Asianet Suvarna News Asianet Suvarna News

ಬಿಜೆಪಿ ಪಟ್ಟಿ ರೆಡಿ : ಮಂಡ್ಯದಲ್ಲಿ ಯಾರಾಗ್ತಾರೆ ಅಭ್ಯರ್ಥಿ..?

ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರನ್ನು ಒಳಗೊಂಡ ರಾಷ್ಟ್ರೀಯ ಚುನಾವಣಾ ಸಮಿತಿ ಸಭೆ ನಡೆದಿದ್ದು, ಅಲ್ಲಿ ಕರ್ನಾಟಕದಿಂದ ಸ್ಪರ್ಧಿಸುವ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಲಾಗಿದೆ ಎಂದು ತಿಳಿದು ಬಂದಿದೆ.
 

Loksabha Elections 2019 BJP Candidate List Finalised
Author
Bengaluru, First Published Mar 21, 2019, 8:06 AM IST

ಬೆಂಗಳೂರು :  ಲೋಕಸಭಾ ಚುನಾವಣೆಗೆ ಸ್ಪರ್ಧಿಸಲಿರುವ ಬಿಜೆಪಿ ಅಭ್ಯರ್ಥಿಗಳ ಪಟ್ಟಿಬಹುತೇಕ ಸಿದ್ಧವಾಗಿದ್ದು, ಹೆಚ್ಚೂ ಕಡಮೆ ಎಲ್ಲ ಹಾಲಿ ಸಂಸದರಿಗೂ ಟಿಕೆಟ್‌ ನೀಡಲು ತೀರ್ಮಾನಿಸಲಾಗಿದೆ.

ಬುಧವಾರ ರಾತ್ರಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರನ್ನು ಒಳಗೊಂಡ ರಾಷ್ಟ್ರೀಯ ಚುನಾವಣಾ ಸಮಿತಿ ಸಭೆ ನಡೆದಿದ್ದು, ಅಲ್ಲಿ ಕರ್ನಾಟಕದಿಂದ ಸ್ಪರ್ಧಿಸುವ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಲಾಗಿದೆ ಎಂದು ತಿಳಿದು ಬಂದಿದೆ.

ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಹಾಲಿ ಸಂಸದೆಯಾಗಿರುವ ಶೋಭಾ ಕರಂದ್ಲಾಜೆ ಅವರಿಗೆ ಪಕ್ಷದ ಸ್ಥಳೀಯ ಘಟಕದಲ್ಲಿ ಅಪಸ್ವರ ತೀವ್ರ ಪ್ರಮಾಣದಲ್ಲೇ ವ್ಯಕ್ತವಾಗುತ್ತಿರುವುದರಿಂದ ಅವರನ್ನು ಪಕ್ಕದ ತುಮಕೂರು ಕ್ಷೇತ್ರಕ್ಕೆ ಸ್ಥಳಾಂತರಿಸುವ ಬಗ್ಗೆ ಚರ್ಚೆ ನಡೆದಿದ್ದರೂ ಯಾವುದೇ ಅಂತಿಮ ತೀರ್ಮಾನ ಕೈಗೊಂಡಿಲ್ಲ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ.

ಜೆಡಿಎಸ್‌ ವರಿಷ್ಠ ಹಾಗೂ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ಬೆಂಗಳೂರು ಉತ್ತರ ಅಥವಾ ತುಮಕೂರು ಪೈಕಿ ಯಾವ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಒಂದು ವೇಳೆ ಗೌಡರು ತುಮಕೂರಿನಿಂದ ಕಣಕ್ಕಿಳಿಯುವುದಾದರೆ ಆಗ ಅವರ ವಿರುದ್ಧ ಶೋಭಾ ಕರಂದ್ಲಾಜೆ ಅವರನ್ನೇ ಅಭ್ಯರ್ಥಿಯನ್ನಾಗಿಸುವ ಮೂಲಕ ಪ್ರಬಲ ಪೈಪೋಟಿ ನೀಡಬೇಕು ಎಂಬ ಪ್ರಸ್ತಾಪವನ್ನು ಪಕ್ಷದ ಹಲವು ರಾಜ್ಯ ನಾಯಕರು ನೀಡಿದ್ದಾರಾದರೂ ಅದಕ್ಕೆ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಸಹಮತ ಸೂಚಿಸಿಲ್ಲ ಎನ್ನಲಾಗಿದೆ.

ಇನ್ನುಳಿದಂತೆ ಚಿತ್ರದುರ್ಗದಿಂದ ಮಾಜಿ ಸಚಿವ ಎ.ನಾರಾಯಣಸ್ವಾಮಿ, ಬಳ್ಳಾರಿಯಿಂದ ದೇವೇಂದ್ರಪ್ಪ, ರಾಯಚೂರಿನಿಂದ ಮಾಜಿ ಸಚಿವ ಅಮರೇಶ್‌ ನಾಯಕ್‌, ಕೋಲಾರದಿಂದ ಛಲವಾದಿ ನಾರಾಯಣಸ್ವಾಮಿ, ಬೆಂಗಳೂರು ಗ್ರಾಮಾಂತರದಿಂದ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್‌ ಪುತ್ರಿ ನಿಶಾ ಅವರನ್ನು ಕಣಕ್ಕಿಳಿಸುವ ಸಂಭವವಿದೆ.

