ಹಾಸನ : ಲೋಕಸಭಾ ಚುನಾವಣೆಗೆ ನಾಲ್ಕು ದಿನಗಳಷ್ಟೇ ಬಾಕಿ ಉಳಿದಿದ್ದು,  ಹಾಸನದಲ್ಲಿ ಬಿಜೆಪಿ ಅಭ್ಯರ್ಥಿ ಎ ಮಂಜು ಭರ್ಜರಿ ಪ್ರಚಾರದಲ್ಲಿ ತೊಡಗಿದ್ದಾರೆ.  ಸ್ವ ಕ್ಷೇತ್ರ ಅರಕಲಗೂಡಿನಲ್ಲಿ ಎ. ಮಂಜು ಮತಯಾಚನೆ ಮಾಡಿದ್ದಾರೆ.   

ಇಲ್ಲಿ ಗಂಗನಾಳು, ಹನ್ಯಾಳು ಸುತ್ತಮುತ್ತ ಪ್ರಚಾರ ನಡೆಸಿದ ಮಂಜು ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.  25 ವರ್ಷದ ಹುಡುಗನನ್ನು ಸಂಸತ್ ಸದಸ್ಯನಾಗಿ ಮಾಡಿದರೆ ನಮ್ಮ ಪರಿಸ್ಥಿತಿ ಏನಾಗುತ್ತದೆ ಎಂದು ಯೋಚನೆ ಮಾಡಿ. ಸೂಕ್ತ ಅಭ್ಯರ್ಥಿಗೆ ಮತದಾನ ಮಾಡಿ ಎಂದರು. 

ಹಿಂದೆ ದೇವೇಗೌಡರ ವಿರುದ್ಧ ಸ್ಪರ್ಧೆ ಮಾಡಿ 4 ಲಕ್ಷ ಮತಗಳನ್ನು ಪಡೆದಿದ್ದೆ. ಇನ್ನು 50 ಸಾವಿರ ಮತಗಳನ್ನು ಪಡೆದಿದ್ದರೆ ನಾನೇ ಗೆಲ್ಲುತ್ತಿದ್ದೆ. ಇಲ್ಲಿ ಜೆಡಿಎಸ್ ವಿರುದ್ಧ ಶೇ.70ರಷ್ಟು ಮತದಾರರಿದ್ದಾರೆ ಎಂದು ಮಂಜು ಹೇಳಿದರು. 

ನಿಮ್ಮ ಮನೆ ಮಗ ನಾನು. ನನ್ನನ್ನು ಉಳಿಸಿಕೊಳ್ಳುವ ಜವಾಬ್ದಾರಿ ನಿಮ್ಮ ಮೇಲಿದೆ. ಪಕ್ಷಾತೀತವಾಗಿ ನನ್ನನ್ನು ಬೆಂಬಲಿಸಿ, ಇದರಿಂದ ಮುಂದೆ ನಿಮಗೆ ಒಳ್ಳೆಯ ದಿನಗಳು ಬರಲಿದೆ. ಇನ್ನಷ್ಟು ಅಭಿವೃದ್ಧಿಯಾಗಲಿದೆ ಎಂದರು. 

ಬಿಜೆಪಿ ಕೋಮುವಾದಿ ಪಕ್ಷ ಅಲ್ಲ, ಉಗ್ರವಾದಿಗಳ ವಿರೋಧಿ ಪಕ್ಷ.  ದೇಶರಕ್ಷಣೆಯಲ್ಲಿ ಮೋದಿ ಯಶಸ್ವಿಯಾಗಿದ್ದಾರೆ. ಈ ನಿಟ್ಟಿನಲ್ಲಿ ಬಿಜೆಪಿಗೆ ಮತ ನೀಡುವಂತೆ ಕೋರಿದರು. 

ಇನ್ನು 10 ವರ್ಷಗಳ ಕಾಲ ದೇಶದ ಪ್ರಧಾನಿಯಾಗಿ  ಮನಮೋಹನ್ ಸಿಂಗ್ ಆಡಳಿತ ನಡೆಸಿದ್ದರೂ ಕೂಡ ಕಾಂಗ್ರೆಸ್ ಅವರ ಹೆಸರು ಹೇಳುವುದಿಲ್ಲ. ಯಾಕೆಂದರೆ ಕೆಲಸ ಯಾರು ಮಾಡಿರುತ್ತಾರೋ ಅವರ ಹೆಸರು ಹೇಳುತ್ತಾರೆ ಎಂದು ಅರಕಲಗೂಡು ತಾಲೂಕಿನ ಸಭೆಯ ವೇಳೆ ಹೇಳಿದರು.