ನವದೆಹಲಿ/ಬೆಂಗಳೂರು :  ಪ್ರಸಕ್ತ ಲೋಕಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಬಹುನಿರೀಕ್ಷಿತ ಮೊದಲ ಪಟ್ಟಿಗುರುವಾರ ಬಿಡುಗಡೆಯಾಗಿದೆ. ಒಟ್ಟಾರೆ 184 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಪ್ರಕಟಿಸಲಾಗಿದ್ದು, ಕರ್ನಾಟಕದ 28 ಕ್ಷೇತ್ರಗಳ ಪೈಕಿ 21 ಕ್ಷೇತ್ರಗಳ ಉಮೇದುವಾರರ ಹೆಸರು ಘೋಷಿಸಲಾಗಿದೆ. 14 ಹಾಲಿ ಸಂಸದರಿಗೂ ಟಿಕೆಟ್‌ ನೀಡಲಾಗಿದೆ. ಅಚ್ಚರಿಯೆಂದರೆ, ಬೆಂಗಳೂರು ದಕ್ಷಿಣದಿಂದ ಸ್ಪರ್ಧೆ ಖಚಿತ ಎನ್ನಲಾಗಿರುವ ದಿ.ಅನಂತ್‌ ಕುಮಾರ್‌ ಪತ್ನಿ ತೇಜಸ್ವಿನಿ ಅವರ ಹೆಸರನ್ನು ಇನ್ನೂ ಘೋಷಿಸಿಲ್ಲ. ಬೆಂಗಳೂರು ದಕ್ಷಿಣ ಸೇರಿದಂತೆ 7 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಪ್ರಕಟಣೆ ಇನ್ನೂ ಬಾಕಿ ಇದೆ.

ಯಾವ ಕ್ಷೇತ್ರ? ಯಾಕೆ ಬಾಕಿ?

1. ಬೆಂಗಳೂರು ದಕ್ಷಿಣ: ಅನಂತ್‌ ಪತ್ನಿ ತೇಜಸ್ವಿನಿ ಅಭ್ಯರ್ಥಿ ಎಂಬುದು ನಿಚ್ಚಳವಾಗಿದ್ದರೂ ಘೋಷಣೆಯಾಗದಿರುವುದು ಅಚ್ಚರಿಗೆ ಕಾರಣವಾಗಿದೆ. 2ನೇ ಪಟ್ಟಿಯಲ್ಲಿ ಪ್ರಕಟವಾಗುವ ನಿರೀಕ್ಷೆ ಇದೆ

2. ಮಂಡ್ಯ: ಪಕ್ಷೇತರ ಅಭ್ಯರ್ಥಿಯಾಗಿರುವ ಸುಮಲತಾರನ್ನು ಬೆಂಬಲಿಸಬೇಕೇ? ಅಥವಾ ರಾಷ್ಟ್ರೀಯ ಪಕ್ಷವಾಗಿ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕೇ ಎಂಬ ಗೊಂದಲದಿಂದಾಗಿ ನಿರ್ಧಾರ ವಿಳಂಬ

3. ರಾಯಚೂರು: ಮಾಜಿ ಸಚಿವ ಅಮರೇಶ್‌ ನಾಯಕ್‌ ಹಾಗೂ ಮಾಜಿ ಶಾಸಕ ತಿಪ್ಪರಾಜು ಹವಾಲ್ದಾರ್‌ ನಡುವೆ ಪೈಪೋಟಿಯಿದೆ. ಈ ಪೈಕಿ ಒಬ್ಬರನ್ನು ಅಂತಿಮಗೊಳಿಸುವ ಸಾಧ್ಯತೆ ಇದೆ

4. ಕೋಲಾರ: ಎಸ್ಸಿ ಬಲಗೈ ಗುಂಪಿನ ಛಲವಾದಿ ನಾರಾಯಣಸ್ವಾಮಿ ಹೆಸರು ಮುಂಚೂಣಿಯಲ್ಲಿ. ಮುನಿಯಪ್ಪಗೆ ಪ್ರಬಲ ಎದುರಾಳಿ, ಬೋವಿಗೆ ಪ್ರಾತಿನಿಧ್ಯ ಚಿಂತನೆಯಿಂದಾಗಿ ಘೋಷಣೆ ವಿಳಂಬ

5. ಬೆಂ. ಗ್ರಾಮಾಂತರ: ಮಾಜಿ ಸಚಿವ ಸಿ.ಪಿ.ಯೋಗೇಶ್ವರ್‌ ಪುತ್ರಿ ನಿಶಾಗೆ ಟಿಕೆಟ್‌ ಬಹುತೇಕ ಖಚಿತ. ಆದರೆ, ರಾಹುಲ್‌ ಗಾಂಧಿ ಸ್ಪರ್ಧಿಸುವ ವದಂತಿ ಇರುವುದರಿಂದ ಕಾದು ನೋಡಲು ನಿರ್ಧಾರ

6. ಚಿಕ್ಕೋಡಿ: ಪಕ್ಷದ ಶಾಸಕಿ ಶಶಿಕಲಾ ಜೊಲ್ಲೆ ಪತಿ ಅಣ್ಣಾ ಸಾಹೇಬ್‌ ಹೆಸರು ಮುಂಚೂಣಿಯಲ್ಲಿ. ಆದರೆ, ಮಾಜಿ ಸಂಸದ ರಮೇಶ್‌ ಕತ್ತಿ ಕೂಡ ಆಕಾಂಕ್ಷಿ. ಹಾಗಾಗಿ, ಕಾದು ನೋಡಲು ತೀರ್ಮಾನ

