ಬೆಳಗಾವಿ : ರಾಜ್ಯದ ಪ್ರತಿಷ್ಠಿತ ಕಣಗಳಲ್ಲಿ ಒಂದಾದ ಚಿಕ್ಕೋಡಿ ಕ್ಷೇತ್ರದಲ್ಲಿ ಕೈ-ಕಮಲದ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ. ಆಂತರಿಕ ಬೇಗುದಿ ಒಡಲಲ್ಲಿಟ್ಟುಕೊಂಡು ಈ ಎರಡು ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳು ವೈಯಕ್ತಿಕ ಪ್ರತಿಷ್ಠೆ ಮುಂದಿಟ್ಟುಕೊಂಡು ಖಡಾಕಡಿ ಹೋರಾಟ ನಡೆಸಿರುವ ಕ್ಷೇತ್ರವಿದು. 

ಕಾಂಗ್ರೆಸ್ ಅಭ್ಯರ್ಥಿ, ಹಾಲಿ ಸಂಸದ ಪ್ರಕಾಶ ಹುಕ್ಕೇರಿ ಎರಡನೇ ಬಾರಿಗೆ ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಬಿಜೆಪಿಯಿಂದ ಉದ್ಯಮಿ ಅಣ್ಣಾಸಾಹೇಬ ಜೊಲ್ಲೆ ಕಣದಲ್ಲಿದ್ದಾರೆ. ಕಣದಲ್ಲಿ ಇನ್ನು 9 ಅಭ್ಯರ್ಥಿಗಳಿದ್ದರೂ ಇಲ್ಲಿ ಕೈ-ಕಮಲದ ನಡುವೆ ನೇರ ಹಣಾಹಣಿಗೆ ಚಿಕ್ಕೋಡಿ ಲೋಕಸಭೆ ಅಖಾಡ ಸಜ್ಜುಗೊಂಡಿದೆ.

ಹುಕ್ಕೇರಿ ಮತ್ತು ಜೊಲ್ಲೆ ಎರಡೂ ಕುಟುಂಬಗಳಿಗೆ ಈ ಚುನಾವಣೆ ವೈಯಕ್ತಿಕ ಪ್ರತಿಷ್ಠೆ ಪ್ರಶ್ನೆಯಾಗಿದೆ. ಹುಕ್ಕೇರಿ ಗೆಲುವಿನ ಓಟಕ್ಕೆ ಬ್ರೇಕ್ ಹಾಕಲು ಕೇಸರಿ ಪಡೆ ಇನ್ನಿಲ್ಲದ ಕಸರತ್ತು ನಡೆಸುತ್ತಿದೆ. ಈ ಹಿಂದೆ ಬಿಜೆಪಿ ಅಭ್ಯರ್ಥಿಯಾಗಿ ಚಿಕ್ಕೋಡಿ ಲೋಕಸಭೆ, ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿ ಸೋಲನುಭವಿಸಿರುವ ಅಣ್ಣಾಸಾಹೇಬ ಜೊಲ್ಲೆ ಅವರಿಗೆ ಈ ಚುನಾವಣೆ ಅಳಿವು- ಉಳಿವಿನ ಪ್ರಶ್ನೆ. ಈ ಇಬ್ಬರೂ ಅಭ್ಯರ್ಥಿಗಳು ಒಂದೇ ಗ್ರಾಮದವರು (ಯಕ್ಸಂಬಾ) ಎಂಬುದು ಇಲ್ಲಿ ವಿಶೇಷ.

ಆಂತರಿಕ ಬೇಗುದಿ:
ರಾಜ್ಯ ರಾಜಕಾರಣದಲ್ಲಿ ಕೆಲವು ತಿಂಗಳುಗಳಿಂದ ಸುದ್ದಿಯಲ್ಲಿದ್ದ ಬೆಳಗಾವಿ ರಾಜಕಾರಣ ಮೈತ್ರಿ ಸರ್ಕಾರವನ್ನು ಇನ್ನೇನು ಉರುಳಿಸಿಯೇ ಬಿಡುತ್ತದೆ ಎನ್ನುವಷ್ಟರ ಮಟ್ಟಿಗೆ ತಲುಪಿತ್ತು. ನಂತರ ಬದಲಾದ ವಿದ್ಯಮಾನದಿಂದ ಮೈತ್ರಿ ಸರ್ಕಾರ ಸೇಫ್ ಆಗಿದ್ದರೂ, ಪ್ರಮುಖ ನಾಯಕರಲ್ಲಿ ಉಂಟಾದ ಮನಸ್ತಾಪ ಗಳು ಶಮನವಾಗದೇ ಬೂದಿ ಮುಚ್ಚಿದ ಕೆಂಡದಂತಿದೆ.

