

-ಪ್ರಧಾನಿ ನರೇಂದ್ರ ಮೋದಿ ಅವರ ಐದು ವರ್ಷದ ಹಗರಣ ಮುಕ್ತ ಸರ್ಕಾರ ಹಾಗೂ ಅಭಿವೃದ್ಧಿ ಹೆಸರಿನಲ್ಲಿ ಮತಯಾಚಿಸುತ್ತಿದ್ದೇನೆ. ಐದು ವರ್ಷದಲ್ಲಿ ಮುದ್ರಾ, ಪ್ರಧಾನಮಂತ್ರಿ ಜನಧನ್‌ ಯೋಜನೆ, ಸಂಧ್ಯಾ ಸುರಕ್ಷಾ ಗ್ರಾಮದಂತಹ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ. ಈ ಯೋಜನೆಗಳು ನೇರವಾಗಿ ಜನರಿಗೆ ತಲುಪಿವೆ. ಜನತೆ ಮೋದಿ ಸರ್ಕಾರದ ಯೋಜನೆಗಳನ್ನು ಮೆಚ್ಚಿಕೊಂಡಿದ್ದಾರೆ. ಐದು ವರ್ಷ ಯಾವುದೇ ಭ್ರಷ್ಟಾಚಾರ, ಹಗರಣ ಇಲ್ಲದ ಆಡಳಿತವನ್ನು ಮೋದಿ ಅವರ ಸರ್ಕಾರ ನೀಡಿದೆ.

*ರಾಷ್ಟ್ರಮಟ್ಟದಲ್ಲಿ ಮಹಾಗಠಬಂಧನ್‌ ರಚನೆಯಿಂದಾಗಿ ಬಿಜೆಪಿಗೆ ತುಸು ಹಿನ್ನೆಡೆ ಉಂಟಾಗಬಹುದೇ?

-ಮಹಾಗಠಬಂಧನ್‌ನಿಂದ ಜನರಿಗೆ ಭಯ ಹಾಗೂ ಬೇಸರ ಮೂಡಿದೆ. ಕಳ್ಳರೆಲ್ಲಾ ಒಟ್ಟಾಗಿ ಸೇರಿ ಅಭಿವೃದ್ಧಿಯನ್ನು ಸಹಿಸದೆ ಮೋದಿ ಅವರ ವಿರುದ್ಧ ನಿಂತಿದ್ದಾರೆ. ಈ ಮೂಲಕ ಮಹಾಘಟ ಬಂದನ್‌ ಹೆಸರಿನಲ್ಲಿ ಅಭಿವೃದ್ಧಿ ವಿರುದ್ಧ ನಿಂತಿದ್ದಾರೆ ಎಂಬುದು ಜನತೆಗೆ ತಿಳಿದಿದೆ. ದೇಶ ಸಮರ್ಥ ನಾಯಕನನ್ನು ಎದುರು ನೋಡುತ್ತಿದೆ. ಹೀಗಾಗಿ ಮತ್ತೊಮ್ಮೆ ಮೋದಿ ಅವರೇ ಪ್ರಧಾನಿಯಾಗಲಿದ್ದಾರೆ.

*ಈ ಬಾರಿಯೂ ಮತದಾರರು ನಿಮನ್ನೇ ಯಾಕೆ ಆಯ್ಕೆ ಮಾಡಬೇಕು?

-ಕಳೆದ ಹತ್ತು ವರ್ಷಗಳಲ್ಲಿ ಕ್ಷೇತ್ರದಲ್ಲಿ ಸಾಕಷ್ಟುಅಭಿವೃದ್ಧಿ ಕಾರ್ಯ ಮಾಡಿದ್ದೇನೆ. ಎರಡನೇ ಅವಧಿಗೆ ಸಂಸದನಾದ ಬಳಿಕ ಸಬ್‌ ಅರ್ಬನ್‌ ರೈಲು ಯೋಜನೆಯನ್ನು ತಂದಿದ್ದೇನೆ. ಕೆರೆಗಳ ಅಭಿವೃದ್ಧಿಗೆ ಮೊದಲ ಬಾರಿಗೆ ಕೇಂದ್ರದಿಂದ ಅನುದಾನ ತಂದ ರಾಜ್ಯದ ಮೊದಲ ಸಂಸದ ನಾನು. ಸೇನೆ ಜಾಗವನ್ನು ಹಸ್ತಾಂತರ ಮಾಡುವ ವಿಚಾರದಲ್ಲಿ ಪ್ರಮುಖ ಪಾತ್ರ ವಹಿಸಿದ್ದೇನೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಎರಡನೇ ಮಾರ್ಗವನ್ನು ಟೋಲ್‌ ಮುಕ್ತ ಪ್ರವೇಶ ಮಾಡಿಸಿದ್ದೇನೆ. ಒಟ್ಟಾರೆ ಮೋದಿ ಸಾಧನೆ ಹಾಗೂ 10 ವರ್ಷದ ಅಭಿವೃದ್ಧಿ ಕಾರ್ಯಗಳೇ ನನಗೆ ಶ್ರೀರಕ್ಷೆ. ಕೆಂಪೇಗೌಡ ಅಂತಾರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮೆಟ್ರೋ ಸಂಪರ್ಕ ಕಲ್ಪಿಸಲು ಶ್ರಮಿಸಲಾಗುವುದು. ಕೇಂದ್ರದ ಬಜೆಟ್‌ನಲ್ಲಿ ಸಬ್‌ ಹರ್ಬನ್‌ ರೈಲು ಯೋಜನೆಗೆ .17 ಸಾವಿರ ಕೋಟಿ ಮೀಸಲಿಡಲಾಗಿದೆ. ಈ ಹಣವನ್ನು ಬಳಸಿ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಮಾಡಲಾಗುವುದು. ಸಬ್‌ ಅರ್ಬನ್‌ ರೈಲು ನಿರ್ಮಾಣವಾದರೆ ರಸ್ತೆಯಲ್ಲಿ ಶೇ.25ರಷ್ಟುಓಡಾಟ ಕಡಿಮೆಯಾಗಲಿದ್ದು, ಟ್ರಾಫಿಕ್‌ ದಟ್ಟಣೆ ಕೂಡ ತಗ್ಗಲಿದೆ. ಈ ನಿಟ್ಟಿನಲ್ಲಿ ಶ್ರಮಿಸಲಾಗುವುದು.