ಭುವನೇಶ್ವರ :  ಒಡಿಶಾ ಮುಖ್ಯಮಂತ್ರಿ ನವೀನ್‌ ಪಟ್ನಾಯಕ್‌ ತಮ್ಮ ಬಿಜೆಡಿ ಪಕ್ಷ ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಶೇ.33ರಷ್ಟುಕ್ಷೇತ್ರಗಳನ್ನು ಮಹಿಳೆಯರಿಗೆ ಮೀಸಲಿರಿಸಲಿದೆ ಎಂದು ಪ್ರಕಟಿಸಿದ್ದಾರೆ. ಅದರ ಪ್ರಕಾರ, ಒಡಿಶಾದ 21 ಲೋಕಸಭಾ ಕ್ಷೇತ್ರಗಳ ಪೈಕಿ ಏಳು ಕ್ಷೇತ್ರಗಳ ಟಿಕೆಟ್‌ಗಳನ್ನು ಮಹಿಳೆಯರಿಗೆ ನೀಡಬೇಕಾಗುತ್ತದೆ.

ಭಾನುವಾರ ಕೇಂದ್ರಪಾರದಲ್ಲಿ ನಡೆದ ಪಕ್ಷದ ಸಮಾವೇಶದಲ್ಲಿ ಬಿಜು ಜನತಾದಳದ ಅಧ್ಯಕ್ಷರೂ ಆಗಿರುವ ನವೀನ್‌ ಪಟ್ನಾಯಕ್‌ ಈ ಘೋಷಣೆ ಮಾಡಿದರು. ಆದರೆ, ಲೋಕಸಭೆ ಚುನಾವಣೆಯ ಜೊತೆಯಲ್ಲೇ ನಡೆಯಲಿರುವ ಒಡಿಶಾ ರಾಜ್ಯದ ವಿಧಾನಸಭೆ ಚುನಾವಣೆಯಲ್ಲಿ ಮಹಿಳಾ ಮೀಸಲು ಜಾರಿಗೊಳಿಸುವ ಬಗ್ಗೆ ಅವರು ಏನನ್ನೂ ಹೇಳಲಿಲ್ಲ. 

ರಾಜ್ಯದ 147 ವಿಧಾನಸಭೆ ಕ್ಷೇತ್ರಗಳ ಪೈಕಿ 12 ಕ್ಷೇತ್ರಗಳಲ್ಲಿ ಮಹಿಳಾ ಸದಸ್ಯರಿದ್ದಾರೆ. ಕಳೆದ ನವೆಂಬರ್‌ನಲ್ಲಿ ಒಡಿಶಾ ವಿಧಾನಸಭೆಯಲ್ಲಿ ಮಹಿಳೆಯರಿಗೆ ವಿಧಾನಸಭೆ ಹಾಗೂ ಸಂಸತ್‌ ಚುನಾವಣೆಯಲ್ಲಿ ಶೇ.33ರಷ್ಟುಮೀಸಲು ನೀಡುವ ಮಸೂದೆ ಸರ್ವಾನುಮತದಿಂದ ಅಂಗೀಕಾರಗೊಂಡಿತ್ತು.