ಇದರಿಂದಾಗಿ ಕಾಂಗ್ರೆಸ್ ಅಭ್ಯರ್ಥಿ ಹಾಲಿ ಸಂಸದ ಪ್ರಕಾಶ ಹುಕ್ಕೇರಿ ಅವರಿಗೆ ಆಂತರಿಕ ಬೇಗುದಿಯ ಆತಂಕ ಹೆಚ್ಚಾಗಿದೆ. ಮಾಜಿ ಸಚಿವ ರಮೇಶ ಜಾರಕಿಹೊಳಿ ತಮ್ಮ ಬೆಂಬಲಿಗರಾದ ಕಾಗವಾಡ ಶಾಸಕ ಶ್ರೀಮಂತ ಪಾಟೀಲ ಹಾಗೂ ಅಥಣಿ ಶಾಸಕ ಮಹೇಶ ಕುಮಠಳ್ಳಿ ಸೇರಿದಂತೆ ಇನ್ನಿತರ ಬೆಂಬಲಿಗ ಶಾಸಕರೊಂದಿಗೆ ಕಾಂಗ್ರೆಸ್ ತೊರೆದು ಬಿಜೆಪಿ ಸೇರುವ ಬಗ್ಗೆ ಹೇಳಿಕೊಂಡಿರುವುದರಿಂದ ರಾಜ್ಯದಲ್ಲಿ ಅಷ್ಟೇ ಅಲ್ಲದೇ ರಾಷ್ಟ್ರ ರಾಜಕಾರಣದಲ್ಲಿ ಬೆಳಗಾವಿ, ಚಿಕ್ಕೋಡಿ ಸುದ್ದಿಯಾಗಿತ್ತು.

ಬಿಜೆಪಿಯಲ್ಲೂ ಆಂತರಿಕ ಬೇಗುದಿ ಬಹುದೊಡ್ಡ ಮಟ್ಟ ದಲ್ಲೇ ಇದೆ. ಕಳೆದ ಬಾರಿಯ ಪರಾಜಿತ ಅಭ್ಯರ್ಥಿ ರಮೇಶ್ ಕತ್ತಿಗೆ ಟಿಕೆಟ್ ತಪ್ಪಿರುವುದರಿಂದ ಉಂಟಾಗಿರುವ ಪರಿಸ್ಥಿತಿ ನಿಭಾಯಿಸಲು ಬಿಜೆಪಿ ನಾಯಕರು ಹರಸಾಹಸ ನಡೆಸಿದ್ದಾರೆ. ಪ್ರಭಾವಿ ನಾಯಕ ಉಮೇಶ್ ಕತ್ತಿ ಸಹೋದರ ರಮೇಶ್ ಕತ್ತಿ ಅವರು ಟಿಕೆಟ್‌ಗಾಗಿ ತೀವ್ರ ಪೈಪೋಟಿ ನಡೆಸಿದ್ದರು. ಆದರೆ, ಪಕ್ಷ ಜೊಲ್ಲೆ ಅವರಿಗೆ ಟಿಕೆಟ್ ನೀಡಿದ್ದರಿಂದ ರಮೇಶ್ ಕತ್ತಿ ಬಂಡೆಳಲಿದ್ದಾರೆ ಎಂಬ ಸ್ಥಿತಿ ನಿರ್ಮಾಣವಾಗಿತ್ತು. ಅಲ್ಲದೆ, ರಮೇಶ್ ಕತ್ತಿ ಅವರು ಪಕ್ಷ ತ್ಯಜಿಸಿ ಕಾಂಗ್ರೆಸ್ ಸೇರುತ್ತಾರೆ ಎಂದೂ ಸುದ್ದಿಯಾಗಿತ್ತು. ಆದರೆ, ಬಿಜೆಪಿ ನಾಯಕರು ತೀವ್ರ ಪ್ರಯತ್ನ ಪಟ್ಟು ರಮೇಶ್ ಕತ್ತಿ ಪಕ್ಷ ಬಿಡದಂತೆ ಮಾಡುವಲ್ಲಿ ಸಫಲರಾಗಿದ್ದಾರೆ. ಆದರೆ, ಕ್ಷೇತ್ರದಲ್ಲಿ ಪ್ರಭಾವಿಯಾಗಿರುವ ಹಾಗೂ ಸಹಕಾರಿ ಸಕ್ಕರೆ ಕಾರ್ಖಾನೆಗಳ ಮೇಲೆ ಹಿಡಿತ ಹೊಂದಿರುವ ಕತ್ತಿ ಸಹೋದರರು ಈ ಬಾರಿ ಒಳ ಏಟು ನೀಡುವರೇ ಎಂಬ ಚಿಂತೆ ಬಿಜೆಪಿಯನ್ನು ಕಾಡುತ್ತಿದೆ. 

