ಬೆಂಗಳೂರು :  ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡ ಅವರು ಕಣದಲ್ಲಿರುವ ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಅವರಿಗೆ ಇರುವ ಎಲ್ಲಾ ಅಡ್ಡಿ ಆತಂಕಗಳು ನಿವಾರಣೆಯಾಗುವ ಲಕ್ಷಣಗಳಿವೆ. ಈ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟಿದ್ದರಿಂದ ಕ್ರುದ್ಧರಾಗಿ ನಾಮಪತ್ರ ಸಲ್ಲಿಸಿರುವ ಕಾಂಗ್ರೆಸ್‌ ಪಕ್ಷದ ನಾಯಕ, ಹಾಲಿ ಸಂಸದ ಮುದ್ದಹನುಮೇಗೌಡ ಹಾಗೂ ಮಾಜಿ ಶಾಸಕ ಕೆ.ಎನ್‌. ರಾಜಣ್ಣ ಅವರು ಶುಕ್ರವಾರ ನಾಮಪತ್ರ ಹಿಂತೆಗೆದುಕೊಳ್ಳುವ ಸಾಧ್ಯತೆ ಹೆಚ್ಚಿದೆ.

ಬಂಡಾಯವೆದ್ದು ಜೆಡಿಎಸ್‌ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದ ಕೆ.ಎನ್‌. ರಾಜಣ್ಣ ಅವರನ್ನು ತಮ್ಮ ನಿವಾಸಕ್ಕೆ ಕರೆಸಿಕೊಂಡಿದ್ದ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಕಣದಿಂದ ಹಿಂದಕ್ಕೆ ಸರಿಯುವಂತೆ ಅವರ ಮನವೊಲಿಸುವಲ್ಲಿ ಯಶಸ್ವಿಯಾದರು ಎನ್ನಲಾಗಿದೆ.

ಅದೇ ರೀತಿ ಕಾಂಗ್ರೆಸ್‌ನ ಹಲವು ನಾಯಕರು ಮುದ್ದಹನುಮೇಗೌಡ ಅವರೊಂದಿಗೆ ಗುರುವಾರ ದಿನವಿಡೀ ಮಾತುಕತೆ ನಡೆಸಿ ಅವರ ಬೇಸರವನ್ನು ಕಡಿಮೆ ಮಾಡುವ ಪ್ರಯತ್ನ ನಡೆಸಿದ್ದು, ಅದರಲ್ಲಿ ಬಹುತೇಕ ಯಶಸ್ವಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಬಹುತೇಕ ಮುದ್ದಹನುಮೇಗೌಡ ಅವರು ಶುಕ್ರವಾರ ನಾಮಪತ್ರ ಹಿಂತೆಗೆದುಕೊಳ್ಳಲಿದ್ದಾರೆ ಎಂದೇ ಮೂಲಗಳು ಹೇಳುತ್ತವೆ.

ದೇವೇಗೌಡರ ತಂತ್ರವೇ?:

ಮತ್ತೊಂದು ಮೂಲಗಳ ಪ್ರಕಾರ ಮುದ್ದಹನುಮೇಗೌಡ ಅವರ ಬಂಡೆದಿದ್ದು ಹಾಗೂ ನಾಮಪತ್ರ ಸಲ್ಲಿಸಿದ್ದು ಹಾಗೂ ಈಗ ನಾಮಪತ್ರ ಹಿಂತೆಗೆದುಕೊಳ್ಳಲು ಮುಂದಾಗುತ್ತಿರುವುದು ಎಲ್ಲವೂ ರಾಜಕೀಯ ಚಾಣಾಕ್ಷ ದೇವೇಗೌಡ ಅವರ ತಂತ್ರ. ವಾಸ್ತವವಾಗಿ, ತುಮಕೂರಿನಲ್ಲಿ ಒಕ್ಕಲಿಗ ಮತಗಳನ್ನು ಕ್ರೋಢೀಕರಣ ಮಾಡಲು ಈ ತಂತ್ರವನ್ನು ಬಳಸಲಾಗಿದೆ ಎನ್ನಲಾಗುತ್ತಿದೆ.

ಬಹುತೇಕ ಶುಕ್ರವಾರ ನಾಮಪತ್ರ ಹಿಂಪಡೆಯಲಿರುವ ಮುದ್ದಹನುಮೇಗೌಡ ಅವರು, ರಾಜ್ಯದ ಹಿರಿಯ ರಾಜಕಾರಣಿಯಾದ ಹಾಗೂ ಒಕ್ಕಲಿಗ ಸಮುದಾಯದ ಮೇರು ನಾಯಕ ಎನಿಸಿದ ದೇವೇಗೌಡ ಅವರು ತಾವು ಸ್ಪರ್ಧಿಸುವ ಕೊನೆ ಚುನಾವಣೆ ಎಂದು ಹೇಳಿರುವುದರಿಂದ ಅವರಿಗೆ ತೊಂದರೆ ಕೊಡಬಾರದು ಎಂಬ ಕಾರಣಕ್ಕೆ ನಾಮಪತ್ರ ಹಿಂತೆಗೆದುಕೊಳ್ಳುತ್ತಿರುವುದಾಗಿ ಬಹಿರಂಗ ಹೇಳಿಕೆ ನೀಡುವ ಸಾಧ್ಯತೆಯಿದೆ.

ತನ್ಮೂಲಕ ದೇವೇಗೌಡರ ಕೊನೆ ಚುನಾವಣೆಯಲ್ಲಿ ಅವರ ಪರ ನಿಲ್ಲುವಂತೆ ಒಕ್ಕಲಿಗ ಸಮುದಾಯಕ್ಕೆ ಸಂದೇಶ ರವಾನೆ ಮಾಡುತ್ತಾರೆ ಎನ್ನಲಾಗಿದೆ. ಬಿಜೆಪಿಯಿಂದ ಈ ಕ್ಷೇತ್ರದಲ್ಲಿ ಲಿಂಗಾಯತ ಸಮುದಾಯದ ಬಸವರಾಜು ಕಣದಲ್ಲಿದ್ದಾರೆ. ಹೀಗಾಗಿ ಮುದ್ದಹನುಮೇಗೌಡ ಅವರು ನೀಡುವ ಈ ಸಂದೇಶದ ಪರಿಣಾಮವಾಗಿ ಕಣವೂ ಒಕ್ಕಲಿಗ ವರ್ಸಸ್‌ ಲಿಂಗಾಯತ ಎಂದು ಪರಿಗಣಿತವಾಗಲಿದ್ದು, ಇದರಿಂದ ದೇವೇಗೌಡರ ಗೆಲುವಿಗೆ ಅನುಕೂಲವಾಗುವ ಸಾಧ್ಯತೆಯಿದೆ. ಹೀಗಾಗಿ ಇದು ದೇವೇಗೌಡರ ಸಮ್ಮುಖದಲ್ಲಿ ರೂಪಿಸಲಾದ ಕಾರ್ಯತಂತ್ರ ಎಂದು ಈ ಮೂಲಗಳು ಹೇಳುತ್ತವೆ.