ನವದೆಹಲಿ[ಮೇ.08]: ಲೋಕಸಭೆ ಚುನಾವಣೆಯ 5 ಹಂತ ಮುಗಿದು ಇನ್ನು ಕೇವಲ 2 ಹಂತ ಬಾಕಿ ಉಳಿದಿದ್ದು, ಫಲಿತಾಂಶಕ್ಕೆ ಕ್ಷಣಗಣನೆ ಆರಂಭವಾಗಿದೆ. ಇದೇ ಹೊತ್ತಿನಲ್ಲೇ ಸಟ್ಟಬಜಾರ್‌ನಲ್ಲೂ ಯಾರು ಗೆಲ್ಲಬಹುದು? ಯಾರು ಸರ್ಕಾರ ರಚಿಸಬಹುದು? ಎಂಬಿತ್ಯಾದಿ ವಿಷಯಗಳ ಬಗ್ಗೆ ಭರ್ಜರಿ ಬೆಟ್ಟಿಂಗ್‌ ನಡೆದಿದೆ.

ಅಂದಾಜಿನ ಪ್ರಕಾರ ಪ್ರಸಕ್ತ ಲೋಕಸಭಾ ಚುನಾವಣೆಯ ಫಲಿತಾಂಶದ ಮೇಲೇ 12000 ಕೋಟಿ ರು.ಗೂ ಹೆಚ್ಚಿನ ಬೆಟ್ಟಿಂಗ್‌ ನಡೆಯುತ್ತಿದೆ ಎನ್ನಲಾಗಿದೆ.

ಸಟ್ಟಾಬಜಾರ್‌ ಮಾರುಕಟ್ಟೆಯ ಅಂದಾಜಿನ ಪ್ರಕಾರ, ಈ ಬಾರಿ ಕೇಂದ್ರದಲ್ಲಿ ಯಾವುದೇ ಪಕ್ಷಕ್ಕೆ ನಿಚ್ಚಳ ಬಹುಮತ ಸಿಗುವುದು ಅನುಮಾನ. ಮಹಾಗಠಬಂಧನ ಹೆಚ್ಚಿನ ಸಂಖ್ಯೆಯಲ್ಲಿ ಸೀಟುಗಳನ್ನು ಗೆಲ್ಲಲಿದ್ದು, ಅತಂತ್ರ ಸಂಸತ್ತು ನಿರ್ಮಾಣ ಆಗುವ ಸಾಧ್ಯತೆಯನ್ನೂ ತಳ್ಳಿಹಾಕುವಂತಿಲ್ಲ. ಎನ್‌ಡಿಎ 250ಕ್ಕಿಂತಲೂ ಕಡಿಮೆ ಸ್ಥಾನಗಳನ್ನು ಪಡೆಯುವ ಸಾಧ್ಯತೆ ಇದೆ. ಯುಪಿಎ 150ರಿಂದ 170 ಸ್ಥಾನಗಳನ್ನು ಪಡೆಯಲಿದೆ. ಆದರೂ ಕೇಂದ್ರದಲ್ಲಿ ಎನ್‌ಡಿಎ ಸರ್ಕಾರ ಅಧಿಕಾರ ಹಿಡಿಯಲು ಯಶಸ್ವಿಯಾಗಲಿದೆ ಎಂಬುದು ಬಾಜಿಕೋರರರ ಅಂದಾಜು. ಬಾಜಿಕೋರರ ಫೇವರೇಟ್‌ ಆಗಿರುವ ಎನ್‌ಡಿಎ ಪರ ಬಾಜಿ ಕಟ್ಟಿದರೆ 1 ರು.ಗೆ 11 ರು. ಹಾಗೂ ಯುಪಿಎ ಪರ ಬಾಜಿ ಕಟ್ಟಿದರೆ 33 ರು. ನಿಗದಿ ಮಾಡಲಾಗಿದೆ

ಸೂರತ್‌, ಮುಂಬೈ, ಕೋಲ್ಕತಾ ಮತ್ತು ದೆಹಲಿಯಲ್ಲಿ ಹರಿದಾಡುತ್ತಿರುವ ಊಹಾಪೋಹಗಳ ಪ್ರಕಾರ, ಬಿಜೆಪಿ ಮತ್ತು ಕಾಂಗ್ರೆಸ್‌ಗಿಂತಲೂ ಮಹಾಗಠಬಂಧನ ಉತ್ತಮ ಪ್ರದರ್ಶನ ನೀಡಲಿದೆ. ಮಹಾಗಠಬಂಧನಕ್ಕೆ 200ಕ್ಕೂ ಹೆಚ್ಚು ಸೀಟುಗಳು ಬಂದರೂ ಅಚ್ಚರಿ ಇಲ್ಲ. ಪ್ರಧಾನಿ ನರೇಂದ್ರ ಮೋದಿ ಅವರ ತವರು ಗುಜರಾತಿನಲ್ಲಿ ಬಿಜೆಪಿ ಞನ್ನಡೆ ಅನುಭವಿಸಲಿದ್ದು, ಕಳೆದ ಬಾರಿಗಿಂತ 5 ರಿಂದ 6 ಸ್ಥಾನಗಳು ಕಡಿಮೆ ಆಗಲಿವೆ.