ಈ ಮೊದಲು ಪರಿಶಿಷ್ಟಜಾತಿಯ ಮೀಸಲು ಕ್ಷೇತ್ರವಾಗಿರುವ ಚಿತ್ರದುರ್ಗದಿಂದ ಬೋವಿ ಸಮುದಾಯದ ಮಾಜಿ ಶಾಸಕ ಮಾನಪ್ಪ ವಜ್ಜಲ್‌ ಅವರನ್ನು ಕಣಕ್ಕಿಳಿಸುವ ಬಗ್ಗೆ ರಾಜ್ಯಾಧ್ಯಕ್ಷ ಯಡಿಯೂರಪ್ಪ ಒಲವು ತೋರಿದ್ದರು. ಆದರೆ, ಆ ಕ್ಷೇತ್ರದಲ್ಲಿ ಪರಿಶಿಷ್ಟಜಾತಿಯ ಎಡಗೈ ಗುಂಪಿಗೆ ಸೇರಿದವರಿಗೇ ನೀಡಬೇಕು ಎಂಬುದನ್ನು ಪಕ್ಷದ ಇತರ ನಾಯಕರು ವರಿಷ್ಠರ ಬಳಿ ಅಂಕಿ ಅಂಶಗಳ ಸಮೇತ ವಿವರಿಸಿದ್ದರಿಂದ ಅದಕ್ಕೆ ಅನುಮೋದನೆ ದೊರೆತಿದೆ ಎಂದು ತಿಳಿದು ಬಂದಿದೆ.

ಚಿತ್ರದುರ್ಗದಿಂದ ಪರಿಶಿಷ್ಟಜಾತಿಯ ಎಡಗೈ ಗುಂಪಿಗೆ ಸೇರಿದವರನ್ನು ಕಣಕ್ಕಿಳಿಸುವುದರಿಂದ ಕೋಲಾರದ ಮೀಸಲು ಕ್ಷೇತ್ರದಿಂದ ಬಲಗೈ ಗುಂಪಿಗೆ ಸೇರಿದ ಛಲವಾದಿ ನಾರಾಯಣಸ್ವಾಮಿ ಅವರಿಗೆ ಅವಕಾಶ ಲಭಿಸುವ ಸಾಧ್ಯತೆ ಹೆಚ್ಚಾಗಿದೆ.


1 ಬೀದರ್: ಭಗವಂತ ಖೂಬಾ
2 ಕಲಬುರ್ಗಿ: ಡಾ.ಉಮೇಶ್ ಜಾಧವ್
3 ರಾಯಚೂರು: ಅಮರೇಶ್ ನಾಯಕ್
4 ಬಳ್ಳಾರಿ: ದೇವೇಂದ್ರಪ್ಪ
5ಕೊಪ್ಪಳ: ಸಂಗಣ್ಣ ಕರಡಿ
6 ವಿಜಯಪುರ: ರಮೇಶ್ ಜಿಗಜಿಣಗಿ
7 ಬಾಗಲಕೋಟೆ: ಪಿ.ಸಿ.ಗದ್ದಿಗೌಡರ್
8 ಚಿಕ್ಕೋಡಿ: ಅಣ್ಣಾ ಸಾಹೇಬ್ ಜೊಲ್ಲೆ
9 ಬೆಳಗಾವಿ: ಸುರೇಶ್ ಅಂಗಡಿ
10 ಧಾರವಾಡ: ಪ್ರಹ್ಲಾದ್ ಜೋಶಿ
11 ಉತ್ತರ ಕನ್ನಡ: ಅನಂತಕುಮಾರ್ ಹೆಗಡೆ
12 ಹಾವೇರಿ: ಶಿವಕುಮಾರ್ ಉದಾಸಿ
13 ದಾವಣಗೆರೆ: ಜಿ.ಎಂ.ಸಿದ್ದೇಶ್ವರ್
14 ಚಿತ್ರದುರ್ಗ: ಎ.ನಾರಾಯಣಸ್ವಾಮಿ
15 ಶಿವಮೊಗ್ಗ: ಬಿ.ವೈ.ರಾಘವೇಂದ್ರ
16 ದಕ್ಷಿಣ ಕನ್ನಡ: ನಳಿನ್‌ಕುಮಾರ್ ಕಟೀಲು
17 ಉಡುಪಿ ಚಿಕ್ಕಮಗಳೂರು: ಶೋಭಾ ಕರಂದ್ಲಾಜೆ
18 ತುಮಕೂರು: ಜಿ.ಎಸ್.ಬಸವರಾಜು
19 ಹಾಸನ: ಎ.ಮಂಜು
20 ಮೈಸೂರು: ಪ್ರತಾಪ್ ಸಿಂಹ
21 ಚಾಮರಾಜನಗರ: ವಿ.ಶ್ರೀನಿವಾಸ್ ಪ್ರಸಾದ್
22 ಮಂಡ್ಯ: ಇನ್ನೂ ಸ್ಪಷ್ಟತೆ ಇಲ್ಲ
23 ಬೆಂಗಳೂರು ಗ್ರಾಮಾಂತರ:ನಿಶಾ ಯೋಗೇಶ್ವರ್
24 ಬೆಂಗಳೂರು ದಕ್ಷಿಣ: ತೇಜಸ್ವಿನಿ ಅನಂತಕುಮಾರ್
25 ಬೆಂಗಳೂರು ಉತ್ತರ: ಡಿ.ವಿ.ಸದಾನಂದಗೌಡ
26 ಬೆಂಗಳೂರು ಕೇಂದ್ರ: ಪಿ.ಸಿ.ಮೋಹನ್
27 ಚಿಕ್ಕಬಳ್ಳಾಪುರ: ಬಿ.ಎನ್.ಬಚ್ಚೇಗೌಡ
28 ಕೋಲಾರ: ಛಲವಾದಿ ನಾರಾಯಣಸ್ವಾಮಿ

Follow Us:
Download App:
  • android
  • ios