ನವದೆಹಲಿ(ಏ.23): 2019 ರ ಲೋಕಸಭೆ ಚುನಾವಣೆಯ ಮೂರನೇ ಹಂತದ ಮತದಾನ ಪ್ರಕ್ರಿಯೆ ಇಂದು ಮುಕ್ತಾಯವಾಗಿದ್ದು, ಕರ್ನಾಟಕವೂ ಸೇರಿದಂತೆ ದೇಶದ 13 ರಾಜ್ಯಗಳು, 2 ಕೇಂದ್ರಾಡಳಿತ ಪ್ರದೇಶಗಳ ಒಟ್ಟು 116 ಲೋಕಸಭಾ ಕ್ಷೇತ್ರಗಳಿಗೆ ಮತದಾನ ಪ್ರಕ್ರಿಯೆ ಮುಗಿದಿದೆ.

ಇಂದು ಸಂಜೆ 6 ಗಂಟೆಗೆ ಮತದಾನ ಮುಕ್ತಾಯವಾಗಿದ್ದು, ಕೇಂದ್ರ ಚುನಾವಣಾ ಆಯೋಗ ವಿವಿಧ ರಾಜ್ಯಗಳ ಶೇಕಡಾವಾರು ಮತದಾನದ ಕುರಿತು ವರದಿ ನೀಡಿದೆ.

(ಗಮನಿಸತಕ್ಕದ್ದು-2014 ರ ಶೇಕಡಾವಾರು ಮತದಾನದ ವಿವರ ಚುನಾವಣೆ ಮುಗಿದ ಬಳಿಕದ ಒಟ್ಟಾರೆ ಮತದಾನದ ಅಂಕಿ ಅಂಶವಾಗಿವೆ.)

ಅಸ್ಸಾಂ-ಶೇ.78.29(2014ರಲ್ಲಿ ಶೇ.49.5%)
ಬಿಹಾರ-ಶೇ.59.97(2014ರಲ್ಲಿ ಶೇ.56.3%)
ಛತ್ತೀಸ್ ಗಡ್-ಶೇ.65.91(2014ರಲ್ಲಿ ಶೇ.69.5%)
ದಾದರ್ ಮತ್ತು ನಗರಹವೇಲಿ-ಶೇ.71.43(2014ರಲ್ಲಿ ಶೇ.84.1%)
ದಮನ್ ಮತ್ತು ದಿಯು-ಶೇ.65.34(2014ರಲ್ಲಿ ಶೇ.78.0%)
ಗೋವಾ-ಶೇ.71.09(2014ರಲ್ಲಿ ಶೇ.77.0%)
ಗುಜರಾತ್-ಶೇ.60.21(2014ರಲ್ಲಿ ಶೇ.63.6%)
ಜಮ್ಮು ಮತ್ತು ಕಾಶ್ಮೀರ-ಶೇ.12.86(2014ರಲ್ಲಿ ಶೇ.49.5%)
ಕರ್ನಾಟಕ-ಶೇ.64.14(2014ರಲ್ಲಿ ಶೇ.67.2%)
ಕೇರಳ-ಶೇ.70.21(2014ರಲ್ಲಿ ಶೇ.73.8%)
ಮಹಾರಾಷ್ಟ್ರ-ಶೇ.56.57(2014ರಲ್ಲಿ ಶೇ.60.4%)
ಒಡಿಶಾ-ಶೇ.58.18(2014ರಲ್ಲಿ ಶೇ.73.8%)
ತ್ರಿಪುರ-ಶೇ.78.52(2014ರಲ್ಲಿ ಶೇ.84.7%)
ಉತ್ತರಪ್ರದೇಶ-ಶೇ.57.74(2014ರಲ್ಲಿ ಶೇ.58.4%)
ಪ.ಬಂಗಾಳ-ಶೇ.79.36(2014ರಲ್ಲಿ ಶೇ.82.2%)

ದೇಶಾದ್ಯಂತ ಮೂರನೇ ಮತದಾನದಲ್ಲಿ ಒಟ್ಟಾರೆ ಶೇ. 63.24 ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗ ಮಾಹಿತಿ ನೀಡಿದೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ಅತ್ಯಂತ ಕಡಿಮೆ(ಶೇ.12.86) ಮತದಾನವಾಗಿದ್ದರೆ, ಪಶ್ಚಿಮ ಬಂಗಾಳದಲ್ಲಿ ಅತ್ಯಂತ ಹೆಚ್ಚು(ಶೇ.79.36) ಮತದಾನವಾಗಿದೆ.

ಪ.ಬಂಗಾಳದಲ್ಲಿ ಸಣ್ಣ ಪ್ರಮಾಣದ ಹಿಂಸಾಚಾರ ನಡೆದು ಓರ್ವ ಮೃತಪಟ್ಟಿರುವ ಘಟನೆ ಹೊರತುಪಡಿಸಿದರೆ, ಬಹುತೇಕ ಮತದಾನ ಪ್ರಕ್ರಿಯೆ ಶಾಂತಿಯುತವಾಗಿತ್ತು ಎಂದು ಚುನಾವಣಾ ಆಯೋಗ ಮಾಹಿತಿ ನೀಡಿದೆ.

ಇಂದು ನಡೆದ ಮತದಾನ ಪ್ರಕ್ರಿಯೆಲ್ಲಿ ಗುಜರಾತ್, ಗೋವಾ ಮತ್ತು ಕೇರಳ ರಾಜ್ಯಗಳು ಮತ್ತು ದಾದರ್ ಮತ್ತು ನಗರಹವೇಲಿ, ದಮನ್ ಮತ್ತು ದಿಯು ಕೇಂದ್ರಾಡಳಿತ ಪ್ರದೇಶದಲ್ಲಿ ಒಂದೇ ಹಂತದಲ್ಲಿ ಮತದಾನ ಪ್ರಕ್ರಿಯೆ ಪೂರ್ಣಗೊಂಡಿದೆ.

ಅದರಂತೆ ಅಸ್ಸಾಂ, ಛತ್ತೀಸ್ ಗಡ್, ಕರ್ನಾಟಕ ರಾಜ್ಯಗಳಲ್ಲಿ ಮತದಾನ ಪ್ರಕ್ರಿಯೆ ಸಂಪೂರ್ಣವಾಗಿ ಮುಕ್ತಾಯ ಕಂಡಿದೆ.

ಇನ್ನು ಮೂರನೇ ಹಂತದ ಮತದಾನ ಪ್ರಕ್ರಿಯೆಯಲ್ಲಿ ಪ್ರಧಾನಿ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಬಿಜೆಪಿ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ ಸೇರಿದಂತೆ ಹಲವು ಗಣ್ಯರು ಮತದಾನ ಮಾಡಿದ್ದು ವಿಶೇಷವಾಗಿತ್ತು. 

ದೇಶದಲ್ಲಿ ಏ.11ರಿಂದ ಮೇ.19ರವೆರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಮೊದಲ ಹಂತದ ಮತದಾನ ಏ.18ರಂದು ಮುಗಿದಿದ್ದು,ಏ.23ರಂದು ಎರಡನೇ ಹಂತದ ಮತದಾನ ನಡೆಯಲಿದೆ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ. ಕರ್ನಾಟಕದಲ್ಲಿ 28.