ಸಕ್ಕರೆ ರಾಜಕೀಯ
ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಸಕ್ಕರೆ ರಾಜಕೀಯದೆ ಪಾರುಪತ್ಯ. ಇಲ್ಲಿನ ರಾಜಕಾರಣಿಗಳು ಒಂದಿಲ್ಲೊಂದು ಸಹಕಾರಿ ಸಕ್ಕರೆ ಕಾರ್ಖಾನೆಯೊಂದಿಗೆ ತಮ್ಮನ್ನು ಗುರುತಿಸಿ ಕೊಂಡಿದ್ದಾರೆ. ಹುಕ್ಕೇರಿ ಶಾಸಕ ಉಮೇಶ ಕತ್ತಿ, ಯಮಕನ ಮರಡಿ ಶಾಸಕ ಸತೀಶ ಜಾರಕಿಹೊಳಿ, ರಾಜ್ಯಸಭಾ ಸದಸ್ಯ ಡಾ. ಪ್ರಭಾಕರ ಕೋರೆ ಸ್ವಂತ ಒಡೆತನದ ಸಕ್ಕರೆ ಕಾರ್ಖಾನೆಗಳ ನ್ನು ಹೊಂದಿದ್ದಾರೆ. ಸಕ್ಕರೆ ಲಾಬಿ ಕೂಡ ಇಲ್ಲಿ ಮೇಲುಗೈ ಸಾಧಿಸಿದೆ. ಸಕ್ಕರೆ ಕಾರ್ಖಾನೆಗಳ ಮೂಲಕ ರೈತರಿಗೆ ತಮ್ಮ ಬೆಂಬಲಿಗ ಅಭ್ಯರ್ಥಿಗಳಿಗೆ ಮತ ಚಲಾಯಿಸುವಂತೆ ಮನವೊಲಿಕೆ ಮಾಡುವ ಮೂಲಕ ರಾಜಕೀಯವಾಗಿ ತಮ್ಮ ಹಿಡಿತ ಸಾಧಿಸುತ್ತಾ ಬಂದಿರುವ ಈ ಕ್ಷೇತ್ರದಲ್ಲಿ ಸಕ್ಕರೆ ಲಾಬಿ ಜೋರಾಗಿದೆ. ಒಟ್ಟಾರೆ ಸಕ್ಕರೆ ಯಾರಿಗೆ ಸಿಹಿ ಇನ್ಯಾರಿಗೆ ಕಹಿಯಾಗಲಿದೆ ಎಂಬುವುದನ್ನು ಕಾದು ನೋಡಬೇಕಿದೆ.

