ಹುಬ್ಬಳ್ಳಿ :  ಮಾಜಿ ಸಚಿವ ವಿನಯ ಕುಲಕರ್ಣಿ ಅವರಿಗೆ ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಟಿಕೆಟ್‌ ನೀಡಿದ್ದನ್ನು ಬಿಜೆಪಿ ನಾಯಕಿ ಹಾಗೂ ನಟಿ ತಾರಾ ಅನೂರಾಧಾ ಅವರು ಪ್ರಶ್ನಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು, ‘ಕಾಂಗ್ರೆಸ್‌ ಅಭ್ಯರ್ಥಿ ವಿನಯ ಕುಲಕರ್ಣಿ ವಿರುದ್ಧ ಬಿಜೆಪಿ ಮುಖಂಡ ಯೋಗೇಶಗೌಡ ಗೌಡರ ಅವರ ಕೊಲೆಯ ಪ್ರಕರಣದ ಸಾಕ್ಷ್ಯ ನಾಶ ಮಾಡಿರುವ ಆರೋಪ ಇದೆ. ಈ ಬಗ್ಗೆ ಧಾರವಾಡ ಹೈಕೋರ್ಟ್‌ ಎಫ್‌ಐಆರ್‌ ದಾಖಲಿಸಿ ತನಿಖೆ ಕೈಗೊಳ್ಳುವಂತೆ ಆದೇಶಿಸಿದೆ. ಇಂತಹ ಆರೋಪ ಇರುವ ವಿನಯ್‌ಗೆ ಕಾಂಗ್ರೆಸ್‌ ಏಕೆ ಟಿಕೆಟ್‌ ನೀಡಿದೆ ಎಂಬುದನ್ನು ಸ್ಪಷ್ಟಪಡಿಸಬೇಕು’ ಎಂದು ಆಗ್ರಹಿಸಿದರು.

‘ಆದರೆ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ ಜೋಶಿ ಸಾತ್ವಿಕ ಸಂಸ್ಕೃತಿ ಉಳ್ಳವರು. ಇದರಿಂದಾಗಿ ಪ್ರಹ್ಲಾದ ಜೋಶಿ ಸುಲಲಿತವಾಗಿ ಗೆಲ್ಲುವುದು ಖಚಿತ. ಕೇಂದ್ರದ ಮಾಜಿ ಸಚಿವ ಅನಂತಕುಮಾರ ಅವರ ಗರಡಿಯಿಂದಲೇ ಬಂದ ಪ್ರಹ್ಲಾದ ಜೋಶಿ ಈ ಬಾರಿ ಗೆದ್ದು ಕೇಂದ್ರದ ಮಂತ್ರಿಯಾಗುವ ಮೂಲಕ ಅವರ ಸ್ಥಾನವನ್ನು ತುಂಬಲಿ ಎನ್ನುವುದು ನನ್ನ ವೈಯಕ್ತಿಕ ಅಭಿಪ್ರಾಯ’ ಎಂದೂ ತಾರಾ ಹೇಳಿದರು.

ದೇಶದಲ್ಲಿ ಏ.11 ರಿಂದ ಮೇ 19ರವರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ, ಕರ್ನಾಟಕದಲ್ಲಿ 28.