ಶಿವಮೊಗ್ಗ : ಮತದಾನದ ಪ್ರಮಾಣ ಹೆಚ್ಚಿಸುವ ಸಲುವಾಗಿ ಚುನಾವಣಾ ಆಯೋಗದ ಜತೆಗೆ ನಾನಾ ಸಂಘಟನೆಗಳು ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿವೆ. 

ಇದರ ಜತೆಗೆ ವಿವಿಧ ಆಫರ್‌ಗಳನ್ನು ನೀಡುವ ಮೂಲಕ ಮತದಾರರನ್ನು ಮತಗಟ್ಟೆಯತ್ತ ಸೆಳೆಯುವ ಕೆಲಸವನ್ನು ಅನೇಕರು ಮಾಡುತ್ತಿದ್ದಾರೆ. 

ಇತ್ತ ಮತದಾನ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಹಾಗೂ ಮತದಾನದಲ್ಲಿ ಜಿಲ್ಲೆಯನ್ನು ನಂ.1 ಮಾಡುವ ಸಲುವಾಗಿ ಚುನಾವಣಾ ಆಯೋಗ ಮತ್ತು ಜಿಲ್ಲಾಡಳಿತದ ಸಹಯೋಗದಲ್ಲಿ ಭಾನುವಾರ ಬೆಳಗ್ಗೆ 9ರಿಂದ ರಾತ್ರಿ 9ರವರೆಗೆ ಶಿವಮೊಗ್ಗದ ಗೋಪಿ ವೃತ್ತದಲ್ಲಿ ‘ಮತಾಗ್ರಹ’ ಎಂಬ ಹೆಸರಿನಲ್ಲಿ ಉಪವಾಸ ಸತ್ಯಾಗ್ರಹ ನಡೆಸಲಾಯಿತು. 

ಸ್ವತಃ ಶಿವಮೊಗ್ಗ ಜಿಲ್ಲಾಧಿಕಾರಿಯೇ ಮತದಾನ ಪ್ರಮಾಣ ಹೆಚ್ಚಳ ಮಾಡುವ ಸಲುವಾಗ ಉಪವಾಸ ಸತ್ಯಾಗ್ರಹ ಮಾಡಿದರು. 

ಸ್ವಾತಂತ್ರ್ಯ ಹೋರಾಟಗಾರ ದೇವೇಂದ್ರಪ್ಪ (92)ರನ್ನು ಸನ್ಮಾನಿಸುವ ಮೂಲಕ ಜಿಲ್ಲಾಧಿಕಾರಿ ಕೆ.ಎ.ದಯಾನಂದ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.