7. ಕೊಪ್ಪಳ: ಹೈಕಮಾಂಡ್‌ ಆಂತರಿಕ ಸಮೀಕ್ಷೆ ಪ್ರಕಾರ ಹಾಲಿ ಸಂಸದ ಕರಡಿ ಸಂಗಣ್ಣ ಗೆಲುವು ಸುಲಭವಿಲ್ಲ. ಮಾಜಿ ಶಾಸಕ ಕೆ.ಶರಣಪ್ಪ ಪುತ್ರ ಡಾ

ಕೆ.ಬಸವರಾಜ ಕೂಡ ಆಕಾಂಕ್ಷಿ. ಹಾಗಾಗಿ, ವಿಳಂಬ

184 ಅಭ್ಯರ್ಥಿಗಳ ಪಟ್ಟಿಘೋಷಣೆ

7 ಹಂತಗಳ ಲೋಕಸಭಾ ಚುನಾವಣೆಗೆ ಬಿಜೆಪಿ ತನ್ನ 184 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಗುರುವಾರ ಬಿಡುಗಡೆ ಮಾಡಿದೆ. ಕೇಂದ್ರ ಸಚಿವ ಜೆ.ಪಿ.ನಡ್ಡಾ ಅವರು ಸುದ್ದಿಗೋಷ್ಠಿಯಲ್ಲಿ ಪಕ್ಷದ ಮೊದಲ ಪಟ್ಟಿಯನ್ನು ಪ್ರಕಟಿಸಿದರು.

ವಾರಾಣಸಿಯಿಂದ ಮೋದಿ ಕಣಕ್ಕೆ

ಪ್ರಧಾನಿ ನರೇಂದ್ರ ಮೋದಿ ವಾರಾಣಸಿಯಿಂದ ಸ್ಪರ್ಧಿಸಲಿದ್ದಾರೆ. ಆದರೆ, ಕಳೆದ ಬಾರಿಯಂತೆ 2 ಕ್ಷೇತ್ರದಿಂದ ಸ್ಪರ್ಧಿಸುತ್ತಾರಾ ಎಂಬ ಬಗ್ಗೆ ಇನ್ನೂ ಸ್ಪಷ್ಟತೆ ಲಭ್ಯವಾಗಿಲ್ಲ. 2014ರಲ್ಲಿ ಅವರು ಗುಜರಾತ್‌ನ ವಡೋದರಾದಿಂದಲೂ ಸ್ಪರ್ಧಿಸಿದ್ದರು.

ಗಾಂಧಿನಗರದಿಂದ ಅಮಿತ್‌ ಶಾ ಸ್ಪರ್ಧೆ

ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಅವರು ಇದೇ ಮೊದಲ ಬಾರಿಗೆ ಲೋಕಸಭಾ ಚುನಾವಣೆ ಕಣಕ್ಕೆ ಧುಮುಕಿದ್ದಾರೆ. ಎಲ್‌.ಕೆ.ಅಡ್ವಾಣಿ ಅವರು ಪ್ರತಿನಿಧಿಸುತ್ತಿದ್ದ ಗುಜರಾತ್‌ನ ಗಾಂಧಿನಗರದಿಂದ ಅಮಿತ್‌ ಶಾ ಸ್ಪರ್ಧಿಸುತ್ತಿದ್ದಾರೆ.

ಅಚ್ಚರಿ! ಅಡ್ವಾಣಿ ಸ್ಪರ್ಧೆ ಮಾಡಲ್ಲ

‘ಬಿಜೆಪಿ ಭೀಷ್ಮ’ ಲಾಲಕೃಷ್ಣ ಅಡ್ವಾಣಿ ಚುನಾವಣಾ ಕಣದಿಂದ ಹಿಂದೆ ಸರಿದಿದ್ದಾರೆ. ಗುಜರಾತ್‌ನ ಗಾಂಧಿನಗರ ಕ್ಷೇತ್ರದಿಂದ ಸತತ 5 ಬಾರಿ ಲೋಕಸಭೆಗೆ ಹೋಗಿದ್ದ ಅಡ್ವಾಣಿ ಇದೇ ಮೊದಲ ಬಾರಿಗೆ ಚುನಾವಣೆಗೆ ಸ್ಪರ್ಧಿಸುತ್ತಿಲ್ಲ.

25 ಸಂಸದರಿಗೆ ಟಿಕೆಟ್‌ ಇಲ್ಲ

ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ ಎಲ್‌.ಕೆ.ಅಡ್ವಾಣಿ, ಉತ್ತರಾಖಂಡದ ಮಾಜಿ ಮುಖ್ಯಮಂತ್ರಿ ಬಿ.ಸಿ.ಖಂಡೂರಿ ಅವರೂ ಸೇರಿದಂತೆ ಒಟ್ಟಾರೆ 25 ಹಾಲಿ ಲೋಕಸಭಾ ಸದಸ್ಯರಿಗೆ ಟಿಕೆಟ್‌ ನೀಡಲಾಗಿಲ್ಲ ಎಂಬುದು ಗಮನಾರ್ಹ ಸಂಗತಿ.