ನವದೆಹಲಿ[ಮೇ.23]: ಸೋನಿಯಾ ಗಾಂಧಿ ಪುತ್ರಿ ಪ್ರಿಯಾಂಕಾ ಗಾಂಧಿ ವಾದ್ರಾ ರಾಜಕೀಯ ಆಗಮನ ಹೊಸ ಸಂಚಲನ ಸೃಷ್ಟಿಸಲಿದೆ ಎನ್ನುವ ನಿರೀಕ್ಷೆ ಹುಸಿಯಾಗಿದೆ. ಉತ್ತರಪ್ರದೇಶದಲ್ಲಿ ಸೋನಿಯಾ ಗಾಂಧಿ ಹೊರತುಪಡಿಸಿ ಉಳಿದ್ಯಾವ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಗೆಲುವು ದಾಖಲಿಸಲು ಸಾಧ್ಯವಾಗಲಿಲ್ಲ.

47 ವರ್ಷದ ಪ್ರಿಯಾಂಕಾ ಗಾಂಧಿ 2019ರ ಜನವರಿಯಲ್ಲಿ AICC ಜನರಲ್ ಸೆಕ್ರೇಟರಿ ಆಗಿ ನೇಮಕವಾದ ಬಳಿಕ ಉತ್ತರಪ್ರದೇಶದ ಪೂರ್ವ ಭಾಗದ ಚುನಾವಣಾ ಉಸ್ತುವಾರಿ ವಹಿಸಿಕೊಂಡಿದ್ದರು. ಬಳಿಕ ಉತ್ತರಪ್ರದೇಶದಾದ್ಯಂತ ಕಾಲಿಗೆ ಚಕ್ರಕಟ್ಟಿಕೊಂಡು ತಿರುಗಾಡಿದ್ದ ಪ್ರಿಯಾಂಕಾ, ಪ್ರಧಾನಿ ನರೇಂದ್ರ ಮೋದಿ ನೀತಿಗಳ ವಿರುದ್ಧ ಕಟುಶಬ್ಧಗಳಲ್ಲಿ ಟೀಕಾಪ್ರಹಾರ ನಡೆಸಿದ್ದರು. ಒಂದು ಹಂತದಲ್ಲಿ ವಾರಣಾಸಿಯಲ್ಲಿ ಪ್ರಿಯಾಂಕಾ ಪ್ರಧಾನಿ ಮೋದಿ ವಿರುದ್ಧ ಸ್ಪರ್ಧಿಸಲಿದ್ದಾರೆ ಎನ್ನುವ ಮಾತುಗಳು ಕೇಳಿಬಂದಿದ್ದವು. 

ಉತ್ತರಪ್ರದೇಶದ ರಾಯ್’ಬರೇಲಿಯಲ್ಲಿ ಸೋನಿಯಾ ಗಾಂಧಿ ಜಯಭೇರಿ ಬಾರಿಸಿದ್ದರೆ, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯಲ್ಲಿ ಅಮೇಥಿಯಲ್ಲಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ವಿರುದ್ಧ ಮುಗ್ಗರಿಸಿ ಮುಖಭಂಗ ಅನುಭವಿಸಿದ್ದಾರೆ. ಇದೇ ಮೊದಲ ಬಾರಿಗೆ ಗಾಂಧಿ-ನೆಹರು ಕುಟುಂಬ ಅಮೇಥಿಯಲ್ಲಿ ಸೋಲಿನ ರುಚಿ ಕಂಡಂತಾಗಿದೆ. 

2022ರ ಉತ್ತರಪ್ರದೇಶ ವಿಧಾನಸಭಾ ಚುನಾವಣೆ ಮೇಲೆ ಕಣ್ಣಿಟ್ಟಿರುವ ಪ್ರಿಯಾಂಕಾ ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿಯೂ ಹೌದು. ಈ ಬಾರಿಯ ಚುನಾವಣೆಯ ಪ್ರಚಾರದ ವೇಳೆಯಲ್ಲಿಯೇ ಪ್ರಿಯಾಂಕಾ, ನಾನೇನು ಇಲ್ಲಿ ಮ್ಯಾಜಿಕ್ ಮಾಡಲು ಬಂದಿಲ್ಲ. ಬದಲಾಗಿ ಪಕ್ಷವನ್ನು ಬೇರುಮಟ್ಟದಲ್ಲಿ ಬಲಪಡಿಸಲು ಪ್ರಯತ್ನಿಸುತ್ತೇನೆ ಎಂದು ಹೇಳಿದ್ದರು.