Asianet Suvarna News Asianet Suvarna News

ಯಾವ ಪಕ್ಷದಿಂದ ಸುಮಲತಾ ಸ್ಪರ್ಧೆ : ಹರಿದಾಡುತ್ತಿದೆ ಕುತೂಹಲ?

ಮಂಡ್ಯದಿಂದ ಸುಮಲತಾ ಸ್ಪರ್ಧೆ ಮಾಡುತ್ತಿದ್ದು, ಆದರೆ ಯಾವ ಪಕ್ಷದಿಂದ ಎನ್ನುವ ಕುತೂಹಲ ಗರಿಗೆದರಿದ್ದು, ಈ ಬಗ್ಗೆ ಇಂದು [ ಸೋಮವಾರ ] ನಿರ್ಧಾರ ಹೊರಬೀಳಲಿದೆ. 

Lok Sabha Elections 2019 Sumalatha Ambareesh Contest From Which Party
Author
Bengaluru, First Published Mar 18, 2019, 7:56 AM IST

ಬೆಂಗಳೂರು :  ಮಾಜಿ ಪ್ರಧಾನಮಂತ್ರಿಯ ಮೊಮ್ಮಗ ಹಾಗೂ ಮುಖ್ಯಮಂತ್ರಿಯ ಮಗ ನಿಖಿಲ್‌ ಹಾಗೂ ನಟ ಅಂಬರೀಷ್‌ ಅವರ ಪತ್ನಿ ಸುಮಲತಾ ಸ್ಪರ್ಧೆಯಿಂದ ಮಂಡ್ಯ ಲೋಕಸಭಾ ಕ್ಷೇತ್ರ ‘ಹೈವೋಲ್ಟೇಜ್‌ ಮುಖಾಮುಖಿ’ ಎಂದೇ ಬಿಂಬಿತವಾಗಿದೆ. ಇಂತಹ ಕ್ಷೇತ್ರದಿಂದ ಸುಮಲತಾ ಅಂಬರೀಷ್‌ ಸ್ಪರ್ಧೆ ಬಗ್ಗೆ ಉಂಟಾಗಿರುವ ಕುತೂಹಲಗಳಿಗೆ ಸೋಮವಾರ [ಮಾ.18] ತೆರೆ ಬೀಳಲಿದ್ದು, ಸುಮಲತಾ ತಮ್ಮ ಅಂತಿಮ ನಿರ್ಧಾರ ಪ್ರಕಟಿಸಲಿದ್ದಾರೆ.

ಈ ಹೈ-ವೋಲ್ಟೇಜ್‌ ಕ್ಷೇತ್ರದಲ್ಲಿ ಸುಮಲತಾ ಸ್ಪರ್ಧಿಸುತ್ತಾರಾ? ಸ್ಪರ್ಧಿಸುವುದಾದರೆ ಪಕ್ಷೇತರವಾಗಿ ಸ್ಪರ್ಧಿಸುತ್ತಾರಾ ಅಥವಾ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಾರಾ? ಬಿಜೆಪಿ ಅಭ್ಯರ್ಥಿಯಾಗದಿದ್ದರೆ ಬಿಜೆಪಿ ಬಾಹ್ಯ ಬೆಂಬಲ ಪಡೆಯುತ್ತಾರಾ? ಹೀಗೆ ಸಾಲು-ಸಾಲು ಕುತೂಹಲಗಳು ರಾಜ್ಯ ರಾಜಕೀಯ ವಲಯದಲ್ಲಿ ಹರಿದಾಡುತ್ತಿವೆ.

ಈ ಎಲ್ಲಾ ಕುತೂಹಲಗಳಿಗೆ ಅಂತಿಮ ತೆರೆ ಎಳೆಯುವುದಾಗಿ ಸುಮಲತಾ ಅವರು ಘೋಷಿಸಿದ್ದು, ಸೋಮವಾರ ಬೆಳಗ್ಗೆ ಈ ಸಂಬಂಧ ಪ್ರಮುಖ ಸುದ್ದಿಗೋಷ್ಠಿ ಕರೆದಿದ್ದಾರೆ. ಹೀಗಾಗಿ ಸುದ್ದಿಗೋಷ್ಠಿಯಲ್ಲಿ ಹೊರಹೊಮ್ಮಲಿರುವ ಸುದ್ದಿ ಪ್ರಾಮುಖ್ಯತೆ ಪಡೆದುಕೊಂಡಿದೆ.

ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸುಮಲತಾ ಅಂಬರೀಷ್‌ ಸ್ಪರ್ಧೆ ಖಚಿತವಾಗಿದ್ದು ಆದರೆ, ಬಿಜೆಪಿಯಿಂದಲೋ, ಪಕ್ಷೇತರರಾಗಿಯೋ ಎನ್ನುವ ವಿಚಾರಕ್ಕೆ ಸಂಬಂಧಿಸಿ ಸೋಮವಾರ ನಿರ್ಧಾರ ಪ್ರಕಟಿಸಲಿದ್ದಾರೆ. ಈ ಸಂಬಂಧ ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಬೆಳಗ್ಗೆ 11.30ಕ್ಕೆ ಸುದ್ದಿಗೋಷ್ಠಿ ಕರೆದಿರುವ ಸುಮಲತಾ, ಸ್ಪರ್ಧೆ ಕುರಿತು ಅಧಿಕೃತ ಘೋಷಣೆ ಮಾಡಲಿದ್ದಾರೆ.