ಸಮಬಲದ ಹೋರಾಟ:
ಕ್ಷೇತ್ರದಲ್ಲಿ ೮ ವಿಧಾನಸಭಾ ಕ್ಷೇತ್ರಗಳಿ ದ್ದು, ಈ ಪೈಕಿ ಬಿಜೆಪಿ, ಕಾಂಗ್ರೆಸ್ ತಲಾ 4 ಕ್ಷೇತ್ರಗಳಲ್ಲಿ ಶಾಸಕರನ್ನು ಹೊಂದಿವೆ. ಯಮಕನಮರಡಿ, ಚಿಕ್ಕೋಡಿ, ಅಥಣಿ, ಕಾಗವಾಡ ಕ್ಷೇತ್ರ ಗಳಲ್ಲಿ ಕಾಂಗ್ರೆಸ್ ಶಾಸಕರಿದ್ದರೇ, ರಾಯಬಾಗ, ನಿಪ್ಪಾಣಿ, ಕುಡಚಿ, ಹುಕ್ಕೇರಿ ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರಿದ್ದಾರೆ. 

ವೈಯಕ್ತಿಕ ವರ್ಚಸ್ಸೆ ಮುಖ್ಯ:
ಕಳೆದ ಎರಡು ದಶಕಗಳಿಂದ ಜೊಲ್ಲೆ ಹಾಗೂ ಹುಕ್ಕೇರಿ ಕುಟುಂಬಗಳು ಚಿಕ್ಕೋಡಿ ಭಾಗದಲ್ಲಿ ರಾಜಕೀಯವಾಗಿ ಬದ್ಧ ವೈರಿಗಳಾಗಿ ಗುರುತಿಸಿ ಕೊಂಡಿದ್ದಾರೆ. ಬಿಜೆಪಿ ಅಭ್ಯರ್ಥಿ ಅಣ್ಣಾಸಾಹೇಬ ಜೊಲ್ಲೆ, ಕಾಂಗ್ರೆಸ್‌ನ ಹಾಲಿ ಸಂಸದ ಪ್ರಕಾಶ ಹುಕ್ಕೇರಿ ಹಾಗೂ ಅವರ ಪುತ್ರ ಚಿಕ್ಕೋಡಿ ಶಾಸಕ ಗಣೇಶ ಹುಕ್ಕೇರಿ ವಿರುದ್ಧ ಸ್ಪರ್ಧಿಸಿ ಪರಾಭವಗೊಂಡಿದ್ದರು. ಆದರೂ ಶತಾಯಗತಾಯ ಹುಕ್ಕೇರಿ ಕುಟುಂಬದ ವಿರುದ್ಧ ಗೆಲುವು ಸಾಧಿಸ ಬೇಕೆಂಬ ಉದ್ದೇಶದಿಂದ ಅಣ್ಣಾಸಾಹೇಬ ಜೊಲ್ಲೆ ಕ್ಷೇತ್ರದಲ್ಲಿ ತಮ್ಮದೆಯಾದ ವರ್ಚಸ್ಸು ಬೆಳೆಸಿಕೊಂಡಿದ್ದಾರೆ. 

ಇದಕ್ಕೇನು ಕಡಿಮೆ ಇಲ್ಲದಂತೆ ಕಾಂಗ್ರೆಸ್ ಅಭ್ಯರ್ಥಿ ಪ್ರಕಾಶ ಹುಕ್ಕೇರಿ ಕೂಡ ಶಾಸಕರಾಗಿದ್ದ ಅವಧಿಯಲ್ಲಿ ಅಭಿವೃದ್ಧಿ ಕಾರ್ಯಗಳ ಮೂಲಕವೇ ಗಮನ ಸೆಳೆದಿದ್ದರು. 

