ಬೆಂಗಳೂರು(ಮಾ.19): ಚುನಾವಣೆ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಚುನಾವಣಾ ಅಧಿಕಾರಿ ಮಂಜುನಾಥ್ ಪ್ರಸಾದ್ ಹಾಗೂ ಬೆಂಗಳೂರು ನಗರ ಪೊಲೀಸ್ ಆಯುಕ್ತ ಟಿ. ಸುನೀಲ್ ಕುಮಾರ್ ಜಂಟಿ ಪತ್ರಿಕಾಗೋಷ್ಠಿ ನಡೆಸಿದರು.

ರಾಷ್ಟ್ರಪತಿ ಮೊದಲ ಹಂತದ ಚುನಾವಣೆ ನೋಟಿಫಿಕೇಶನ್ ಜಾರಿಗೊಳಿಸಿದ್ದು, ಏ.೧೮ ರಂದು ಬೆಳಗ್ಗೆ ೭ ರಿಂದ ಸಂಜೆ ೬ ಗಂಟೆವರೆಗೂ ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಶಾಂತಿಯುತ ಮತದಾನಕ್ಕೆ ಕೈಗೊಂಡ ಕ್ರಮಗಳ ಕುರಿತು ಮಾಹಿತಿ ನೀಡಿದರು.

ನಗರದಲ್ಲಿ ಮೂರು ಕಡೆ ನಾಮಪತ್ರ ಸ್ವೀಕರಿಸಲಾಗುವುದು ಎಂದು ತಿಳಿಸಿದ ಮಂಜುನಾಥ್ ಪ್ರಸಾದ್, ನಾಮಪತ್ರ ಸಲ್ಲಿಕೆಯ ಎಲ್ಲಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.

ನಾಮಪತ್ರ ಸಲ್ಲಿಕೆ ಹೇಗೆ?:

1. ನಾಲ್ಕನೇ ಶನಿವಾರ ನಾಮಪತ್ರ ಸ್ವೀಕರಿಸುವುದಿಲ್ಲ.

2. ಬೆಳಗ್ಗೆ 11ರಿಂದ ಮದ್ಯಾಹ್ನ 3ಗಂಟೆವರೆಗು ಮಾತ್ರ ಸ್ವೀಕಾರ.

3. ನೂರು ಮೀಟರ್ ಒಳಗೆ ಮೂರು ವಾಹನಗಳಿಗೆ ಮಾತ್ರ ಪ್ರವೇಶ.

4. ನಾಮಪತ್ರ ಸಲ್ಲಿಸಲು ಅಭ್ಯರ್ಥಿ ಸೇರಿದಂತೆ 5 ಜನರಿಗೆ ಮಾತ್ರ ಅವಕಾಶ.

5. ನಾಮಪತ್ರದ ಜೊತೆ ಅಫಿಡವಿಟ್ ಪಾರ್ಮ್ 26ಸಲ್ಲಿಸಬೇಕು.

6. ಆಸ್ತಿ, ಕ್ರಿಮಿನಲ್ ಮೊಕದ್ದಮೆ ಹಾಗೂ ಕುಟುಂಬದವರು ಕೊನೆಯ ಐದು ವರ್ಷದ ಆದಾಯ ತೋರಿಸಬೇಕು.

7. ಅಭ್ಯರ್ಥಿ ಮೇಲೆ ಎಷ್ಟು ಕ್ರಿಮಿನಲ್ ಕೇಸ್ ಇದೆ ಅನ್ನೋದರ ಜೊತೆಯಲ್ಲಿ ಮೂರು ಬಾರಿ ಪತ್ರಿಕೆಗಳಲ್ಲಿ ಹಾಗೂ ಟಿವಿಗಳಲ್ಲಿ ಜಾಹೀರಾತು ನೀಡಬೇಕು.

8. ಎಸ್‌ಸಿ ಮತ್ತು ಎಸ್‌ಟಿ ಅಭ್ಯರ್ಥಿ 12,500 ಹಾಗೂ ಸಾಮಾನ್ಯ ಅಭ್ಯರ್ಥಿ 25 ಸಾವಿರ ರೂ. ಡೆಪಾಸಿಟ್ ಇಡಬೇಕು.

9. ಭಾವಚಿತ್ರದ ಜೊತೆ ರಿಟರ್ನಿಂಗ್ ಆಫಿಸರ್ ಮುಂದೆ ಪ್ರಮಾಣ ಬೋಧನೆ ಮಾಡಬೇಕು.

10. ಅಭ್ಯರ್ಥಿಗಳ ನಾಮಪತ್ರ ಜೆರಾಕ್ಸ್ ಕಾಪಿ ಬೇಕಿದ್ದಲ್ಲಿ ಉಚಿತವಾಗಿ ನೀಡಲಾಗುವುದು.

ಈ ವೇಳೆ ಮಾತನಾಡಿದ ಪೊಲಿಸ್ ಆಯುಕ್ತ ಸುನೀಲ್ ಕುಮಾರ್, ಚುನಾವಣೆ ಸಿದ್ಧತೆ ಪೂರ್ಣಗೊಂಡಿದ್ದು, ಮೂರು ಕ್ಷೇತ್ರಗಳಿಗೆ ಡಿಸಿಪಿ ನೇತೃತ್ವದಲ್ಲಿ ಭದ್ರತೆ ನೀಡಲಾಗಿದೆ. ಎಂದು ತಿಳಿಸಿದರು.

ಸೆಂಟ್ರಲ್ ರಾಹುಲ್, ನಾರ್ತ್ ಶಶಿಕುಮಾರ್, ಸೌತ್ ಅಣ್ಣ ಮಲೈ ಅವರಿಗೆ ಭದ್ರತೆ ಜವಾಬ್ದಾರಿ ನೀಡಲಾಗಿದ್ದು, ಶಾಂತಿಯುತ ಮತದಾನಕ್ಕೆ ಪೊಲೀಸ್ ಇಲಾಖೆ ಸರ್ವಸನ್ನದ್ಧವಾಗಿದೆ ಎಂದು ಸುನೀಲ್ ಕುಮಾರ್ ಹೇಳಿದರು.

ಆರ್ಮ್ ಲೈಸೆನ್ಸ್ ಪಡೆದಿರುವವರು ಸಂಬಂದಪಟ್ಟ ಪೊಲೀಸ್ ಸ್ಟೇಷನ್‌ಗೆ ಹಿಂದಿರುಗಿಸಬೇಕು ಎಂದು ಮನವಿ ಮಾಡಿರುವ ಆಯುಕ್ತರು, ಬೆಂಗಳೂರಿನಲ್ಲಿ ಒಟ್ಟು ೯ ಸಾವಿರ ಶಸ್ತ್ರಗಳಿದ್ದು ಅವುಗಳಲ್ಲಿ ೭ ಸಾವರ ಶಸ್ತ್ರಾಸ್ತ್ರಗಳನ್ನು ಹಿಂಪಡೆಯುಲಾಗಿದೆ ಎಂದು ತಿಳಿಸಿದರು.

ಈಗಾಗಲೇ ರೌಡಿ ಪರೇಡ್ ನಡೆಸಿ, ಅವರ ಚಟುವಟಿಕೆ ಮೇಲೆ ನಿಗಾ ಇಡಲಾಗಿದ್ದು, 5ಸಾವಿರ ರೌಡಿಗಳ ಮೇಲೆ ಕಣ್ಣಿಡಲಾಗಿದೆ ಎಂದು ಸುನೀಲ್ ಕುಮಾರ್ ಮಾಹಿತಿ ನೀಡಿದರು.