ಪಕ್ಷೇತರರಾಗಿ ಸ್ಪರ್ಧೆ ಸಾಧ್ಯತೆ:

ಪ್ರಸ್ತುತ ಮಂಡ್ಯ ರಾಜಕೀಯ ಬೆಳವಣಿಗೆಗಳನ್ನು ಅವಲೋಕಿಸಿದರೆ ಸುಮಲತಾ ಅವರು ಪಕ್ಷೇತರರಾಗಿ ಸ್ಪರ್ಧಿಸುವ ಸಾಧ್ಯತೆಗಳೇ ಹೆಚ್ಚಾಗಿವೆ. ಅನುಕಂಪದ ಅಲೆ ಜತೆಗೂಡಿಸಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದರೆ ಕಾಂಗ್ರೆಸ್‌ ಬೆಂಬಲಿಗರು, ಅಂಬರೀಷ್‌ ಅಭಿಮಾನಿಗಳು, ಜೆಡಿಎಸ್‌ನ ಅತೃಪ್ತರು ಹಾಗೂ ಪ್ರಮುಖವಾಗಿ ಬಿಜೆಪಿ ನಾಯಕರೂ ಸಹ ಬೆಂಬಲಿಸುವ ಸಾಧ್ಯತೆ ಇದೆ. ಪಕ್ಷೇತವಾಗಿ ಸ್ಪರ್ಧಿಸಿದರೆ ಪ್ರಬಲ ಸಂಘಟನಾ ಶಕ್ತಿ ಇಲ್ಲದ ಬಿಜೆಪಿಯೂ ಅಭ್ಯರ್ಥಿ ಹಾಕದ ತಮಗೆ ಬೆಂಬಲ ನೀಡಬಹುದು ಎಂಬ ಯೋಚನೆಯಲ್ಲಿ ಸುಮಲತಾ ಇದ್ದಾರೆ.

ಬಿಜೆಪಿಯೂ ಸಹ ಸುಮಲತಾ ಅವರಿಗೆ ಬೆಂಬಲ ನೀಡುವ ಬಗ್ಗೆ ಸೋಮವಾರ ನಿರ್ಧರಿಸುವ ಸಾಧ್ಯತೆ ಇದೆ. ಹೀಗಾಗಿ ಪಕ್ಷೇತವಾಗಿ ಸ್ಪರ್ಧಿಸುವ ಸಾಧ್ಯತೆಗಳೇ ಹೆಚ್ಚಿದ್ದು, ನಾಳೆ ಅಧಿಕೃತ ತೀರ್ಮಾನ ಹೊರ ಬೀಳುವ ಸಾಧ್ಯತೆ ಇದೆ.

‘ಚುನಾವಣಾ ಸ್ಪರ್ಧೆ ವಿಚಾರವಾಗಿ ಜನರ ಅಭಿಪ್ರಾಯ ತಿಳಿಯಲು ತಾವು ಮಂಡ್ಯದ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರವಾಸ ಮಾಡಿದ್ದೇನೆ. ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪ್ರವಾಸದ ಸಮಯದಲ್ಲಿ ರೈತರ ಭೇಟಿ ಮಾಡಿದ್ದೇನೆ. ಅವರು ಹಲವು ಸಲಹೆಗಳನ್ನು ನೀಡಿದ್ದಾರೆ. ಅದೆಲ್ಲವನ್ನೂ ಮನಸ್ಸಿನಲ್ಲಿಟ್ಟುಕೊಂಡಿದ್ದೇನೆ’ ಎಂದು ಮಂಡ್ಯದಲ್ಲಿ ಹೇಳಿದ್ದಾರೆ.

ಚುನಾವಣೆಯಲ್ಲಿ ಬೆಂಬಲ ಕ್ರೋಢೀಕರಿಸಲು ಸುಮಲತಾ ಅವರು ಈಗಾಗಲೇ ಹಲವು ನಾಯಕರನ್ನು ಸುಮಲತಾ ಭೇಟಿಯಾಗಿದ್ದಾರೆ. ವಿಶೇಷವಾಗಿ ಬಿಜೆಪಿ ನಾಯಕರಾದ ಎಸ್‌.ಎಂ. ಕೃಷ್ಣ ಸೇರಿದಂತೆ ಹಲವು ನಾಯಕರು ಬೆಂಬಲ ನೀಡಿದ್ದಾರೆ ಎಂಬುದು ಸುಮಲತಾ ಅವರ ಧೈರ್ಯ ಹೆಚ್ಚಿಸಿದೆ.

ಆದರೆ, ಮಾಜಿ ಸಂಸದ ಜಿ. ಮಾದೇಗೌಡ ಸೇರಿದಂತೆ ಕೆಲ ಹಿರಿಯ ನಾಯಕರು ಕಾಂಗ್ರೆಸ್‌ ಮೈತ್ರಿ ಅಭ್ಯರ್ಥಿ ನಿಖಿಲ್‌ರನ್ನು ಬೆಂಬಲಿಸುವುದಾಗಿ ಸ್ಪಷ್ಟಪಡಿಸಿದ್ದಾರೆ. ಹೀಗಾಗಿ ಸುಮಲತಾ ಅವರು ಅಂತಿಮವಾಗಿ ಯಾವ ನಿರ್ಧಾರ ಕೈಗೊಳ್ಳುತ್ತಾರೆ ಎಂಬ ಬಗ್ಗೆ ಕುತೂಹಲ ಮೂಡಿದೆ.

Follow Us:
Download App:
  • android
  • ios