ಜಿಲ್ಲಾ ವಿಭಜನೆಯ ಲಾಭ ಯಾರಿಗೆ?:
2018 ರಲ್ಲಿ ವಿಧಾನಸಭೆಗೆ ಚುನಾವಣೆ ಸಮೀಪಿಸುತ್ತಿದ್ದಂತೆ ಪ್ರತ್ಯೇಕ ಜಿಲ್ಲೆಯ ಹೋರಾಟಗಾರರು ಚಿಕ್ಕೋಡಿ ಪ್ರತ್ಯೇಕ ಜಿಲ್ಲೆಯನ್ನಾಗಿ ರಚಿಸುವವರೆಗೆ ಪ್ರತಿಭಟನೆ ಕೈ ಬಿಡುವುದಿಲ್ಲ ಎಂದು ಪಟ್ಟು ಹಿಡಿದಿದ್ದರು. ಈ ವೇಳೆ ಸಂಸದ ಪ್ರಕಾಶ ಹುಕ್ಕೇರಿ ಪ್ರತಿಭಟನಾಕಾರರನ್ನು ಮನವೊಲಿಸುವ ವಿಫಲರಾಗಿದ್ದರು. ಇಕ್ಕಟ್ಟಿಗೆ ಸಿಲುಕಿದ್ದ ಹುಕ್ಕೇರಿ ಚುನಾವಣೆ ನಂತರ ಚಿಕ್ಕೋಡಿ ಜಿಲ್ಲೆಯನ್ನಾಗಿ ರಚಿಸದಿದ್ದಲ್ಲಿ ವಿಷ ಸೇವನೆ ಮಾಡುತ್ತೇನೆ ಎಂದಿದ್ದರಿಂದ ಪ್ರತಿಭಟನೆ ಕೈಬಿಟ್ಟಿದ್ದರು. 

ಜಾತಿ ಲೆಕ್ಕಾಚಾರ:
8,06,052 ಪುರುಷ, 7,73,202 ಮಹಿಳಾ 55 ಇತರೆ ಹಾಗೂ  7,487 ಸೇವಾ ಮತದಾರರು ಸೇರಿ ಒಟ್ಟು 15,86,796 ಮತದಾರರಿದ್ದಾರೆ. ಲಿಂಗಾಯತ - 3.70 ಲಕ್ಷ, ಮುಸ್ಲಿಂ-2.66 ಲಕ್ಷ, ಕುರುಬ- 1.84 ಲಕ್ಷ, ಪ.ಜಾತಿ - 1.58 ಲಕ್ಷ, ಮರಾಠಾ- 1.47 ಲಕ್ಷ, ಜೈನ- 1.35 ಲಕ್ಷ, ಪ.ಪಂಗಡ- 1.02ಲಕ್ಷ, ರಜಪೂತ- 68ಸಾವಿರ, ಬ್ರಾಹ್ಮಣ- 38 ಸಾವಿರ ಮತದಾರರಿದ್ದಾರೆ.

11  ಜನ ಕಣದಲ್ಲಿ ಚಿಕ್ಕೋಡಿ ಕ್ಷೇತ್ರದಲ್ಲಿ ಅಂತಿಮವಾಗಿ ಚುನಾವಣಾ ಕಣದಲ್ಲಿ 11 ಅಭ್ಯರ್ಥಿಗಳು ಉಳಿದಿದ್ದಾರೆ. ಪ್ರಕಾಶ ಬಾಬಣ್ಣ ಹುಕ್ಕೇರಿ (ಕಾಂಗ್ರೆಸ್), ಅಣ್ಣಾಸಾಹೇಬ ಶಂಕರ ಜೊಲ್ಲೆ (ಬಿಜೆಪಿ), ಮಚ್ಚೇಂದ್ರ ಕಾಡಾಪೂರೆ (ಬಹುಜನ ಸಮಾಜ ಪಕ್ಷ), ಅಪ್ಪಾಸಾಹೇಬ ಕುರಣೆ (ಭಾರಿಫ್ ಬಹುಜನ ಮಹಾಸಂಘ ಪಕ್ಷ), ಬಾಳಿಗಟ್ಟಿ ಪ್ರವೀಣಕುಮಾರ (ಉತ್ತಮ ಪ್ರಜಾಕೀಯ ಪಕ್ಷ), ಮಗದುಮ್ ಇಸ್ಮಾಯಿಲ್ ಮಗದುಮ್ಮ (ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ(ಎ) ಪಕ್ಷ), ಕಲ್ಲಪ್ಪ ಅಡಿವೆಪ್ಪ ಗುಡಸಿ, ಜಿತೇಂದ್ರ ಸುಭಾಷ ನೇರ್ಲೆ, ಮೋಹನ ಗುರಪ್ಪ ಮೋಟನ್ನವರ, ವಿಶ್ವನಾಥ ವಾಜಂತ್ರಿ ಮುಂತಾದವರಿದ್ದಾರೆ

ವರದಿ : ಜಗದೀಶ್ ವಿರಕ್ತಮಠ